ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಮೇಘದೂತರು!

Last Updated 30 ಜನವರಿ 2019, 20:00 IST
ಅಕ್ಷರ ಗಾತ್ರ

ಕನ್ನಡದ ಲೇಖಕರೊಬ್ಬರು ಫೇಸ್‌ಬುಕ್‍ನಲ್ಲಿ ಇತ್ತೀಚೆಗೆ ಹಾಕಿದ ಸುದ್ದಿ ಚಿಂತನೆಗೆ ಹಚ್ಚುವಂತಿತ್ತು. ಅದರಲ್ಲಿ ಅವರು, ಪದೇ ಪದೇ ಫಾರ್ವರ್ಡ್ ಆಗಿ ಬರುವಂತಹ ತಲೆಬುಡವಿಲ್ಲದ ಸಂದೇಶಗಳನ್ನು ಹಿಂದೆಮುಂದೆ ನೋಡದೆ ಬೇರೆಯವರಿಗೆ ಕಳುಹಿಸುವ ಬುದ್ಧಿವಂತರ ಬಗ್ಗೆ ಬರೆದಿದ್ದರು.

‘ಫೆಬ್ರುವರಿ 2019 ನಿಮ್ಮ ಜೀವನದಲ್ಲಿ ಮತ್ತೆ ಬರುವುದಿಲ್ಲ. ಏಕೆಂದರೆ ಇದರಲ್ಲಿ ವಾರದ ಏಳೂ ದಿನಗಳು ನಾಲ್ಕು ನಾಲ್ಕು ಸಲ ಬರುತ್ತವೆ. ಇದು 823 ವರ್ಷಗಳಿಗೊಮ್ಮೆ ಘಟಿಸುತ್ತದೆ. ಈ ಸಂದೇಶ ಬೇರೆಯವರಿಗೆ ಕಳಿಸಿದರೆ ನಿಮಗೆ ಹಣದ ಚೀಲಗಳು ದೊರೆಯುತ್ತವೆ’– ಇದು ಆ ಸಂದೇಶ!

ಇಂತಹ ಸಂದೇಶಗಳು ನಮ್ಮ ಮೊಬೈಲಿಗೂ ಬಂದಿವೆ ಮತ್ತು ನಮ್ಮ ಗುಂಪುಗಳ ಬಹಳಷ್ಟು ಜನ ಅದನ್ನು ಫಾರ್ವರ್ಡ್ ಮಾಡಿದ್ದಾರೆ. 28 ದಿನಗಳಿರುವ ಒಂದು ತಿಂಗಳಿನಲ್ಲಿ ವಾರದ ಎಲ್ಲ ದಿನಗಳೂ ನಾಲ್ಕು ಸಲ ಬಾರದೇ ಇನ್ನೆಷ್ಟು ಸಲ ಬರಲು ಸಾಧ್ಯ? ಆದರೆ, ಮೊಬೈಲಿಗೆ ಏನು ಬಂದರೂ ಕಣ್ಣುಮುಚ್ಚಿ ಬೇರೆಯವರಿಗೆ ಕಳಿಸದಿದ್ದರೆ ಬಹಳ ಜನರಿಗೆ ಸಮಾಧಾನವೇ ಇರುವುದಿಲ್ಲ. ವಾಟ್ಸ್‌ ಆ್ಯಪ್‌ ಗುಂಪುಗಳಲ್ಲಂತೂ ಈ ಹಾವಳಿ ಅತಿಹೆಚ್ಚು. ಮುಲಾಜಿಗೆ ಕಟ್ಟುಬಿದ್ದು ಗುಂಪು ಬಿಡಲಾಗದೇ, ಸಂದೇಶಗಳ ಹಾವಳಿ ತಾಳಲಾಗದೇ ಮೊಬೈಲ್ ಅನ್ನು ಕಸದ ಬುಟ್ಟಿಯನ್ನಾಗಿಸಿಕೊಂಡು ಕಿರಿಕಿರಿ ಅನುಭವಿಸುವವರ ಪಾಡು ಶೋಚನೀಯ.

ಮಾಡಲು ಬೇರೆ ಕೆಲಸವಿಲ್ಲದ ಅಥವಾ ಇದ್ದರೂ ತಮಗೆ ಬಂದ ಮೆಸೇಜುಗಳನ್ನೆಲ್ಲ ಇದ್ದಬದ್ದ ಗುಂಪುಗಳಿಗೆಲ್ಲ ಫಾರ್ವರ್ಡ್ ಮಾಡುವ ಇಂತಹ ಬುದ್ಧಿವಂತ ಮೂರ್ಖರು ನಮಗೂ ಅಪರಿಚಿತರೇನಲ್ಲ. ಆದರೆ, ಲೇಖಕರ ಆತಂಕವೆಂದರೆ, ಆ ಬುದ್ಧಿವಂತರಲ್ಲಿ ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳೂ ಇದ್ದಾರೆ ಎನ್ನುವುದು. ಇದು ನಮ್ಮೆಲ್ಲರ ಆತಂಕವೂ ಹೌದು. ದುರಂತವೆಂದರೆ ವಿಜ್ಞಾನಿಗಳಷ್ಟೇ ಅಲ್ಲ, ವೈದ್ಯರು, ಉಪನ್ಯಾಸಕರು, ಎಂಜಿನಿಯರುಗಳು, ವಕೀಲರು, ಪತ್ರಕರ್ತರು, ಸಾಹಿತಿಗಳು... ಸಮಾಜದ ಎಲ್ಲ ಸ್ತರದ ವ್ಯಕ್ತಿಗಳೂ ಮತ್ತೊಮ್ಮೆ ಯೋಚಿಸದೆ ಇಂತಹ ಮೂರ್ಖ ಸಂದೇಶಗಳನ್ನು ಫಾರ್ವರ್ಡ್ ಮಾಡುತ್ತಾರೆ.

ಇನ್ನು ರಾಜಕೀಯ ಪಕ್ಷಗಳು ಹರಿಯಬಿಡುವ ಸುಳ್ಳು ಸಂದೇಶಗಳಿಗಂತೂ ಮಿತಿಯೇ ಇಲ್ಲ. ಯಾವುದೋ ದೇಶವನ್ನು ತೋರಿಸಿ ಇನ್ನಾವುದೋ ಸ್ಥಳ ಎನ್ನುವುದು, ಮಹಾನ್ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಸುಳ್ಳು ಚಿತ್ರಗಳನ್ನು ಕಳುಹಿಸುವುದು ನಿರಾತಂಕವಾಗಿ ನಡೆದೇ ಇದೆ.

‘ಭಾರತೀಯ ವಿಜ್ಞಾನ ಕಾಂಗ್ರೆಸ್ ಒಂದು ಸರ್ಕಸ್‌ನಂತಿದೆ ಮತ್ತು ವಿಜ್ಞಾನ ಎನ್ನುವುದು ಅಲ್ಲಿ ಅತ್ಯಂತ ಕಡಿಮೆ ಚರ್ಚಿಸಲಾಗುವ ವಿಷಯ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವೆಂಕಟರಾಮನ್ ರಾಮಕೃಷ್ಣನ್ 2016ರಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಅದು, ಸರಿಯಾದ ಆತಂಕ ಎಂಬುದನ್ನು ಜನವರಿ ಮೊದಲ ವಾರ ನಡೆದ 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಾಬೀತುಪಡಿಸಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗಿಸುವಂತಹ ಬಾಲಿಶ ಹೇಳಿಕೆಗಳನ್ನು ಅಲ್ಲಿ ನೀಡಲಾಯಿತು.

ಆಂಧ್ರ ವಿಶ್ವವಿದ್ಯಾಲಯದ ಕುಲಪತಿ ಜಿ.ನಾಗೇಶ್ವರ ರಾವ್, ‘ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಕೌರವರು ಹುಟ್ಟಿದ್ದು ಸ್ಟೆಮ್‌ಸೆಲ್ ಮತ್ತು ಪ್ರನಾಳಶಿಶು ತಂತ್ರಜ್ಞಾನದ ಮೂಲಕ. ನಾವು ಈಗ ಇದರ ಬಗ್ಗೆ ಮಾತನಾಡುತ್ತಿದ್ದೇವೆ’ ಎಂದು ಹೇಳಿದರು. ಅಷ್ಟೇ ಅಲ್ಲ, ರಾವಣನ ಹತ್ತಿರ ವಿಭಿನ್ನ ಸಾಮರ್ಥ್ಯ ಹಾಗೂ ಅಳತೆಯ 24 ಬಗೆಯ ವಿಮಾನಗಳಿದ್ದವು ಮತ್ತು ಶ್ರೀಲಂಕಾದಲ್ಲಿ ಆತ ಹಲವಾರು ವಿಮಾನ ನಿಲ್ದಾಣಗಳನ್ನು ಹೊಂದಿದ್ದ ಎಂದೂ ಹೇಳಿ, ದಶಾವತಾರ ಸಿದ್ಧಾಂತವು ಚಾರ್ಲ್ಸ್ ಡಾರ್ವಿನ್ ಸಿದ್ಧಾಂತಕ್ಕಿಂತ ಶ್ರೇಷ್ಠವಾದುದು ಎಂದರು.

ಕಳೆದ ವರ್ಷ ಕೇಂದ್ರ ಮಂತ್ರಿ ಸತ್ಯಪಾಲ್ ಸಿಂಗ್, ‘ಡಾರ್ವಿನ್ ಸಿದ್ಧಾಂತವೇ ತಪ್ಪು. ಏಕೆಂದರೆ ಯಾವ ಪೂರ್ವಜರೂ ಮಂಗವೊಂದು ಮನುಷ್ಯನಾಗುವುದನ್ನು ನೋಡೇ ಇಲ್ಲ’ ಎಂದಿದ್ದರು! ತಮಿಳುನಾಡಿನ ಕಣ್ಣನ್ ಜಗತಲ ಕೃಷ್ಣನ್ ಎನ್ನುವ ವಿಜ್ಞಾನಿ, ‘ನ್ಯೂಟನ್‍ಗೆ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಅಂತಹ ಜ್ಞಾನವೇನೂ ಇರಲಿಲ್ಲ. ಐನ್‍ಸ್ಟೀನ್‌ ತಮ್ಮ ರಿಲೇಟಿವಿಟಿ ಸಿದ್ಧಾಂತದ ಮೂಲಕ ಜಗತ್ತನ್ನು ತಪ್ಪು ದಾರಿಗೆಳೆದಿದ್ದಾರೆ’ ಎಂದರು. ‘ಗುರುತ್ವಾಕರ್ಷಣ ಅಲೆಗಳನ್ನು ಸದ್ಯದಲ್ಲೇ ನರೇಂದ್ರ ಮೋದಿ ಅಲೆಗಳು ಎಂದು ಕರೆಯಲಾಗುವುದು, ಗ್ರಾವಿಟೇಶನಲ್‌ ಲೆನ್ಸಿಂಗ್ ಪರಿಣಾಮವನ್ನು ಕೇಂದ್ರ ವಿಜ್ಞಾನ ಮಂತ್ರಿ ಹರ್ಷವರ್ಧನ್ ಅವರ ಹೆಸರಿನಿಂದ ಕರೆಯಲಾಗುವುದು’ ಎಂದು ಹೇಳಿ, ವಿಜ್ಞಾನ ಸಮಾವೇಶವನ್ನು ಹಾಸ್ಯ ಸಮ್ಮೇಳನವಾಗಿಸಿಬಿಟ್ಟರು.

ಜಗತ್ತು ವೈಜ್ಞಾನಿಕವಾಗಿ ಮುಂದುವರಿಯುತ್ತಾ ಕೌತುಕದ ಅಸೀಮ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತಾ ಸಾಗಿದ್ದರೆ ನಮ್ಮ ಕೆಲವು ವಿಜ್ಞಾನಿಗಳು, ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಬೇಜವಾಬ್ದಾರಿಯುತವಾಗಿ ಮಾತನಾಡುತ್ತ ನಗೆಪಾಟಲಿಗೀಡಾಗುತ್ತಿದ್ದಾರೆ. ಜತೆಗೆ, ಹಗಲಿರುಳು ಸಂಶೋಧನೆಯಲ್ಲಿ ತೊಡಗಿಕೊಂಡು ಭಾರತದ ವೈಜ್ಞಾನಿಕ ಪ್ರಗತಿಗೆ ಕಾರಣರಾಗುವ ಧೀಮಂತ ವಿಜ್ಞಾನಿಗಳಿಗೂ ಮುಜುಗರ ಉಂಟುಮಾಡುತ್ತಿದ್ದಾರೆ.

ಇನ್ನು ಹೆಸರಿಗೆ ಮಾತ್ರ ವಿದ್ಯಾವಂತರಾಗಿರುವ ನಾವು ಮತ್ತು ನಮ್ಮಂತಹ ಜನರು ಅವೈಜ್ಞಾನಿಕತೆ, ಮೂಢನಂಬಿಕೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಾ ನಮಗೇ ಗೊತ್ತಿಲ್ಲದೆ ನಮ್ಮ ಭವಿಷ್ಯವನ್ನು ಮಸುಕಾಗಿಸಿಕೊಳ್ಳುತ್ತಿದ್ದೇವೆ. ಇದು ಬಹು ಗಂಭೀರವಾದ, ಯೋಚಿಸಲೇಬೇಕಾದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT