ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಯಿತೇ ಮೂಲ ಉದ್ದೇಶ?

Last Updated 9 ಮೇ 2019, 18:55 IST
ಅಕ್ಷರ ಗಾತ್ರ

ಲೋಕಮಾನ್ಯ ಬಾಲಗಂಗಾಧರ ತಿಲಕರ ಸಾಮಾಜಿಕ, ರಾಜಕೀಯ ಕಾಳಜಿ ಎಲ್ಲರಿಗೂ ತಿಳಿದದ್ದೇ. ಜನರಿಗೆ ಕಾನೂನು ಶಿಕ್ಷಣ ಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಆ ಕಾರಣಕ್ಕೆ ಅವರು ತಮ್ಮ ಕೆಲಸದ ಒತ್ತಡದ ಮಧ್ಯೆಯೂ ದಿನದಲ್ಲಿ ಒಂದು ತಾಸು ಜನಸಾಮಾನ್ಯರಿಗೆ ಕಾನೂನಿನ ಪ್ರಾಥಮಿಕ ಪರಿಚಯದ ಪಾಠ ಹೇಳುತ್ತಿದ್ದರು. ಪರರ ಅಧೀನದಲ್ಲಿ ದೇಶ ಇದೆ, ಆದ್ದರಿಂದ ರಾಜಕಾರಣ ಮೊದಲ ಕರ್ತವ್ಯವಾಗುತ್ತದೆ; ಅದಿಲ್ಲವಾದರೆ ಸಮಾಜಕಾರಣವೇ ನನಗೆ ಆದ್ಯತೆಯ ವಿಷಯ ಎಂದು ಅವರು ಹೇಳಿದ್ದರು.

ಸ್ವತಂತ್ರ ಭಾರತದಲ್ಲಿಯೂ ನಮ್ಮ ಯುವಕರಿಗೆ ಸಮಾಜಕಾರಣಕ್ಕಿಂತ ರಾಜಕಾರಣವೇ ಮುಖ್ಯವಾಗಿ ಕಾಣುತ್ತಿರುವುದರಿಂದ, ಲೋಕಮಾನ್ಯರ ಈ ಮಾತು ನೆನಪಾಗುತ್ತದೆ. ಅದರಲ್ಲೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು, ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಡನೆಯೇ ಬೆಳೆದು ಬಂದ ನನಗೆ ಸಮಾಜಕಾರಣ, ರಾಷ್ಟ್ರಕಾರಣಗಳು ಮಹತ್ವವೆನಿಸಿದರೆ, ನನ್ನ ಅನೇಕ ಮಿತ್ರರಿಗೆ ಇವೆರಡಕ್ಕಿಂತಲೂ ರಾಜಕಾರಣವೇ ಮುಖ್ಯ ಎನ್ನಿಸುತ್ತಿರುವುದರಿಂದ ಒಂದಷ್ಟು ಕುತೂಹಲ, ಆತಂಕ ನನ್ನನ್ನು ಕಾಡುತ್ತಿದೆ.

‘ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ ಎನ್ನುವ ಉನ್ನತ ಧ್ಯೇಯವೊಂದು ಸಂಘ ಮತ್ತು ಪರಿವಾರದ ಸಂಘಟನೆಯಲ್ಲಿ ಪರಿಚಯವಾಗುತ್ತದೆ. ಅದರ ಸಂಪರ್ಕದಲ್ಲಿ ಬಂದವರೆಲ್ಲ ತಮ್ಮ ಬದುಕಿನ ಒಂದಷ್ಟು ಸಮಯ, ಶಕ್ತಿಯನ್ನು ಸಮಾಜಕ್ಕಾಗಿ ನೀಡುವುದನ್ನು ಕಲಿಯುತ್ತಾರೆ. ಕೆಲವರು ತಮ್ಮ ಪೂರ್ಣ ಸಮಯ, ಶಕ್ತಿಯನ್ನು ನೀಡಲು ಮುಂದೆ ಬರುತ್ತಾರೆ. ಇವರೆಲ್ಲರ ನಡೆ–ನುಡಿಗಳಿಂದ ಸುತ್ತಲಿನ ಸಮಾಜ ಪ್ರಭಾವಿತಗೊಳ್ಳುತ್ತದೆ, ಸ್ವಂತದ ಹಿತಕ್ಕಿಂತ ಸಮಾಜದ, ರಾಷ್ಟ್ರದ ಹಿತ ದೊಡ್ಡದು ಎನ್ನುವ ಶ್ರದ್ಧೆ ಎಲ್ಲರಲ್ಲೂ ಮೂಡುತ್ತದೆ ಎನ್ನುವುದು ಆಶಯ, ಅನುಭವವೂ ಕೂಡ.

ಇಂತಹ ಧ್ಯೇಯವಾದದಿಂದ ಪ್ರೇರಣೆಗೊಂಡು ಕಾರ್ಯ ಮಾಡುತ್ತಾ ಸಂಘಟನೆಯ ಉನ್ನತ ಸ್ತರಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಂತೆ ಅನೇಕರಿಗೆ, ರಾಜಕೀಯ ತಮ್ಮ ಮುಂದಿನ ಮೆಟ್ಟಿಲು ಎನ್ನಿಸುತ್ತಿರುವುದು ಸೋಜಿಗದ ಸಂಗತಿಯಾಗಿದೆ. ನಾನು ಗಮನಿಸಿದಂತೆ, ವಿದ್ಯಾರ್ಥಿ ಪರಿಷತ್ತಿನಲ್ಲಿ ಕೆಲವು ಕಾಲ ಪೂರ್ಣಾವಧಿ ಕಾರ್ಯಕರ್ತರಾಗಿ ಕಾರ್ಯ ಮಾಡಿದವರಿಗೆ ಶಿಕ್ಷಣ ಕ್ಷೇತ್ರದಿಂದ ರಾಜಕಾರಣಕ್ಕೆ ಜಿಗಿಯುವ ಅತ್ಯುತ್ಸಾಹ ಕಾಡುತ್ತದೆ. ಅವರಲ್ಲಿ ಕೆಲವರು ಯಶಸ್ವಿಯಾಗುತ್ತಾರೆ, ಉಳಿದವರು ಕೈಹಿಸುಕಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.

ಹತ್ತಾರು ವರ್ಷಗಳಿಂದ ಒಬ್ಬರು ವಿದ್ಯಾರ್ಥಿ ಪರಿಷತ್ತಿನಲ್ಲಿಯೇ ಕೆಲಸ ಮಾಡುತ್ತಿದ್ದರೆ, ಅವರಿಗೆ ಇನ್ನೂ ಬಿಜೆಪಿಯಲ್ಲಿ ಯಾಕೆ ಅವಕಾಶ ಸಿಕ್ಕಿಲ್ಲ ಎಂದು ವಿಚಾರಿಸುವವರೂ ಇದ್ದಾರೆ! ಯಾಕೆ ಹೀಗಾಯಿತು? ವಿದ್ಯಾರ್ಥಿ ಪರಿಷತ್ತೆಂದರೆ ಬಿಜೆಪಿಗೆ ಬೇಕಾದ ಕಾರ್ಯಕರ್ತರನ್ನು ಸಿದ್ಧಪಡಿಸುವ ಕಾರ್ಖಾನೆಯೇ ಎಂಬ ಪ್ರಶ್ನೆ ಕಾಡುತ್ತದೆ. ನನ್ನಂತೆಯೇ ಆತಂಕಕ್ಕೊಳಗಾದ ಸಹೃದಯರು ಅನೇಕರಿರುವುದು ನನ್ನ ಅರಿವಿಗೆ ಬಂದಿದೆ.

ಎಂಥ ಧ್ಯೇಯವಾದಿಗೂ ಸ್ಪರ್ಧೆಯ ರುಚಿಯನ್ನೂ, ಪ್ರಸಿದ್ಧಿಯ ಮೋಹವನ್ನೂ ಹುಟ್ಟಿಸುವ ಕ್ಷೇತ್ರ ರಾಜಕಾರಣ. ವಿದ್ಯಾರ್ಥಿ ಪರಿಷತ್ತಿನ ಉನ್ನತ ಸ್ಥಾನದಲ್ಲಿದ್ದು ಮಾರ್ಗದರ್ಶನ ಮಾಡಿದ, ತಮ್ಮ ತ್ಯಾಗದಿಂದ ಸಂಸ್ಥೆಯನ್ನು ಬೆಳೆಸಿದ ಕೆಲವು ಹಿರಿಯರಿಗೂ ವಿಧಾನ ಪರಿಷತ್ತಿನಲ್ಲಿ ಅಥವಾ ರಾಜ್ಯಸಭೆಯಲ್ಲಿ ಕುಳಿತುಕೊಳ್ಳದಿದ್ದರೆ ಮುಕ್ತಿ ಸಿಗುವುದಿಲ್ಲ ಎಂದು ಅನ್ನಿಸಿದ್ದಿದೆ. ಒಂದು ಕಾಲದಲ್ಲಿ ವಿದ್ಯಾರ್ಥಿ ಪರಿಷತ್ತಿನ ಕೆಲವು ಕಾರ್ಯಕರ್ತರನ್ನು ಬಿಜೆಪಿಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಲಾಗಿತ್ತು. ಅದನ್ನು ತಪ್ಪಾಗಿ ಅರ್ಥೈಸಿ, ಬಿಜೆಪಿಗೆ ಸೇರುವುದಿದ್ದರೆ ಮೊದಲು ಪರಿಷತ್ತಿನಲ್ಲಿ ದುಡಿಯಬೇಕು ಎಂದುಕೊಂಡವರೂ ಇದ್ದಾರೆ.

ಬಿಜೆಪಿಯ ಕೆಲವು ನೇತಾರರ ಮಕ್ಕಳು ಪರಿಷತ್ತಿನಲ್ಲಿ ಎರಡು ವರ್ಷ ಕಾರ್ಯ ಮಾಡಿ, ನಂತರ ಪೂರ್ಣಾವಧಿ ರಾಜಕಾರಣಿಗಳಾಗುತ್ತಿರುವುದು ಈಗೀಗ ಅಪರೂಪವೇನಲ್ಲ. ವಿದ್ಯಾರ್ಥಿ ಸಂಘಟನೆಯ ಕೆಲಸವೆಂದರೆ ರಾಜಕಾರಣದ ಪೂರ್ವ ತರಬೇತಿ ಎನ್ನುವ ಸ್ಥಿತಿ ನಿರ್ಮಿಸಿದವರು ನಾವೇ. ಕುಟುಂಬ ರಾಜಕಾರಣಕ್ಕೂ ವಿದ್ಯಾರ್ಥಿ ಪರಿಷತ್ತು ಏಣಿಯಾಗಬೇಕೇ?

ಸಮಾಜಕಾರಣಕ್ಕಿಂತ ರಾಜಕಾರಣಕ್ಕೆ ಮೊದಲ ಆದ್ಯತೆ ನೀಡಿದ್ದು ಇದಕ್ಕೆಲ್ಲ ಮುಖ್ಯ ಕಾರಣ. ಯೌವನದಲ್ಲಿ ಆಕರ್ಷಕವಾದ ಧ್ಯೇಯವಾದವು ದಿನಕಳೆದಂತೆ ರಾಜಕಾರಣದಲ್ಲಿ ತನ್ನ ವೈಭವವನ್ನು ಕಲ್ಪಿಸಿಕೊಳ್ಳುವುದು ಸಂಘಟನೆಯ ಉದ್ದೇಶಕ್ಕೂ ಆತಂಕಕಾರಿ, ಕಾರ್ಯಕರ್ತನ ವೈಯಕ್ತಿಕ ವಿಕಾಸಕ್ಕೂ ಅಪಾಯಕಾರಿ. ನಮ್ಮ ಕಲ್ಪನೆಯ ಉತ್ತಮ ಸಮಾಜದಲ್ಲಿ, ರಾಜಕಾರಣವು ಸಮಾಜಕಾರಣಕ್ಕೆ ಮಣಿಯುತ್ತದೆ, ಸಮರ್ಥ ರಾಮದಾಸರೆದುರು ಸಾಮ್ರಾಟ ಶಿವಾಜಿ ನತಮಸ್ತಕನಾದಂತೆ. ಎಲ್ಲರನ್ನೂ ಸ್ಪರ್ಧೆಯ ರಾಜಕಾರಣಕ್ಕೆ ಸಿದ್ಧಪಡಿಸುವುದು ನಮ್ಮ ಉದ್ದೇಶವಲ್ಲ. ಸಮಾಜಕಾರ್ಯಕ್ಕೆ ಬೇಕಾದ ತರಬೇತಿ ಪಡೆದ ಪ್ರತಿಭಾನ್ವಿತ ಯುವ ಚೇತನಗಳು ರಾಜಕಾರಣದತ್ತ ಅತಿಆಸಕ್ತಿ ತಳೆಯುವುದು ನಮ್ಮ ಸಂಸ್ಕಾರಕ್ಕೆ ವ್ಯತಿರಿಕ್ತವಾದದ್ದು. ಸಮಾಜದ ಹಿತಕ್ಕೂ ಮಾರಕವಾದದ್ದು.

ಲೋಕದೆದುರು ಅನುಸರಣೀಯ ಮಾದರಿಗಳನ್ನು ಸೃಷ್ಟಿಸುವುದು ಧ್ಯೇಯವಾದದ ಮೂಲೋದ್ದೇಶ. ಆ ಮಾದರಿಗಳು ಸರ್ವ ಸ್ವೀಕಾರಾರ್ಹ ಶೀಲ, ಸ್ವಭಾವವನ್ನು ಹೊಂದಿರಬೇಕಾದದ್ದು ರಾಷ್ಟ್ರಕಾರಣದ ಪ್ರಾಥಮಿಕ ಅಗತ್ಯ. ಅಂತಹ ಶೀಲದ ಸಂರಕ್ಷಣೆಯಾಗಬೇಕು. ಅಭ್ಯಾಸದಿಂದ ಬೆಳೆಸಿಕೊಂಡ ಶ್ರದ್ಧೆಯು ಸ್ಪರ್ಧೆಗೆ ಬಲಿಯಾಗಬಾರದು. ಈ ಬಗ್ಗೆ ಹೆಚ್ಚು ತಿಳಿದವರು ಇನ್ನಷ್ಟು ಬೆಳಕು ಬೀರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT