ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಿದ್ಧಿಸಲಿ ಸಲ್ಲುವುದ ಹಂಚುವ ಬುದ್ಧಿ

ಕೆಲವರು ತಮಗೆ ಬೇಡವಾದದ್ದನ್ನು ಹಂಚುವುದರ ಜೊತೆಗೆ ಅದನ್ನೊಂದು ಮಹಾನ್ ದಾನ‌, ಶ್ರೇಷ್ಠತಮ ಗುಣವೆಂದು
Last Updated 14 ಜೂನ್ 2022, 20:30 IST
ಅಕ್ಷರ ಗಾತ್ರ

ಮೊನ್ನೆ ತರಗತಿಯಲ್ಲಿ ಪಾಠ ಹೇಳುತ್ತಿದ್ದಾಗ ಪಾಠದ ನಡುವೆ ಮಕ್ಕಳಿಗೆ ಒಂದು ಪ್ರಶ್ನೆ ಕೇಳಿದೆ: ‘ನೀವು ಪರೀಕ್ಷೆ ಬರೆಯುತ್ತಿದ್ದೀರಿ ಎಂದು ಭಾವಿಸಿಕೊಳ್ಳಿ. ನಿಮ್ಮ ಬಳಿ ಎರಡು ಪೆನ್ನುಗಳಿವೆ. ಒಂದರಲ್ಲಿ ಬರೆಯುತ್ತಿದ್ದೀರಿ, ಇನ್ನೊಂದು ಸುಮ್ಮನೆ ಹಾಗೆ ಜೊತೆಯಲ್ಲಿ ಇಟ್ಟುಕೊಂಡಿದ್ದೀರಿ. ಪಕ್ಕದಲ್ಲಿನ ನಿಮ್ಮ ಸ್ನೇಹಿತನಿಗೆ ಅವನು ಬರೆಯುತ್ತಿದ್ದ ಪೆನ್ನು ಅಚಾನಕ್ಕಾಗಿ ಕೈಕೊಡುತ್ತದೆ. ಅವನ ಬಳಿ ಮತ್ತೊಂದು ಪೆನ್ನಿಲ್ಲ. ಕಂಗಾಲಾಗಿ ಕೂತಿದ್ದಾನೆ. ನಿಮ್ಮ ಕಡೆ ನೋಡುತ್ತಾನೆ. ಅವನಿಗೆ ಕೇಳಲು ಮುಜುಗರ. ಆಗ ನೀವೇನು ಮಾಡುತ್ತೀರಿ?’ ಎಂದು ಕೇಳಿದೆ.

ಎಲ್ಲರೂ ನೀಡಿದ ಉತ್ತರ ಒಂದೇ ಆಗಿತ್ತು. ‘ಸರ್, ನನ್ನ ಬಳಿಯಿರುವ ಇನ್ನೊಂದು ಪೆನ್ನನ್ನು ಅವನಿಗೆ ನೀಡುತ್ತೇನೆ’ ಅಂದರು.‌ ತಾವು ಒಳ್ಳೆಯ ಉತ್ತರ ಕೊಟ್ಟಿದ್ದೇವೆ ಎಂಬ ಸಮಾಧಾನದಲ್ಲಿದ್ದರು.

‘ನೀವ್ಯಾಕೆ ಈಗಾಗಲೇ ಬರೆಯುತ್ತಿರುವ ಪೆನ್ನನ್ನೇ ಗೆಳೆಯನಿಗೆ ನೀಡಿ, ನಿಮ್ಮ ಬಳಿಯಿರುವ ಇನ್ನೊಂದು ಪೆನ್ನಿನಲ್ಲಿ ಬರೆಯಬಾರದು? ನಿಮ್ಮ ಎರಡು ಪೆನ್ನಿನಲ್ಲಿ ಉತ್ತಮವಾದದ್ದರಲ್ಲಿ ಬರೆಯುತ್ತಿದ್ದೀರಿ. ಅದು ಕೈಕೊಟ್ಟರೆ ಮಾತ್ರ ಅನಿವಾರ್ಯಕ್ಕೆ ಅಂತ ಆ ಮತ್ತೊಂದು ಪೆನ್ನಿದೆ. ಪಕ್ಕದವನು ಬೇಕಾದರೆ ಅನಿವಾರ್ಯದ ಪೆನ್ನಿನಲ್ಲಿ ಬರೆದುಕೊಳ್ಳಲಿ ನಾನು ಮಾತ್ರ ಚೆನ್ನಾಗಿರೋ ಪೆನ್ನಿನಲ್ಲಿ ಬರೆಯುವೆ ಅನ್ನುವ ಮನೋಭಾವ ತಾನೇ?’ ಎಂದೆ. ಇಡೀ ತರಗತಿ ಮೌನವಾಗಿತ್ತು. ಮಾನವರು ಕಲಿತಿರುವ ಒಂದು ವಿಚಿತ್ರಗುಣದ ಭಾಗವಾಗಿ ಮಕ್ಕಳು ಉತ್ತರಿಸಿದ್ದರು.

ತನಗೆ ಬೇಡವಾದದ್ದನ್ನು, ಬಳಸಿ ಸಾಕಾಗಿದ್ದನ್ನು, ತನ್ನಲ್ಲಿ ಇನ್ನೂ ಹೆಚ್ಚಾಗಿ ಉಳಿದದ್ದನ್ನು ಹಂಚುವುದು ಮಾನವ ಬೆಳೆಸಿಕೊಂಡಿರುವ ವಿಚಿತ್ರ ಗುಣ. ಜೊತೆಗೆ ಅದನ್ನವನು ಮಹಾನ್ ದಾನ‌ ಎಂದುಕೊಳ್ಳುತ್ತಾನೆ. ಇನ್ನೊಬ್ಬರ ಕಷ್ಟಕ್ಕೆ ನೆರವಾದ ಶ್ರೇಷ್ಠತಮ ಗುಣವೆಂದು ಬಿಂಬಿಸಿಕೊಳ್ಳುತ್ತಾನೆ.

‘ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು/ ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ’ ಎನ್ನುತ್ತದೆ ಬಸವಣ್ಣನವರ ಒಂದು ವಚನ. ಕಾಗೆ ತಾನು ತಿಂದು ಮುಗಿಸಿ ಉಳಿದಿದ್ದರೆ ಮಾತ್ರ ತನ್ನ ಮಿತ್ರರನ್ನು ಕರೆಯುವುದಿಲ್ಲ. ‘ಹಂಚಿಕೊಂಡು ತಿನ್ನುವ ಬುದ್ಧಿ ಬಂದಾಗಲೇ ಮಾನವನ ಕಲ್ಯಾಣ ಸಿದ್ಧಿ’ ಎಂಬ ಶರಣರ ಮಾತು ಎಷ್ಟು ಸೊಗಸಾಗಿದೆ ನೋಡಿ.

ಮನೆಗೆ ಯಾರೋ ಊಟ ಬೇಡಲು ಬಂದರೆ ಮಿಕ್ಕಿದ ತಂಗಳು ನೆನಪಾಗುತ್ತದೆ. ಬಡವರ ಮಕ್ಕಳನ್ನು ಕಂಡರೆ ತಮ್ಮ ಮಕ್ಕಳು ಉಟ್ಟ, ಬಣ್ಣಗೆಟ್ಟ ಬಟ್ಟೆಗಳು ನೆನಪಾಗುತ್ತವೆ. ಕಾಲಿಲ್ಲದವನು ಕೈಚಾಚಿದರೆ ‘ಚಿಲ್ಲರೆ ಇಲ್ಲ’ ಎನ್ನುತ್ತೇವೆ, ನೋಟುಗಳಿರುವುದು‌ ಕೊಡುವುದಕ್ಕಲ್ಲ. ಮದುವೆ ಮನೆಯಲ್ಲಿ ಊಟ ಮಿಕ್ಕಿದಾಗ ಅನಾಥರ ನೆನಪಾಗುತ್ತದೆ. ಸೀರೆ ಹಳೆಯದಾದಾಗ ಮನೆಯ ಕೆಲಸದವಳು ನೆನಪಾಗುತ್ತಾಳೆ. ಇಂತಹ ನೂರೆಂಟು ವಿರೋಧಾಭಾಸಗಳು ನಮ್ಮಲ್ಲಿವೆ. ಉಣ್ಣುತ್ತಿ ರುವ ಅನ್ನದಲ್ಲಿ ಒಂದಷ್ಟು ಎತ್ತಿಕೊಡುವ, ಬಡವರ ಮಕ್ಕಳಿಗೆ ಹೊಸ ಬಟ್ಟೆ ತೆಗೆದುಕೊಡುವ, ಮದುವೆ ಊಟದಲ್ಲಿ ಒಂದು ಪಾಲನ್ನು ಅನಾಥರಿಗೆ ಎತ್ತಿಡುವ ಯೋಚನೆಯನ್ನು ನಾವು ತಪ್ಪಿಯೂ ಮಾಡುವುದಿಲ್ಲ.

ಇತ್ತೀಚೆಗೆ ಕೆಲವು ನಗರಗಳಲ್ಲಿ ‘ಕರುಣೆಯ ಗೋಡೆ’ಗಳನ್ನು ನೋಡುತ್ತೇವೆ. ನಮಗೆ ಬೇಡವಾದ ವಸ್ತುವನ್ನು ಅಲ್ಲಿ ಇಡುವುದು ಮತ್ತು ಬೇಕಾದವರು ಅದನ್ನು ತೆಗೆದುಕೊಂಡು ಹೋಗುವ ಈ ವ್ಯವಸ್ಥೆ ಚೆನ್ನಾಗಿದೆ. ಆದರೆ ಇಲ್ಲಿ ಬೇಡವಾದ ವಸ್ತು ಎಂಬ ಪದದ ಬಳಕೆಯೇ ಸರಿಯಲ್ಲ. ಇತ್ತೀಚೆಗೆ ಆ ಕರುಣೆಯ ಗೋಡೆ ಕಸದ ತೊಟ್ಟಿಯಂತೆ ಆಗಿರುವುದು ತಿಳಿಯುತ್ತದೆ.

ಒಂದು ವಸ್ತು ನಮಗೆ ಬಳಸಲು ಯೋಗ್ಯವಲ್ಲದ್ದು ಬೇರೆಯವರಿಗೆ ಅದ್ಹೇಗೆ ಯೋಗ್ಯ ಅನಿಸುತ್ತದೆ. ಮನೆಯಲ್ಲಿದ್ದರೆ ಸುಮ್ಮನೆ ವ್ಯರ್ಥ, ದೂಳಾಗುತ್ತದೆ ಅನ್ನುವ ಕಾರಣಕ್ಕೆ ಕೆಲವರು ಅಲ್ಲಿಟ್ಟು ಬರುತ್ತಾರೆ. ಬರುವಾಗ ಈ ಸಮಾಜಕ್ಕೆ ತಾನೇನೋ ಮಾಡಿದೆ ಎಂಬ ವಿಲಕ್ಷಣ ಧನ್ಯತೆ ಅವರದು. ನಮ್ಮ ಹಳೆಯ ಬಟ್ಟೆ ಬದಲು ಕಡಿಮೆ ಬೆಲೆಯದಾದರೂ ಪರವಾಗಿಲ್ಲ ಹೊಸ ಬಟ್ಟೆ ಖರೀದಿಸಿ ಇಟ್ಟು ಬರಬಹುದಲ್ಲ! ಕೆಲವರು‌ ಸವೆದ ಶೂ ಇಟ್ಟದ್ದನ್ನು ನೋಡಿದೆ. ಅವರ ಮನಃಸ್ಥಿತಿಗೆ ಕೈಮುಗಿದೆ.

ತನ್ನ ದುಡಿಮೆಯ ಒಂದು ಭಾಗವನ್ನು ಹಂಚು ಅನ್ನುತ್ತದೆ ಇಸ್ಲಾಂ ಧರ್ಮ. ಸತ್ಪಾತ್ರರು ಇದ್ದಲ್ಲಿಗೆ ಹೋಗಿ ಅವರನ್ನ ಪ್ರಸನ್ನೀಕರಿಸಿ, ತನ್ನಲ್ಲಿರುವುದನ್ನೇ ಕೊಟ್ಟು ಬಾ ಅನ್ನುತ್ತದೆ ಹಿಂದೂ ಧರ್ಮ. ಯೇಸು ಹಂಚಿಕೊಂಡು ತಿನ್ನುವ ಗುಣದ ದ್ಯೋತಕವಾಗಿದ್ದಾನೆ.

ಜಗತ್ತಿನ ಎಲ್ಲಾ ಧರ್ಮಗಳು ಪರಸ್ಪರ ಹಂಚಿಕೊಂಡು ತಿನ್ನುವ ತತ್ವದಲ್ಲಿ ನಂಬಿಕೆ ಇಟ್ಟಿವೆ. ಆದರೆ ಮನುಷ್ಯ ಧರ್ಮದಲ್ಲಿ ಅದು ದುರ್ಲಭ. ಕೆಲವರು ಇದಕ್ಕೆ ಹೊರತಾಗಿದ್ದಾರೆ. ಅವರಿಂದಾಗಿಯೇ ಮನುಕುಲದ ಸೊಬಗು ಉಳಿದಿದೆ.

ಪ್ರಚಾರಕ್ಕಾಗಿಯೇ ಕೊಡುವ ವರ್ಗವೊಂದಿದೆ. ಒಂದು ರೂಪಾಯಿ ಕೊಟ್ಟು ಹತ್ತು ರೂಪಾಯಿಯಷ್ಟು ಪ್ರಚಾರ. ಕೊರೊನಾ ತೀವ್ರವಾಗಿದ್ದ ಕಾಲದಲ್ಲಿ ಒಂದು ಅನ್ನದ ಪೊಟ್ಟಣ, ಎರಡು ಮಾಸ್ಕ್ ನೀಡಿ ಫೋಟೊ ತೆಗೆಸಿಕೊಂಡವರನ್ನು ಕಂಡು ಹೇವರಿಕೆ ಹುಟ್ಟಿತ್ತು. ಕೊಟ್ಟಿದ್ದಕ್ಕಲ್ಲ, ಫೋಟೊ ತೆಗೆಸಿಕೊಂಡಿದ್ದಕ್ಕೆ. ಕೈಯಲ್ಲಿ ಊಟ ತೆಗೆದುಕೊಳ್ಳುತ್ತಾ ಫೋಟೊಗೆ ಮುಖ ತೋರಿಸುವ ಸಂಕಟ ಯಾರಿಗೂ ಬಾರದಿರಲಿ. ‘ಹೊಲಿ ನಿನ್ನ ತುಟಿಗಳನು’ ಎಂಬ ಡಿವಿಜಿಯವರ ಕಗ್ಗನೆನಪಿಗೆ ಬರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT