ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೂಕ್ಷ್ಮ ಕ್ರಿಯೆ ಮತ್ತು ಜನರ ಪಡಿಪಾಟಲು

ಆಳುವವರು ಮತ್ತು ಅಧಿಕಾರಶಾಹಿಯ ವ್ಯಕ್ತಿತ್ವವನ್ನು ಆವರಿಸಿಕೊಳ್ಳುತ್ತಿರುವ ಅಸೂಕ್ಷ್ಮತೆಯು ಯಾವುದನ್ನೂ ಲೆಕ್ಕಿಸದ ಮಟ್ಟ ತಲುಪಿದೆ
Last Updated 23 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಹಾಸನದಲ್ಲಿ ನಾನು ಕಾರ್ಯನಿರ್ವಹಿಸುವ ಕಾಲೇಜಿನ ಎದುರು ಎರಡೂವರೆ ದಶಕಗಳ ಹಿಂದೆ ನಿರ್ಮಿಸಿದ್ದ ಬಸ್ ತಂಗುದಾಣವಿತ್ತು. ಪ್ರತಿ ದಿನ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಅದರಡಿ ನಿಂತು, ತಾವು ನಿರೀಕ್ಷಿಸುವ ಬಸ್ ಬರುವವರೆಗೂ ಆಶ್ರಯ ಪಡೆಯುತ್ತಿದ್ದರು. ನಗರದ ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳು ಈ ತಂಗುದಾಣವಿರುವ ರಸ್ತೆಯ ಆಸುಪಾಸಿನಲ್ಲಿರುವ ಶಾಲಾ-ಕಾಲೇಜುಗಳಿಗೆ ಪ್ರತಿನಿತ್ಯ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಂಚರಿಸುವುದರಿಂದ, ಮಕ್ಕಳ ಪಾಲಿಗಂತೂ ತಂಗುದಾಣ ಅತ್ಯಗತ್ಯವಾಗಿತ್ತು.

ರಸ್ತೆ ವಿಸ್ತರಣೆ ನೆಪದಲ್ಲಿ ಆರು ತಿಂಗಳ ಹಿಂದೆ ತಂಗುದಾಣವನ್ನು ನೆಲಸಮಗೊಳಿಸ ಲಾಯಿತು. ಇಂದಿಗೂ ರಸ್ತೆ ವಿಸ್ತರಣೆ ಕಾಮಗಾರಿ ಮುಗಿದಿಲ್ಲ. ಅದು ಸದ್ಯಕ್ಕೆ ಮುಗಿಯುವ ಲಕ್ಷಣವೂ ಗೋಚರಿಸುತ್ತಿಲ್ಲ. ಆದರೆ ತಂಗುದಾಣವನ್ನು ನೆಲಸಮಗೊಳಿಸಿದ್ದರಿಂದ ಈಗ ಮಕ್ಕಳು, ಸಾರ್ವಜನಿಕರು ಬಿಸಿಲು ಬೀಳುವ, ಮಳೆ ಬರುವ ವೇಳೆ ಸೂಕ್ತ ಆಶ್ರಯದಾಣವಿಲ್ಲದೆ ಪರದಾಡುವುದು ಮುಂದುವರಿದೇ ಇದೆ.

ರಸ್ತೆ ವಿಸ್ತರಣೆ ಕಾಮಗಾರಿಯ ಅಂತಿಮಘಟ್ಟದಲ್ಲಿ ಈ ತಂಗುದಾಣವನ್ನು ಕೆಡವಿದ್ದರೂ ಸಾಕಿತ್ತು. ಆದರೆ, ದಕ್ಕಬಹುದಾದ ಲಾಭದತ್ತ ಮಾತ್ರ ಗಮನಹರಿಸುವ ಗುತ್ತಿಗೆದಾರರು, ಎಂಜಿನಿಯರ್‌ಗಳು ಮತ್ತು ಅವರನ್ನು ನಿಯಂತ್ರಿಸುವ ಜನಪ್ರತಿನಿಧಿಗಳಿಂದ ಈ ಪರಿಯ ಸೂಕ್ಷ್ಮ ದೃಷ್ಟಿಯನ್ನು ನಿರೀಕ್ಷಿಸಲಾದೀತೆ? ಮಣಭಾರದ ಶಾಲಾ ಬ್ಯಾಗುಗಳನ್ನು ಹೆಗಲಿಗೇರಿಸಿಕೊಂಡು, ಬಸ್ಸನ್ನು ಎದುರು ನೋಡುತ್ತ ರಸ್ತೆ ಬದಿಯಲ್ಲೇ ಕುಸಿದು ಕೂರುವ ಮಕ್ಕಳ ಅಳಲು, ಲಾಭದ ನಿರೀಕ್ಷೆಯಲ್ಲಿರುವ ಕಣ್ಣುಗಳಿಗೆ ಬೀಳುವುದೇ?

ಹೀಗೆ ತನ್ನ ಊರಿನ ಬಸ್‍ಗಾಗಿ ಕಾಯುತ್ತ ನಿಂತಿದ್ದ ಹೈಸ್ಕೂಲು ವಿದ್ಯಾರ್ಥಿನಿಯೊಬ್ಬಳು ಸ್ನೇಹಿತೆಯರೊಂದಿಗೆ ಹರಟುವಾಗ ಆಡಿದ ಮಾತು, ಇಂತಹ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳುವ ಸುಶಿಕ್ಷಿತ ಎಂಜಿನಿಯರ್‌ಗಳನ್ನು ಎಂದಾದರೂ ತಟ್ಟುವುದೇ? ‘ಸಿಟಿಯಲ್ಲಿದ್ದುಕೊಂಡು ಹಳ್ಳಿ ಜೀವನ ಹಾಗೆ ಹೀಗೆ ಅಂತ ಹೊಗಳುವವರಿಗೆ ನಮ್ಮ ಕಷ್ಟ ಎಲ್ಲಿ ಅರ್ಥ ಆಗುತ್ತೆ? ನಾವೂ ಸಿಟಿಯಲ್ಲಿ ಇದ್ದಿದ್ರೆ ಹೀಗೆ ಗಂಟೆಗಟ್ಟಲೆ ಬಸ್‍ಗೆ ಕಾಯೋ ಕರ್ಮ ಬರ್ತಿತ್ತಾ? ಆರೂವರೆಗೆ ಬರಬೇಕಾದ ಕಡೇ ಬಸ್ಸೂ ಮಿಸ್ ಆದ್ರೆ ಏನ್ ಮಾಡೋದು?’ ಅವಳ ಈ ಅಸಮಾಧಾನಕ್ಕೆ, ಅಭಿವೃದ್ಧಿಯ ಹೆಗಲೇರಿರುವ ಅಸೂಕ್ಷ್ಮತೆಯೂ ತನ್ನದೇ ಆದ ಕೊಡುಗೆ ನೀಡುತ್ತಿದೆ.

ಅಗತ್ಯವಿರದಿದ್ದರೂ ಮೊದಲೇ ತಂಗುದಾಣವನ್ನು ನೆಲಸಮಗೊಳಿಸಲು ಸೂಚಿಸಿದ, ರಸ್ತೆ ವಿಸ್ತರಣೆ ಕಾಮಗಾರಿಯ ಹೊಣೆ ಹೊತ್ತ ಎಂಜಿನಿಯರ್‌ಗೆ ತಂಗು ದಾಣದ ತಳಪಾಯದಿಂದ ಮೇಲೆದ್ದಿದ್ದ ಕಬ್ಬಿಣದ ಸಲಾಕೆಗಳನ್ನು ತೆರವುಗೊಳಿಸಲು ಅದ್ಯಾಕೋ ಮನಸ್ಸೇ ಆಗಿರಲಿಲ್ಲ. ಪಾದಚಾರಿಗಳು ಕಬ್ಬಿಣದ ಸಲಾಕೆಗಳನ್ನು ಗಮನಿಸದೆ ಎಡವಿ ಬಿದ್ದು ಗಾಯಗೊಳ್ಳುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಕೊನೆಗೆ ತಾವೇ ಮುತುವರ್ಜಿ ವಹಿಸಿ, ಕಬ್ಬಿಣ ಕತ್ತರಿಸುವ ಯಂತ್ರ ತರಿಸಿ ಅವುಗಳನ್ನು ತೆರವುಗೊಳಿಸಿದರು.

ಇದೊಂದು ಸಣ್ಣ ನಿದರ್ಶನವಷ್ಟೆ. ಅಡ್ಡಪರಿಣಾಮ ಮತ್ತು ಅಸೂಕ್ಷ್ಮತೆಯಲ್ಲಿ ಇದನ್ನು ಹಲವು ಪಟ್ಟು ಮೀರಿಸುವ ಅಭಿವೃದ್ಧಿ ಕಾಮಗಾರಿಗಳು ಅಡೆತಡೆ ಇಲ್ಲದೆ ಕುಂಟುತ್ತಲೇ ಸಾಗುತ್ತಿವೆ. ಜನರ ಪ್ರತಿರೋಧದ ದನಿ ಇರಲಿ, ಅಳಲು ಆಲಿಸುವ ಸೂಕ್ಷ್ಮತೆಯೂ ಅಭಿವೃದ್ಧಿಯ ಹೆಗಲೇರಿ ಹಣ ಮಾಡಿಕೊಳ್ಳುವ ಜಿದ್ದಿಗೆ ಬಿದ್ದಿರುವ ಜನಪ್ರತಿನಿಧಿಗಳಲ್ಲಿ ಇಲ್ಲವಾಗಿದೆ. ಚುನಾವಣೆ ವೇಳೆ ಹೂಡಿದ ಬಂಡವಾಳ ಮತ್ತು ಮುಂಬರುವ ಚುನಾ ವಣೆಗಳಿಗೆ ಹೂಡಬೇಕಿರುವ ಹಣದ ಕುರಿತೇ ಕಾಳಜಿ ವಹಿಸಬೇಕಿರುವ ಅವರೆದುರಾದರೂ ಇರುವ ಆಯ್ಕೆ ಎಂತಹದ್ದು?

ಚುನಾವಣೆ ಸಂದರ್ಭದಲ್ಲಿ ಅಸೂಕ್ಷ್ಮ ಮತದಾರ ರಾಗಿ ವರ್ತಿಸುವ ನಾವು, ಜನಪ್ರತಿನಿಧಿಗಳಲ್ಲಿ ಸೂಕ್ಷ್ಮತೆ ಅರಸುವುದು ವಿರೋಧಾಭಾಸವೇ ಸರಿ. ಇನ್ನು ಅಭಿ ವೃದ್ಧಿ ಕಾಮಗಾರಿಗಳ ಗುಣಮಟ್ಟ ಕಾಯಬೇಕಾದ ಎಂಜಿನಿಯರ್‌ಗಳಲ್ಲಿನ ಅಸೂಕ್ಷ್ಮತೆಗೆ ಯಾರನ್ನು ಹೊಣೆಯಾಗಿಸುವುದು? ತಮಗೆ ದಕ್ಕಬಹುದಾದ ಹಣವನ್ನು ದಕ್ಕಿಸಿಕೊಂಡೂ ಜನಸಾಮಾನ್ಯರಿಗೆ ಕಡಿಮೆ ತೊಂದರೆಯೊಡ್ಡಿ ಕಾಮಗಾರಿಗಳನ್ನು ಮುಗಿಸಲು ಸಾಧ್ಯವಿದೆ. ಆದರೆ ಆಳುವವರು ಮತ್ತು ಅಧಿಕಾರಶಾಹಿಯ ವ್ಯಕ್ತಿತ್ವವನ್ನು ಆವರಿಸಿಕೊಳ್ಳುತ್ತಿರುವ ಅಸೂಕ್ಷ್ಮತೆಯು ಯಾವುದನ್ನೂ ಲೆಕ್ಕಿಸದ ಮಟ್ಟ ತಲುಪುತ್ತಿದೆ. ನಾಗರಿಕರಾದ ನಾವು ಇದನ್ನೆಲ್ಲ ಅನು ಭವಿಸುವುದು ಬಿಟ್ಟು, ನಮ್ಮೆದುರು ಬೇರೆ ಆಯ್ಕೆಯೇ ಇಲ್ಲವೇನೊ ಎಂಬ ನಿಲುವಿಗೆ ಜೋತು ಬಿದ್ದವರಂತೆ ವರ್ತಿಸುತ್ತಿದ್ದೇವೆ. ಆಮೆಗತಿಯಲ್ಲಿ ನಡೆಯುವ ರಸ್ತೆ ಕಾಮಗಾರಿಗಳು ಎಬ್ಬಿಸುವ ದೂಳು ನಮ್ಮೆಲ್ಲರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಅರಿವಿದ್ದೂ ನಾವೆಲ್ಲ ಮೂಗಿನೊಂದಿಗೆ ಬಾಯನ್ನೂ ಮುಚ್ಚಿಕೊಂಡಿದ್ದೇವೆ.

ಹಾಸನ ನಗರದ ರಸ್ತೆಗಳೆಲ್ಲ ಗುಂಡಿ ಬಿದ್ದು, ಕಾಮ ಗಾರಿಗಳು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳದೆ ಕುಂಟುತ್ತಾ ಸಾಗಿ ಇಡೀ ನಗರವೇ ದೂಳುಮಯವಾಗಿದ್ದರೂ ಆ ಕುರಿತು ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಯೊಬ್ಬರು, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಟ್ಯಾಕ್ಸಿ ಸ್ಟ್ಯಾಂಡ್‍ನಲ್ಲಿ ಒಂಬತ್ತು ಕಡೆ ತಮ್ಮ ಹೆಸರು ಮತ್ತು ಭಾವಚಿತ್ರ ಹಾಕಿಸಿಕೊಳ್ಳಲು ಮಾತ್ರ ಇನ್ನಿಲ್ಲದ ಉತ್ಸಾಹ ತೋರುತ್ತಿದ್ದಾರೆ. ಅದಕ್ಕಾಗಿ ರಾಜಕೀಯ ಎದುರಾಳಿಗಳೊಂದಿಗೆ ಸಮರವನ್ನೇ ಸಾರಿದ್ದಾರೆ!

ಜನಪ್ರತಿನಿಧಿಗಳ ಆದ್ಯತೆ ಜನಹಿತವಾಗದ ಹೊತ್ತಿ ನಲ್ಲಿ, ಮತದಾರರಾದ ನಮ್ಮ ಆದ್ಯತೆಯೂ ಜನರಿಗೆ ಉತ್ತರದಾಯಿಯಾದ ಪ್ರತಿನಿಧಿಯನ್ನು ಆರಿಸುವುದು ಆಗದೇ ಇರುವಾಗ, ಇವೆಲ್ಲವೂ ಸಹಜವೆಂದೇ ಗೋಚ ರಿಸುವುದರಲ್ಲಿ ಯಾವ ವಿಶೇಷವೂ ಇಲ್ಲ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT