ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ತಳಹದಿ ಕನ್ನಡವೇ ಆಗಿರಲಿ

ಪ್ರಾಥಮಿಕ ಹಂತದಲ್ಲಿ ಕನ್ನಡದಲ್ಲಿ ಕಲಿತು, ಮನೋವಿಕಾಸಕ್ಕೆ ತಳಹದಿ ಗಟ್ಟಿಗೊಂಡ ನಂತರ ಇಂಗ್ಲಿಷ್ ಮಾಧ್ಯಮದಿಂದ ಉಪಯೋಗವೇ ಹೊರತು ಅದಕ್ಕೂ ಮೊದಲಲ್ಲ
Last Updated 23 ಡಿಸೆಂಬರ್ 2018, 19:52 IST
ಅಕ್ಷರ ಗಾತ್ರ

‘ಶಿಕ್ಷಣ ಮಾಧ್ಯಮ’ದ ಜಟಾಪಟಿ ಮತ್ತೆ ಮುನ್ನೆಲೆಗೆ ಬಂದಿದೆ. ಪರ– ವಿರೋಧ ಚರ್ಚೆಗಳಿಂದ ಜನಸಾಮಾನ್ಯರು ಗೊಂದಲಕ್ಕೀಡಾಗುತ್ತಿದ್ದರೆ, ನೀತಿ ನಿರೂಪಿಸುವ ಸರ್ಕಾರವು ತನ್ನ ತೀರ್ಮಾನವೇ ಅಂತಿಮ, ಇತರ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಧೋರಣೆ ತಾಳಿದಂತಿದೆ.

ಇಂಥ ತೀರ್ಮಾನ ಕೈಗೊಳ್ಳುವ ಮುನ್ನ ತಜ್ಞರ ಜೊತೆ ಚರ್ಚಿಸುವ, ಜನಾಭಿಪ್ರಾಯ ರೂಪಿಸುವ ಸೌಜನ್ಯವನ್ನೂ ಸರ್ಕಾರ ತೋರದಿರುವುದು ಪ್ರಜಾತಂತ್ರದ ವಿಪರ್ಯಾಸ. ಇಂಗ್ಲಿಷ್ ಮಾಧ್ಯಮವು ಜನರ ಅಗತ್ಯವೆಂದು ಸರ್ಕಾರ ಹೇಗೆ ನಿರ್ಧರಿಸಿತೋ ತಿಳಿಯದು. ಇಂಗ್ಲಿಷ್ ಮಾಧ್ಯಮವನ್ನು ವಿರೋಧಿಸುವ ಸಾಹಿತಿಗಳು ಸಹ ಜನಾಭಿಪ್ರಾಯ ಕೇಳದೆಯೇ ‘ಗೋಕಾಕ್ ಮಾದರಿ ಚಳವಳಿ ಮಾಡುತ್ತೇವೆ’ ಎಂಬ ಬೆದರಿಕೆ ಹಾಕಿದ್ದು ಇನ್ನೊಂದು ಆಭಾಸ.

‘ಭಾರತದಲ್ಲಿ ಪೋಷಕರ ಇಂಗ್ಲಿಷ್ ವ್ಯಾಮೋಹ ಎಷ್ಟಿದೆಯೆಂದರೆ, ಭವಿಷ್ಯದಲ್ಲಿ ಸಮಾನ ಭಾಷಾ ಶಿಕ್ಷಣ ಬರುವ ಸಾಧ್ಯತೆಯೇ ಇಲ್ಲವೇನೋ ಎನ್ನಿಸುತ್ತದೆ’ ಎಂಬ ನಟರಾಜ್ ಹುಳಿಯಾರ್ (ಗ್ರಾಮೀಣ ವಾಸ್ತವ ಮತ್ತು ಇಂಗ್ಲಿಷ್, ಪ್ರ.ವಾ., ಡಿ. 22) ಅವರ ಅಭಿಪ್ರಾಯದಲ್ಲಿ ಭವಿಷ್ಯದ ನೋಟವು ದಟ್ಟ ವಾಸ್ತವ ಪ್ರಜ್ಞೆಯಿಂದ ಕೂಡಿದೆಯೊ? ನಿರಾಶೆಯ ತುದಿ ಮುಟ್ಟಿದೆಯೊ? ಆಲೋಚನೆ ಮಾಡಬೇಕಿದೆ.

ಇಂಗ್ಲಿಷ್ ಪರ ವಾದಿಸುತ್ತಿರುವವರಲ್ಲಿ ನಾಡಿನ ತಳವರ್ಗದವರನ್ನು ಕುರಿತ ಕಾಳಜಿ ಕಾಣುತ್ತಿದೆ. ಕಲಿಕಾ ಮಾಧ್ಯಮವು ಹೊಸ ಸಾಮಾಜಿಕ ವರ್ಗೀಕರಣಕ್ಕೆ ಕಾರಣವಾಗುತ್ತದೆ ಎಂಬ ಆತಂಕ ಇವರನ್ನು ಬಾಧಿಸುತ್ತಿದೆ. ಇದನ್ನು ವಿರೋಧಿಸುವವರು, ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಮಾಧ್ಯಮ ಜಾರಿಯ ಕೆಡುಕೇನು, ಕನ್ನಡ ಮಾಧ್ಯಮದ ಅಗತ್ಯವೇನು ಎಂಬ ಬಗ್ಗೆ ಸ್ಪಷ್ಟವಾದ ಚಿಂತನೆಗಳನ್ನು ಸರ್ಕಾರ ಮತ್ತು ಜನರ ಮುಂದೆ ಇಡುವಲ್ಲಿ ಯಶಸ್ವಿಯಾಗಿಲ್ಲ. ಬದಲಿಗೆ ‘ನಿಮ್ಮ ಮಕ್ಕಳು ಎಲ್ಲಿ ಓದುತ್ತಿದ್ದಾರೆ’ ಎಂಬ ನೈತಿಕ ಪ್ರಶ್ನೆಯನ್ನು ಇಂಗ್ಲಿಷ್‌ ಮಾಧ್ಯಮ ವಿರೋಧಿಗಳ ಮುಂದಿಡುತ್ತಾರೆ.

ಸಾಮಾಜಿಕ ಪ್ರಜ್ಞೆಯ ಭಾಗವಾಗಿಯೊ, ಅಭಿಮಾನ- ನೈತಿಕ ಪ್ರಜ್ಞೆಯ ಭಾಗವಾಗಿಯೊ ಶಿಕ್ಷಣ ಮಾಧ್ಯಮದ ಸಮಸ್ಯೆಯನ್ನು ತೆಗೆದುಕೊಂಡರೆ ಸಾಲದು. ಸಂದರ್ಶನವೊಂದರಲ್ಲಿ ದೇಜಗೌ ಅವರು ಒಮ್ಮೆ ಕುವೆಂಪು ಅವರನ್ನು, ‘ಕನ್ನಡ ಸರ್ವಮಾಧ್ಯಮವಾಗುವ ತನಕ ಸಾಹಿತ್ಯೇತರ ಕ್ಷೇತ್ರದಲ್ಲಿ ಉತ್ತಮ ಕೃತಿಗಳ ಸೃಷ್ಟಿ ಸಾಧ್ಯವಾಗಲಾರದಲ್ಲವೇ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಕುವೆಂಪು, ‘ನಿಮ್ಮ ಮಾತು ನೂರಕ್ಕೆ ನೂರು ಪಾಲು ಸತ್ಯ. ಕನ್ನಡ ಸರ್ವಮಾಧ್ಯಮವಾದಾಗ ಪರಾನುಕರಣೆಗೆ ಹಿಂಜರಿಯುತ್ತದೆ; ಸ್ವತಂತ್ರಾಲೋಚನೆ ಸುಲಭವಾಗುತ್ತದೆ; ಪ್ರತಿಭೆ ವಿಕಾಸಗೊಳ್ಳುತ್ತದೆ; ಸ್ವೋಪಜ್ಞತೆಗೆ ರೆಕ್ಕೆ ಮೂಡುತ್ತದೆ’ (ಕುವೆಂಪು ಸಮಗ್ರ ಗದ್ಯ ಸಂಪುಟ-2, ಪುಟ 906) ಎಂದಿದ್ದರು. ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಮಾತೃಭಾಷೆ ಅಥವಾ ಪರಿಸರದ ಭಾಷೆ ಎಷ್ಟು ಅವಶ್ಯಕ, ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆ ಯಾವ ಮಾಧ್ಯಮದಿಂದ ಸಾಧ್ಯವೆಂಬುದನ್ನು ಕುವೆಂಪು ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳ ಮಾನಸಿಕ ಶಕ್ತಿ- ಸಾಮರ್ಥ್ಯಗಳನ್ನು ನಿರ್ಲಕ್ಷಿಸಿ, ಪೋಷಕರ ಸಾಮಾಜಿಕ ಸ್ಥಿತಿಯ ನೆಲೆಯಲ್ಲಿ ಚಿಂತಿಸುವುದರಿಂದ ವಿದ್ಯಾರ್ಥಿಗಳ ಮೇಲಾಗುವ ಪರಿಣಾಮವನ್ನು ಏಕೆ ಕಡೆಗಣಿಸಲಾಗುತ್ತಿದೆ? ಕುವೆಂಪು ಅವರ ಕಾಲಘಟ್ಟ ಬೇರೆ, ಈಗಿನದು ಬೇರೆ ಎಂದು ತಳ್ಳಿಹಾಕಲಾಗದು. ಇಂಗ್ಲಿಷ್ ಬೇಕು ನಿಜ, ಆದರೆ ಪ್ರಾಥಮಿಕ ಶಾಲೆಯ ಹಂತದಲ್ಲಿ ಕನ್ನಡ ಅಥವಾ ಪರಿಸರದ ಭಾಷೆಯಲ್ಲಿ ಕಲಿಕೆಯಾಗಿ, ವಿದ್ಯಾರ್ಥಿಗಳ ಮನೋವಿಕಾಸಕ್ಕೆ ತಳಹದಿ ಸಿಕ್ಕಿದ ನಂತರದಲ್ಲಿ ಇಂಗ್ಲಿಷ್ ಮಾಧ್ಯಮದಿಂದ ಉಪಯೋಗವೇ ಹೊರತು ಅದಕ್ಕೂ ಮೊದಲಲ್ಲ.

-ದೊಡ್ಡಿಶೇಖರ, ಪುತ್ತೂರು

ಭ್ರಮೆಯಿಂದ ಹೊರಬರಲಿ

‘ಕಲಿಕಾ ಮಾಧ್ಯಮದ ವಿಚಾರದಲ್ಲಿ ನಮ್ಮ ಮಾತೇ ನಡೆಯಬೇಕು’ ಎನ್ನುವ ಭ್ರಮೆಯಿಂದ ಕನ್ನಡ ಸಾಹಿತಿಗಳು ಹೊರಬರಬೇಕು.

ಜನ ಬದುಕಿದರೆ ಭಾಷೆ ಬದುಕುತ್ತದೆ, ಭಾಷೆ ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ್ದಲ್ಲ. ಅದು ಜೀವನ ನಿರ್ಮಾಣ ಸಾಧನವೂ ಹೌದು. ಹೈದರ್, ಟಿಪ್ಪು ಅಧಿಕಾರ ನಡೆಸುತ್ತಿದ್ದ ಕಾಲದಲ್ಲಿ ಹಲವಾರು ಉದ್ಯೋಗ ಆಕಾಂಕ್ಷಿಗಳು ಪರ್ಷಿಯನ್ ಕಲಿತರು. ಬ್ರಿಟಿಷರು ಅಧಿಕಾರ ನಡೆಸುತ್ತಿದ್ದಾಗ ಅನೇಕರು ಇಂಗ್ಲಿಷ್ ಕಲಿಯಲು ಪ್ರಾರಂಭಿಸಿದ್ದರು. ಇಂಥ ಕಲಿಕೆಯಿಂದ ತಮ್ಮ ಜೀವನವನ್ನು ಸುಖವಾಗಿ ಕಳೆಯಬಹುದು ಎಂದು ಅವರು ಸರಿಯಾಗಿ ತಿಳಿದುಕೊಂಡಿದ್ದರು. ಆರ್ಥಿಕ ಶಕ್ತಿ ನೀಡದ ಭಾಷೆಯು ಉಳ್ಳವರಿಗೆ ಮಾತ್ರ ಚೆನ್ನ! ಪರ್ಷಿಯನ್, ಇಂಗ್ಲಿಷ್ ಭಾಷಾ ಬಳಕೆಯಿಂದ ಕನ್ನಡಕ್ಕೆ ಏನೂ ತೊಂದರೆಯಾಗಲಿಲ್ಲ. ಬದಲಿಗೆ ಲಾಭವೇ ಆಯ್ತು. ಇಂಗ್ಲಿಷ್
ಬಲ ಇಲ್ಲದ ಕುವೆಂಪು, ಕಾರಂತರನ್ನು ಊಹಿಸಿ ನೋಡಿ!

ಇವೆಲ್ಲಕ್ಕೂ ಮುಖ್ಯವಾದದ್ದು ಸಾಮಾಜಿಕ ನ್ಯಾಯ. ನಾನಾ ಕಾರಣಗಳಿಂದಾಗಿ ನಮ್ಮ ಜನ ಸಂಸ್ಕೃತ ಜ್ಞಾನದಿಂದ ವಂಚಿತರಾದರು. ಈಗ ಅವರು ಇಂಗ್ಲಿಷ್ ಜ್ಞಾನದಿಂದ ವಂಚಿತರಾಗಬಾರದು. ಕನ್ನಡ ಮಾಧ್ಯಮದಲ್ಲೇ ಓದಿ ಕಾರಕೂನರಾಗಿರಬೇಕೇ, ಇಂಗ್ಲಿಷ್ ಕಲಿತು ವಿಶ್ವಪ್ರಜೆ ಆಗಬೇಕೇ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ನಿರ್ಧರಿಸಬೇಕು. ಇಲ್ಲಿ ಯಾವ ಹಕ್ಕೂ ಸಾಹಿತಿಗಳಿಗಿಲ್ಲ. ಭಾಷೆಯಾಗಿ ಆಗಲಿ, ಮಾಧ್ಯಮವಾಗಿ ಆಗಲಿ ಇಂಗ್ಲಿಷ್ ಕಲಿಕೆ ಕನ್ನಡಕ್ಕೆ ಯಾವ ಸಂಕಷ್ಟವನ್ನೂ ಉಂಟುಮಾಡದು.

-ಡಾ. ಡಿ.ಎ. ಶಂಕರ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT