ಭಾನುವಾರ, ನವೆಂಬರ್ 17, 2019
24 °C
ಮೌಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ನಾವಿಂದು ಮನಗಾಣಬೇಕಾಗಿದೆ

ಬರೀ ಕಲಿಸಲಿಲ್ಲ, ವ್ಯಕ್ತಿತ್ವ ಕಟ್ಟಿದರು

Published:
Updated:
Prajavani

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು... ಈ ನುಡಿಯನ್ನು ನಾವೆಲ್ಲಾ ಎಳವೆಯಲ್ಲೇ ಕೇಳಿರುತ್ತೇವೆ. ಇದು ನನ್ನ ದೃಷ್ಟಿಯಲ್ಲಿ ನೂರಕ್ಕೆ ನೂರರಷ್ಟು ಸತ್ಯ. ನನಗೆ ನನ್ನ ತಾಯಿಯೇ ಮೊದಲ ಗುರು. ಅವರು ಒಬ್ಬ ಸರ್ಕಾರಿ ಶಾಲೆಯ ಶಿಕ್ಷಕಿಯೂ ಹೌದು. ನಾನೊಬ್ಬ ಸರ್ಕಾರಿ ಶಾಲೆ ಶಿಕ್ಷಕಿಯ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ಇಂದು ನಾನಿಲ್ಲಿ ಸಚಿವನಾಗಿ ಕುಳಿತಿದ್ದರೆ, ಅದಕ್ಕೆ ಮುಖ್ಯ ಕಾರಣ ನನಗೆ ವೈಯಕ್ತಿಕವಾಗಿ ಮತ್ತು ವೃತ್ತಿಯಿಂದ ಶಿಕ್ಷಕಿಯಾಗಿದ್ದ ನನ್ನ ತಾಯಿ. ಬಹಳಷ್ಟು ಜನ ಬೇರೆ ಬೇರೆ ಕಾರಣಗಳಿಂದ ಶಿಕ್ಷಣದಿಂದ ವಂಚಿತ ರಾಗಿದ್ದಾರೆ. ನಮಗೆ ಯೋಗ್ಯ, ಮೌಲ್ಯಾಧಾರಿತ ಶಿಕ್ಷಣ ಸಿಕ್ಕಿದೆ. ನಾವು ಶಿಕ್ಷಣ ಪಡೆಯುವಾಗ ನಮ್ಮ ಶಾಲೆಗಳು ಶಿಕ್ಷಣವನ್ನು ಮಾರುವ ಸಂಸ್ಥೆಗಳಾಗಿರಲಿಲ್ಲ. ಶಿಕ್ಷಣವನ್ನು ನೀಡುವ ಸಂಸ್ಥೆಗಳಾಗಿದ್ದವು.

ಇಂದು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಗುತ್ತಿಲ್ಲ. ಅಂಕಗಳನ್ನು ಗಳಿಸಲು, ರ‍್ಯಾಂಕ್‌ ಪಡೆಯಲು, ವಿವಿಧ ಕೋರ್ಸ್‌ಗಳಿಗೆ ಸೇರಲು ಒತ್ತು ನೀಡಲಾಗುತ್ತಿದೆ. ಮೌಲ್ಯಾಧಾರಿತ ಶಿಕ್ಷಣ ನೀಡಿದಾಗ ಮಾತ್ರ ಒಬ್ಬ ವೈದ್ಯ ಹೃದಯವಂತನಾಗಬಲ್ಲ, ಒಬ್ಬ ಎಂಜಿನಿಯರ್ ಅಥವಾ ವಕೀಲ ಸಮಾಜವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಬಲ್ಲ. ಸರ್ಕಾರಿ ಅಧಿಕಾರಿಗಳೂ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಲು ಸಹಾಯವಾಗುತ್ತದೆ.

ಸಾಧಕರೆಲ್ಲರ ಹಿಂದೆ ಪ್ರೇರಕ ಶಕ್ತಿಯಿದೆ. ಇದನ್ನೇ ಅವರು ಮೇಲ್ಪಂಕ್ತಿ ಎಂದು ತಿಳಿದುಕೊಂಡು ತಾವೂ ಅವರಂತಾಗಬೇಕು ಎಂದು ಕೆಲಸ ಮಾಡುತ್ತಾ ಸಾಧಕರಾಗಿದ್ದಾರೆ. ಕೈಗಾರಿಕೆಗಳನ್ನು ಕಟ್ಟಿ ಬೆಳೆಸಿರುವ ನಾಯಕ ರಿರಬಹುದು, ಸಾಹಿತಿಗಳಿರಬಹುದು, ಮಹಾನ್ ಹೆಸರು ಮಾಡಿದ ವೈದ್ಯರಿರಬಹುದು, ಅವರೆಲ್ಲ ಪ್ರೇರಣೆಯಿಂದಲೇ ಮೇಲೆ ಬಂದಿದ್ದಾರೆ. ನಾವು ಮಕ್ಕಳ ಮುಂದೆ, ಮೇಲ್ಪಂಕ್ತಿಯಲ್ಲಿರುವ ಹೆಚ್ಚೆಚ್ಚು ಉದಾಹರಣೆಗಳನ್ನು ಇಡಬೇಕು.

ಹಾ.ಮಾ.ನಾಯಕರದು ನಮ್ಮ ನಾಡಿನಲ್ಲಿ ದೊಡ್ಡ ಹೆಸರು. ಅವರು ಸಾಹಿತಿ, ವಿಮರ್ಶಕ, ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ‘ಪ್ರಜಾವಾಣಿ’ಯಲ್ಲಿ ಬರುತ್ತಿದ್ದ ‘ಸಂಪ್ರತಿ’ ಎಂಬ ತಮ್ಮ ಅಂಕಣದಲ್ಲಿ ಅವರೊಮ್ಮೆ ಬರೆದಿದ್ದರು– ‘ಒಬ್ಬ ವೃದ್ಧೆ ನನ್ನ ಬಳಿ ತನ್ನ ಅಳಲು ತೋಡಿಕೊಂಡಳು. ನಾವು ಚಿಕ್ಕವರಿದ್ದಾಗ ನಮ್ಮ ಕಣ್ಣ ಮುಂದೆ ಮೂಳೆ ಮಾಂಸದಿಂದ ತುಂಬಿದ ದೊಡ್ಡ ದೊಡ್ಡ ವ್ಯಕ್ತಿಗಳು ಓಡಾಡುತ್ತಿದ್ದರು. ಅವರನ್ನು ನೋಡಿದಾಗ ಇವರಂತಾಗಬೇಕು ಎಂದೆನಿಸುತ್ತಿತ್ತು. ಈಗ ನನ್ನ ಮೊಮ್ಮಗನಿಗೆ ಇವರ ರೀತಿ ಆಗು ಎಂದು ಯಾರನ್ನು ತೋರಿಸಲಿ ಎಂದು ಕೇಳಿದಳು. ಆಕೆಯ ಅಳಲು ಸಮಾಜದ ಎಲ್ಲ ಕ್ಷೇತ್ರಗಳ ಅಳಲು’ ಎಂದು ಬರೆದಿದ್ದರು.

ನಮಗೆ ಹಿಂದೆ ಕಾಪಿ ಪುಸ್ತಕದ ಮೊದಲ ಸಾಲಿನಲ್ಲಿ ದುಂಡಗಿನ ಅಕ್ಷರದಲ್ಲಿ ಒಳ್ಳೆಯ ವಿಚಾರಗಳನ್ನು ಬರೆಯುತ್ತಿದ್ದರು. ವಿದ್ಯಾರ್ಥಿಗಳು ಅದನ್ನೇ ಅನುಸರಿಸಿ ಬರೆಯುತ್ತಿದ್ದರು. ಬರೆಯುತ್ತಾ ಮಕ್ಕಳ ಅಕ್ಷರ ದುಂಡಾಗುವುದರ ಜೊತೆಗೆ ಆ ವಿಚಾರವೂ ಅವರ ಮನದಲ್ಲಿ ಇಳಿಯುತ್ತಿತ್ತು. ಆ ಸಾಲಿಗೆ ನಾವು ಮೇಲ್ಪಂಕ್ತಿ ಎನ್ನುತ್ತೇವೆ. ಮೇಲ್ಪಂಕ್ತಿ ದುಂಡಾಗಿದ್ದರೆ, ಒಳ್ಳೆಯ ವಿಚಾರದಿಂದ ಕೂಡಿದ್ದರೆ, ಕೆಳಪಂಕ್ತಿಗಳೂ ಅದೇ ರೀತಿ ಆಗುತ್ತವೆ. ಮೇಲ್ಪಂಕ್ತಿಯೇ ವಕ್ರವಕ್ರವಾದರೆ? ಇದು ಇಂದಿನ ಸಮಸ್ಯೆ.

ನನ್ನ ಜೀವನದ ಎಲ್ಲ ಹಂತಗಳಲ್ಲಿ ಪ್ರಭಾವ ಬೀರಿದ ಬಹಳಷ್ಟು ಜನರಿದ್ದಾರೆ. ನನ್ನ ಅದೃಷ್ಟ ಎಂದರೆ, ನಾನು ಯೌವನದಲ್ಲಿ 15 ತಿಂಗಳನ್ನು ಕರ್ನಾಟಕದ ಕೇಂದ್ರ ಕಾರಾಗೃಹದಲ್ಲಿ ಕಳೆದೆ. ತುರ್ತು ಪರಿಸ್ಥಿತಿಯ ಆ ಸಮಯದಲ್ಲಿ ನನಗೆ ರಾಷ್ಟ್ರ ಮಟ್ಟದ ನಾಯಕರಿಂದ ತಾಲ್ಲೂಕು ಮಟ್ಟದ ಕಾರ್ಯಕರ್ತರ ವರೆಗೆ ನಿಜವಾದ ಶಿಕ್ಷಕರು ಸಿಕ್ಕಿದರು. ಅವರು ಬದುಕಿನ ಪಾಠವಲ್ಲದೆ ಹಲವಾರು ವಿಚಾರಗಳ ಬಗ್ಗೆ ಹೇಳಿಕೊಟ್ಟರು. ನಾನು ಬಿ.ಎಸ್ಸಿ, ಎಲ್.ಎಲ್.ಬಿ. ಓದಿರಬಹುದು. ಆದರೆ ನಿಜವಾದ ವಿಶ್ವವಿದ್ಯಾಲಯದ ಶಿಕ್ಷಣ ಸಿಕ್ಕಿದ್ದು ಆ ಸೆರೆಮನೆ ವಾಸದಲ್ಲಿ. 4ನೇ ತರಗತಿಯಿಂದಲೇ ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿದ್ದೆ. ನಮ್ಮ ಶಾಖೆಯಲ್ಲಿ ಒಳ್ಳೆಯ ಕಥೆಗಳನ್ನು, ಘಟನೆಗಳನ್ನು, ಆಟದ ಮೂಲಕ ಒಳ್ಳೆಯ ಪಾಠಗಳನ್ನು ಹೇಳಿಕೊಟ್ಟ ಅಸಂಖ್ಯಾತ ಜನರಿದ್ದಾರೆ. ಅವರೆಲ್ಲ ನನಗೆ ಮಾರ್ಗದರ್ಶನ ಮಾಡಿದ ಶಿಕ್ಷಕರು.

ಶಿಕ್ಷಕರು ನವಭಾರತದ ನಿರ್ಮಾಣಕ್ಕೆ ಶ್ರಮಿಸಬೇಕು. ನಮ್ಮದು ವ್ಯಸನಮುಕ್ತ, ಸಮಸ್ಯೆಮುಕ್ತ ಸಮಾಜ ಆಗಬೇಕು. ಅಂತಹ ವ್ಯಕ್ತಿಗಳ ನಿರ್ಮಾಣಕ್ಕೆ ಶಾಲಾ ತರಗತಿಗಳೇ ಮೂಲ ಸ್ಥಾನ. ವ್ಯಕ್ತಿತ್ವ ನಿರ್ಮಾಣಕ್ಕಾಗಿ ತರಗತಿಗಳನ್ನು ಪ್ರಾರಂಭಿಸಿದಾಗ ದೇಶ ಸದೃಢವಾಗಿರುತ್ತದೆ. ಶಿಕ್ಷಕರಲ್ಲಿ ನನ್ನ ಮನವಿ ಏನೆಂದರೆ, ನಿಮ್ಮ ಕೆಲಸವನ್ನು ಒಂದು ವೃತ್ತಿ ಎಂದು ಭಾವಿಸದೆ ಅದು ನಿಮ್ಮ ಪ್ರವೃತ್ತಿಯಾಗಲಿ. ಪ್ರವೃತ್ತಿಯ ಮೂಲಕ ವ್ಯಕ್ತಿ ನಿರ್ಮಾಣದ ಜೊತೆಗೆ ರಾಷ್ಟ್ರ ನಿರ್ಮಾಣಕ್ಕೆ ಸಮಾಜದಿಂದ ಶಿಕ್ಷಕರ ಕೊಡುಗೆಯ ನಿರೀಕ್ಷೆ ಬಹಳಷ್ಟಿದೆ.

ನಾನಂತೂ ಶಿಕ್ಷಕನಾಗಲಿಲ್ಲ, ಆದರೆ ನನ್ನನ್ನು ಇಲ್ಲಿತನಕ ಕರೆತಂದ ಶಿಕ್ಷಕರ ಸೇವೆ ಮಾಡುವ ಭಾಗ್ಯವಾದರೂ ದೊರೆತಿದೆ ಎಂಬ ಸಂತಸ ನನ್ನದಾಗಿದೆ ಎಂದು ಅಭಿಮಾನದಿಂದ ಹೇಳಬಲ್ಲೆ.

ಲೇಖಕ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಪ್ರತಿಕ್ರಿಯಿಸಿ (+)