ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖರೀದಿ ವಸ್ತು’: ಹೈಕಮಾಂಡ್‌ ಹುಕುಂ!

Last Updated 18 ಫೆಬ್ರುವರಿ 2019, 9:41 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ರಾಜ್ಯ ರಾಜಕಾರಣವನ್ನು ಅವನತಿಯತ್ತ ತಳ್ಳಿರುವ ಪಕ್ಷಾಂತರದ, ನಿರ್ದಿಷ್ಟವಾಗಿ ‘ಆಪರೇಷನ್ ಕಮಲ’ದ ಹಾವಳಿಯನ್ನು ನಿಯಂತ್ರಿಸಲು ನಟರಾಜ್ ಹುಳಿಯಾರ್ ಸೂಚಿಸಿರುವ ಏಳು ಸೂತ್ರಗಳ ಪರಿಹಾರ (ಸಂಗತ, ಫೆ.14) ಕುತೂಹಲಕಾರಿಯೂ, ಸ್ವಾರಸ್ಯಕರವೂ ಆಗಿದೆ. ಆದರೆ, ಅವರು ಸಂಸತ್ತಿನ ಮಟ್ಟದಲ್ಲಿ ಮಾತ್ರ ಆಗಬಹುದಾದ ಪಕ್ಷಾಂತರ ನಿಷೇಧ ಕಾಯ್ದೆಯ ತಿದ್ದುಪಡಿಗಾಗಿ ನೀಡಿರುವ ಸಲಹೆಯ ಹೊರತಾಗಿ, ಅವರ ಪರಿಹಾರ ಸೂತ್ರಗಳು ಇಂದು ಪಕ್ಷಾಂತರ ಹಾವಳಿಗೆ ಕಾರಣವಾಗಿರುವ ರಾಜಕಾರಣದ ಸರ್ವಾಂಗೀಣ ಅವನತಿಯನ್ನು ಒಪ್ಪಿಕೊಂಡು, ಅದರಲ್ಲೇ ಒಂದಿಷ್ಟು ಹೊಂದಾಣಿಕೆಯನ್ನು ಮಾತ್ರ
ಪ್ರತಿಪಾದಿಸುವಂತಿದ್ದು ನಿರಾಶೆ ಹುಟ್ಟಿಸುತ್ತವೆ.

ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ, ಶಾಸಕ ಎಂದರೆ ಮೂಲತಃ ಶಾಸನ ಮಾಡುವವನು. ಇವರಲ್ಲಿ ಕೆಲವರು ಸಚಿವರೂ ಆಗಿ ಆಡಳಿತ ನಡೆಸುವ ವಿಶೇಷ ಜವಾಬ್ದಾರಿಯನ್ನೂ ನಿರ್ವಹಿಸಬಹುದಾಗಿದೆ. ಅದಕ್ಕೆ ಕೆಲವು ಅಗತ್ಯ ‘ಯೋಗ್ಯತೆ’ಗಳೂ, ‘ಪರಿಣತಿ’ಗಳೂ ಬೇಕಾಗುತ್ತವೆ. ಮುಖ್ಯಮಂತ್ರಿಗೆ ರಾಜ್ಯದ ಭವಿಷ್ಯದ ಬಗ್ಗೆ ದಾರ್ಶನಿಕವಾದ ಒಂದು ಮುನ್ನೋಟವಿದ್ದು ಅದನ್ನು ಸಾಕಾರಗೊಳಿಸಲು ‘ಯೋಗ್ಯ’ ಸಚಿವ ಸಹೋದ್ಯೋಗಿಗಳನ್ನು ಆಯ್ಕೆ ಮಾಡಿಕೊಂಡು ಆಡಳಿತ ನಡೆಸುತ್ತಾನೆ ಎಂಬ ತಿಳಿವಳಿಕೆ ಈ ವ್ಯವಸ್ಥೆಯಲ್ಲಿ ಅಂತರ್ಗತವಾಗಿದೆ. ಜನರೂ ಈ ತಿಳಿವಳಿಕೆಯ ಮೇಲೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸುತ್ತಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ತಿಳಿವಳಿಕೆಗೆ ವಿರುದ್ಧವಾಗಿಯೇ ರಾಜ್ಯದ ರಾಜಕಾರಣ ನಡೆದಿದೆ. ಬಹುಮತದ ಅಧಿಕಾರ ರಾಜಕಾರಣದ ಹಿಂದಿರುವ ಜನತೆಯ ಆಯ್ಕೆಯ ರಾಜಕೀಯ ದಿಕ್ಕುದೆಸೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುವಂತಹ ಅವಕಾಶವಾದಿ ಮೈತ್ರಿ ರಾಜಕಾರಣವೂ ಸೇರಿ, ಪ್ರಜಾಪ್ರಭುತ್ವದ ತಿರುಳಿಗೇ ಕಂಟಕವಾಗುವಂತಹ, ‘ತಾಂತ್ರಿಕ’ವಾಗಿ ಮಾತ್ರ ಸರಿ ಎನ್ನಿಸುವಂತಹ ಹೊಂದಾಣಿಕೆ-ವ್ಯವಸ್ಥೆಗಳು ರೂಪಿತವಾಗುತ್ತಿವೆ.

ಶಾಸಕರಿಗಿಂತ ಹೈಕಮಾಂಡ್‍ಗಳೆಂಬ ಕೆಲವೇ ‘ಪ್ರತಿಷ್ಠಿತ’ ನಾಯಕರ ಕೂಟಗಳು ನಿರ್ಣಾಯಕ ನಿರ್ಧಾರಗಳನ್ನು ಪಕ್ಷದ ಮೇಲೇ ಹೇರಿ ಪ್ರಾತಿನಿಧಿಕ ಪ್ರಜಾಪ್ರಭುತ್ವದ ಒಳಸತ್ವ-ಸ್ಫೂರ್ತಿಗಳನ್ನೇ ನಾಶ ಮಾಡುತ್ತಿವೆ. ಇದರಿಂದಾಗಿ, ಜನಪ್ರತಿನಿಧಿಗಳಾಗಬೇಕಿದ್ದ ಶಾಸಕರು ಪಕ್ಷಗಳ ಕೂಟವೊಂದರ ಗುಲಾಮಗಿರಿಗೆ ಈಡಾಗಿ ಘನತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರ ಅಡ್ಡ ಪರಿಣಾಮವೆಂದರೆ ಇವರು ದಾರಿ ತಪ್ಪಿ ಖರೀದಿಯ ವಸ್ತುಗಳಾಗುತ್ತಿರುವುದು. ‘ಆಪರೇಷನ್ ಕಮಲ’ ಎಂಬ ರೋಗ ಈ ಎಲ್ಲ ಬೆಳವಣಿಗೆಗಳ ಒಂದು ಪರಿಣಾಮವಷ್ಟೆ. ಹುಳಿಯಾರ್ ಈ ರೋಗದ ಮೂಲಕ್ಕೆ ಹೋಗದೆ ರೋಗಲಕ್ಷಣಗಳನ್ನಷ್ಟೇ ನಿವಾರಿಸಲು ಪ್ರಯತ್ನಿಸಿದ್ದಾರೆ ಎನಿಸುತ್ತದೆ.

ಶಾಸಕರು ಎಷ್ಟನೇ ಬಾರಿಗೆ ಆಯ್ಕೆಯಾಗಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡದ್ದೂ ಸೇರಿದಂತೆ ಹುಳಿಯಾರ್ ಅವರು ಸೂಚಿಸುವ ಸಚಿವ ಸ್ಥಾನಗಳ ‘ರೊಟೇಶನ್’ ವ್ಯವಸ್ಥೆಯ ಜಾರಿಯೂ ಅಷ್ಟು ಸುಲಭವಲ್ಲ. ಜಾತಿ-ಉಪಜಾತಿ-ಧರ್ಮ-ಲಿಂಗ ಪ್ರದೇಶ ಇತ್ಯಾದಿಗಳನ್ನು ಆಧರಿಸಿದ ‘ಸಾಮಾಜಿಕ ನ್ಯಾಯ’ದ ಒತ್ತಡಗಳ ರಾಜಕಾರಣದ ಪಾಲನೆಯಲ್ಲಿ ಅವರು ಸೂಚಿಸುವ ‘ತಜ್ಞತೆ’ ಅಥವಾ ‘ಯೋಗ್ಯತೆ’ಯ ಅಂಶಗಳು ಕಾಣೆಯಾಗುವ ಸಾಧ್ಯತೆಗಳೇ ಹೆಚ್ಚು. ಅದೀಗಾಗಲೇ ಕಳೆದ ಹತ್ತಾರು ವರ್ಷಗಳ ನಮ್ಮ ರಾಜ
ಕಾರಣದಿಂದ ಸಾಬೀತಾಗಿದೆ. ಇಂತಹ ‘ರೊಟೇಶನ್’ ರಾಜಕಾರಣ ಒಪ್ಪಿ ನೇತೃತ್ವ ವಹಿಸಬಲ್ಲ ವ್ಯಕ್ತಿ ನುರಿತ ‘ವೃತ್ತಿಪರ’ ರಾಜಕಾರಣಿ ಆಗಿರಬಹುದೇ ಹೊರತು ದಕ್ಷ ಆಡಳಿತಗಾರನಾಗಿರಲು ಅಸಾಧ್ಯವೇ ಸರಿ!

ಪಕ್ಷಾಂತರದ ಹಾವಳಿಗೆ ಸಚಿವ ಹುದ್ದೆಯ ಆಕಾಂಕ್ಷೆಯೊಂದೇ ಕಾರಣವಾಗಿದ್ದಂತೆ ತೋರುವುದಿಲ್ಲ. ನಮ್ಮ ರಾಜಕಾರಣವು ಅಧಿಕಾರ ಎಂದರೆ ಒಂದು ಸೇವೆ-ಜವಾಬ್ದಾರಿ ಎನ್ನುವುದರ ಬದಲಾಗಿ ಕಾನೂನು ರಕ್ಷಣೆ ಇರುವ ಸಾಮಾಜಿಕ ಯಜಮಾನಿಕೆ ಮತ್ತು ಸಂಪಾದನೆಯ ಮಾರ್ಗ ಎನ್ನುವಂತೆ ತನ್ನನ್ನು ತಾನು ಕಟ್ಟಿಕೊಂಡಿರುವುದೇ ಇದರ ಮೂಲ ಕಾರಣ. ಹಾಗಾಗಿಯೇ ಇತ್ತೀಚೆಗೆ ಅಕ್ರಮ ಸಂಪತ್ತಿನ ಒಡೆಯರು ಒಂದಲ್ಲ ಒಂದು ಪಕ್ಷದಿಂದ ಶಾಸಕರಾಗಲು, ಮಂತ್ರಿಗಳಾಗಿ ಅಕ್ರಮ ಗಳಿಕೆ ಹೆಚ್ಚಿಸಿಕೊಳ್ಳಲು ಮುಂದಾಗುತ್ತಿರುವುದು. ಹಾಗೇ, ಹಾಲಿ ರಾಜಕಾರಣಿಗಳು ತಮ್ಮ ಕುಟುಂಬಗಳ ಆದಷ್ಟೂ ಹೆಚ್ಚು ಸದಸ್ಯರನ್ನು ಶಾಸಕ-ಮಂತ್ರಿ ಮಾಡಿಸಲು ಯತ್ನಿಸುತ್ತಿರುವುದು. ಇಂತಹ ಸನ್ನಿವೇಶದಲ್ಲಿ ತತ್ವನಿಷ್ಠೆಯ ಮಾತಾಡುವುದು ಹಾಸ್ಯಾಸ್ಪದವಾದೀತು.

ಆದುದರಿಂದ ರಾಜ್ಯದ ಮಟ್ಟದಲ್ಲೇ ಸಾಧ್ಯವಿರಬಹುದಾದ ಒಂದು ಶಾಸನಾತ್ಮಕ ಉಪಕ್ರಮವನ್ನು ಸೂಚಿಸಬಯಸುವೆ. ಅದೆಂದರೆ, ಶಾಸಕತ್ವ ಅಥವಾ ಸಚಿವ ಹುದ್ದೆ ಎಂಬುದು ಅಧಿಕಾರದ ಸ್ಥಾನಕ್ಕಿಂತ ಹೆಚ್ಚಾಗಿ ಸೇವೆಯ, ಜವಾಬ್ದಾರಿಯ ಹುದ್ದೆ ಎಂಬುದನ್ನು ಮನಗಾಣಿಸುವಂತೆ ಅವುಗಳಿಗಿರುವ ವಿಶೇಷ ಸೌಲಭ್ಯ, ರಕ್ಷಣೆ, ಅಧಿಕಾರಗಳನ್ನು ಕಾನೂನು ರೀತ್ಯವೇ ಆದಷ್ಟೂ ಮೊಟಕುಗೊಳಿಸುವುದು. ಇದು ಮೊದಲ ಹೆಜ್ಜೆಯಷ್ಟೆ. ಇದರಿಂದ ಚುನಾವಣೆಗಳ ಮೇಲೆ ವಿಪರೀತ ಹಣ ಖರ್ಚು ಮಾಡುವುದು ಸ್ವಲ್ಪವಾದರೂ ಹತೋಟಿಗೆ ಬರಬಹುದು. ಆಗ ಸೇವಾ ಮನೋಭಾವದ ಒಂದಷ್ಟು ಸಜ್ಜನರೂ ಚುನಾವಣೆಗಳಿಗೆ ನಿಲ್ಲುವಂತಾಗಬಹುದು. ಆದರೆ ಇದನ್ನು ಮಾಡುವವರಾರು? ಆ ಇಚ್ಛೆ ನಮ್ಮ ರಾಜಕಾರಣದ ಒಡಲಲ್ಲಿ ಇದ್ದಿದ್ದರೆ ರಾಜಕಾರಣ ಇಂದು ಈ ದುಃಸ್ಥಿತಿ ತಲುಪುತ್ತಿರಲಿಲ್ಲ. ರಾಜಕಾರಣವನ್ನು ಸೇವೆಯೆಂದು ಮಾತ್ರ ಪರಿಗಣಿಸುವಂತೆ ಮಾಡುವ ಹೊಸ ರಾಜಕೀಯ ಸಂಸ್ಕೃತಿಯನ್ನು ಹುಟ್ಟು ಹಾಕುವಂತಹ ಜನಾಂದೋಲನವೊಂದೇ ಇದಕ್ಕೆ ಪರಿಹಾರ. ಆದರೆ ಅದರ ನೇತೃತ್ವ ವಹಿಸಬಲ್ಲವರಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT