ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದದ ಸಾಧ್ಯತೆ ಮತ್ತು ಬಿಚ್ಚು ಮನಸ್ಸು

ತಿದ್ದಿಕೊಳ್ಳಲು ಸಿದ್ಧರಿರುವ ಬಿಚ್ಚು ಮನಸ್ಸಿನವರೊಂದಿಗೆ ಮಾತ್ರ ಸಂವಾದ ಸಾಧ್ಯ
Last Updated 14 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

‘ಮತಾಂಧತೆಯ ವಿರೋಧದಲ್ಲೂ ಮತಾಂಧತೆ’ ಎಂಬ ಶೀರ್ಷಿಕೆಯಡಿ (ಪ್ರ.ವಾ., ಆ. 9) ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಶೆಟ್ಟಿ ಅವರು, ‘ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ಪ್ರಶಂಸಿಸುವ ನೆಪದಲ್ಲಿ ಎಡಪಂಥೀಯರನ್ನು ಟೀಕಿಸಿದ್ದಾರೆ. ಸೈದ್ಧಾಂತಿಕ ಬದ್ಧತೆಗಾಗಿ ಬಲಪಂಥೀಯರೊಂದಿಗೆ ವೇದಿಕೆ ಹಂಚಿಕೊಳ್ಳಲಾಗದು ಎಂಬ ನಿಲುವನ್ನು ಅವರು ಅಪಾರ್ಥ ಮಾಡಿಕೊಂಡಿರುವುದಲ್ಲದೆ, ಬಲಪಂಥೀಯತೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಶರಣ ಸಿದ್ಧಾಂತವು ತನ್ನ ಕಾಲಕ್ಕೂ ಮತ್ತು ತನ್ನ ಕಾಲದಾಚೆಗೂ ಪರಸ್ಪರ ಭಿನ್ನವಾಗಿದ್ದ ಅಭಿಪ್ರಾಯಗಳೊಂದಿಗೆ ನಿರಂತರ ಸಂವಾದವನ್ನು ಏರ್ಪಡಿಸಿಕೊಂಡಿತ್ತು. ಬಹುತ್ವದಲ್ಲಿ ಅಪಾರ ನಂಬಿಕೆ ಹೊಂದಿದ ಶರಣ ಸಂದೋಹಕ್ಕೆ ಎಲ್ಲರನ್ನೂ ಒಳಗೊಳ್ಳುವ ಜೀವಕಾರುಣ್ಯ ಇದೆ. ಈ ಎಲ್ಲ ವಿನ್ಯಾಸಗಳನ್ನು ಜನಸಾಮಾನ್ಯರ ಬಳಿಗೆ ಒಯ್ಯತ್ತಿರುವ ಸಾಣೇಹಳ್ಳಿ ಶ್ರೀಗಳ ನಡೆಯನ್ನು ಯಾವ ಎಡಪಂಥೀಯರೂ ನಿರಾಕರಿಸಿಲ್ಲ. ಶ್ರೀಗಳ ನಡೆಯನ್ನು ಸಾಧ್ಯವಾದಲ್ಲೆಲ್ಲ ಎತ್ತಿಕೊಂಡು ಮುನ್ನಡೆಸಿದ್ದಾರೆ. ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಕೆಲವು ವೇದಿಕೆಗಳಿಂದ ಎಡಪಂಥೀಯರು ಅಂತರ ಕಾಯ್ದುಕೊಂಡಿರುವುದು ಸಂವಾದಕ್ಕೆ ಎಡೆ ಮಾಡಬಾರದು ಎಂದಲ್ಲ. ಸಂವಾದಗಳೇ ಸಾಧ್ಯವಿಲ್ಲದ ಕರ್ಮಠರೊಂದಿಗೆ ವೇದಿಕೆ ಹಂಚಿಕೊಂಡರೆ, ಸೈದ್ಧಾಂತಿಕ ಬದ್ಧತೆ ಮೈಗೂಡಿಸಿಕೊಂಡಿರುವ ಜನಸಮುದಾಯಗಳು ಗಲಿಬಿಲಿಗೊಳ್ಳುತ್ತವೆ. ಅದಕ್ಕಿಂತ ಹೆಚ್ಚಾಗಿ, ಜನಸಾಮಾನ್ಯರು ದ್ವಂದ್ವಗಳಿಗೆ ದೂಡಲ್ಪಡುತ್ತಾರೆ ಎಂಬ ಕಾರಣಕ್ಕೇ ಹೊರತು ಅಲ್ಲಿ ಯಾವ ವೈಯಕ್ತಿಕ ಹಿತಾಸಕ್ತಿಗಳಿಲ್ಲ.

ಇನ್ನು ಎರಡನೆಯದಾಗಿ, ಎಡಪಂಥೀಯರು ಧರ್ಮರಾಯ, ವಿದುರ, ಭರತ, ವಿಭೀಷಣ, ಅಲ್ಲಮ, ನಾಗಾರ್ಜುನ, ಗಾಂಧಿ, ರಮಣರನ್ನು ಕಣ್ಣೆತ್ತಿಯೂ ನೋಡುವುದಿಲ್ಲ ಎಂದು ಹೇಳಿದ್ದಂತೂ ಹಾಸ್ಯಾಸ್ಪದ. ಚರಿತ್ರೆ ಮತ್ತು ವರ್ತಮಾನದ ಎಲ್ಲ ವ್ಯಕ್ತಿ- ಶಕ್ತಿಗಳ ನಡೆಯನ್ನು ಚಾರಿತ್ರಿಕ ವಿವೇಕದ ಬೆಳಕಿನಲ್ಲಿ ಇದಿರುಗೊಳ್ಳುವ ಮೂಲಕ ಹೆಚ್ಚೆಚ್ಚು ನಿರ್ದಿಷ್ಟವಾಗಿ ಎಲ್ಲರನ್ನೂ ಒಳಗೊಳ್ಳುವುದು ಎಡಪಂಥೀಯರ ಸಿದ್ಧಾಂತವೇ ಆಗಿರುತ್ತದೆ. ವ್ಯಕ್ತಿಗಳ ಮಧ್ಯೆ ಭಿನ್ನಾಭಿ ಪ್ರಾಯಗಳು ಇರುತ್ತವೆ, ಇರಬೇಕು. ಆದರೆ ಜನಾಂಗೀಯ ದ್ವೇಷವನ್ನೇ ಮೌಲ್ಯವಾಗಿಸಿಕೊಂಡಿರುವ ಕೋಮುವಾದಿ ಸಿದ್ಧಾಂತ ಮತ್ತು ಪಕ್ಷಗಳೊಂದಿಗೆ ನಿಲ್ಲುವ, ಆ ಮೂಲಕ ಜನವಿರೋಧಿ ನಂಬಿಕೆ- ನೆಲೆಗಳನ್ನು ಅಭಿವೃದ್ಧಿಗೊಳಿಸುತ್ತಿರುವವ
ರೊಂದಿಗೆ ಸಂವಾದ ಎನ್ನುವುದು ಇರುವುದಿಲ್ಲ. ಅವರು ಜನರನ್ನು ಆಕರ್ಷಕ ವಾದಗಳ ಮೂಲಕ ದಿಕ್ಕು ತಪ್ಪಿಸಬಲ್ಲರು. ಫ್ಯಾಸಿಸಂ ಪರಾಕಾಷ್ಠೆಯಲ್ಲಿರುವ ಈ ಹಂತದಲ್ಲಿ ಇದೇ ಆಕರ್ಷಕವಾದಿಗಳು, ಜನರು ತಮ್ಮ ವಿರೋಧಿ ಮೌಲ್ಯಗಳನ್ನೂ ಸುಖಿಸುವಂತೆ ಮಾಡಬಲ್ಲರು.

ವೈದಿಕ ಸಿದ್ಧಾಂತದ ಮುಖವಾಣಿಯಾಗಿರುವ ಗುಂಪೊಂದು ‘ವಚನಕಾರರು ಜಾತಿ, ಲಿಂಗ, ವರ್ಗ, ವರ್ಣ ಅಸಮಾನತೆಗಳೆಂಬ ಆಧುನಿಕ ಕಾಲದ ಕಲ್ಪಿತ ಸಮಸ್ಯೆಗಳ ಕುರಿತು ಮಾತನಾಡಿಯೇ ಇಲ್ಲ. ಅವರು ಶುದ್ಧ ಆತ್ಮಸಾಧಕ ಅಧ್ಯಾತ್ಮವಾದಿಗಳಾಗಿದ್ದರು’ ಎಂಬ ವಾದಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಈ ತಿರುವು-ಮುರುವು ವಾದಗಳನ್ನು ಸಂಶೋಧನಾ ಅಧ್ಯಯನಗಳೆಂದು ಬಿಂಬಿಸಲಾಗುತ್ತಿದೆ. ಒಂದೆಡೆ ವಚನಕಾರರನ್ನು ನಿರಾಕರಿಸದೆ ನಗಣ್ಯಗೊಳಿಸುವ ಹುನ್ನಾರವೊಂದು ಆಧುನಿಕೋತ್ತರ ಕಾಲಘಟ್ಟದಲ್ಲಿ ಎಗ್ಗಿಲ್ಲದೆ ಸಂಭವಿಸುತ್ತಿದೆ. ಕರ್ಮಸಿದ್ಧಾಂತವನ್ನು ಮೂಲೋತ್ಪಾಟನೆ ಮಾಡಲು ಬಯಸಿದ್ದ ಶರಣ ಪರಂಪರೆಯನ್ನು ಮನುವಾದಿಗಳು ಯಾವತ್ತೂ ಒಪ್ಪಲಾರರು. ಆದರೆ ಅಲ್ಲಿರುವ ಅಪಾರ ಜನಸಮುದಾಯಗಳನ್ನು ತನ್ನತ್ತ ಸೆಳೆಯುವ ಕುತಂತ್ರವನ್ನು ನಿರಂತರ ಮಾಡುತ್ತಿರುತ್ತಾರೆ. ವೈದಿಕಶಾಹಿಗಳು ಶ್ರಮಣ ಪರಂಪರೆಯ ಲಾಂಛನಗಳನ್ನು ಉದ್ದೇಶಪೂರ್ವಕವಾಗಿ ಸ್ವೀಕರಿಸಿ ಅದರ ತಾತ್ವಿಕತೆಯನ್ನು ನಿರಾಕರಿಸುತ್ತವೆ. ಆಯಾ ಕಾಲಕ್ಕೆ ಸೂಕ್ತವಾಗಿ ಕಾಲ ಗತಿಸಿದ ನಂತರ ಜಡ ಸಂಪ್ರದಾಯಗಳಾಗಿರುವ ಲಾಂಛನಗಳನ್ನು ಅಲಕ್ಷಿಸಿ ಮೂಲ ತಾತ್ವಿಕತೆಯನ್ನು ಅನುಸರಿಸುವ ವಿಚಾರವಾದಿಗಳ ಕುರಿತು ವೈದಿಕರು ಲಾಂಛನ ಪ್ರೇಮದ ಮೂಲಕವೇ ಅಪಪ್ರಚಾರ ಮಾಡುತ್ತಾರೆ. ಆಚರಣೆ, ಲಾಂಛನಗಳನ್ನು ನೆಚ್ಚಿಕೊಂಡಿರುವ ಮುಗ್ಧರು ತಮಗರಿಯದೇ ಈ ಅವೈದಿಕ ಧಾರೆಗಳು ಒಡ್ಡಿದ ಬಲೆಗೆ ಬೀಳುತ್ತಾರೆ. ಈ ಹೊತ್ತು ಚರ್ಚೆ ಆಗಬೇಕಾದದ್ದು ಈ ಸಾಂಸ್ಕೃತಿಕ ರಾಜಕಾರಣದ ಬಗೆಗೇ ಹೊರತು ಒಂದು ಕಾರ್ಯಕ್ರಮದ ಬಗೆಗಲ್ಲ.

ಎಲ್ಲ ಮಹಾಪುರುಷರನ್ನು ಜಾತಿ ಐಕಾನ್‌ಗಳಾಗಿ ಮಾಡಿಬಿಟ್ಟು ಅವರನ್ನು ಗೌರವಿಸಿದಂತೆ ತೋರಿಸಿ ಕೊಳ್ಳುವುದೇ ಇವರ ನಿತ್ಯ ಕಾಯಕ. ಪ್ರಗತಿಪರ ಸಂಘಟನೆಗಳು ಯಾವತ್ತಿನ ತಮ್ಮ ಮುಗ್ಧತೆ ಮತ್ತು ದೂರಗಾಮಿ ಪರಿಣಾಮಗಳನ್ನು ಅರಿಯದೆ ಮಾನವೀಯತೆ ಎಂಬ ಅಮಲಿನಲ್ಲಿ ಇವರನ್ನು ಒಳಗೊಳ್ಳಲು ಹವಣಿಸುತ್ತವೆ. ಆದರೆ ಕೋಮುವಾದಿಗಳಾದರೂ ಇಷ್ಟನ್ನೇ ಏಣಿ ಮಾಡಿಕೊಂಡು ಎಲ್ಲೆಲ್ಲಿಯೂ ತಮ್ಮ ಅಜೆಂಡಾವನ್ನೇ ಜಾರಿ ಮಾಡುತ್ತಾರೆ. ಸಂವಾದ ಎಂಬುದು ತಿದ್ದಿಕೊಳ್ಳಲು ಸಿದ್ಧವಾಗಿರುವ ಬಿಚ್ಚು ಮನಸ್ಸಿನವರೊಂದಿಗೆ ಸಾಧ್ಯವಾಗುತ್ತದೆ. ಈಗಾಗಲೇ ತಮ್ಮ ನಂಬಿಕೆಗಳನ್ನು ಬಲವಾಗಿ ಕಚ್ಚಿಕೊಂಡು ಅದನ್ನು ಜಾರಿ ಮಾಡಲೆಂದೇ ಎಲ್ಲ ವೇದಿಕೆಗಳನ್ನು ಏಣಿಯಾಗಿಸಿಕೊಳ್ಳಬಲ್ಲ ಮನು ಸಿದ್ಧಾಂತಿಗಳೊಂದಿಗೆ ಸಂವಾದ ಏರ್ಪಡಿಸಿಕೊಳ್ಳುತ್ತೇವೆ ಎಂಬ ಭ್ರಮೆಗೆ ಬೀಳದೆ, ಜನಸಾಮಾನ್ಯರ ಬದುಕಿನೊಂದಿಗೆ ತೊಡ ಗಿಸಿಕೊಂಡು ಹೆಜ್ಜೆ ಇಡುವುದೇ ನಿಜವಾದ ಶರಣ ಪರಂಪರೆಯ ಅನುಸಂಧಾನವಾಗಬಲ್ಲದು. ಆದ್ದರಿಂದ ಶರಣ ಸಿದ್ಧಾಂತಿಗಳು ನಡೆ ಧೀರರೇ ಹೊರತು ನುಡಿ ಧೀರರಲ್ಲ. ಇಲ್ಲವಾದರೆ ಬಸವಣ್ಣನವರು ಹೇಳು ವಂತೆ ನಡೆಯಲ್ಲಿ ಎಚ್ಚೆತ್ತು ನುಡಿಯಲ್ಲಿ ಮರೆತರೆ ಹಿಡಿದಿರ್ಪ ಲಿಂಗ ಘಟಸರ್ಪವಾಗಿ ಕಾಡೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT