ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಬೆಳೆಸಬೇಕಿದೆ ಮಹಿಳಾ ಸಂವೇದನೆ

ಹೆಣ್ತನದ ಘನತೆಯ ಮೇಲೆ ನಡೆಯುತ್ತಿರುವ ರಾಕ್ಷಸೀ ದೌರ್ಜನ್ಯಗಳನ್ನು ತಡೆಗಟ್ಟಲು ಸಮಾಜದಲ್ಲಿ ತಳಮಟ್ಟದಿಂದಲೇ ಲಿಂಗತ್ವ ಸೂಕ್ಷ್ಮತೆಯನ್ನು ಮೂಡಿಸಬೇಕಾದ ತುರ್ತಿದೆ
ನಾ.ದಿವಾಕರ
Published 30 ಆಗಸ್ಟ್ 2024, 22:30 IST
Last Updated 30 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ಕೋಲ್ಕತ್ತದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅಮಾನುಷ ಅತ್ಯಾಚಾರ ಹಾಗೂ ಕೊಲೆ, ಭಾರತದಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆ ಸರ್ಕಾರಗಳು ಮತ್ತೊಮ್ಮೆ ಯೋಚನೆ ಮಾಡುವಂತೆ ಮಾಡಿವೆ. ಸಮಾಜದಲ್ಲಿ ಇಂತಹ ಆಘಾತಕಾರಿ, ಆತ್ಮಘಾತುಕ ಪ್ರಕರಣಗಳು ನಡೆದ ನಂತರ ಧಿಗ್ಗನೆ ಎದ್ದುಕುಳಿತುಕೊಳ್ಳುವ ಆಡಳಿತ ವ್ಯವಸ್ಥೆ, ಭರವಸೆಗಳ ಮಹಾಪೂರವನ್ನೇ ಹರಿಸುವುದು ಹೊಸ ವಿದ್ಯಮಾನವೇನಲ್ಲ. ಕೋಲ್ಕತ್ತ ಪ್ರಕರಣವೂ ಈ ಸರಣಿಯ ಮತ್ತೊಂದು ಪ್ರಸಂಗ.

ಪುರುಷಾಧಿಪತ್ಯ ಮತ್ತು ಪಿತೃಪ್ರಧಾನ ಧೋರಣೆಯು ಭಾರತೀಯ ಸಮಾಜದಲ್ಲಿ ವ್ರಣವಾಗಿ ಕಾಡುತ್ತಿದೆ.  ಉತ್ತರದಿಂದ ದಕ್ಷಿಣದವರೆಗೆ ಬಾಲಕಿಯರಿಂದ ವೃದ್ಧೆಯರವರೆಗೂ ಮಹಿಳೆಯರ ಮೇಲಿನ ದೌರ್ಜನ್ಯ ವ್ಯಾಪಿಸಿರುವುದು ಅತ್ಯಂತ ದುರದೃಷ್ಟಕರ ಮತ್ತು ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು.

ಸಹಜವಾಗಿಯೇ ತಮ್ಮ ಮಹಿಳಾ ಪರ ಧೋರಣೆಯನ್ನು ಮತ್ತೊಮ್ಮೆ ಪ್ರಮಾಣೀಕರಿಸಿ ಸಾಬೀತು
ಪಡಿಸಬೇಕಾದ ಅನಿವಾರ್ಯ ಸರ್ಕಾರಗಳಿಗೆ ಎದುರಾಗಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವವರೆಗೂ ವಿಸ್ತರಿಸುವ ಈ ಪ್ರಮಾಣೀಕರಣ ಎಷ್ಟು ಕಾಲ ಉಸಿರಾಡುತ್ತದೆ ಎಂದು ಹೇಳಲಾಗುವು
ದಿಲ್ಲ. ಆದರೆ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದಿರುವ ಅತ್ಯಾಚಾರದ ಪ್ರಕರಣಗಳನ್ನು ಗಮನಿಸಿದರೆ, ಇದು ಕಾನೂನು ವ್ಯವಸ್ಥೆಯಿಂದಷ್ಟೇ ಸರಿಪಡಿಸುವ ವ್ಯಾಧಿಯಲ್ಲ ಎನ್ನುವುದು
ಸ್ಪಷ್ಟವಾಗುತ್ತದೆ. ಒಂದು ಪ್ರತಿಬಂಧಕ ಶಕ್ತಿಯಾಗಿ ಕಾಯ್ದೆ ಕಾನೂನುಗಳು ಪಾತಕಿಗಳಲ್ಲಿ ಭೀತಿ ಹುಟ್ಟಿಸುವುದು ಸಹಜ. ಆದರೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಕಿರುಕುಳಗಳನ್ನು ಈ ರೀತಿ ವ್ಯಕ್ತಿಗತ ನೆಲೆಯಲ್ಲಿ ನೋಡಲಾಗುವುದಿಲ್ಲ.

ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕೆ ಕೇರಳ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿ ಆರು ವರ್ಷಗಳ ವಿಳಂಬದ ನಂತರ ಬಹಿರಂಗಗೊಂಡ ಬೆನ್ನಲ್ಲೇ ಕೇರಳದ ಚಿತ್ರರಂಗ ಕಂಪಿಸಲಾರಂಭಿಸಿದೆ. ಕೆಲವು ವರ್ಷಗಳ ಮುನ್ನ ದೇಶವ್ಯಾಪಿಯಾಗಿ ನಡೆದ ಮೀ ಟೂ ಆಂದೋಲನ ಮತ್ತೊಮ್ಮೆ ಚಾಲನೆ ಪಡೆದಿದೆ. ಮಲಯಾಳಂ
ಚಿತ್ರರಂಗದತ್ತ ಬೊಟ್ಟು ಮಾಡಿ ತೋರಿಸುತ್ತಾ ನಮ್ಮ ಬೆನ್ನು ತಟ್ಟಿಕೊಳ್ಳುವ ಮುನ್ನ, ಕನ್ನಡ ಚಿತ್ರರಂಗವೂ ಇಂತಹ ಪ್ರಕರಣಗಳಿಂದ ಸಂಪೂರ್ಣವಾಗಿ ಮುಕ್ತವಾಗಿರಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಿದೆ. ಏಕೆಂದರೆ ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆ ಇಂದಿಗೂ ಸ್ವಂತ ಅಭಿವ್ಯಕ್ತಿ ಅಥವಾ ಸ್ವಾಯತ್ತ ವ್ಯಕ್ತಿತ್ವಕ್ಕಾಗಿ ಹೋರಾಡಲೇಬೇಕಾದ ಪರಿಸ್ಥಿತಿ ಇದೆ. ಸಾಂಸ್ಕೃತಿಕ ವಲಯದ ಸಾಂಸ್ಥಿಕ ಹುದ್ದೆಗಳಿಂದ ರಾಜಕೀಯ ಅಧಿಕಾರ ಕೇಂದ್ರಗಳವರೆಗೂ ವ್ಯಾಪಿಸುವ ಪುರುಷಪ್ರಧಾನ ಮೌಲ್ಯಗಳ ದೃಷ್ಟಿಕೋನ ಇನ್ನಾದರೂ ಬದಲಾಗಬೇಕು.

ಅಧಿಕಾರ ಕೇಂದ್ರಗಳಲ್ಲಿ, ಸಾರ್ವಜನಿಕ ಸೇವಾ ವಲಯಗಳಲ್ಲಿ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಮಹಿಳೆಯರಿಗೆ ನೀಡಬೇಕಾದ ಪ್ರಾತಿನಿಧಿಕ ಸ್ಥಾನಗಳನ್ನು ಕಲ್ಪಿಸುವಲ್ಲೂ ವಿಫಲವಾಗುತ್ತಿರುವ ಭಾರತೀಯ ಸಮಾಜ, ದೇಶದಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುತ್ತದೆ ಎಂದು ನಿರೀಕ್ಷಿಸುವುದಾದರೂ ಹೇಗೆ?

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗಳಿಗೆ ಇತ್ತೀಚೆಗೆ ನಡೆದಿರುವ ಸದಸ್ಯರ ನೇಮಕದಲ್ಲಿ, ಕೆಲವು ಸ್ಥಾನಗಳನ್ನಷ್ಟೇ ಮಹಿಳೆಯರಿಗೆ ನೀಡಲಾಗಿದೆ. ಸಮಾಜದಲ್ಲಿ ಲಿಂಗತ್ವ ಸಮಾನತೆ ಮತ್ತು ಸೂಕ್ಷ್ಮತೆಯನ್ನು ಬೆಳೆಸಲು ಪ್ರಧಾನ ಪಾತ್ರ ವಹಿಸಬೇಕಾದ ಶೈಕ್ಷಣಿಕ ವಲಯದಲ್ಲೇ ಈ ಅಸಮಾನತೆ ತಾಂಡವವಾಡುತ್ತಿರುವಾಗ,  ಮೇಲ್ಪದರದಿಂದ ತಳಸ್ತರದವರೆಗೂ ಜನರಿಗೆ ಮನರಂಜನೆ ನೀಡುವ ಸಿನಿಮಾ ರಂಗದಲ್ಲೇ ಹೆಣ್ಣುಮಕ್ಕಳ ಘನತೆ ಅಪಾಯಕ್ಕೆ ಈಡಾಗಿರುವಾಗ, ಲಿಂಗಸೂಕ್ಷ್ಮತೆ, ಸಂವೇದನೆಯನ್ನು ಎಲ್ಲೆಂದು ಹುಡುಕಲು ಸಾಧ್ಯ?

ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು, ಇರುವ ಕಾನೂನು ವ್ಯವಸ್ಥೆಯನ್ನು ಬಿಗಿಗೊಳಿಸಬೇಕು, ಹೆಣ್ಣುಮಕ್ಕಳಿಗೆ ಭೌತಿಕವಾಗಿ ರಕ್ಷಣೆ ನೀಡಬೇಕು ಎಂಬಂತಹ ಆಗ್ರಹ
ಗಳನ್ನು ಕೆಲ ಕ್ಷಣ ಬದಿಗಿಟ್ಟು ಪ್ರಾಮಾಣಿಕವಾಗಿ ಯೋಚಿಸಿ ನೋಡಿದರೆ, ಮಹಿಳೆಯರ ಮೇಲೆ ನಡೆಯುತ್ತಿರುವ ಈ ಆತ್ಮಘಾತುಕ ದೌರ್ಜನ್ಯಗಳ ಮೂಲವನ್ನು ಶೋಧಿಸಬಹುದು. ರಾಜಕೀಯ ಪಕ್ಷಗಳಿಗೆ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರತಿ ಪ್ರಕರಣವೂ ‘ಇವರು’ ಮತ್ತು ‘ಅವರ’ ನಡುವಿನ ಅಸ್ಮಿತೆಗಳಲ್ಲಿ ಕಾಣುತ್ತದೆ. ಪಾತಕಿಗಳು ಮತ್ತು ಸಂತ್ರಸ್ತರನ್ನು ತಮ್ಮ ರಾಜಕೀಯ ಅನುಕೂಲಗಳಿಗೆ ತಕ್ಕಂತೆ ವಿಂಗಡಿಸುವ ಕ್ಷುದ್ರ ರಾಜಕಾರಣದ ನಡುವೆ, ದೌರ್ಜನ್ಯಕ್ಕೊಳಗಾದ ಅಸಹಾಯಕ ಮಹಿಳೆಯರ ಆಕ್ರಂದನ ಎಲ್ಲೋ ಕಳೆದುಹೋಗಿರುತ್ತದೆ. ಹೆಣ್ತನದ ಘನತೆಯ ಮೇಲೆ ನಡೆಯುತ್ತಿರುವ ರಾಕ್ಷಸೀ ದೌರ್ಜನ್ಯಗಳನ್ನು ತಡೆಗಟ್ಟಲು ಕಾಯ್ದೆ ಕಾನೂನುಗಳಿಗಿಂತಲೂ ಹೆಚ್ಚಾಗಿ ಸಮಾಜದಲ್ಲಿ ತಳಮಟ್ಟದಿಂದಲೇ ಲಿಂಗತ್ವ ಸೂಕ್ಷ್ಮತೆ, ಮಹಿಳಾ ಸಂವೇದನೆಯನ್ನು ಬೆಳೆಸಬೇಕಾದ ತುರ್ತು ಎದುರಾಗಿದೆ. ಸರ್ಕಾರಗಳಿಗೆ ಇದು ಪ್ರಾಯೋಜಿತ ಕಾರ್ಯಕ್ರಮವಾಗಿಬಿಡುತ್ತದೆ.

ಈ ವಿಷಮ ಸನ್ನಿವೇಶದಲ್ಲಿ ನಾಗರಿಕ ಸಂಘಟನೆಗಳೇ ಈ ಕೈಂಕರ್ಯವನ್ನು ತಮ್ಮ ಆದ್ಯತೆಯಾಗಿ ಪರಿಗಣಿಸಿ ಮುನ್ನಡೆಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT