ಹುಷಾರು ತಪ್ಪಿದರೆ ಆರೋಗ್ಯ ಕೇಂದ್ರಕ್ಕೆ ಹೊತ್ತು ತರಬೇಕು: ಬಹುಕಾಲದ ಸಂಕಷ್ಟ

7
ಇನ್ನಾದರೂ ಸುಧಾರಿಸೀತೆ ಸುಳ್ವಾಡಿ ಜನರ ಬದುಕು

ಹುಷಾರು ತಪ್ಪಿದರೆ ಆರೋಗ್ಯ ಕೇಂದ್ರಕ್ಕೆ ಹೊತ್ತು ತರಬೇಕು: ಬಹುಕಾಲದ ಸಂಕಷ್ಟ

Published:
Updated:
Prajavani

ಯಾರ ಗಮನಕ್ಕೂ ಬಾರದೆ ಗುಡ್ಡಗಾಡುಗಳ ಮಧ್ಯೆ ಮರೆಯಾಗಿದ್ದ ಸುಳ್ವಾಡಿ ಎಂಬ ಕುಗ್ರಾಮ ಕಿಚ್ಚುಗುತ್ತು ಮಾರಮ್ಮನ ವಿಷಪ್ರಸಾದ ದುರಂತದಿಂದಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತು. ಹಿಂದೆಂದೂ ಇತ್ತ ಮುಖ ಮಾಡಿರದ ಮಾಧ್ಯಮದ ಮಂದಿ ಮತ್ತು ಜನಪ್ರತಿನಿಧಿಗಳು ತಂಡೋಪ ತಂಡವಾಗಿ ಇಲ್ಲಿಗೆ ಭೇಟಿ ನೀಡಿದರು. ರಾಜ್ಯದ ಗಡಿಯಂಚಿನಲ್ಲಿರುವ ಈ ಪ್ರದೇಶವು ಅಭಿವೃದ್ಧಿಯಿಂದ ವಂಚಿತವಾಗಿರುವ ವಿಷಯ ಮಾಧ್ಯಮಗಳಿಂದ ಈಗಷ್ಟೇ ಬೆಳಕಿಗೆ ಬಂದಿದೆ.

ಸುಳ್ವಾಡಿ, ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಇದು ಚಾಮರಾಜನಗರ ಜಿಲ್ಲೆಯ ಅತಿ ದೊಡ್ಡ ಗ್ರಾಮಪಂಚಾಯಿತಿಯಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಗ್ರಾಮಗಳಿದ್ದು, ಎಲ್ಲವೂ ಬೆಟ್ಟಗುಡ್ಡ-ಕಣಿವೆಗಳಲ್ಲಿ ಹರಿದು ಹಂಚಿ ಹೋಗಿವೆ.

ಗಿರಿಶಿಖರಗಳ ಮೇಲೆ ಹಬ್ಬಿರುವ ದೊಡ್ಡಾಣೆ, ತೋಕರೆ, ಕೊಕ್ಬಾರೆ, ಕೊಂಬುದಿಕೆ ಮುಂತಾದ ಕುಗ್ರಾಮಗಳಲ್ಲಿ ರಸ್ತೆ, ಬಸ್ಸು, ವಿದ್ಯುತ್, ದೂರವಾಣಿ ಸೌಲಭ್ಯಗಳಿಲ್ಲದ ಕಾರಣ ಜನರು ದ್ವೀಪಜೀವಿಗಳಾಗಿ ಬದುಕುವಂತಾಗಿದೆ. ಇಲ್ಲಿ ಮೂಲನಿವಾಸಿಗಳಾದ ಬೇಡಕಂಪನ ಸಮುದಾಯದವರು ವಾಸಿಸುತ್ತಿದ್ದು, ಆರೋಗ್ಯಸೇವೆ ಎಂಬುದು ಮರೀಚಿಕೆಯಾಗಿದೆ. ಹಾವು ಕಚ್ಚಿದವರನ್ನು, ಗರ್ಭಿಣಿಯರನ್ನು ಅಥವಾ ತೀವ್ರ ಕಾಯಿಲೆಗೆ ತುತ್ತಾದವರನ್ನು ಗಳಕ್ಕೆ ಕಟ್ಟಿ ಬೆಟ್ಟದ ತಪ್ಪಲಿನ ಆರೋಗ್ಯ ಕೇಂದ್ರಕ್ಕೆ ತರುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಬಹುದಾದ ಅಪಾಯವಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲಾಗಿದೆಯಾದರೂ, ಸಾರಿಗೆ ಸೌಲಭ್ಯವಿಲ್ಲದ ಕಾರಣ ಶಿಕ್ಷಕರು ಅಲ್ಲಿಗೆ ಹೋಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಅರಣ್ಯ ಪರಿಸರಕ್ಕೆ ಧಕ್ಕೆಯಾಗದಂತೆ ಈ ಬುಡಕಟ್ಟು ಜನರ ಹಾಡಿಗಳನ್ನು ಅಭಿವೃದ್ಧಿಪಡಿಸಬೇಕಿದೆ.

ಕಣಿವೆ ಭಾಗದಲ್ಲಿ ಚದುರಿ ಹೋಗಿರುವ ಬಿದರಹಳ್ಳಿ, ವಡ್ಡರದೊಡ್ಡಿ, ಮಾರ್ಟಳ್ಳಿ, ಸುಳ್ವಾಡಿ, ಸಂದನಪಾಳ್ಯ ಮೊದಲಾದ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಅವಲಂಬಿಸಿದ್ದಾರೆ. ಆದರೆ ಇಲ್ಲಿಯ ಅಂತರ್ಜಲ ಆರೋಗ್ಯದ ಮೇಲೆ ದುಷ್ಪ
ರಿಣಾಮವನ್ನು ಬೀರುವ ಲವಣಾಂಶಗಳಿಂದ ಕೂಡಿದ್ದು ಕುಡಿಯಲು ಯೋಗ್ಯವಾಗಿಲ್ಲ. ಇದರಿಂದ ಈ ಭಾಗದ ಜನರು ಹಲವು ಬಗೆಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಳೆಯಾಧರಿತ ಕೃಷಿ ಜಮೀನು ಹಾಗೂ ದನಕರುಗಳನ್ನು ಹೊಂದಿರುವ ರೈತರು ನೀರು ಹಾಗೂ ವಿದ್ಯುತ್ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮೇಕೆದಾಟುವಿನಿಂದ ಕಾವೇರಿ ನೀರನ್ನು ಇಲ್ಲಿಗೆ ತರುವ ಪ್ರಯತ್ನ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಇದು ಈ ಭಾಗದ ಜನರ ಬಹು ದಿನಗಳ ಕೋರಿಕೆಯೂ ಆಗಿದೆ.

ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿದರಹಳ್ಳಿ ಬಳಿ ಬಗಳಿ ಹಳ್ಳದಲ್ಲಿ ಅಣೆಕಟ್ಟು ನಿರ್ಮಿಸಿ ಮಾರ್ಟಳ್ಳಿಯ ಸುತ್ತಮುತ್ತಲ ಹಳ್ಳಿಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಯೋಜನೆಯೊಂದರ ಪ್ರಸ್ತಾಪವಾಗಿತ್ತು. ಆದರೆ, ಆನಂತರ ಇದರ ಬಗ್ಗೆ ಯಾರೂ ಗಮನ ಹರಿಸಲಿಲ್ಲ. ಈಗಲಾದರೂ ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದರೆ ಇಲ್ಲಿಯ ಬಡರೈತರ ಬದುಕು ಹಸನಾದೀತು.

ಮಾರ್ಟಳ್ಳಿ ಗ್ರಾಮಪಂಚಾಯಿತಿಯು ಅರಣ್ಯದಿಂದ ಆವೃತವಾಗಿದ್ದು, ಇಲ್ಲಿಂದ ಹೊರಗಿನ ಸ್ಥಳಗಳಿಗೆ ಹೋಗ ಬೇಕಾದರೆ ಕಾಡುದಾರಿಯನ್ನು ದಾಟಿಯೇ ಹೋಗಬೇಕು. ಆದರೆ ಸಮರ್ಪಕ ರಸ್ತೆ ಮತ್ತು ಸಾರಿಗೆ ಸೌಲಭ್ಯದ ಕೊರತೆಯಿಂದ ತುರ್ತು ಸಂದರ್ಭಗಳಲ್ಲಿ ಸಮೀಪದ ಆಸ್ಪತ್ರೆಗಳನ್ನು ತಲುಪಲು ಕನಿಷ್ಠ ಎರಡು ಗಂಟೆಗಳಾದರೂ ಪ್ರಯಾಣಿಸಬೇಕು. ರಸ್ತೆ ಸೌಲಭ್ಯವನ್ನು ವಿಸ್ತರಿಸುವುದರ ಜೊತೆಗೆ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. ಅಲ್ಲದೆ ಸುಳ್ವಾಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುವ ಅಗತ್ಯವಿದೆ.

ಸುಮಾರು 20 ಸಾವಿರ ಜನಸಂಖೆಯನ್ನು ಹೊಂದಿರುವ ಈ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ, ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕ್ ಸೌಲಭ್ಯವಿಲ್ಲದೆ ಜನರು ಪರದಾಡುವಂತಾಗಿದೆ. ಇಲ್ಲಿರುವ ಏಕೈಕ ಕಾವೇರಿ ಗ್ರಾಮೀಣ ಬ್ಯಾಂಕ್, ಜನರ ಅಗತ್ಯಗಳನ್ನು ಪೂರೈಸಲು ಶಕ್ತವಾಗಿಲ್ಲ. ಸರ್ಕಾರಿ ಯೋಜನೆಗಳು, ವಿದ್ಯಾರ್ಥಿ ವೇತನ ಇತ್ಯಾದಿಗಳಿಗೆ ಸ್ಟೇಟ್ ಬ್ಯಾಂಕ್ ಖಾತೆಯನ್ನೇ ಕೇಳುವುದರಿಂದ 20 ಕಿ.ಮೀ. ದೂರದ ಹೂಗ್ಯಂ ಅಥವಾ ರಾಮಾಪುರಕ್ಕೆ ಹೋಗಬೇಕಾದ ಪರಿಸ್ಥಿತಿ. ಆದ್ದರಿಂದ ಪಂಚಾಯಿತಿ ಕೇಂದ್ರದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‍ನ ಶಾಖೆಯೊಂದನ್ನು ಪ್ರಾರಂಭಿಸಿದರೆ ಜನರಿಗೆ ಹೆಚ್ಚು ಅನುಕೂಲವಾದೀತು. ಸಮರ್ಪಕ ವಿದ್ಯುತ್ ಹಾಗೂ ದೂರವಾಣಿ ಸೌಲಭ್ಯ ಕೂಡ ಜನರ ಬೇಡಿಕೆಯಾಗಿದೆ.

ಜಾಗತೀಕರಣದ ಪರಿಣಾಮವಾಗಿ ಎಲ್ಲಾ ಹಳ್ಳಿಗಳಂತೆ ಇಲ್ಲೂ ಕೃಷಿಕ್ಷೇತ್ರದಲ್ಲಿ ಹಿನ್ನೆಡೆ ಉಂಟಾಗಿ ಹಲವು ಜನರು ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಸ್ಥಳಗಳಿಗೆ ಹೋಗಿ ಕಲ್ಲುಗಣಿ ಮತ್ತು ಗಾರ್ಮೆಂಟ್ ಸಂಸ್ಥೆಗಳಲ್ಲಿ ಕೂಲಿಗಳಾಗಿ ಕೆಲಸ ಮಾಡಿ ಬದುಕನ್ನು ನೂಕುತ್ತಿದ್ದಾರೆ. ನೇಕಾರಿಕೆ, ಸಿದ್ಧ ಉಡುಪುಗಳ ತಯಾರಿಕೆ ಸೇರಿದಂತೆ ಕೃಷಿ ಮತ್ತು ಅರಣ್ಯಾಧರಿತ ಉದ್ಯಮಗಳನ್ನು ಇಲ್ಲಿ ಪ್ರಾರಂಭಿಸಿದರೆ, ಜನರು ಹೊಟ್ಟೆಪಾಡಿಗಾಗಿ ವಲಸೆ ಹೋಗುವುದನ್ನು ತಡೆಯಬಹುದು.

ಸುಳ್ವಾಡಿ ದುರಂತದ ಕಾರಣದಿಂದ ಇಲ್ಲಿಗೆ ಭೇಟಿ ನೀಡಿದ ಮುಖ್ಯಮಂತ್ರಿ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಯೋಜನೆಯೊಂದನ್ನು ರೂಪಿಸುವುದಾಗಿ ಭರವಸೆ ನೀಡಿದ್ದಾರೆ. ಜನರ ದೀರ್ಘಕಾಲದ ಬೇಡಿಕೆಗಳು ಈಗಲಾದರೂ ಈಡೇರುವಂತಾಗಲಿ.

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !