ಇಂಗ್ಲಿಷ್: ಪ್ರಯೋಗವಾಗಿ ಬರಲಿ ಬಿಡಿ

7
ಇಂಗ್ಲಿಷ್ ಮಾಧ್ಯಮದ ಶಾಲೆ ಬೇಡ ಎನ್ನುವವರು ಉತ್ತರಿಸಬೇಕಾದ ಅನೇಕ ಪ್ರಶ್ನೆಗಳಿವೆ. ಯಾರಿಗೆ ಕೊಡಲು ಹೊರಟಿರುವ ಇಂಗ್ಲಿಷ್ ಶಾಲೆಗಳನ್ನು ಇವರು ಬೇಡವೆನ್ನುತ್ತಿದ್ದಾರೆ?

ಇಂಗ್ಲಿಷ್: ಪ್ರಯೋಗವಾಗಿ ಬರಲಿ ಬಿಡಿ

Published:
Updated:
Prajavani

ಒಂದು ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಆರಂಭಿಸಲು ಸರ್ಕಾರ ಮುಂದಾಗಿದೆ. ಸದ್ಯದ ಸಂದರ್ಭದಲ್ಲಿ ಕನ್ನಡ ಭಾಷೆ, ಸರ್ಕಾರಿ ಕನ್ನಡಶಾಲೆ, ಇಂಗ್ಲಿಷ್ ಮಾಧ್ಯಮ– ಇವು ಬೇರೆ ಬೇರೆ ಸಂಗತಿಗಳಲ್ಲ. ಇವುಗಳ ಹಿಂದಿನ ಅರ್ಥಿಕ, ಸಾಮಾಜಿಕ ಮತ್ತು ಪ್ರಾದೇಶಿಕತೆಗಳನ್ನು ಪಕ್ಕಕ್ಕೆ ಇಟ್ಟು ಚರ್ಚಿಸಲು ಸಾಧ್ಯವಿಲ್ಲ. ಇಂಥ ಮಾತುಕತೆಗಳನ್ನು ಕನ್ನಡ ವಿರೋಧಿ, ಇಂಗ್ಲಿಷ್ ಪರ ಎಂಬ ಸರಳ ವರ್ಗೀಕರಣಕ್ಕೆ ಒಳಪಡಿಸಲು ಬಾರದು. ಮಕ್ಕಳ ಕಲಿಕೆಯ ಇತಿಮಿತಿಗಳನ್ನು ಹೊರಗಿಟ್ಟು ಮಾತನಾಡುವುದಂತೂ ಅವೈಜ್ಞಾನಿಕವಾದೀತು.

ಇಂಗ್ಲಿಷ್ ಮಾಧ್ಯಮದ ಶಾಲೆ ಬೇಡ ಎನ್ನುವವರು ಉತ್ತರಿಸಬೇಕಾದ ಅನೇಕ ಪ್ರಶ್ನೆಗಳಿವೆ. ಯಾರಿಗೆ ಕೊಡಲು ಹೊರಟಿರುವ ಇಂಗ್ಲಿಷ್ ಶಾಲೆಗಳನ್ನು ಇವರು ಬೇಡವೆನ್ನುತ್ತಿದ್ದಾರೆ? ಕನ್ನಡ ಇಂದು ಆರ್ಥಿಕವಾಗಿ, ಔದ್ಯೋಗಿಕವಾಗಿ ದಕ್ಕಿಸಿಕೊಳ್ಳುತ್ತಿರುವ ವಿಶ್ವವ್ಯಾಪ್ತಿಯು ಇಂಗ್ಲಿಷ್ ನೆರವಿಲ್ಲದೆ ದೊರಕುತ್ತದೆಯೇ? ಸರ್ವರಿಗೆ ಸಮಬಾಳು ಸಮಪಾಲು ಎನ್ನುವುದು ಇಲ್ಲಿ ಬೇಡವೇ? ನಾವು ಕಲಿಸುತ್ತಿರುವ ಕನ್ನಡವನ್ನು ಕನ್ನಡವೆನ್ನಲೂ ಆಗದಷ್ಟು ಸಂಸ್ಕೃತದ ಇಕ್ಕಳದಲ್ಲಿ ಹಿಚುಕಿ ಸಾಯಿಸಲಾಗುತ್ತಿದೆ. ಹಾಡಿಗಳಿಂದ, ಗೊಲ್ಲರ ಹಟ್ಟಿಗಳಿಂದ, ಬೇಡರ ಹಟ್ಟಿಗಳಿಂದ ಬರುವ ಮಕ್ಕಳು ಶಾಲೆಯ ಕನ್ನಡವನ್ನು ಕಂಡು ಇದ್ಯಾವುದೋ ಪರದೇಸಿ ಭಾಷೆ ಅಂದುಕೊಂಡರೆ ಆಶ್ಚರ್ಯವೇನಿಲ್ಲ.

ಕೆಲವು ಸರ್ಕಾರಿ ಪ್ರೌಢಶಾಲೆಗಳಲ್ಲಿ ಪ್ರಾಯೋಗಿಕವಾಗಿ ಇಂಗ್ಲಿಷ್ ಮಾಧ್ಯಮವನ್ನು ತರಲಾಗಿದೆ. ಇಲ್ಲೆಲ್ಲ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಜಾತಿಯಿಂದ, ಆರ್ಥಿಕತೆಯಿಂದ ಮೇಲ್‍ಸ್ತರದ ಮಕ್ಕಳು ಕೂಡ ಇಲ್ಲಿಗೆ ಬರುತ್ತಿವೆ. ಹೀಗೆ ಸಮಾಜದ ಎಲ್ಲ ಸ್ತರ, ವರ್ಗಗಳಿಂದ ಬರುವ ಮಕ್ಕಳು ಒಟ್ಟಾಗಿ ಕಲಿಯುವುದು ನಮ್ಮ ಸಂವಿಧಾನದ ಆಶಯವನ್ನು ಬಿಂಬಿಸುತ್ತದೆ. ಬದಲಾದ ಆರ್ಥಿಕತೆ, ಉದ್ಯೋಗದ ಅವಕಾಶಗಳ ಹೆಚ್ಚಳ ಇತ್ಯಾದಿ ಸಂಗತಿಗಳು ಸಮಾಜದ ಕೆಳಸ್ತರಗಳು ವಿದ್ಯೆಗಾಗಿ ಹಂಬಲಿಸುವಂತೆ ಮಾಡಿವೆ. ಅತ್ಯಂತ ಪ್ರಾಥಮಿಕ ಅಗತ್ಯವೊಂದನ್ನು ಸರ್ಕಾರ ಈಡೇರಿಸುವ ಪ್ರಯತ್ನ ಮಾಡುತ್ತಿದೆ. ಅದನ್ನು ಸರಿಯಾದ ಕ್ರಮದಲ್ಲಿ, ಯಶಸ್ವಿಯಾಗಿ ಮಾಡುವ ಬಗೆಗೆ ಚರ್ಚೆಗಳು ಆರಂಭವಾಗಬೇಕಿದೆ.

ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸಿದಾಕ್ಷಣ ಸಮಸ್ಯೆಗಳು ಬಗೆಹರಿಯುವುದಿಲ್ಲ. ಬದಲಿಗೆ ಹೆಚ್ಚಾಗುತ್ತವೆ. ದಿನಬೆಳಗಾಗುವುದರಲ್ಲಿ ಇಂಗ್ಲಿಷ್ ಶಿಕ್ಷಕರನ್ನು ರೆಡಿ ಮಾಡಿ ಕೊಡಲು ಸಾಧ್ಯವಿಲ್ಲ. ಇನ್ನು ಪಠ್ಯಕ್ರಮದಲ್ಲಿ ಅನೇಕ ಮಾರ್ಪಾಡುಗಳು ಅಗತ್ಯ. ಈಗ ಗ್ರಾಮೀಣ ಪ್ರದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವವರು ಕೂಡ ನಿಜವಾಗಿ ಕಲಿಯುತ್ತಿರುವುದು ಕನ್ನಡ ಮಾಧ್ಯಮದಲ್ಲಿಯೇ. ಪಠ್ಯ ಮಾತ್ರ ಇಂಗ್ಲಿಷಿನಲ್ಲಿರುತ್ತದೆ. ಅವರು ಇಂಗ್ಲಿಷ್ ಭಾಷೆಯನ್ನೂ ಕಲಿತರೆಂದು ಹೇಳಲಾಗದು. ಇಂಗ್ಲಿಷ್‌ನ ಒಂದಷ್ಟು ಪದಗಳ ಪರಿಚಯ ಮತ್ತು ಅದರ ಕೆಲವು ವ್ಯಾಕರಣದ ಸಂಗತಿಗಳನ್ನು ಕಲಿಯುತ್ತಾರಷ್ಟೆ. ಇದರ ಬದಲಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಪಠ್ಯಗಳನ್ನು ಅಕ್ಕಪಕ್ಕ ಇಡುವ ಪ್ರಯೋಗ ಕೂಡ ಸಾಧ್ಯ. ಇದರಿಂದ ಶಿಕ್ಷಕರ ಸಾಮರ್ಥ್ಯ ಕೂಡ ಹೆಚ್ಚೀತು.

ಇದು ಯಾವ ಪರಿಣಾಮಗಳನ್ನುಂಟು ಮಾಡಬಹುದು? ನಮ್ಮ ಸರ್ಕಾರಿ ಶಾಲೆಗಳು ಉಳಿದುಕೊಳ್ಳುತ್ತವೆ. ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಬೇಕಾಗುತ್ತದೆ. ತೀರಾ ಬಡವರಿಗೂ ಎಲ್ಲರೂ ಕಲಿಯುವ ಶಾಲೆ ಸಿಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಇಲ್ಲ ಎಂದು ಮುಚ್ಚುವ ಬದಲು ಇನ್ನಷ್ಟು ಶಿಕ್ಷಕರನ್ನು ಒದಗಿಸಿ ಕ್ರಮವಾಗಿ ನಡೆಸುವ ಜವಾಬ್ದಾರಿ ಸರ್ಕಾರದ ಮೇಲೆ ಬೀಳುತ್ತದೆ. ಇಲ್ಲಿ ಓದುವ ಮಕ್ಕಳಲ್ಲಿ ಆತ್ಮವಿಶ್ವಾಸ ಬರುತ್ತದೆ... ಇವೆಲ್ಲ ಇಷ್ಟು ಸರಳವಾಗಿ ಬರಲಾರವು. ಆದರೆ ಸರ್ಕಾರದ ಮೇಲೆ ಒತ್ತಡ ಹೇರಿ ಇವುಗಳನ್ನು ತರಲು ಸಾಧ್ಯ. ಇದನ್ನೆಲ್ಲ ಕನ್ನಡ ಪರ ಅಥವಾ ವಿರೋಧ ಎನ್ನುವ ಭಾವನಾತ್ಮಕ ಚರ್ಚೆಗೆ ಮಿತಿಗೊಳಿಸಬೇಡಿ.

ಎಲ್ಲಕ್ಕಿಂತ ಹೆಚ್ಚಾಗಿ ಈಗಾಗಲೇ ಸಾಮಾನ್ಯರ ಎಟುಕಿನಿಂದ ಆಚೆಗೆ ಹೋಗುತ್ತಿರುವ ಶಿಕ್ಷಣವನ್ನು ಎಲ್ಲರ ಸ್ವತ್ತಾಗಿ ಉಳಿಸಿಕೊಳ್ಳಬೇಕಾದ ಸಾಂವಿಧಾನಿಕ ಜರೂರೊಂದು ಇಂತಹ ಯೋಜನೆಯನ್ನು ಬೆಂಬಲಿಸಲು ಒತ್ತಾಸೆಯಾಗಿದೆ. ಮತ್ತೊಂದು ಮುಖ್ಯ ಸಂಗತಿಯೆಂದರೆ ಈಗಿನ ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ಆಶ್ಚರ್ಯಕರವಾದ ಹೆಚ್ಚಳವಾಗಿದೆ. ಅದನ್ನು ಸರಿಯಾಗಿ ಗುರುತಿಸಿ ಬಳಸಿಕೊಳ್ಳುವುದರಿಂದ ಅವರಿಗೆ ಒದಗಿಸಬೇಕಾದ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಸಾಧ್ಯ.

ಬಡವರ ಪಾಲಿಗೆ ಮುಚ್ಚಿಯೇ ಹೋಗುತ್ತಿರುವ ಶಿಕ್ಷಣದ ಬಾಗಿಲನ್ನು ಇಂತಹ ಯೋಜನೆಗಳ ಮೂಲಕವಾದರೂ ತೆರೆದಿಡುವ ಪ್ರಯತ್ನದಲ್ಲಿ ತಪ್ಪೇನಿದೆ? ಇದನ್ನು ತಡೆಯುವುದರಿಂದ ಏನಾಗುತ್ತದೆ? ಖಾಸಗಿ ಶಾಲೆಗಳು ಮತ್ತೂ ಬಲವಾಗುತ್ತವೆ, ಸರ್ಕಾರಿ ಶಾಲೆಗಳು ಶಾಶ್ವತವಾಗಿ ಇಲ್ಲವಾಗುತ್ತವೆ, ಶಾಲೆಯ ಕನ್ನಡವೂ ಉಳಿಯುವುದಿಲ್ಲ, ಮಾತನಾಡುವ ಕನ್ನಡಕ್ಕೂ ಗೌರವವಿರುವುದಿಲ್ಲ, ಈಗಾಗಲೇ ಬಡವರ ಕೈತಪ್ಪಿರುವ ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣದ ಜೊತೆಗೆ ಇತರ ಅವಕಾಶಗಳೂ ಇಲ್ಲವಾಗುತ್ತವೆ.

ಈಗ ಇರುವ ಸರ್ಕಾರಿ ಶಾಲಾ ಕಟ್ಟಡಗಳು ಕೇವಲ ಚುನಾವಣಾ ಬೂತ್‍ಗಳಾಗಿ ಉಳಿಯುತ್ತವೆ. ಆದುದರಿಂದ ಯಾವ ಚಳವಳಿಯನ್ನಾದರೂ ಮಾಡಿ ಆದರೆ ಈ ನೆಲದ ಅಬ್ಬೇಪಾರಿ ಜಾತಿ ಬುಡಕಟ್ಟು ಮಕ್ಕಳ, ದಲಿತ ಕೇರಿ ಮಕ್ಕಳ, ಎಲ್ಲ ಜಾತಿಯ ಬಡವರ ಮಕ್ಕಳ ಬ್ಯಾಗುಗಳಿಗೆ ಕೈಹಾಕದಿರಿ. ಕನ್ನಡದ ಉಳಿವಿನ ಜವಾಬ್ದಾರಿಯನ್ನು ಸರ್ಕಾರಿ ಶಾಲೆಗಳಿಗೆ ವಹಿಸಬೇಡಿ, ಅದಕ್ಕೆ ಎಲ್ಲ ಕೆಳಜಾತಿಯ ಬಡವರನ್ನು ಹೊಣೆಯಾಗಿಸಬೇಡಿ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !