ಬುಧವಾರ, ನವೆಂಬರ್ 20, 2019
27 °C
ಪೊಲೀಸರು ಮತ್ತು ವಕೀಲರು ಪರಸ್ಪರ ಎದುರಾಳಿಗಳು ಎಂಬಂಥ ಸ್ಥಿತಿ ಸೃಷ್ಟಿಯಾಗಿರುವುದೇಕೆ?

ವೃತ್ತಿಘನತೆಗೆ ಕುಂದು ಬೇಡ

Published:
Updated:
Prajavani

ನ್ಯಾಯದೇವತೆ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾಳೆ. ಆದರೆ ಅವಳು ಪೊಲೀಸರು ಮತ್ತು ವಕೀಲರನ್ನು ತನ್ನ ಎರಡು ಕಣ್ಣುಗಳು ಎಂದು ಭಾವಿಸಿದ್ದಾಳೆ. ಈ ಕಣ್ಣುಗಳೇ ಕುರುಡಾದರೆ ಅವಳು ನ್ಯಾಯರಥವನ್ನು ಯಾರ ಮೂಲಕ ಎಳೆಯಬೇಕು? ಮೂಕಪ್ರೇಕ್ಷಕಳಾಗಿ ಇಂತಹ ಸ್ಥಿತಿಯನ್ನು ನೋಡಬೇಕಾದ ಸಂದಿಗ್ಧ ಹಲವಾರು ಬಾರಿ ಅವಳಿಗೆ ಆಗಿದೆ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ನ್ಯಾಯದೇವತೆ ನಾವಿಲ್ಲದೆ ಏನೂ ಮಾಡಲಾರಳು ಎಂದುಕೊಂಡರೆ ಅದು ನಮ್ಮ ಭ್ರಮೆ ಮತ್ತು ದುರಹಂಕಾರವಾಗುತ್ತದೆ. ಅವಳ ಕೈಯಲ್ಲಿ ಹರಿತವಾದ ಖಡ್ಗವಿದೆ ಎಂಬುದನ್ನು ಯಾರೂ ಮರೆಯಬಾರದು.

ಪ್ರತಿಷ್ಠೆ, ಪ್ರಲೋಭನೆ ಮತ್ತು ಅಧಿಕಾರ ಮೇಲಾಟದ ಪ್ರತೀಕವಾಗಿ ಪೊಲೀಸರು ಮತ್ತು ವಕೀಲರ ನಡುವೆ ಹಲವಾರು ಬಾರಿ ಸಂಘರ್ಷಗಳು ನಡೆಯುತ್ತಿವೆ. ಎಲ್ಲ ಕ್ಷೇತ್ರಗಳಲ್ಲೂ ಸಂಘರ್ಷ, ವೃತ್ತಿ ಮತ್ಸರ ಇದ್ದದ್ದೇ. ಆ ಎಲ್ಲ ನ್ಯೂನತೆಗಳಿಗೆ ಪರಿಹಾರ ಸಿಗುವುದು ನ್ಯಾಯಾಂಗದಲ್ಲಿ ಮಾತ್ರ. ಅಂತಲ್ಲೇ ಎಡವಟ್ಟುಗಳಾದರೆ ಎಲ್ಲಿಗೆ ಹೋಗುವುದು? ಜನ ತಮಗೆ ಅನ್ಯಾಯವಾದಾಗ ‘ಏ... ನಿನ್ನ ಕೋರ್ಟ್‌ನಲ್ಲಿ ನೋಡ್ಕೊತೀನಿ’ ಎಂದು ಧೈರ್ಯದಿಂದ ಹೇಳುತ್ತಾರೆ. ಅಂತಹ ವಿಶ್ವಾಸವನ್ನು ನಮ್ಮ ನ್ಯಾಯವ್ಯವಸ್ಥೆ ಉಳಿಸಿಕೊಂಡು ಬಂದಿದೆ. ಪೊಲೀಸರು ಮತ್ತು ವಕೀಲರ ನಡುವೆ ನಡೆಯುತ್ತಿರುವ ಸಂಘರ್ಷಗಳಿಂದಾಗಿ ಆ ಭರವಸೆ ಮತ್ತು ನಂಬಿಕೆಗೆ ಧಕ್ಕೆಯಾಗುತ್ತಿದೆ. ಕಾನೂನು ರಕ್ಷಣೆಯ ಹೊಣೆ ಹೊತ್ತವರು ಇತರರು ತಪ್ಪು ಮಾಡಿದಾಗ ಶಿಕ್ಷೆಗೆ ಒಳಪಡಿಸುವ ಪ್ರಕ್ರಿಯೆಯನ್ನು ನೆರವೇರಿಸಬೇಕಾಗುತ್ತದೆ. ಆದರೆ ಕಾನೂನನ್ನು ಕೈಗೆ ತೆಗೆದುಕೊಂಡು ಹೊಡೆದಾಡಿದರೆ ಅದು ಅಪರಾಧ ವಾಗುತ್ತದೆ. ಪೊಲೀಸರಾಗಲೀ ವಕೀಲರಾಗಲೀ ಕಾನೂನು ಮೀರಿ ನಡೆಯುವುದು, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನ್ಯಾಯ ಸಿದ್ಧಾಂತ ವನ್ನು ಹಾಳುಗೆಡವಿದಂತೆ. ಸಮಾಜದಲ್ಲಿ ಶಾಂತಿ– ಸುವ್ಯವಸ್ಥೆ ಕಾಪಾಡುವ, ಸಾರ್ವಜನಿಕರ ಆಸ್ತಿ, ಪ್ರಾಣ, ಮಾನ ಸಂರಕ್ಷಣೆ ಮಾಡುವ ಮಹತ್ತರ ಜವಾಬ್ದಾರಿ ಪೊಲೀಸರದು.

‘ಅಪರಾಧ ಕೃತ್ಯಗಳನ್ನು ನಿಗ್ರಹಿಸುವಲ್ಲಿ ನಾವು ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು ಕೆಲಸ ಮಾಡಿದರೂ ಅದನ್ನು ಯಾರೂ ಗುರುತಿಸುವುದಿಲ್ಲ. ಬದಲಿಗೆ, ಹತ್ತಾರು ಅಡೆತಡೆಗಳು. ಪ್ರಭಾವ, ಒತ್ತಡ, ಬೆದರಿಕೆ, ಪ್ರಲೋಭನೆಗಳನ್ನು ಒಡ್ಡಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳದಂತೆ ಮಾಡಲಾಗುತ್ತಿದೆ. ಸಂಚಾರ ನಿಯಮ ಉಲ್ಲಂಘನೆ, ಹೆಲ್ಮೆಟ್ ಧರಿಸದೆ, ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ಮುಂತಾದವುಗಳಿಗಾಗಿ ವಕೀಲರಿಗೆ ದಂಡದ ನೋಟಿಸ್ ನೀಡಲು ಮುಂದಾದಾಗ, ಪ್ರಕರಣ ದಾಖಲಿಸಲು ಹೋದಾಗ ಅವರು ಜಗಳಕ್ಕೆ ಇಳಿಯುತ್ತಾರೆ’ ಎಂದು ಪೊಲೀಸರು ಆರೋಪಿಸುತ್ತಾರೆ. ಪಾರ್ಕಿಂಗ್ ವಿಷಯಕ್ಕಾಗಿ ದೆಹಲಿಯಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷ ಉಲ್ಲೇಖನೀಯ.

‘ಒಬ್ಬ ವ್ಯಕ್ತಿಯನ್ನು ಬಂಧಿಸುವಾಗ ಆತನಿಗೆ, ಆತನ ಸಂಬಂಧಿಕರಿಗೆ ಬಂಧನದ ಕಾರಣಗಳನ್ನು ತಿಳಿಸಬೇಕು ಮತ್ತು ವಕೀಲರ ಮೂಲಕ ಕಾನೂನಿನ ನೆರವು ಪಡೆಯಲು ಅವಕಾಶ ಮಾಡಿಕೊಡಬೇಕು. ಆದರೆ ಪೊಲೀಸರು ಯಾವುದೇ ಮಾಹಿತಿ ನೀಡದೆ ದಸ್ತಗಿರಿ ಮಾಡುತ್ತಾರೆ. ವಕೀಲರು ಪೊಲೀಸ್ ಠಾಣೆಗೆ ಹೋದಾಗಲೂ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಅವರೊಂದಿಗೆ ಸೌಜನ್ಯದಿಂದ, ಗೌರವದಿಂದ ನಡೆದುಕೊಳ್ಳುವುದಿಲ್ಲ. ತಮಗೆ ‘ಅನುಕೂಲ’ವಾದರೆ ಸುಳ್ಳು ದೂರು ಬಂದರೂ ಗಂಭೀರವಾದ ಸೆಕ್ಷನ್‍ಗಳನ್ನು ಹಾಕಿ ಪ್ರಕರಣ ದಾಖಲಿಸುತ್ತಾರೆ. ತಮಗೆ ‘ಅನುಕೂಲ’ ಆಗದಿದ್ದರೆ ಆರೋಪಿ ಖುಲಾಸೆಯಾಗುವಂತೆ ಸಾದಾ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಸಿವಿಲ್ ಸ್ವರೂಪದ ವ್ಯಾಜ್ಯಗಳಲ್ಲಿ ಪೊಲೀಸರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಆದರೂ ಇಂತಹ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತಾರೆ. ಕೆಲವು ಪೊಲೀಸರು ಆರೋಪಿಗಳಿಗೆ ಇಂತಹುದೇ ವಕೀಲರ ಹತ್ತಿರ ಹೋಗುವಂತೆ ಹೇಳುತ್ತಾರೆ. ಕಮಿಷನ್ ಆಧಾರದ ಮೇಲೆ ಕೇಸುಗಳನ್ನು ವಕೀಲರಿಗೆ ಕೊಡುತ್ತಾರೆ’ ಎಂದು ವಕೀಲರು ಆರೋಪಿಸುತ್ತಾರೆ.

ಸಾಮಾನ್ಯವಾಗಿ ವಕೀಲರು ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿ ಪರ ಡಿಫೆನ್ಸ್ ಲಾಯರ್ ಆಗಿ ಪ್ರಕರಣ ನಡೆಸುತ್ತಾರೆ. ದೂರುದಾರರು ಮತ್ತು ತನಿಖಾಧಿಕಾರಿಗಳ ಪರವಾಗಿ ಸರ್ಕಾರಿ ಅಭಿಯೋಜಕರು ಕೆಲಸ ಮಾಡುತ್ತಾರೆ. ಅಪರಾಧಿಗೆ ಶಿಕ್ಷೆ ಕೊಡಿಸುವ ಪ್ರಯತ್ನವನ್ನು ತನಿಖಾಧಿಕಾರಿ, ಅಂದರೆ ಪೊಲೀಸರು ಮಾಡಿದರೆ, ಆರೋಪಿಯನ್ನು ಅಪರಾಧದಿಂದ ಬಿಡುಗಡೆ ಮಾಡಿಸುವ ಕೆಲಸವನ್ನು ವಕೀಲರು ಮಾಡುತ್ತಾರೆ. ಇದು ಕಾನೂನುಬದ್ಧವಾಗಿ ನಡೆಯುವ ಹೋರಾಟ ಮತ್ತು ಸಂಘರ್ಷ. ಈ ಸಂಘರ್ಷದಲ್ಲಿ ನಾನು ಶ್ರೇಷ್ಠ, ನೀನು ಕನಿಷ್ಠ ಎಂಬ ಅಧಿಕಾರದ ಮೇಲಾಟ ನಡೆಯುತ್ತದೆ. ಪೊಲೀಸರು ಮತ್ತು ವಕೀಲರು ಎದುರಾಳಿಗಳು ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿಬಿಟ್ಟಿದೆ. ಆದರೆ ನ್ಯಾಯದಾನ ಪ್ರಕ್ರಿಯೆಯಲ್ಲಿ ವಕೀಲರು ತಮ್ಮ ಕಕ್ಷಿದಾರರಿಗೆ ನ್ಯಾಯ ಕೊಡಿಸುವ, ಆರೋಪ, ದಂಡ, ಶಿಕ್ಷೆಯಿಂದ ಮುಕ್ತಿ ಕೊಡಿಸುವ ಕೆಲಸ ಮಾಡುತ್ತಾರೆ ಅಷ್ಟೆ. ಇಬ್ಬರ ಕೆಲ ಸವೂ ತಮ್ಮ ವಾದದ ಮೂಲಕ ಕಾನೂನು ಮತ್ತು ನ್ಯಾಯವನ್ನು ಸಂರಕ್ಷಿಸುವುದೇ ಆಗಿದೆ. ನ್ಯಾಯ ತೀರ್ಮಾನದಲ್ಲಿ ಇರುವ ವಿಧಿಬದ್ಧ ಅಧಿಕಾರವು ಹಿಂದೆ ಸರಿದು ಶಕ್ತಿಬದ್ಧ ಅಧಿಕಾರವು ಮುಂದೆ ಬರು ತ್ತಿರುವುದು ನ್ಯಾಯಕ್ಕೆ ಬಗೆಯುವ ದ್ರೋಹವಾಗುತ್ತದೆ.

ಪ್ರತಿಕ್ರಿಯಿಸಿ (+)