ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಬದುಕಿಗೆ ಬಾಪೂ ಸೂತ್ರ

ಜನಕಲ್ಯಾಣಕ್ಕಾಗಿ ಗಾಂಧೀಜಿ ಪ್ರತಿಪಾದಿಸಿದ್ದ ದೂರದೃಷ್ಟಿಯ ನಾನಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ವ್ಯವಧಾನ ಯಾರಿಗಿದೆ?
Last Updated 1 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

‘ನಾವು ವಾಸಿಸುತ್ತಿರುವ ಈ ಪುಟ್ಟ ಭೂಗೋಳ ನಿನ್ನೆ ತಯಾರಾದ ಆಟಿಕೆಯಲ್ಲ, ಅದರ ಅಸ್ತಿತ್ವ ಮತ್ತು ವಿಕಾಸದ ಹಿಂದೆ ಶತಮಾನಗಳ ಕಥೆಯೇ ಇದೆ. ಅದನ್ನುಳಿಸಿ ಮುಂದಿನ ಪೀಳಿಗೆಗೆ ನೀಡುವುದು ನಮ್ಮೆಲ್ಲರ ಹೊಣೆ’ ಎಂದು ಗಾಂಧೀಜಿ ಸೌಮ್ಯವಾಗಿಯೇ ಹೇಳಿದ್ದರು. ಅಂದಿನ ಜಗತ್ತಿನ ಓಟವನ್ನು ಗಮನಿಸಿದ್ದ ಗಾಂಧೀಜಿ, ಮನುಷ್ಯನ ಬದಲಾದ ಜೀವನಕ್ರಮ ಮತ್ತು ದುರಾಸೆಗಳಿಂದಾಗಿ ಭೂಮಿಗೆ ಒದಗಬಹುದಾದ ಅಪಾಯವನ್ನು ಗ್ರಹಿಸಿದ್ದರು. ಹೆಚ್ಚೂ ಕಡಿಮೆ ಏಷ್ಯಾದ ಎಲ್ಲ ಜನರ ನೈಜ ಪ್ರತಿನಿಧಿಯಂತಿದ್ದ ಅವರು, ಪಶ್ಚಿಮ ದೇಶಗಳ ಜೀವನಶೈಲಿ ತಮ್ಮವರಿಗೆ ಎಂದೂ ತಕ್ಕುದಲ್ಲ; ಅದರಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು ಎಂದಿದ್ದರು.

ಹಾಗೆ ನೋಡಿದರೆ ಗಾಂಧೀಜಿಯ ಜೀವಿತಕಾಲದಲ್ಲಿ ಜಾಗತೀಕರಣ, ಉದಾರೀಕರಣ, ಭೂಮಿಯ ತಾಪಮಾನ ಏರಿಕೆ ಮತ್ತು ವಾಯುಗುಣ ಬದಲಾವಣೆಯಂತಹ ಪದಗಳು ಚಾಲ್ತಿಯಲ್ಲಿ ಇರಲೇ ಇಲ್ಲ. ಆದರೂ ವಿಶ್ವದ ಪ್ರತಿಯೊಂದು ಬಡರಾಷ್ಟ್ರವೂ ಆಗಲೇ ಅಭಿವೃದ್ಧಿ ಹೊಂದುತ್ತಿದ್ದ ಅಮೆರಿಕ, ಯುರೋಪಿನ ಹಲವು ದೇಶಗಳನ್ನು ಅನುಕರಿಸಲು ಪ್ರಯತ್ನಿಸು
ತ್ತಿದ್ದುದನ್ನು ಕಂಡ ಗಾಂಧೀಜಿ ಹೌಹಾರಿದ್ದರು. ತೀವ್ರ ಔದ್ಯೋಗೀಕರಣವು ಅಸಂಖ್ಯ ಸೋಮಾರಿಗಳನ್ನು ಸೃಷ್ಟಿಸುತ್ತದೆ ಎಂದಿದ್ದ ಅವರು, ಇಲ್ಲಿ ಉತ್ಪಾದಿಸಿದ್ದನ್ನು ಬೇರೆಡೆ ಮಾರಿ ಹಣ ಗಳಿಸುವುದನ್ನು ವಿರೋಧಿಸಿದ್ದರು. ಇಲ್ಲಿ ಬೆಳೆದದ್ದನ್ನು ಇಲ್ಲಿಯೇ ತಿನ್ನುವಂತಾದರೆ ಅದು ನಿಜವಾದ ಅಭಿವೃದ್ಧಿ ಎನ್ನುತ್ತಿದ್ದರು.

ಎಲ್ಲ ರಾಜಕೀಯ ನಿರ್ಧಾರಗಳು, ಯೋಜನೆಗಳು ಶ್ರೀಸಾಮಾನ್ಯನ ಕುರಿತಾಗಿ ಇರಬೇಕೇ ಹೊರತು ಶ್ರೀಮಂತರ ಬಗೆಗೆ ಅಲ್ಲ ಎಂದಿದ್ದ ಗಾಂಧೀಜಿ ‘ಅಹಿಂಸೆ’ ಬರೀ ಹೊಡೆದಾಟಕ್ಕೆ ಸಂಬಂಧಿಸಿದ್ದಲ್ಲ, ದಿನನಿತ್ಯದ ಅಗತ್ಯಗಳಿಗೆ ಜನರ ನಡುವೆ ಏರ್ಪಡುವ ಅಸಹಜ ಪೈಪೋಟಿಯೂ ಹಿಂಸೆ ಎಂದಿದ್ದರು. ಆಹಾರ, ನೀರು, ವಸ್ತ್ರ ಮತ್ತು ವಾಸಸ್ಥಳಗಳಿಗಾಗಿ ಒಂದು ದೇಶದ ಜನ ತಮ್ಮಲ್ಲೇ ಸ್ಪರ್ಧೆಗಿಳಿಯುವುದು ಮನುಕುಲದ ಮಹಾದುರಂತ ಎಂದು ನಂಬಿದ್ದರು.

ಐಷಾರಾಮಿ ಜೀವನಶೈಲಿಯಲ್ಲಿ ಹಾಸುಹೊಕ್ಕಾಗಿರುವ ಕಾರು, ರೆಫ್ರಿಜಿರೇಟರ್, ಹವಾನಿಯಂತ್ರಕಗಳಿಂದ ಹೊಮ್ಮುವ ಅಪಾಯಕಾರಿ ಅನಿಲಗಳು ಭೂಮಿಯ ತಾಪಮಾನವನ್ನು ಹೆಚ್ಚಿಸಿವೆ. ಕೊಳ್ಳುಬಾಕ ಸಂಸ್ಕೃತಿಯನ್ನು ಪೋಷಿಸುವ ಹಿತಾಸಕ್ತಿಗಳು ಪೆಟ್ರೋಲ್, ಡೀಸೆಲ್‌ ಬಳಕೆಯ ಬದಲಿಗೆ ಜೈವಿಕ ಇಂಧನವಾದ ಇಥೆನಾಲ್‍ ಅನ್ನು ಬಳಸಿ ವಾತಾವರಣದ ಬಿಸಿಯನ್ನು ತಡೆಯಬಹುದು ಎನ್ನುವ ಪರಿಹಾರೋಪಾಯವನ್ನು ಮುಂದಿಡುತ್ತವೆ. ಆದರೆ ಕೋಟ್ಯಂತರ ಕಾರುಗಳಿಗೆ ಬೇಕಾಗುವ ಜೈವಿಕ ಇಂಧನ ಹೊಂದಿಸಲು ಮುಸುಕಿನ ಜೋಳ, ಕಬ್ಬು, ಸೋಯಾಬೀನ್‌ಗಳನ್ನು ಅಪಾರ ಪ್ರಮಾಣದಲ್ಲಿ ಬೆಳೆಯಬೇಕಾಗುತ್ತದೆ. ವಾಣಿಜ್ಯ ಬೆಳೆಗೆ ಪೇಟೆಯ ಮೌಲ್ಯ ಜಾಸ್ತಿ ಎಂಬ ಕಾರಣಕ್ಕೆ ಅನೇಕರು ಇಂಥ ಬೆಳೆಗಳನ್ನೇ ಬೆಳೆಯಲು ಪ್ರಾರಂಭಿಸಿದರೆ ಜನಸಾಮಾನ್ಯರು ಬಳಸುವ ಇತರ ಆಹಾರ ಧಾನ್ಯಗಳನ್ನು ಬೆಳೆಯುವವರಾರು?

ಗಾಂಧಿವಾದ ಈ ಬದಲೀ ಇಂಧನದ ಉತ್ಪಾದನೆಯನ್ನು ಒಪ್ಪುವುದೇ ಇಲ್ಲ. ಬದಲಿಗೆ ಕಾರಿನ ಬಳಕೆಯೇ ಕಡಿಮೆಯಾದರೆ ವಾತಾವರಣದ ಮಾಲಿನ್ಯ ಕಡಿಮೆಯಾಗುತ್ತದೆ. ಯುರೋಪಿನ ಕೆಲ ದೇಶಗಳು, ಚೀನಾ ಮತ್ತು ಜಪಾನ್‍ನಲ್ಲಿ ಜನ ಮತ್ತು ಜನನಾಯಕರು ಕಾರಿನ ಬಳಕೆ ಕಡಿಮೆ ಮಾಡಿ ‘ವಾತಾವರಣಸ್ನೇಹಿ’ ಸೈಕಲ್ ಬಳಸಲು ಪ್ರಾರಂಭಿಸಿ ದಶಕಗಳೇ ಕಳೆದಿವೆ. ನಮ್ಮಲ್ಲಿ ಅಂಥದ್ದೊಂದು ಜಾಗೃತಿ ಇನ್ನೂ ಮೂಡಿಲ್ಲ.

ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ ಎಂದು ನಂಬಿದ್ದ ಗಾಂಧೀಜಿ, ಸಾವಯವ ಗೊಬ್ಬರದ ಬಳಕೆಯನ್ನು ಪ್ರತಿಪಾದಿಸುತ್ತಿದ್ದರು. ಹಸಿರು ಕ್ರಾಂತಿಯ ಹೆಸರಿನಲ್ಲಿ ರಾಸಾಯನಿಕ ಗೊಬ್ಬರ, ಆಧುನಿಕ ಕೃಷಿ ಪದ್ಧತಿಗಳಿಂದ ಅಪಾರ ಪ್ರಮಾಣದ ಆಹಾರ ಉತ್ಪಾದನೆ ಆದದ್ದು ನಿಜ. ಆದರೆ ಭಾರತದಲ್ಲೀಗ ಆಹಾರ ಕೊರತೆ ಉಂಟಾಗಿದೆ. ಆರ್ಥಿಕ ಮತ್ತು ಕೃಷಿ ಕ್ಷೇತ್ರದ ಪ್ರಗತಿಗಳೆರಡೂ ಮಂಕಾಗಿವೆ. ಮಣ್ಣಿನ ಸತ್ವ ಕಡಿಮೆಯಾಗಿ, ಬಯಸಿದಷ್ಟು ಬೆಳೆ ಕೈಗೆ ಬರದೆ, ಮಾಡಿದ ಸಾಲ ತೀರಿಸಲಾಗದೆ, ವ್ಯವಸಾಯವನ್ನೇ ತೊರೆದು ನಗರದ ಕೊಳೆಗೇರಿಗಳನ್ನು ಸೇರುವ ರೈತರು, ಅಲ್ಲಿನ ಮೂಲ ಸೌಲಭ್ಯಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಸುತ್ತಾರೆ. ಅಪಾರ ಸಂಖ್ಯೆಯ ಜನ ನಗರಗಳಿಗೆ ವಲಸೆ ಬರುವುದರಿಂದ ಹಾಗೂ ಸೌಲಭ್ಯಗಳಿಗಾಗಿ ಪೈಪೋಟಿ ನಡೆಸುವುದರಿಂದ ಸಾಮಾಜಿಕ ಹಿಂಸೆ ತಲೆದೋರುತ್ತದೆ. ಇದನ್ನು ಮೊದಲೇ ಊಹಿಸಿದ್ದ ಬಾಪೂ ನಗರೀಕರಣ ಬೇಡ ಎಂದಿದ್ದರು.

ಗಾಂಧೀಜಿ ಬೃಹತ್ ಯೋಜನೆಗಳನ್ನು ಅಷ್ಟಾಗಿ ಬೆಂಬಲಿಸುತ್ತಿರಲಿಲ್ಲ. ಅಂತಹ ಯೋಜನೆಗಳಿಂದ ಬೃಹತ್ ಪ್ರಮಾಣದ ಕಾಡು, ನೀರಿನ ಮೂಲಗಳು ನಾಶವಾಗುವುದಲ್ಲದೆ ಅಪಾರ ಸಂಖ್ಯೆಯ ಜನಪಲ್ಲಟ ನಡೆಯುತ್ತದೆ. ಇದರಿಂದ ಹೊಸ ಪರಿಸರಗಳ ಮೇಲೆ ನಿರಾಶ್ರಿತ ಸಮುದಾಯದ ಒತ್ತಡ ನಿರ್ಮಾಣವಾಗುತ್ತದೆ. ಇದರ ಬದಲು ಸಣ್ಣ ಪ್ರಮಾಣದ ಯೋಜನೆಗಳು ಸ್ಥಳೀಯ ಮಟ್ಟದಲ್ಲಿ ರೂಪುಗೊಂಡರೆ ಜನರ ವಲಸೆ ತನ್ನಿಂತಾನೇ ನಿಲ್ಲುತ್ತದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗುತ್ತವೆ. ಇದು ಸಕಾಲಿಕ ಮತ್ತು ಅನಿವಾರ್ಯ. ಆದರೆ ಅನುಷ್ಠಾನಕ್ಕೆ ತರುವ ವ್ಯವಧಾನ ಯಾರಿಗಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT