ಬುಧವಾರ, ಸೆಪ್ಟೆಂಬರ್ 18, 2019
26 °C
ಆನೆಗಳ ದಾಳಿಯಿಂದ ಪಾರಾಗಲು ತೋಟಗಳಿಗೆ ಸೋಲಾರ್ ಬೇಲಿ ಹಾಕಿಸ ಬಹುದು. ಆದರೆ ಅದರಿಂದ ಆನೆಗಳ ಆಹಾರದ ಕೊರತೆಗೆ ಪರಿಹಾರ ಸಿಗದು

ಗಜಪಡೆ: ನಿಗ್ರಹ ಹೇಗೆ?

Published:
Updated:
Prajavani

ಗಣೇಶ ಚತುರ್ಥಿಯ ಮುನ್ನಾ ದಿನ ಗಜ ಪಡೆಯು ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ನಮ್ಮ ತೋಟಕ್ಕೆ ಬಂದು ಅರ್ಧಕ್ಕರ್ಧ ತೋಟವನ್ನು ತಿಂದು ಹಾಳುಗೆಡವಿ ಹೋಗಿತ್ತು. ಫಕ್ಕನೆ ನೋಡುವಾಗ ತೋಟಕ್ಕೆ ಚಂಡಮಾರುತ ಅಪ್ಪಳಿಸಿದಂತೆ ಕಾಣುತ್ತಿತ್ತು. ಎಲ್ಲೆಂದರಲ್ಲಿ ಬುಡಸಮೇತ ಅಡ್ಡಾದಿಡ್ಡಿಯಾಗಿ ಬಿದ್ದ ಬಾಳೆಗಿಡಗಳು, ಮಚ್ಚಿನಿಂದ ಕೊಚ್ಚಿ ಹಾಕಿದಂತೆ ತೋರುವ ತೆಂಗಿನ ಸಸಿಗಳು! ಒಟ್ಟಿನಲ್ಲಿ ನೋಡುವವರ ಮನ ಕಲಕುವ ದೃಶ್ಯ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತೆ ನಮ್ಮ ಸ್ಥಿತಿ. ಆನೆಗಳು ತೋಟ ಧ್ವಂಸ ಮಾಡಿದ ವಿಷಯವನ್ನು ಅರಣ್ಯಾಧಿಕಾರಿಗಳು ಇದ್ದಲ್ಲಿಗೆ ಹೋಗಿ ತಿಳಿಸಿದೆ.

‘ಈಗೀಗ ಆನೆಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಯಾಕೆ ತೋಟಕ್ಕೆ ಬರುತ್ತವೆ?’ ಎಂದು ಕೇಳಿದೆ. ‘ಈಗ ಆನೆಗಳಿಗೆ ಕಾಡಿನಲ್ಲಿ ತಿನ್ನಲಿಕ್ಕೆ ಏನುಂಟು? ಹಲಸಿನ ಮರಗಳು ಕಳ್ಳರ ಪಾಲಾಗುತ್ತಿವೆ. ಬಿದಿರಿಗೆ ಕಟ್ಟೆ ರೋಗ ಬಂದು ನಿರ್ನಾಮವಾಗಿದೆ. ಬೈನೆ ಮರಗಳು ಆನೆ ತಿಂದು ಮುಗಿದಿವೆ. ಆನೆಗಳ ವಾಸಸ್ಥಳವನ್ನೂ ಒತ್ತುವರಿ ಮಾಡಲಾಗಿದೆ. ಒಟ್ಟಾರೆ ಹೇಳುವುದಾದರೆ, ಆಹಾರದ ಅಭಾವವೇ ಆನೆ ನಾಡಿಗೆ ಬರಲು ಮುಖ್ಯ ಕಾರಣ’ ಎಂದು ಹೇಳಿದರು.

‘ಹಾಗಾದರೆ ನೀವು ಮೊನ್ನೆ ನಮ್ಮ ಅರಣ್ಯದಲ್ಲಿ ಬೆತ್ತದ ಸಸಿಗಳ ಪ್ಲಾಂಟೇಶನ್ ಮಾಡಿದ್ದು ಯಾಕೆ? ಅದರಿಂದ ಏನು ಉಪಯೋಗ? ಬೆತ್ತದ ಗಿಡ ದೊಡ್ಡದಾದಾಗ ಅದರಿಂದ ಬುಟ್ಟಿ ಇತ್ಯಾದಿ ಮಾಡಲು ಜನರು ಅರಣ್ಯದೊಳಗೆ ನುಗ್ಗುವ ಅಪಾಯವೂ ಇದೆ. ಅದರ ಬದಲು ಆನೆಗಳ ಆಹಾರವಾದ ಬೈನೆ, ಹಲಸು, ಬಿದಿರು ಇತ್ಯಾದಿಗಳನ್ನು ನೆಡಬಹುದಿತ್ತಲ್ಲ? ಆನೆಗಳಿಗೆ ಪ್ರಿಯವಾದ ಸಸ್ಯವೊಂದಿದೆ. ಕಲ್ಲುಬಾಳೆಯೆಂದು ಅದರ ಹೆಸರು. ಅದರ ವಿಶೇಷವೆಂದರೆ, ಅದನ್ನು ಅರಣ್ಯದಲ್ಲಿ ಬೀಜ ಬಿತ್ತಿ ಬೆಳೆಸಬಹುದು. ಅದು ಎಂತಹ ಕಲ್ಲುನೆಲದಲ್ಲೂ ಹುಲುಸಾಗಿ ಬೆಳೆಯುತ್ತದೆ. ಅರಣ್ಯ ಇಲಾಖೆಗೆ ಗಿಡಗಳ ನರ್ಸರಿ ಮಾಡುವ ಖರ್ಚೂ ಉಳಿಯುತ್ತದೆ’ ಎಂದೆ.

ನನ್ನ ಈ ಮಾತಿಗೆ ಅವರು, ‘ಓ! ಬೈನೆ, ಹಲಸು, ಕಲ್ಲುಬಾಳೆ, ಬಿದಿರು ಗಿಡಗಳನ್ನು ನೆಟ್ಟರೆ ಅವು ದೊಡ್ಡವಾಗಲು ಆನೆಗಳು ಎಲ್ಲಿ ಅವಕಾಶ ಕೊಡುತ್ತವೆ? ಮೊಳಕೆ ಬರುವಾಗಲೇ ಕಿತ್ತು ತಿನ್ನುತ್ತವೆ. ಬೆತ್ತವನ್ನು ಆನೆಗಳು ತಿನ್ನದೆ ಇರುವುದರಿಂದ ಕಾಡು ಬೆಳೆಯುತ್ತದೆ. ನೀವು ತೋಟಕ್ಕೆ ಸೋಲಾರ್ ಬೇಲಿ ಹಾಕಿಸಿ. ಆಗ ತೋಟಕ್ಕೆ ಆನೆ ಬರುವುದಿಲ್ಲ’ ಎಂದರು. ‘ಮೊಳಕೆ ಬರುವಾಗಲೇ ಗಿಡಗಳನ್ನು ತಿನ್ನುತ್ತವೆ ಎಂದು ಗಿಡಗಳನ್ನು ಬೆಳೆಸದೇ ಇದ್ದರೆ ಮುಂದೆ ಆನೆಗಳಿಗೆ ಆಹಾರದ ಕೊರತೆ ಉಲ್ಬಣಿಸಬಹುದು ಅಲ್ಲವೇ?’ ಎಂದು ಕೇಳಿದೆ. ಅದಕ್ಕೆ ಅವರು ‘ನಾವು ಏನೂ ಮಾಡುವ ಹಾಗಿಲ್ಲ. ಯಾವ ಗಿಡಗಳನ್ನು ನೆಡಬೇಕು ಎಂಬ ತೀರ್ಮಾನ ಬೆಂಗಳೂರಿನಲ್ಲಿ ಆಗುತ್ತದೆ. ಅದನ್ನೇ ನಾವು ನೆಡುತ್ತೇವೆ’ ಎಂದರು.

ನಮ್ಮ ತೋಟ ಮಾತ್ರವಲ್ಲ, ನಮ್ಮೂರಿನ ಹೆಚ್ಚಿನ ರೈತರ ತೋಟಗಳೂ ಆನೆ ದಾಳಿಗೆ ತುತ್ತಾಗುತ್ತಲೇ ಇರುತ್ತವೆ. ಹಿಂದೆಲ್ಲಾ ಆನೆಗಳು ನಮ್ಮೂರಿನ ತೊಟಗಳಿಗೆ ಬಂದದ್ದೇ ಇಲ್ಲ. ಈಗ್ಗೆ ಐದಾರು ವರ್ಷಗಳಿಂದ ಅವು ಆಗಾಗ್ಗೆ ಊರಿಗೆ ದಾಳಿ ಇಡುತ್ತಲೇ ಇರುತ್ತವೆ. ನಾವು ಕಷ್ಟಪ‍ಟ್ಟು ಬೆಳೆಸಿದ ಬಾಳೆ, ತೆಂಗು, ರಬ್ಬರ್‌, ಭತ್ತ, ಕಬ್ಬು ಎಲ್ಲವೂ ಆನೆಗಳಿಗೆ ಆಹಾರವಾಗುತ್ತಿವೆ. ನಮ್ಮ ಮತ್ತು ಆನೆಯ ನಡುವೆ ನಿತ್ಯ ಸಂಘರ್ಷ ನಡೆಯುತ್ತಿದೆ. ತೋಟಕ್ಕೆ ಆನೆ ಬಂದಾಗ ನಾವು ಪಟಾಕಿ ಸಿಡಿಸಿ ಓಡಿಸುತ್ತೇವೆ (ಕೆಲವೊಮ್ಮೆ ಬಂದದ್ದು ಗೊತ್ತಾಗುವುದಿಲ್ಲ, ಗೊತ್ತಾಗುವಾಗ ಎಲ್ಲ ತಿಂದು ಮುಗಿದಿರುತ್ತದೆ– ಮೊನ್ನೆ ಆದಂತೆ). ಆನೆ ನಮ್ಮ ತೋಟದಿಂದೇನೋ ಓಡುತ್ತದೆ. ಆದರೆ ಪಕ್ಕದವರ ತೋಟಕ್ಕೆ ಲಗ್ಗೆ ಇಡುತ್ತದೆ. ಅಲ್ಲಿ ಆನೆ ಬಂದದ್ದು ಗೊತ್ತಾಗಿ ಅವರೂ ಓಡಿಸಿದರೆ ಅದು ಇನ್ನೊಂದು ತೋಟಕ್ಕೆ ನುಗ್ಗುತ್ತದೆ. ಇದು ಹೆಚ್ಚುಕಡಿಮೆ ತಿಂಗಳಿಗೊಮ್ಮೆಯಾದರೂ ನಡೆಯುವಂತಹದ್ದು.

ಮಳೆ ಕೊರತೆಯಿಂದಲೋ, ಜನರು ಕಾಡನ್ನು ಆಶ್ರಯಿಸಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿರುವುದರಿಂದಲೋ ಆನೆಗಳಿಗೆ ಹಸಿರು ಮೇವು ದೊರೆಯದಂತೆ ಆಗಿದೆ. ಸೋಲಾರ್ ಬೇಲಿ ಹಾಕುವುದರಿಂದ ನಮ್ಮ ತೋಟಗಳೇನೋ ಉಳಿಯಬಹುದು. ಆದರೆ ಆನೆಗಳ ಆಹಾರದ ಕೊರತೆ ಸಮಸ್ಯೆಗೆ ಪರಿಹಾರ ಆದಂತೆ ಆಗಲಿಲ್ಲವಲ್ಲ? ಆನೆಗಳ ಹಸಿವನ್ನು ಹೋಗಲಾಡಿಸಲು ಅರಣ್ಯ ಇಲಾಖೆಯು ಆನೆಗಳು ವಾಸಿಸುವ ಪ್ರದೇಶಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಆನೆ ತಿನ್ನುವ ಸಸ್ಯಗಳನ್ನೇ ಬೆಳೆಸಬೇಕು. ಈ ಕಾರ್ಯ ಸಮರೋಪಾದಿಯಲ್ಲಿ ಆಗಬೇಕು.

ಈಗ ಮಳೆ ಬರುತ್ತಿರುವುದರಿಂದ ನೆಟ್ಟ ಗಿಡಗಳು ಬದುಕುತ್ತವೆ. ಸರ್ಕಾರಕ್ಕೆ ಇದು ಹೊರೆ ಎನಿಸಿದರೆ ಗಿಡ ನಾಟಿ ಮಾಡುವಲ್ಲಿ ಊರವರು, ಸಮಾಜಸೇವಕರು, ಸಂಘ–ಸಂಸ್ಥೆಗಳ ಸಹಕಾರ ಪಡೆದುಕೊಳ್ಳಬಹುದು. ನಮ್ಮಂತೆ ಅವುಗಳಿಗೂ ಹಸಿವಿದೆ. ಆನೆ ಮತ್ತು ಮಾನವ ಇಬ್ಬರೂ ಉಳಿಯಬೇಕಾದರೆ ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಾದುದು ಇಂದಿನ ತುರ್ತು. ನಾವು ಆನೆಗಳಿಗೆ ಅರಣ್ಯದಲ್ಲಿ ಆಹಾರ ಬೆಳೆಯದಿದ್ದರೆ ಈಗ ತೋಟಕ್ಕೆ ನುಗ್ಗುವ ಆನೆಗಳು ಮುಂದೆ ಪೇಟೆಗೂ ದಾಳಿ ಮಾಡಬಹುದು, ಎಚ್ಚರ!

Post Comments (+)