ಮಂಗಳವಾರ, ನವೆಂಬರ್ 12, 2019
20 °C
ಅಲೌಕಿಕ ಶಕ್ತಿಗಿಂತ ಜಾಣ್ಮೆಯ ಕಾರಣಕ್ಕೆ ಹನುಮಂತ ಮುಖ್ಯನಾಗುತ್ತಾನೆ

ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ

Published:
Updated:
Prajavani

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರು ಬಳ್ಳಾರಿಯ ಹನುಮಂತನ ಗುಡಿಗೆ ಇತ್ತೀಚೆಗೆ ಭೇಟಿಯಿತ್ತ ಸಂದರ್ಭದಲ್ಲಿ, ‘ಗೋಹತ್ಯೆ ಮತ್ತು ಮತಾಂತರಗಳು ಹಿಂದೂ ಧರ್ಮಕ್ಕೆ ಅಗೌರವ ತೋರಿಸುವ ಪ್ರಯತ್ನ ಗಳಾಗಿದ್ದು, ಇವನ್ನು ಹೀಗೇ ಮುಂದುವರಿಸುವವರಿಗೆ ಹನುಮಂತನಂತೆ ಬೆಂಕಿ ಹಚ್ಚಲೂ ಗೊತ್ತು’ ಎಂಬ ಬೆದರಿಕೆಯ ಮಾತುಗಳನ್ನಾಡಿದ್ದಾರೆ. ಬೆದರಿಕೆ, ಆಕ್ರಮಣಗಳು ನಮ್ಮ ಅಸುರಕ್ಷತಾ ಭಾವದ ಲಕ್ಷಣ ಗಳಾಗಿವೆ. ಕೇಂದ್ರ ಮತ್ತು ರಾಜ್ಯದಲ್ಲಿ ಇವರದೇ ಸರ್ಕಾರವಿದೆ ಎಂದ ಮೇಲೆ ಅಸುರಕ್ಷತೆಯ ಭಾವವೇಕೆ?

ನಮ್ಮ ದ್ವೇಷ, ಹಿಂಸಾಮತಿ, ಆಕ್ರಮಣಕಾರಿ ಧೋರಣೆಗಳನ್ನು ಸಮರ್ಥಿಸಿಕೊಳ್ಳಲು ಹೀಗೆ ದೇವಾನುದೇವತೆಗಳನ್ನು ಎಳೆದು ತರಬಾರದು. ಹನುಮಂತ ನಿಜಕ್ಕೂ ಲಂಕೆಗೆ ಬೆಂಕಿ ಹಚ್ಚಿದನೇ? ಈ ಬಗ್ಗೆ ವಿದ್ವಾಂಸರಲ್ಲೇ ಒಮ್ಮತವಿಲ್ಲ. ಸದ್ಯಕ್ಕೆ ವಾಲ್ಮೀಕಿ ರಾಮಾಯಣದಲ್ಲಿ ಒಟ್ಟು 24,000 ಶ್ಲೋಕಗಳಿದ್ದು ವಿದ್ವಾಂಸರು ಪ್ರಧಾನವಾಗಿ ಮೂರು ಆಕರ ಪಠ್ಯ ಗಳನ್ನು– ಬಾಂಬೆ ಪ್ರತಿ, ಬಂಗಾಳಿ ಪ್ರತಿ ಮತ್ತು ಮಧ್ಯ ಭಾರತದ ಪ್ರತಿ– ಗುರುತಿಸುತ್ತಾರೆ. ಮೂರೂ ಪ್ರತಿ ಗಳಲ್ಲಿ ಸಾಕಷ್ಟು ಪ್ರಕ್ಷೇಪಗಳಾಗಿದ್ದು, ಒಂದು ಪಠ್ಯದ ಮೂರನೆಯ ಒಂದು ಭಾಗದಷ್ಟು ಶ್ಲೋಕಗಳು ಉಳಿದೆರಡು ಪಠ್ಯಗಳಲ್ಲಿ ಕಾಣಸಿಗುವುದಿಲ್ಲ ಎನ್ನುತ್ತಾರೆ. ಖ್ಯಾತ ವಿದ್ವಾಂಸ ಎನ್.ಆರ್. ನಾವಲೇಕರ್ ಅವರಂತೂ ಲಂಕಾ ದಹನದ ಪ್ರಸಂಗವು ವಾಲ್ಮೀಕಿ ರಚನೆಯೇ ಅಲ್ಲ ಎಂದು ವಾದಿಸುತ್ತಾರೆ.

ಹನುಮಂತನಂತಹ ಒಳ್ಳೆಯ ರಾಜತಾಂತ್ರಿಕ ನಿಪುಣ ಲಂಕೆಗೆ ಬೆಂಕಿ ಇಡುವಂತಹ ಹುಂಬತನದ ಕೆಲಸ ಖಂಡಿತವಾಗಿ ಮಾಡಿರಲಾರ. ಈ ನಿರ್ಣಯಕ್ಕೆ ಬರಲು ವಿಶೇಷ ಸಂಶೋಧನೆಯ ಅವಶ್ಯಕತೆ ಇಲ್ಲ. ನಮ್ಮ ಸಾಮಾನ್ಯಜ್ಞಾನ ಬಳಸಿ ನೋಡಿದರೂ ಇದು ಅರ್ಥವಾಗುತ್ತದೆ. ಸೀತೆಯನ್ನು ಹುಡುಕುತ್ತ ಪಂಚವಟಿಯಿಂದ ಹೊರಟ ರಾಮ, ಮಾರ್ಗಮಧ್ಯ ದಲ್ಲಿ ರಾವಣನ ಆಕ್ರಮಣಕ್ಕೊಳಗಾಗಿ ಅರೆಜೀವ ವಾಗಿದ್ದ ಜಟಾಯುವನ್ನು ಸಂಧಿಸುತ್ತಾನೆ. ಸೀತೆಯನ್ನು ರಾವಣ ಅಪಹರಿಸಿದ ವಾರ್ತೆ ಜಟಾಯುವಿನಿಂದ ರಾಮನಿಗೆ ತಿಳಿಯುತ್ತದೆ. ಹೀಗಿದ್ದ ಮೇಲೆ ರಾಮ ತನ್ನ ಮಡದಿಯನ್ನು ಹುಡುಕಲೆಂದು ಕಪಿಸೈನ್ಯವನ್ನು ನಾಲ್ಕೂ ದಿಕ್ಕುಗಳಿಗೆ ಕಳುಹಿಸುವ ಅವಶ್ಯಕತೆ ಏನಿತ್ತು? ತನ್ನ ತಂದೆಯ ಆಪ್ತಮಿತ್ರನಾಗಿದ್ದ ಜಟಾಯುವಿನ ಮಾತಿನಲ್ಲಿ ಅವನಿಗೆ ನಂಬಿಕೆ ಇರಲಿಲ್ಲವೇ?

ಅಸಲಿಗೆ ಹನುಮಂತ ಲಂಕೆಗೆ ಹಾರಿದ್ದು ರಾಮ ಭಕ್ತರು ಭಾವಿಸುವಂತೆ ಸೀತೆಯನ್ನು ಹುಡುಕಲೆಂದಲ್ಲ. ಒಂದು ಮಹತ್ವದ ರಾಜತಾಂತ್ರಿಕ ಉದ್ದೇಶದಿಂದ. ವಿಭೀಷಣನ ಸ್ನೇಹ ಸಂಪಾದಿಸಿ, ಅವನ ನೆರವಿನಿಂದ ಲಂಕೆಯ ಕೋಟೆ ಕೊತ್ತಲಗಳು, ಪ್ರವೇಶದ್ವಾರ ಗುಪ್ತಮಾರ್ಗಗಳು, ಸೇನಾಶಕ್ತಿ– ಶಸ್ತ್ರಾಸ್ತ್ರಗಳ ಸಮಗ್ರ ಮಾಹಿತಿ ಪಡೆಯಲೆಂದು ಹೋಗುತ್ತಾನೆ [ಕತಿ ದುರ್ಗಾಣಿ... ಲಂಕಾಯಾ ರಕ್ಷಸಾಂ ಸದನಾನಿ ಚ| (ವಾಲ್ಮೀಕಿ ರಾಮಾಯಣ 5.3)]. ಅಶೋಕವನದಲ್ಲಿ ಸೀತೆಯನ್ನು ಸಂಧಿಸಿದನಾದರೂ ಅವನ ಮೂಲಉದ್ದೇಶ ಶತ್ರುವನ್ನು ಒಳಗಿನಿಂದಲೇ ದುರ್ಬಲ ಗೊಳಿಸುವುದಾಗಿತ್ತು.

ಆನಂತರ ಬಂದ ಕವಿಗಳು ಹನುಮನನ್ನು ದೈವೀಕರಿಸಲು ಅತಿಮಾನುಷ ಅಂಶಗಳನ್ನೆಲ್ಲ ಕಾವ್ಯದೊಳಗೆ ತುರುಕಿದರು. ‘ನಾನು ಲಂಕೆಗೆ ಸರಿಯಾಗಿ ಬೆಂಕಿ ಹಚ್ಚಿ ಬಂದಿದ್ದೇನೆ’ (5.60) ಎಂಬ ವಾಲ್ಮೀಕಿಯ ರೂಪಕದ ಮಾತನ್ನು ವಾಚ್ಯಾರ್ಥದ ನೆಲೆಗಿಳಿಸಿದರು. ಹೀಗೆಲ್ಲ ವರ್ಣಿಸುವ ಕವಿಗಳು ಒಂದು ಅಂಶವನ್ನು ಮರೆಯುತ್ತಾರೆ. ಹನುಮಂತ ತುಂಬ ಸೂಕ್ಷ್ಮವಾದ, ಗೋಪ್ಯವಾದ ಉದ್ದೇಶದೊಂದಿಗೆ ಲಂಕೆಗೆ ಹೋಗಿದ್ದ. ಇಂಥವನು ಅಲ್ಲಿ ಹೋಗಿ ಹೀಗೆಲ್ಲ ದಾಂದಲೆ ಮಾಡಿದ್ದರೆ, ಹೋದ ಉದ್ದೇಶವೇ ಹಾಳಾಗುತ್ತಿತ್ತು.

ವಾಲ್ಮೀಕಿ ರಾಮಾಯಣದಲ್ಲಿ ಸ್ವತಃ ಹನುಮಂತನೇ ಹೀಗೆ ಹೇಳಿಕೊಂಡಿದ್ದಾನೆ:‘ಇಲ್ಲಿನ ರಾಕ್ಷಸರು ಅದೆಷ್ಟು ಜಾಗರೂಕತೆಯಿಂದ ಕಾವಲು ಕಾಯುತ್ತಾರೆಂದರೆ, ಅವರ ಕಣ್ತಪ್ಪಿಸಿ ನನ್ನ ಉದ್ದೇಶ ನೆರವೇರಿಸಿಕೊಳ್ಳುವುದು ಸುಲಭವಲ್ಲ. ನಾನು ಅವರಿಗಿಂತಲೂ ಎಚ್ಚರದಿಂದ ಇರಬೇಕು. ಒಂದೇ ಒಂದು ಅಚಾತುರ್ಯ ಮಾಡಕೂಡದು. ಇಲ್ಲಿ ಯಾರೂ ನನ್ನ ಸಹಾಯಕ್ಕೆ ಬರುವುದಿಲ್ಲ. ಯಾರು ಬೇಕಾದರೂ ಸುಲಭವಾಗಿ ನನ್ನನ್ನು ಪತ್ತೆ ಮಾಡಬಹುದು, ಬಂಧಿಸ ಬಹುದು. ಪತ್ತೇದಾರನೆಂದು ಅನುಮಾನಿಸಿ ನನ್ನನ್ನು ಕೊಂದು ಹಾಕಲೂಬಹುದು. ನಾನು ಇಲ್ಲಿಯ ತನಕ ಬಂದಿದ್ದೇನೆ ಎಂದು ಇವರಿಗೇನಾದರೂ ಗೊತ್ತಾಗಿಬಿಟ್ಟರೆ, ನನ್ನ ಸ್ವಾಮಿಯ ಕೆಲಸ ಹದಗೆಡುತ್ತದೆ. ಅವನ ನಂಬಿಕೆ ಉಳಿಸಿಕೊಳ್ಳದೇ ಹೋದರೆ ನನಗೆ ಕ್ಷಮಾಪಣೆ ಇಲ್ಲ. ಆಜ್ಞೆಯನ್ನು ಶಿರಸಾವಹಿಸದೆ ಎಡವಟ್ಟು ಮಾಡಿ ಕೊಳ್ಳುವ ರಾಯಭಾರಿ ಸ್ವಾಮಿದ್ರೋಹಿಯಾಗುತ್ತಾನೆ’ (ವಾಲ್ಮೀಕಿ ರಾಮಾಯಣ 5.2).

ಹನುಮಂತನ ಈ ಜಾಗರೂಕತೆಯ ಮಾತುಗಳೆಲ್ಲಿ, ಆನಂತರದ ಕವಿಗಳು ಸೇರಿಸಿರುವ ಅರ್ಥಹೀನ ಕಪಿಚೇಷ್ಟೆಗಳ ವರ್ಣನೆಯೆಲ್ಲಿ! ಎರಡಕ್ಕೂ ಹೊಂದಾಣಿಕೆಯೇ ಕಾಣಿಸುವುದಿಲ್ಲ. ಕುವೆಂಪು ರಾಮಾಯಣದಲ್ಲೂ ಲಂಕಾ ದಹನ ಪ್ರಸಂಗ ಇಲ್ಲದಿರುವುದನ್ನು ನಾವು ಈ ಹಿನ್ನೆಲೆಯಲ್ಲಿ ಗಮನಿಸಬೇಕು.

ಹನುಮಂತನಿಗೆ ಅಗಾಧವಾದ ಆಧ್ಯಾತ್ಮಿಕ ಶಕ್ತಿ ಇತ್ತು ಎಂಬ ಮಾತನ್ನು ನಾವು ಅಲ್ಲಗಳೆಯಬೇಕಿಲ್ಲ. ಆದರೆ ಆತ ತನ್ನ ಅಲೌಕಿಕ, ಅತಿಮಾನುಷ ಶಕ್ತಿಗಳಿಗಿಂತ ಲೌಕಿಕ ಜಾಣ್ಮೆಯ, ಸೇವೆಯ ಮತ್ತು ಸ್ವಾಮಿನಿಷ್ಠೆಯ ಕಾರಣಕ್ಕೆ ನಮಗೆ ಮುಖ್ಯನಾಗುತ್ತಾನೆ. ಹನುಮಂತನ ಈ ಮೌಲ್ಯಗಳು ನಮಗೆ ರಕ್ತಗತವಾದ ಮೇಲಷ್ಟೇ ಅವನ ಆಧ್ಯಾತ್ಮಿಕ ಚೈತನ್ಯದತ್ತ ಮುಖ ಮಾಡಲು ನಮಗೆ ಸಾಧ್ಯವಾಗುತ್ತದೆ.

ಪ್ರತಿಕ್ರಿಯಿಸಿ (+)