ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮನಃಪರಿವರ್ತನೆಯೇ ಮದ್ದು

ಮದ್ಯ, ಮಾದಕದ್ರವ್ಯ ವ್ಯಸನದಿಂದ ಎಳೆಯರು ದಾರಿ ತಪ್ಪದಂತೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು
Last Updated 28 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಒಬ್ಬೊಬ್ಬ ಶಿಬಿರಾರ್ಥಿಯತ್ತ ದೃಷ್ಟಿ ಹಾಯ್ದಾಗಲೂ ಮನದಲ್ಲಿ ಆತಂಕದ ಅಲೆಗಳು! ಕೆಲವರನ್ನು ಹೊರತುಪಡಿಸಿದರೆ ಮತ್ತೆಲ್ಲರೂ ಯುವಕರು. ಹಲವರಿಗೆ ಸರಿಯಾಗಿ ಮೀಸೆಯೂ ಮೂಡಿಲ್ಲ. ‘ಎಷ್ಟು ವರ್ಷದಿಂದ ಈ ಕುಡಿತದ ಚಟ’ ಎಂಬ ಪ್ರಶ್ನೆಗೆ ‘ಹತ್ತು’ ಎಂದು ಥಟ್ಟನೆ ಉತ್ತರಿಸಿದ್ದ ಆ ತರುಣ. ‘ಈಗ ನಿನ್ನ ವಯಸ್ಸೆಷ್ಟು?’ ನನ್ನ ಕುತೂಹಲದ ವಿಚಾರಣೆಗೆ ಆತ ‘ಇಪ್ಪತ್ಮೂರು’ ಎಂದಾಗ ಬೆಚ್ಚಿಬಿದ್ದಿದ್ದೆ! ಅಂದರೆ ಹೈಸ್ಕೂಲು ಓದುವಾಗಲೇ ಮದ್ಯಪಾನ ಶುರುವಾಗಿದೆ! ಇಷ್ಟು ಸಣ್ಣ ವಯಸ್ಸಿನಲ್ಲೇ ದಾರಿ ತಪ್ಪಿದರೆ ಆ ಕುಟುಂಬದ ಪರಿಸ್ಥಿತಿ, ಮನಃಸ್ಥಿತಿ ಏನಾಗಿರಬಹುದು?

ಮತ್ತೊಬ್ಬ ಯುವಕನನ್ನು ಪ್ರಶ್ನಿಸಿದೆ, ‘ಮೊದಲ ಸಲ ಹೆಂಡ ಕುಡಿಯಲು ಕಾರಣವೇನು?’, ‘ಹೋಟೆಲ್‍ನಲ್ಲಿ ಕೆಲಸ ಮಾಡುವಾಗ ನನಗೆ ದುಡ್ಡು ಕೊಟ್ಟು ಕುಡಿಸಿ ಒಬ್ಬನಿಗೆ ಹೊಡೆಯಲು ಕಳುಹಿಸಿದ್ದರು. ಅಂದಿನಿಂದ ಈ ಅಭ್ಯಾಸ’. ಎಲ್ಲವೂ ಗಾಬರಿಗೊಳಿಸುವ ವಿಷಯಗಳು! ಆ ಮದ್ಯವರ್ಜನ ಶಿಬಿರದಲ್ಲಿದ್ದ ಎಂಬತ್ತು ವ್ಯಸನಿಗಳ ಹಿಂದೆಯೂ ಇಂತಹದ್ದೇ ಭಯಾನಕ ಕತೆಗಳು.

ಹೌದು, ನಮ್ಮ ಯುವಶಕ್ತಿಗೆ ನಶೆಯೇರಿಸಿ ಹೀಗೆ ಹಾದಿ ತಪ್ಪಿಸಿದರೆ ಸಮಾಜದಲ್ಲಿ ಶಾಂತಿ, ಸಾಮರಸ್ಯವಾ
ದರೂ ಹೇಗೆ ಸಾಧ್ಯ? ವ್ಯಸನದ ಜಾಲಕ್ಕೆ ಬಿದ್ದವರು ಯಾರನ್ನು ತಾನೆ ನೆಮ್ಮದಿಯಿಂದ ಬದುಕಲು ಬಿಟ್ಟಾರು? ನಮ್ಮಲ್ಲಿನ ರಸ್ತೆ ಅಪಘಾತಗಳಿಗೆ ಅತಿವೇಗ, ಅಜಾಗರೂಕ ಚಾಲನೆ ಜೊತೆಗೆ ಮತ್ತೊಂದು ಪ್ರಮುಖ ಕಾರಣ ಮದ್ಯ, ಮಾದಕದ್ರವ್ಯಗಳ ಅಮಲು.

ಒಂದೆಡೆ, ಏರುಗತಿಯಲ್ಲಿರುವ ವ್ಯಸನಿಗಳ ಸಂಖ್ಯೆ, ಮತ್ತೊಂದೆಡೆ, ಶಾಲಾ ಕಾಲೇಜು ಹಂತದಲ್ಲೇ ದುಶ್ಚಟ
ಗಳಿಗೆ ದಾಸರಾಗುತ್ತಿರುವ ಎಳೆಯರು. ಪರಿಸ್ಥಿತಿ ಈ ಪರಿಯಲ್ಲಿ ಹದಗೆಡುತ್ತಿರುವಾಗ ದಿನನಿತ್ಯ ರಸ್ತೆ ಉಪಯೋಗಿಸುವ ನಾವ್ಯಾರೂ ಸುರಕ್ಷಿತರಲ್ಲ! ಅಮಲಿನಲ್ಲಿ ವಾಹನ ಚಲಾಯಿಸುವವರು, ನಶೆಯಲ್ಲಿನ ಕಲಹ, ಹೊಡೆದಾಟ, ಬಡಿದಾಟ, ಕೊಲೆ, ವ್ಯಸನಕ್ಕೆ ಹಣ ಹೊಂಚಲು ಸುಲಿಗೆ, ಕಳ್ಳತನ, ದರೋಡೆಗಿಳಿಯುವ
ವರು, ಸಂಪಾದನೆಯನ್ನೆಲ್ಲಾ ಚಟಕ್ಕೆ ವ್ಯಯಿಸಿ ಕುಟುಂಬವನ್ನೇ ಬೀದಿಪಾಲು ಮಾಡುವವರು, ಮತ್ತಿನ ಭರದಲ್ಲಿ ಜಾಲತಾಣಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ಸಂದೇಶಗಳನ್ನು ಹರಿಯಬಿಟ್ಟು ಶಾಂತಿ ಭಂಗ ಉಂಟು ಮಾಡುವವರು... ನಿಜ, ಮದ್ಯಾಸುರನಿಗೆ ಒಂದೆರಡಲ್ಲ ಹತ್ತಾರು ಪಾತ್ರಗಳು!

ಸ್ನೇಹಿತರ ಒತ್ತಾಯ, ಹಿರಿಯರ ಅನುಕರಣೆ, ರುಚಿ ನೋಡುವ ಕುತೂಹಲ, ಸಂತೋಷ ಹಂಚಿಕೊಳ್ಳಲು, ದುಃಖ, ಸಂಕಟ, ಸಮಸ್ಯೆಗಳನ್ನು ಮರೆಯಲು, ಒತ್ತಡದಿಂದ ಹೊರಬರಲು, ಮೋಜು, ಮಸ್ತಿ, ಸಾಮಾಜಿಕ
ಸ್ಥಾನಮಾನ, ಸಂಭ್ರಮಾಚರಣೆ, ಶ್ರಮದ ಕೆಲಸಕ್ಕಾಗಿ ದೇಹ-ಮನಸ್ಸು ಸಿದ್ಧಗೊಳಿಸಲು, ಮೈಕೈ ನೋವು ನಿವಾ
ರಕ, ಔಷಧ, ಆರೋಗ್ಯಕ್ಕಾಗಿ ಎಂದೆಲ್ಲಾ ಕುಡಿತ ಆರಂಭಿಸುವವರಲ್ಲಿ ಕೆಲವರು ನಿಧಾನಕ್ಕೆ ಅದರ ದಾಸರಾ
ಗುತ್ತಿದ್ದಾರೆ. ಮದ್ಯಪಾನದ ಚಾಳಿ ಈಗ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೂ ಆವರಿಸುತ್ತಿದೆ. ಚಟದ ಕಾರಣ ವಿದ್ಯಾಭ್ಯಾಸಕ್ಕೆ ವಿಮುಖರಾಗಿ ನಶೆಯಲ್ಲಿ ತೇಲಾಡುವ ಎಳೆಯರು ಜಗಳ, ದೊಂಬಿ, ಕಳ್ಳತನ, ಅತ್ಯಾಚಾರದಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿ. ಅವರನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಿ ಮದ್ಯ, ಮಾದಕದ್ರವ್ಯದ ದಂಧೆಗಿಳಿಸುವ ಜಾಲವೂ ಪ್ರಬಲವಾಗಿದೆ.

ಆಕರ್ಷಕ ಆದಾಯ, ನಕಲಿ ಮದ್ಯದ ಅಪಾಯ, ಉದ್ಯೋಗ, ಪ್ರವಾಸೋದ್ಯಮ, ಲಾಬಿ, ಒತ್ತಡದಂತಹ ಕಾರಣಗಳಿಂದ ಸರ್ಕಾರ ಸಂಪೂರ್ಣ ಮದ್ಯ ನಿಷೇಧದಂತಹ ಸಂಕಲ್ಪ ತೊಡುವುದು, ಅದನ್ನು ಪರಿಣಾಮ
ಕಾರಿಯಾಗಿ ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ. ನಮ್ಮ ರಾಜ್ಯದ ಉದಾಹರಣೆ ತೆಗೆದುಕೊಳ್ಳುವು
ದಾದರೆ, ಕೋವಿಡ್ ನಿರ್ಬಂಧಗಳ ನಡುವೆಯೂ ಕಳೆದ ಆರ್ಥಿಕ ವರ್ಷದಲ್ಲಿ ₹ 23,332 ಕೋಟಿ ಅಬ್ಕಾರಿ ಆದಾಯ ಖಜಾನೆಗೆ ಜಮಾವಣೆಯಾಗಿದೆ. ಗುರಿಗೆ ಹೋಲಿಸಿದಲ್ಲಿ ಇದು ಶೇ 95ರಷ್ಟು ಸಾಧನೆ! ಈ ವರ್ಷದ ನಿರೀಕ್ಷೆ₹ 29,000 ಕೋಟಿ, ಕಳೆದ ವರ್ಷಕ್ಕಿಂತ ಶೇ 18 ಹೆಚ್ಚಳ! ಈ ಅಂಕಿಅಂಶ ಹೊಸದಾಗಿ ಮದ್ಯಪಾನಿಗ
ಳಾಗುತ್ತಿರುವವರ ಜೊತೆಯಲ್ಲಿ ವ್ಯಸನಿಗಳ ಸಂಖ್ಯೆಯ ಗ್ರಾಫ್ ಆಕಾಶದತ್ತ ಮುಖ ಮಾಡಿರುವುದನ್ನು
ಸಾಬೀತುಪಡಿಸುತ್ತದೆ.

ಹೌದು, ಮದ್ಯದ ಘಾಟು ತೊಡೆಯಲು ಜಾಗೃತಿಯೇ ಮದ್ದು. ಮದ್ಯ, ಮಾದಕದ್ರವ್ಯಗಳ ವ್ಯಸನದಿಂದಾ
ಗುವ ಅನಾಹುತಗಳ ಬಗ್ಗೆ ಪ್ರೌಢಶಾಲೆ, ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಎಳೆಯರು ದಾರಿ ತಪ್ಪದಂತೆ ಪೋಷಕರು, ಬೋಧಕರು ಎಚ್ಚರ ವಹಿಸುವುದು ತುರ್ತು ಅಗತ್ಯ. ಅನಧಿಕೃತ ಮದ್ಯ ಮಾರಾಟವನ್ನು ಕಟ್ಟುನಿಟ್ಟಾಗಿ ನಿಲ್ಲಿಸುವುದು ಆಡಳಿತದ ಹೊಣೆಗಾರಿಕೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಾಡಿನಾದ್ಯಂತ ಯಶಸ್ವಿಯಾಗಿ ನಡೆಸುತ್ತಿರುವ ಸಾಮುದಾಯಿಕ ಮದ್ಯವರ್ಜನ ಶಿಬಿರಗಳ ರೀತಿಯಲ್ಲಿ ಸರ್ಕಾರವೂ ವ್ಯಸನಿಗಳ ಮನಃಪರಿವರ್ತನೆ ಮಾಡಿ ಚಟದಿಂದ ವಿಮುಖರನ್ನಾಗಿಸಲು ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪಾನಮುಕ್ತರ ಸಮಿತಿಗಳನ್ನು ರಚಿಸಿ ಅವರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಕುಡಿತದ ಹಾದಿಗೆ ಮರಳದಂತೆ ತಡೆಯಲು ಸಹಕಾರಿ.

ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕೌಶಲ ತರಬೇತಿ ಜೊತೆಗೆ ಅಗತ್ಯ
ಇದ್ದರೆ ಸಾಲ ಸೌಲಭ್ಯದ ವ್ಯವಸ್ಥೆ ಮಾಡುವುದು ಸ್ವಸ್ಥ ಸಮಾಜ ನಿರ್ಮಾಣದತ್ತ ದಿಟ್ಟ ಹೆಜ್ಜೆಯಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT