ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ರಾಜ್ಯಗಳು ತಿಳಿಹೇಳಿದ ಪ್ರಜಾಪ್ರಭುತ್ವ

ಈ ದೇಶ ಧರ್ಮಾಂಧತೆಯನ್ನು ಸಹಿಸುವುದಿಲ್ಲ. ಅದೂ ಅಲ್ಲದೆ ಈ ದೇಶಕ್ಕೆ ಜಾತಿ ಸಂಕೋಲೆ ಇದೆಯೇ ಹೊರತು ಧರ್ಮ ಸಂಕೋಲೆಯಿಲ್ಲ
Last Updated 16 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ಧರ್ಮ ಎಂಬುದು ಕತ್ತೆತ್ತಿ ನೋಡಿದರೆ ಋಷಿಕೇಶದ ಪವಿತ್ರ ಗಂಗೆ, ಕತ್ತು ಬಗ್ಗಿಸಿ ನೋಡಿದರೆ ಕಾಶಿಯ ಕೊಳಕು ನೀರು. ಮಠ- ಮಂದಿರ, ಪ್ರತಿಮೆ; ಚರಿತ್ರೆಯ ಹೆಸರು ಬದಲಾವಣೆ, ಗೋಡೆಯ ಬಣ್ಣ ಹಾಗೂ ಶರೀರದ ಮೇಲಿನ ಕಾವಿ ಬದಲಾವಣೆ... ಇವಿಷ್ಟೇ ಭಾರತೀಯ ಧರ್ಮ ಎಂದಾಗಿದ್ದರೆ, ಈ ನೆಲವು ಜಗತ್ತಿಗೆ ಜಾತ್ಯತೀತ, ವರ್ಣಾತೀತ ಸಲಹೆ ನೀಡುತ್ತಲೂ ಇರಲಿಲ್ಲ. ಹಾಗಾಗಿದ್ದರೆ ದೇಶ ಎಂದೋ ಪಾಕ್, ಸೌದಿ ಇತ್ಯಾದಿಗಳಾಗಿ ಕಪ್ಪುಚುಕ್ಕೆ ಪಡೆಯುತ್ತಿತ್ತು.

ಸರ್ವಧರ್ಮವನ್ನು ಪಾಲಿಸಿದರೆ ಒಳಿತೆಂದೇ ರಾಷ್ಟ್ರಗಳು ಹೇಳುತ್ತವೆ. ‘ಒಂದೇ ಧರ್ಮವಿದ್ದರೇನೇ ಒಂದು ರಾಷ್ಟ್ರ ಎಂಬುದು ಲೋಕದಲ್ಲಿ ಎಲ್ಲಿಯೂ ಇಲ್ಲ’ ಎಂದು ಗಾಂಧೀಜಿ ಸಹ ಸ್ಪಷ್ಟಪಡಿಸಿದ್ದಾರೆ. ಆದರೆ ಮೂಲಭೂತವಾದಿಗಳು ಏಕಧರ್ಮದಡಿ ಜನರನ್ನು ಸಿಕ್ಕಿಸಿ ಅರೆಯಲಾರಂಭಿಸಿದ್ದಾರೆ. ಈ ದೇಶದ ರಾಜಕೀಯ, ಅಧಿಕಾರ ಹಪಹಪಿ ಏನೇ ಇರಲಿ, ಸಾಮಾನ್ಯ ಜನ ಬುದ್ಧನ ಹಾದಿಯ ಗಾಂಧಿಯ ನಡೆಯನ್ನು ಆರಿಸಿಕೊಂಡು, ಅಂಬೇಡ್ಕರರ ಸಂವಿಧಾನವನ್ನು ಒಪ್ಪಿಕೊಂಡು ಪ್ರಜಾಪ್ರಭುತ್ವ ಎಂಬ ಗಾದಿಯಲ್ಲಿ ಕುಳಿತಾಗಿದೆ. ರಾಜಕಾರಣವನ್ನು ಆಗಾಗ ಏರಿಸಿ ನೋಡುತ್ತಾರೆ. ತಿದ್ದಿಕೊಳ್ಳದಿದ್ದರೆ ಇಳಿಸುತ್ತಾರೆ.

ಸ್ವರಾಜ್ಯ ಬಂದಾಗಿನಿಂದಲೂ ನಂಬಿಕೆ ಇಟ್ಟುಕೊಂಡಿದ್ದ ಪಕ್ಷವು ಬರಬರುತ್ತಾ ತನ್ನ ಜನರನ್ನು ತಾನೇ ಮುಕ್ಕಲಾರಂಭಿಸಿದಾಗ ಜನರು ಪರ್ಯಾಯ ಹುಡುಕಿದರು. ಧರ್ಮರಾಜಕಾರಣದ ಹೆಸರಿನಲ್ಲಿ ಶ್ರೀರಾಮನ ರಥ ಓಡಿಸಿ ಮಸೀದಿ ಕೆಡವಿದರೂ ದೇಶ ಅಭಿವೃದ್ಧಿಯಾದೀತೆಂದು ಕ್ಷಮಿಸಿ, ಮತದಾರರು ಹೊಸಪಕ್ಷವನ್ನು ದಿಲ್ಲಿಯಲ್ಲಿ ಕೂರಿಸಿದರು. ಒಂದೇ ಅವಧಿಯಲ್ಲಿ ಇವರ ಸಹವಾಸ ಸಾಕೆನಿಸಿತು. ಈಗ ಧರ್ಮರಾಜಕಾರಣದ ಹೇಸಿಗೆ ಕೃತ್ಯಕ್ಕೆ ನಾಚಿ ಮತಪೆಟ್ಟಿಗೆ ಮೂಲಕ ತಿಳಿಹೇಳಲಾರಂಭಿಸಿದ್ದಾರೆ.

ಇಂದು ದೇಶದಲ್ಲಿ ಏನು ನಡೆಯುತ್ತಿದೆ? ಮಠಪೀಠಾಧ್ಯಕ್ಷರು ರಾಜಕೀಯ ಪೀಠ ಹಿಡಿದು ಹನುಮ ದೇವರಿಗೂ ಜಾತಿ ಪಟ್ಟ ಕಟ್ಟಿ ‘ದಲಿತ’ ಎಂದುಬಿಡುತ್ತಾರೆ. ಬೀದಿಬೀದಿಗಳ, ನಗರ- ಊರುಗಳ ಹೆಸರು ಅನ್ಯ ಧರ್ಮದವರ ಹೆಸರಿನಲ್ಲಿರಬಾರದಂತೆ. ಈ ದೇಶ ಇಂಥ ಧರ್ಮಾಂಧತೆಯನ್ನು ಸಹಿಸುವುದಿಲ್ಲ. ಅದೂ ಅಲ್ಲದೆ ಈ ದೇಶಕ್ಕೆ ಜಾತಿ ಸಂಕೋಲೆ ಇದೆಯೇ ಹೊರತು ಧರ್ಮ ಸಂಕೋಲೆಯಿಲ್ಲ. ‘ಮಹಮದೀಯ ಕ್ರೂರವಾಗಿದ್ದರೆ ಹಿಂದೂ ನೀಚನಾಗಿದ್ದಾನೆ. ನೀಚತನ ಕ್ರೂರತನಕ್ಕಿಂತ ಕೆಟ್ಟದ್ದು’ ಎನ್ನುತ್ತಾರೆ ಅಂಬೇಡ್ಕರ್. ಈ ಮಾತು ಶತಮಾನಗಳ ನೋವಿನದು.

ಈಗ ಕೇಂದ್ರದಲ್ಲಿ ಆಳುತ್ತಿರುವ ಪಕ್ಷದ ನೇತಾರನಿಗೆ ಈ ಅರಿವು ಇದ್ದಿದ್ದು ಹೌದಾಗಿದ್ದರೆ, ಈ ನಾಲ್ಕೂವರೆ ವರ್ಷಗಳಲ್ಲಿ ಹುಸಿ ಭರವಸೆಯಲ್ಲಿ ಕಾಲ ಕಳೆದು ರೈತರು, ಕಾರ್ಮಿಕರನ್ನು ನಿರ್ಲಕ್ಷಿಸಿ ಧನಿಕರ ಜೋಳಿಗೆ ತುಂಬುತ್ತಿರಲಿಲ್ಲ. ಮಠದ ಸ್ವಾಮಿಯನ್ನು ಕಾಲು ಕೆರೆದು ಗುಟರಿಕೆ ಹಾಕಲು ಬಿಟ್ಟು ತಾಳ ಹಾಕುವವರನ್ನು ಬೀದಿಯಲ್ಲಿ ವಿಜೃಂಭಣೆಗೆ ಬಿಟ್ಟು ರಾಜ್ಯ ರಾಜ್ಯಗಳನ್ನು ಸಿಬಿಐಗೆ ದಾಳ ಮಾಡಿಕೊಂಡು ಅಹಂಕಾರದ ಅಮಲಿನಲ್ಲಿ ಗೆದಿಯಲು ಹವಣಿಸುತ್ತಿರಲಿಲ್ಲ. ಅಪಮಾರ್ಗದಲ್ಲಿ ಕಾಂಗ್ರೆಸ್ ಮುಕ್ತ, ವಿರೋಧ ಪಕ್ಷ ಮುಕ್ತ ಭಾರತವನ್ನು ಮಾಡಲು ಹೊರಡುತ್ತಿರಲಿಲ್ಲ. ಎಚ್‌.ಡಿ. ದೇವೇಗೌಡರು ಹೇಳುವಂತೆ ‘ಈಗ ಅಹಂ ಮುಕ್ತ ಭಾರತವನ್ನು ಜನತೆ ಮಾಡುತ್ತಿದೆ’. ಇದು ಆಳುವವರಿಗೆ ಹೇಳುವ ಮೊದಲ ಪಾಠ.

ಹೇಗೋ ಕಾರ್ಯಸಾಧಿಸಿ ಒಮ್ಮೆ ಗಾದಿಯಲ್ಲಿ ಕುಳಿತ ಬಿಜೆಪಿ, ಮತ್ತೊಮ್ಮೆ ಆರಿಸಿಬರಲು ಏದುಸಿರು ಬಿಟ್ಟಿತ್ತು. ಇದೇ ಭಾರತೀಯ ಸರ್ವಧರ್ಮಗಳು ಹೇಳುವ ತತ್ವ ಹಾಗೂ ಜಗತತ್ವ. ಈಗ ಅವರ ಪಕ್ಷದ ಸಂಸದರೇ ನುಡಿಯುತ್ತಿರುವಂತೆ, ಮಂದಿರ– ಪ್ರತಿಮೆ ರಾಜಕೀಯ, ಧರ್ಮರಾಜಕಾರಣ ಈ ದೇಶದಲ್ಲಿ ನಡೆಯುವುದಿಲ್ಲ. ಅದಕ್ಕೆ ಭಾರತದ ಸಾಂಸ್ಕೃತಿಕ ಇತಿಹಾಸ ಬೆಂಬಲ ನೀಡುವುದೂ ಇಲ್ಲ. ಜನರಿಗೆ ಬೇಕಾಗಿರುವುದು ಅಭಿವೃದ್ಧಿ. ಅದರಲ್ಲಿ ಸರಳತೆ. ಸರಳತೆಯಲ್ಲಿ ಸತ್ಯದ ಹಾದಿಗಳು. ಸತ್ಯದ ಹಾದಿಯಲ್ಲಿ ಪ್ರಜಾಪ್ರಭುತ್ವ. ‘ನನ್ನ ದೃಷ್ಟಿಯಲ್ಲಿ ವಿಭಿನ್ನ ಧರ್ಮಗಳು ಒಂದೇ ತೋಟದಲ್ಲಿ ಬೆಳೆದ ಸುಂದರ ಪುಷ್ಪಗಳು’ ಎಂದಿದ್ದಾರೆ ಗಾಂಧಿ. ದೇಶ ವಿಭಜನೆಯಾದರೇನು! ನೇತಾರರು ಅಧಿಕಾರದ ಲಾಲಸೆಯಲ್ಲಿ ಒಡೆದು ಆಳಿದರೇನು! ಜನ ಸಾಮಾನ್ಯರಿಗೆ ನೆರೆಯ ಮನುಷ್ಯ ಅವನೂ ಮಾನವನಾಗಿರುತ್ತಾನೆಂಬ ಅಪಾರ ನಂಬಿಕೆಯಿದೆ. ಆ ನಂಬಿಕೆಯೇ ಈ ದೇಶವನ್ನು ಕಾಪಾಡುತ್ತಿದೆ. ಮುಂದೆಯೂ ಕಾಪಾಡುತ್ತದೆ. ಅದಕ್ಕೆ ಈ ದೇಶದಲ್ಲಂತೂ ಅಂಬೇಡ್ಕರ್ ಸಂವಿಧಾನವಿದೆ. ಅದರೊಳಗೆ ಶತಶತಮಾನಗಳ ಹೂರಣವಿದೆ.

ವಿವೇಕಾನಂದರು ಅಂದು ಷಿಕಾಗೊದಲ್ಲಿ ನಿಂತು ಭಾರತೀಯ ಹಿಂದೂ ಧರ್ಮದ ಹಿರಿಮೆಯನ್ನು ಪುರಾತನ ಮಹರ್ಷಿಗಳ ಧರ್ಮ ತಳಹದಿಯನ್ನು ಪರಿಚಯಿಸುತ್ತಾರೆ. ಭವಿಷ್ಯದ ಭಾರತ ನಡೆದುಕೊಳ್ಳಬೇಕಾದ ಜಾತಿ ನೀತಿಗಳನ್ನು ದೇಶಕ್ಕೆ ಬಂದು ತಿಳಿಸಿ ಹೇಳುತ್ತಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಇತ್ಯಾದಿ ಧರ್ಮಗಳೆಲ್ಲವೂ ಮನುಷ್ಯ ನಿರ್ಮಿತ ಗೂಡುಗಳು. ಈ ಗೂಡು ಗವಿಯೊಳಗಿಂದ ಹಿಮಾಲಯದ ಮೇಲಿನ ಜಲ ಉಕ್ಕುವಂತೆ ಧರ್ಮವು ಮನುಷ್ಯರನ್ನು ಪರಿಶುದ್ಧಗೊಳಿಸಬೇಕೆಂಬುದೇ ಜನರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT