ಮರೆವು ಹೆಚ್ಚಿಸುವ ಟಾನಿಕ್ಕುಗಳು!

7
ನೆನಪು ಮತ್ತು ಅದಕ್ಕೆ ಪ್ರತಿಯಾಗಿ ನಾಗರಿಕರೇ ಪರೋಕ್ಷವಾಗಿ ಸೃಷ್ಟಿಸುವ ಮರೆವುಗಳೇ ಈ ದೇಶದ ರಾಜಕೀಯವನ್ನು ಮುಂದಕ್ಕೆ ತಳ್ಳುತ್ತಿವೆ

ಮರೆವು ಹೆಚ್ಚಿಸುವ ಟಾನಿಕ್ಕುಗಳು!

Published:
Updated:
Deccan Herald

ಕೆಲವು ತಿಂಗಳ ಹಿಂದೆ ನಡೆದ ಘಟನೆಯಿದು. ಆಂಬುಲೆನ್ಸ್‌ನಲ್ಲಿ ತನ್ನ ಹೆಂಡತಿಯ ಶವವನ್ನು ಸಾಗಿಸಲೂ ಕೂಡ ಒಡಿಸ್ಸಾದ ಬಡ ರೈತನೊಬ್ಬನಲ್ಲಿ ಹಣವಿರಲಿಲ್ಲ. ಹೀಗಾಗಿ ಶವವನ್ನು ಹೆಗಲಿಗೇರಿಸಿಕೊಂಡು ಹಲವು ಕಿಲೊಮೀಟರ್ ನಡೆದೇ ಹೊರಟ ಸಂಗತಿ ಮಾಧ್ಯಮ
ಗಳ ಮೂಲಕ ಬಹುತೇಕರನ್ನು ತಲುಪಿತ್ತು.

ಆ ಘಟನೆ ತೀರಾ ಗಂಭೀರವಾಗಿದ್ದರೂ, ಜವಾಬ್ದಾರಿ ಹೊರಬೇಕಿದ್ದ ಸರ್ಕಾರವನ್ನು ಅಷ್ಟೇ ತೀವ್ರವಾಗಿ ಪ್ರಶ್ನಿಸುವ ಹಂತಕ್ಕೆ ಹೋಗಬಲ್ಲ ವಿಚಾರವಾಗಲಿಲ್ಲ! ಹಾಗೆಂದು ಈ ತೆರನಾದ ಪ್ರಶ್ನೆಗಳು ಸರ್ಕಾರಕ್ಕೆ ಎದುರಾಗುವುದೇ ಇಲ್ಲವೆಂದೇನೂ ಅಲ್ಲ. ಇಂತಹ ಪ್ರಶ್ನೆಗಳು ಮುನ್ನೆಲೆಗೆ ಬಂದಾಗಲೆಲ್ಲ ರಾಜಕೀಯ ವ್ಯಕ್ತಿಗಳು ಜನರಿಗೆ ಮರೆವಿನ ಟಾನಿಕ್ಕುಗಳನ್ನು ಹಂಚುತ್ತಲೇ ಇರುತ್ತಾರೆ. ಮೂಲಭೂತ ಹಕ್ಕು, ಹಸಿವಿನ ಪ್ರಶ್ನೆಗಳನ್ನೇ ಮರೆಸಿ , ಧರ್ಮ, ಜಾತಿಯ ಬಗೆಗಿನ ಪ್ರಶ್ನೆಗಳಷ್ಟೇ ಮುನ್ನೆಲೆಗೆ ಬರುವಂತಹ ಸಂದರ್ಭಗಳು ಇಂಡಿಯಾದಲ್ಲಿ ಸಾಕಷ್ಟಿವೆ. ಇನ್ನು ಸರ್ಕಾರಗಳಿಗಾಗಲಿ, ಜನರಿಗಾಗಲಿ ಮಂದಿರ, ಮಸೀದಿ,‌ ಧರ್ಮ ಮೊದಲಾದವುಗಳನ್ನೇ ಗುರಾಣಿಯಾಗಿಟ್ಟುಕೊಂಡು ಎಂಥ ಪ್ರಶ್ನೆಗಳನ್ನೂ ನಾಜೂಕಾಗಿ ಮರೆಸಿಬಿಡುವುದು ಕಷ್ಟವೇನಲ್ಲ.

‘ಸತ್ತ ಹಸುವಿನ’ ಕಾರಣವಾಗಿ ಈಚೆಗೆ ನಡೆದ ಗಲಾಟೆಯಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್ ಹಾಗೂ ಒಬ್ಬ ಯುವಕ ಸತ್ತಿದ್ದಾರೆ! ಗೋರಕ್ಷಣೆಯೆಂಬ ಹೊಣೆ ಒಂದು ಗುಂಪಿನ ಜನಗಳನ್ನು ಸುಲಭವಾಗಿ ಕೆರಳಿಸಿತ್ತು. ರೈತನು ತನ್ನ ಪತ್ನಿಯ ಶವವನ್ನು ಹೊತ್ತು ಸಾಗಿರುವ ಘಟನೆಯ ತೀವ್ರತೆಯನ್ನು ಮರೆಸುವ ಟಾನಿಕ್ಕುಗಳು ಬಹುತೇಕ ಇಂತಹವೇ ಆಗಿರುತ್ತವೆ. ಮನುಷ್ಯನೊಬ್ಬ ಹಸಿವಿನಿಂದ ಸಾಯುವುದನ್ನು ಪ್ರಶ್ನಿಸಬೇಕಿರುವ ಬಡ ವರ್ಗದವರು, ಇನ್ನೊಬ್ಬ ವ್ಯಕ್ತಿ ತಿನ್ನಬಾರದ ಆಹಾರಗಳ ಪಟ್ಟಿಮಾಡತೊಡಗಿದರೆ ತನ್ನ ಜವಾಬ್ದಾರಿಯಿಂದ ಸರ್ಕಾರಕ್ಕೆ ತಾತ್ಕಾಲಿಕವಾದ ಬಿಡುಗಡೆ.

ಇದೇ ರೀತಿ ಸ್ವಲ್ಪ ಭಿನ್ನವಾಗಿ ಕೇರಳದಲ್ಲೂ ಜನಗಳ ಗಮನವನ್ನು ಬೇರೆಯದೇ ಆದ ವಿಚಾರವೊಂದಕ್ಕೆ ಸೆಳೆಯುವಂತಹ ಪ್ರಯೋಗ ಯಶಸ್ವಿಯಾಗಿದೆ. ಪ್ರವಾಹದಿಂದಾದ ಹಾನಿಗೆ ಸಾವಿರಾರು ಕೋಟಿ ರೂಪಾಯಿ ನೆರವನ್ನು ಕೇಂದ್ರದಿಂದ ಕೇಳಬೇಕಾದ ಧ್ವನಿಗಳಿಗೆ ಅಯ್ಯಪ್ಪನ ದೆಸೆಯಿಂದಾಗಿ ತಮಗಾಗಿರುವ ನಷ್ಟವೇ ನಗಣ್ಯವೆನಿಸಿ, ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಬೀದಿಗಿಳಿದಿವೆ. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸುವುದೆಂದರೆ ಪ್ರಜಾಪ್ರಭುತ್ವದಿಂದ ಹಿಮ್ಮುಖ ಚಲನೆಯನ್ನು ತಾವಾಗಿಯೇ
ಒಪ್ಪಿಕೊಳ್ಳುವುದು.

ಏಳು ದಶಕಗಳಾದರೂ ಪ್ರಜಾಪ್ರಭುತ್ವದ ಉನ್ನತ ಸೌಲಭ್ಯಗಳನ್ನು ಕೇಳುವುದನ್ನು ಅನೇಕರು ಕಲಿತೇ ಇಲ್ಲವೇನೋ! ಗುಣಮಟ್ಟದ ಜೀವನವನ್ನು ಕೇಳುವುದು ಈ ಹೊತ್ತಿನ ಹಕ್ಕಾಗಬೇಕಿತ್ತು. ಶಿಕ್ಷಣ, ಆಹಾರ, ಘನತೆಯುಳ್ಳ ಬದುಕನ್ನು ಕೇಳಲು ನಮಗೆ ಆಸಕ್ತಿ ಇಲ್ಲ. ಮೊನ್ನೆ ಬಲಿಯಾದ ಇನ್‌ಸ್ಪೆಕ್ಟರ್ ಮತ್ತು ಯುವಕ ಇದ್ದ ರಾಜ್ಯಕ್ಕೆ ಈ ಹೊತ್ತಿಗೆ ಅತಿ ಮುಖ್ಯವಾದ ಅಗತ್ಯಗಳಾಗಿ ಕಾಣುತ್ತಿರುವುದರಲ್ಲಿ ಮೊದಲನೆಯದು ಮಂದಿರ! ಇಂತಹ ಅಗತ್ಯಗಳ ಪಟ್ಟಿಗೆ ಪಟೇಲ್ ಪ್ರತಿಮೆಗಿಂತ ಎತ್ತರದ ಪ್ರತಿಮೆ, ಊರುಗಳಿಗೆ ಮರುನಾಮಕರಣ ಶಾಸ್ತ್ರ, ಗೋಶಾಲೆ ಇತ್ಯಾದಿಗಳೂ ಸೇರಿಕೊಳ್ಳುವುದು ಇನ್ನೂ ವಿಚಿತ್ರ.

ಮಲದ ಗುಂಡಿಗಿಳಿದು ಸಾಯುವ ಸಮುದಾಯಗಳ ಪರಿಸ್ಥಿತಿ ನಗರವಾಸಿಗಳಿಗೆ ಅರ್ಥವಾಗುತ್ತಿರುವುದೇ ಅನುಮಾನ. ಹೀಗೆ ಮನುಷ್ಯನ ಘನತೆ, ಮೂಲಭೂತ ಹಕ್ಕುಗಳು ನಿರ್ಲಕ್ಷ್ಯಕ್ಕೊಳಗಾಗಿರುವ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ಡಿಸೆಂಬರ್ 6ರ ನೆನಪು ಇನ್ನಷ್ಟು
ವರ್ಷಗಳ ಕಾಲ ಉಪಯೋಗಕ್ಕೆ ಬರುವ ಮರೆಗುಳಿತನದ ಗುಳಿಗೆ. ಪ್ರಜಾಪ್ರಭುತ್ವದ ಫಲಗಳು ಎಲ್ಲರಿಗೂ ಸಿಕ್ಕಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ಅಂಬೇಡ್ಕರ್ ತೀರಿಕೊಂಡ ಈ ದಿನವನ್ನು ಮರೆಸುವ ಹುನ್ನಾರವೇ ಅಯೋಧ್ಯೆಯ ನೆನಪು ಎನ್ನುವುದು ಅನೇಕ ಬಾರಿ ಚರ್ಚಿತಗೊಂಡ ವಿಚಾರ. ಅಯೋಧ್ಯೆಯ ತೀರ್ಪನ್ನು ಮುಂದೂಡಿದ ಬೆನ್ನಿಗೇ ದೊಡ್ಡ ಸಭೆಗಳು ದೇಶದ ಎಲ್ಲಾ ಮೂಲೆಗಳಲ್ಲೂ ಏರ್ಪಟ್ಟವು.

ಈ ದೇಶವು ಎಂಥ ಪರಿಸ್ಥಿತಿಯಲ್ಲಿದ್ದರೂ ತಮಗೆ ಕೊಂಚವೂ ಲಾಭವಿರದ ಸಂಗತಿಗಳಿಗೆ ಹಾತೊರೆಯುವುದು ಜನರ ಅತ್ಯಂತ ಪ್ರಾಮಾಣಿಕವಾದ ಸಂಗತಿಯೂ‌ ಆಗಿರಬಹುದು!

‘ರಾಮಮಂದಿರ ನಿರ್ಮಾಣವಾಗದಿದ್ದರೆ ಚಿತೆಗೆ ಧುಮುಕುತ್ತೇವೆ’ ಎಂದು ಕೆಲ ಸಾಧುಗಳು ಕಟ್ಟಿಗೆಗಳನ್ನು ಒಟ್ಟು ಮಾಡಿಟ್ಟಿದ್ದಾರೆ. ಕೆಲವು ನಾಗರಿಕರೂ ಇಂಥದ್ದೇ ನಿರ್ಧಾರಕ್ಕೆ ಬರಬಹುದು. ಪ್ರಜಾಪ್ರಭುತ್ವದ ಎಲ್ಲಾ ಹಕ್ಕುಗಳು ಗೌಣವೆನಿಸಿ ಧಾರ್ಮಿಕ ಸಂಕೇತಗಳೇ ಅಗತ್ಯವೆನಿಸುವ ಸ್ಥಿತಿಯನ್ನು ಪ್ರಜಾಪ್ರಭುತ್ವದಿಂದ ನಿರೀಕ್ಷಿಸುವ ಸೂಚನೆಗಳಾಗಿ ಅಗ್ನಿಪ್ರವೇಶ ಯತ್ನ ಭಾಸವಾಗುತ್ತದೆ.

ಡಿಸೆಂಬರ್ ತಿಂಗಳ ‘ನೆನಪು’ಗಳಿಗೆ ಸೇರಿಕೊಳ್ಳುವ ಇನ್ನೊಂದು ಪ್ರಕರಣ ‘ಭೋಪಾಲ್ ಅನಿಲ ದುರಂತ’. ಅಚ್ಚರಿಯೆಂದರೆ ‘ಮಧ್ಯಪ್ರದೇಶದ ಚುನಾವಣೆ’ ಮತ್ತು ‘ಭೋಪಾಲ್ ನೆನಪು’ ಒಂದೇ ರೇಖೆಯಲ್ಲಿ ಸಂಧಿಸಿದ್ದರೂ, ಯಾವುದೇ ರಾಜಕೀಯ ಪಕ್ಷಕ್ಕೆ ಅದು ‘ಅಸ್ತ್ರ’ವಾಗಿರಲಿಲ್ಲ. ಇಂತಹ ನೆನಪು ಮತ್ತು ಅದಕ್ಕೆ ಪ್ರತಿಯಾಗಿ ನಾಗರಿಕರೇ ಪರೋಕ್ಷವಾಗಿ ಸೃಷ್ಟಿಸುವ ಮರೆವುಗಳೇ ಈ ದೇಶದ ರಾಜಕೀಯವನ್ನು ತಳ್ಳುತ್ತಿವೆಯಷ್ಟೆ.

ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಏರಿತೆಂದು ಫ್ರಾನ್ಸಿನಲ್ಲಿ ‘yellow vest’ (ಹಳದಿ ವಸ್ತ್ರದ ಸಂಕೇತ) ಪ್ರತಿಭಟನೆ ತೀವ್ರವಾಗಿದೆ. ನಮ್ಮಲ್ಲಿ ಬೆಲೆ ಏರಿಕೆಯನ್ನು ಪ್ರಶ್ನಿಸುವುದೇ ಅಪರಾಧವೆನ್ನುವುದಕ್ಕೆ ನಿರ್ದಿಷ್ಟ ಬಣವೊಂದು ವಕಾಲತ್ತು ವಹಿಸುವುದು ದೊಡ್ಡ ವ್ಯಂಗ್ಯ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !