ಧಾವಂತದ ದಿಗಂತ ಯಾವುದು?

7
ದೈನಂದಿನ ಬದುಕಿನಲ್ಲಿ ನಾವು ವರ್ತಿಸುವ ರೀತಿಯನ್ನು ಸಾವಧಾನದಿಂದ ಗಮನಿಸಿದರೆ, ಅವಸರಿಸುವ ಪ್ರವೃತ್ತಿ ನಮ್ಮೊಳಗೆ ಬೇರೂರಿಸುತ್ತಿರುವ ಅಸಹನೆಯ ದರ್ಶನವಾಗಬಹುದು

ಧಾವಂತದ ದಿಗಂತ ಯಾವುದು?

Published:
Updated:
Deccan Herald

‘ಸಮಯ ಉಳಿಸುವ’ ಉಮೇದಿನಲ್ಲಿ ನಮ್ಮೆಲ್ಲರ ಮನಸ್ಸು ಹೊಕ್ಕಲಾರಂಭಿಸಿರುವ ಅವಸರಿಸುವ ಪ್ರವೃತ್ತಿ ಅಂತಿಮವಾಗಿ ನಮ್ಮನ್ನು ಎಲ್ಲಿಗೆ ಕರೆದೊಯ್ದು ನಿಲ್ಲಿಸಬಹುದು? ಹೀಗೆ ಉಳಿಸುವ ಸಮಯವನ್ನು ನಾವು ವ್ಯಯಿಸುವುದಾದರೂ ಎಲ್ಲಿ? ಸಮಯ ಉಳಿಸುವ ಸಲುವಾಗಿ ಒಂದೆಡೆ ಇನ್ನಿಲ್ಲದ ಕಸರತ್ತು ಜಾರಿಯಲ್ಲಿದ್ದರೆ, ಮತ್ತೊಂದೆಡೆ ಇರುವ ಸಮಯವನ್ನು ಹೇಗೆ ಕಳೆಯುವುದು ಎನ್ನುವ ಚಿಂತೆಯೂ ಹಲವರನ್ನು ಆವರಿಸತೊಡಗಿದೆ. ವ್ಯಯಿಸುವುದು ಹೇಗೆಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಗೋಜಿಗೆ ಹೋಗದೆ, ಸಮಯ ಉಳಿಸುವ ಕುರಿತೇ ಹೆಚ್ಚು ಚಿಂತಿಸುತ್ತಿರುವ ನಮ್ಮ ಮನಸ್ಸು ಧಾವಂತದ ಬೆನ್ನೇರಿ ಮತ್ತಷ್ಟು ಅಸೂಕ್ಷ್ಮ
ವಾಗಲಾರಂಭಿಸಿದೆಯೇ?

ದೈನಂದಿನ ಬದುಕಿನಲ್ಲಿ ನಮಗರಿವಿಲ್ಲದಂತೆ ನಾವು ವರ್ತಿಸುವ ರೀತಿಯನ್ನು ಕೊಂಚ ಸಾವಧಾನದಿಂದ ಗಮನಿಸತೊಡಗಿದರೆ, ಈ ಅವಸರಿಸುವ ಪ್ರವೃತ್ತಿ ನಮ್ಮೊಳಗೆ ಬೇರೂರಿಸುತ್ತಿರುವ ಅಸಹನೆಯ ದರ್ಶನವಾಗಬಹುದು. ವಾಹನ ಚಲಾಯಿಸುವಾಗ ಕಿವಿಗಪ್ಪಳಿಸುವ ತರಹೇವಾರಿ ಹಾರ್ನ್ ಶಬ್ದಗಳು, ಸಿಗ್ನಲ್‍ನಲ್ಲಿ ನಿಂತಾಗ ಹಸಿರು ಬಣ್ಣ ಪ್ರತ್ಯಕ್ಷವಾಗುವ ಮುನ್ನವೇ ಮುನ್ನುಗ್ಗುವ ಪ್ರವೃತ್ತಿ, ‘ತಡೆರಹಿತ’ ಬಸ್‍ಗಳು ಖಾಲಿ ಇರುವ ಸೀಟುಗಳನ್ನು ತುಂಬಿಕೊಳ್ಳಲು ಕೆಲವೊಮ್ಮೆ ಅಲ್ಲಲ್ಲಿ ನಿಲ್ಲತೊಡಗಿದರೆ ನಮ್ಮೊಳಗೆ ಒಡಮೂಡುವ ಅಸಹನೆ... ಇವೆಲ್ಲ ಮೇಲುನೋಟಕ್ಕೆ ಕಾಣಸಿಗುವ ಕಾಯಲು ಸಿದ್ಧವಿರದ ಮನಸ್ಥಿತಿಯ ವೈಖರಿಗಳು.

ಪ್ರಯಾಣದ ಸಮಯ ಉಳಿಸುವ ಸಲುವಾಗಿ ರಸ್ತೆಗಳು ವಿಸ್ತರಣೆಯಾಗುತ್ತಲೇ ಇವೆ. ಬುಲೆಟ್ ರೈಲಿನ ಕನಸೂ ಕಣ್ಣೆದುರೇ ಇದೆ. ವೇಗ ವರ್ಧಿಸುವುದೂ ಅಭಿವೃದ್ಧಿಯ ಮಾನದಂಡವೇ ಆಗಿಹೋಗಿದೆ. ಶುರುವಿನಲ್ಲಿ ಉತ್ಪಾದನಾ ವಲಯದ ಕಾರ್ಖಾನೆಗಳು ಅಳವಡಿಸಿಕೊಳ್ಳಲು ಮುಂದಾದ Manufacturing Lead Time (ಕಚ್ಚಾ ವಸ್ತುವಿನಿಂದ ಉತ್ಪನ್ನ ತಯಾರಿಸಲು ತೆಗೆದುಕೊಳ್ಳುವ ಸಮಯ) ಅನ್ನು ಸಾಧ್ಯವಾದಷ್ಟೂ ತಗ್ಗಿಸುವ ಪ್ರವೃತ್ತಿ, ಇಂದು ನಮ್ಮಗಳ ಬದುಕಿನ ಮೂಲಮಂತ್ರವೇ ಆಗುತ್ತ ನಮ್ಮೆಲ್ಲರ ಬದುಕಿನ ಎಕನಾಮಿಕ್‌ ಲೈಫ್‌ ಸುಧಾರಿಸಿ, ಅಕೌಂಟಿಂಗ್‌ ಲೈಫ್‌ ಇಳಿಸುವತ್ತ ದಾಪುಗಾಲಿಡುತ್ತಿದೆ. ವೇಗದೊಂದಿಗೆ ತಳಕು ಹಾಕಿಕೊಂಡಿರುವ ಸ್ಪರ್ಧೆಯು ಸಮುದಾಯದ ಹಿತದ ಕುರಿತು ಚಿಂತಿಸುವ ವ್ಯವಧಾನವನ್ನೇ ಕಸಿದುಕೊಂಡು, ‘ಆತ್ಮರತಿ’ಯನ್ನೇ ಉಸಿರಾಗಿಸಿ
ಕೊಳ್ಳುವ ವ್ಯಕ್ತಿತ್ವಗಳ ಪೋಷಣೆಗೆ ನಿಂತಿರುವುದು ಢಾಳಾಗಿಯೇ ಕಾಣುತ್ತಿದೆ.

ತನ್ನ ಸಮಯದ ಉಳಿತಾಯದ ಕುರಿತೇ ಚಿಂತಿಸುವ ಮನಸ್ಸು, ತನ್ನಿಂದಾಗಿ ಇತರರಿಗೆ ಆಗ ಬಹುದಾದ ಕಿರಿಕಿರಿ ಮತ್ತು ತಾನು ತಂದೊಡ್ಡಬಹುದಾದ ಸಂಕಷ್ಟಗಳ ಕುರಿತು ಯೋಚಿಸುವ ಗೋಜಿಗೂ ಹೋಗಲಾರದು ಎಂಬುದಕ್ಕೆ ಪುರಾವೆಗಳು ಈಗಾಗಲೇ ದಕ್ಕಲಾರಂಭಿಸಿವೆ. ವೇಗ ಮೋಹಿ ಮನಸ್ಸು ಯಾವುದನ್ನೇ ಆಗಲಿ ಕೂಲಂಕಷವಾಗಿ ಪರಿಶೀಲಿಸಿ, ಸಮುದಾಯದ ಹಿತದಲ್ಲಿ ತನ್ನ ಹಿತವೂ ಅಡಗಿದೆ ಎಂಬ ಆಲೋಚನೆಯನ್ನೇ ತೊರೆದು, ಸ್ಪರ್ಧೆಯಲ್ಲಿ ಗೆಲ್ಲಬೇಕೆಂದರೆ ತಾನು ಮಾತ್ರವೇ ಮುನ್ನಡೆಯಬೇಕು ಎಂಬ ಗ್ರಹಿಕೆಗೆ ಜೋತು ಬೀಳುತ್ತದೆ.

ರಾಜಕೀಯ ಕಾರ್ಯತಂತ್ರದ ಭಾಗವಾಗಿ ಪ್ರಾರಂಭವಾದ ಸುಳ್ಳು ಹಾಗೂ ತಿರುಚಿದ ಸುದ್ದಿಗಳನ್ನು ಸೃಷ್ಟಿಸಿ ಹರಡುವ ಅಪಾಯಕಾರಿ ಪ್ರವೃತ್ತಿ ವ್ಯಾಪಿಸಲು ಪೂರಕವಾಗುವ ವಾತಾವರಣವನ್ನು ಈ ವೇಗ ವ್ಯಾಮೋಹಿ ಮನಸ್ಥಿತಿಯೇ ಕಲ್ಪಿಸಿಕೊಟ್ಟಿದೆ ಎಂಬುದನ್ನೂ ಮನಗಾಣಬಹುದು. ತಮ್ಮ ಓದಿನ ಮೂಲಕ ಗ್ರಹಿಸುವ ಪ್ರಯತ್ನವನ್ನೇ ಮಾಡದೆ, ನಿರ್ದಿಷ್ಟ ಚಿಂತನಾ ಕ್ರಮ ಅಥವಾ ಸಿದ್ಧಾಂತದ ಕುರಿತು ಇನ್ನಿಲ್ಲದ ಅಸಹನೆ ಪ್ರದರ್ಶಿಸುವ, ಎಪ್ಪತ್ತು ವರ್ಷಗಳಿಂದ ದೇಶ ಆಳಿದವರು ಏನೇನು ಮಾಡಿರುವರು ಎಂಬ ಬಗೆಗೆ ಏನೊಂದೂ ಗೊತ್ತಿರದೆ ಹೋದರೂ, ಇತಿಹಾಸದ ಪಂಡಿತರೆಂಬಂತೆ ವರ್ತಿಸುವ ಪ್ರವೃತ್ತಿಯ ಮೂಲದಲ್ಲಿರುವುದು ಜನಸಮುದಾಯದಿಂದ ಸಾವಧಾನ ಕಸಿದುಕೊಳ್ಳಲು ಯಶಸ್ವಿಯಾದ ಮಾರುಕಟ್ಟೆ ಹಾಗೂ ರಾಜಕೀಯ ಲಾಭ ಕೇಂದ್ರಿತ ತಂತ್ರವೆಂದು ಹೇಳಲು ಸಕಾರಣಗಳಿಲ್ಲವೇ?

ಟಿಆರ್‌ಪಿ ನೆಪವೂ ಇರದಿದ್ದಾಗ್ಯೂ ಸಾವಿನ ಸುದ್ದಿ ಸೇರಿದಂತೆ ತಮ್ಮ ಗಮನಕ್ಕೆ ಬರುವ ಸಕಲ ಮಾಹಿತಿಯನ್ನೂ ಫಾರ್ವರ್ಡ್ ಮಾಡುವ ಮೂಲಕ ಜಗತ್ತಿಗೆ ತಿಳಿಸಲು ವ್ಯಕ್ತಿಗತ ನೆಲೆಗಟ್ಟಿನಲ್ಲಿ ನಡೆಯುವ ಪೈಪೋಟಿ ಗಮನಿಸಿದರೆ, ನಮ್ಮೆಲ್ಲರ ಬದುಕಿಗೆ ಸಾವಧಾನವನ್ನು ಪ್ರಜ್ಞಾಪೂರ್ವಕವಾಗಿ ಕಸಿ ಮಾಡಿಕೊಳ್ಳದೆ ಹೋದಲ್ಲಿ ಆಗಬಹುದಾದ ಅನಾಹುತಗಳ ಪರಿಚಯವಾಗುತ್ತದೆ. ಈ ಗಡಿಬಿಡಿ
ಯಲ್ಲಿ, ಬದುಕಿದ್ದವರನ್ನೇ ಸಾಯಿಸುವುದೂ ಇದೆ!

ಒಂದೆಡೆ ತಾನೇ ಮೊದಲಿರಬೇಕು, ಸಾಧ್ಯವಾದಷ್ಟೂ ವೇಗವಾಗಿ ಗುರಿ ತಲುಪಬೇಕು, ಕೆಲಸ ಮುಗಿಸಬೇಕು ಎಂಬ ಜಿದ್ದಿಗೆ ಬಿದ್ದಿರುವ ನಮ್ಮಗಳ ಮನಸ್ಸು, ಮತ್ತೊಂದೆಡೆ ಸಿಗುವ ಸಮಯವನ್ನು ಹೇಗೆ ವ್ಯಯಿಸುವುದು ಎಂಬುದು ತಿಳಿಯದೆ ಪರಿತಪಿಸು
ವುದೂ ಇದೆ. ಎಲ್ಲದರ ಕುರಿತೂ ಅತ್ಯಲ್ಪ ಅವಧಿಯಲ್ಲೇ ನಿರಾಸಕ್ತಿ ಮೂಡಿ ಹೊಸದೇನನ್ನೋ ಹುಡುಕುವ ಉಮೇದು ಆವರಿಸಿಕೊಳ್ಳತೊಡಗಿದೆ.

ತನ್ನ ಶಾಲೆಗೆ ರಜೆ ಇದ್ದ ದಿನಗಳಲ್ಲಿ ಕರೆಂಟು ಕೈಕೊಟ್ಟು ಟಿ.ವಿ. ನೋಡಲಾಗದೆ ನಮ್ಮ ಮನೆಗೆ ಆಗಾಗ ಬರುವ ಪಕ್ಕದ ಮನೆಯ ಒಂದನೇ ತರಗತಿಯಲ್ಲಿ ಓದುವ ಪುಟ್ಟ ಹುಡುಗಿ ಆಡುವ, ‘ಅಯ್ಯೋ ಈಗ ಏನ್ ಮಾಡ್ಲಪ್ಪ’ ಎನ್ನುವ ಉದ್ಗಾರ, ಧಾವಂತವನ್ನೇ ಬದುಕಿನ ಮೂಲಮಂತ್ರವಾಗಿಸಿಕೊಳ್ಳುತ್ತಿರುವ ನಮ್ಮೆಲ್ಲರ ಉದ್ಗಾರವೂ ಆಗುವ ದಿನಗಳು ಸಮೀಪಿಸುತ್ತಿವೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !