ಸೋಮವಾರ, ನವೆಂಬರ್ 18, 2019
24 °C
ವಿಜ್ಞಾನವನ್ನಷ್ಟೇ ಆಸ್ವಾದಿಸಿ ರಸರಹಿತ ಕಬ್ಬಿನಜಲ್ಲೆಯಂತೆ ಸತ್ವಹೀನರಾಗದೆ, ವೈಜ್ಞಾನಿಕ ಆವಿಷ್ಕಾರಗಳನ್ನು ಕಲಾ ದೃಷ್ಟಿಕೋನದಿಂದ ವಿಶ್ಲೇಷಿಸಬೇಕಾಗಿದೆ

ಕಲಾವಿಜ್ಞಾನ ಎಂಬ ಹೊಸ ಆಯಾಮ

Published:
Updated:
Prajavani

ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯಲ್ಲಿ, ‘ಕಲಾವಿಜ್ಞಾನ’ ಎನ್ನುವ ಹೊಸ ಜ್ಞಾನಶಿಸ್ತಿನ ಉದಯವಾಗಿದೆ. ಇದು ವಿಜ್ಞಾನ ಮತ್ತು ಕಲೆಯನ್ನು ಸಮನ್ವಯಗೊಳಿಸುವ ಒಂದು ವಿಶಿಷ್ಟ ಪ್ರಯತ್ನ. ಅಮೆರಿಕದ ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಲಾವಿಜ್ಞಾನವೆನ್ನುವ ಅಂತರ್ ಶಿಸ್ತಿನ ಅಧ್ಯಯನದಲ್ಲಿ, ಕಲೆ ಮತ್ತು ವಿಜ್ಞಾನದ ವಿಭಿನ್ನ ಜ್ಞಾನಪ್ರಕಾರಗಳನ್ನು ಒಟ್ಟಿಗೆ ಅಭ್ಯಸಿಸುವ ಅವಕಾಶವಿದೆ. ಉದಾಹರಣೆಗೆ, ಕಲೆ ಮತ್ತು ಎಲೆಕ್ಟ್ರಾನಿಕ್ಸ್, ಕಲೆ ಮತ್ತು ಜೀವಶಾಸ್ತ್ರ, ಸೃಜನಶೀಲ ಬರವಣಿಗೆ ಮತ್ತು ವಿಜ್ಞಾನ, ಸಾಹಿತ್ಯ ಮತ್ತು ಔಷಧವಿಜ್ಞಾನ, ಧ್ವನಿ ವಿಜ್ಞಾನ, ಸಮಾಜದ ಅಂಗರಚನಾಶಾಸ್ತ್ರ ಇತ್ಯಾದಿ. ಅದೇ ರೀತಿ ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯವು ಕಲಾವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ನೀಡುತ್ತದೆ. ಇದು ವಿಭಿನ್ನ ಕಲೆ, ಸಂಸ್ಕೃತಿ, ವೈಜ್ಞಾನಿಕ ಅರಿವು ಮತ್ತು ಸಂಶೋಧನೆಗಳ ನಡುವಿನ ಸಂಬಂಧಗಳನ್ನು ಅಭ್ಯಸಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕಲಾವಿಜ್ಞಾನವು ಯುರೋಪ್ ಮತ್ತು ಅಮೆರಿಕದ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಜನಪ್ರಿಯತೆ ಪಡೆಯುತ್ತಿದ್ದು, ಹೆಚ್ಚು ವಿದ್ಯಾರ್ಥಿಗಳು ಅದರ ಓದಿನ ಅಗತ್ಯವನ್ನು ಮನಗಾಣುತ್ತಿದ್ದಾರೆ.

ಮೂಲ ತತ್ವಶಾಸ್ತ್ರದಿಂದ ದೂರಹೋಗಿ, ಸಂಪೂರ್ಣ ತಂತ್ರಜ್ಞಾನಮಯವಾಗಿ ರೂಪುಗೊಂಡಿರುವ ವಿಜ್ಞಾನಕ್ಕೆ, ನಿಷ್ಪ್ರಯೋಜಕ ಎಂದೇ ಪರಿಗಣಿಸಲಾದ ಕಲೆಯ ಜೋಡಣೆ ನಮ್ಮಲ್ಲೂ ತುರ್ತಾಗಿ ಆಗಬೇಕಿದೆ. ವಿಜ್ಞಾನದ ನವನವೀನ ಆವಿಷ್ಕಾರಗಳ ಪ್ರವಾಹವನ್ನು ಬೆರಗುಗಣ್ಣಿನಿಂದಲೇ ನೋಡುತ್ತಿರುವ, ಮತ್ತದರ ಹಿಡಿತದಲ್ಲಿ ಹುಸಿಸುಖ ಅನುಭವಿಸುತ್ತಿರುವ ಮನುಷ್ಯನಿಗೆ, ಅದೇ ಪ್ರಗತಿಯೆಂಬ ಭ್ರಮೆಯಲ್ಲಿ ತನ್ನ ಅಸ್ತಿತ್ವ, ಮತ್ತದರೊಂದಿಗೆ ಈ ನೆಲದ ಭವಿಷ್ಯವನ್ನೂ ಕಳೆದುಕೊಳ್ಳುತ್ತಿರುವುದು ಇನ್ನೂ ಅರಿವಾದಂತಿಲ್ಲ. ನಮ್ಮಲ್ಲಿ, ವಿಜ್ಞಾನದ ಕಲಿಕೆ ಬುದ್ಧಿವಂತರಿಗೆ ಮಾತ್ರ ಮತ್ತು ಎಲ್ಲಿಯೂ ಸಲ್ಲದವರು ಕಲಾಪ್ರಕಾರಗಳನ್ನು ಓದುತ್ತಾರೆ ಎನ್ನುವ ಒಂದು ತರ್ಕರಹಿತ ನಂಬಿಕೆಯಿದೆ. ದುರದೃಷ್ಟವಶಾತ್, ಈ ಅಪನಂಬಿಕೆಯನ್ನು ವಿಮರ್ಶಿಸದೆ, ಕುರುಡಾಗಿ ಅನುಸರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ, ವಿಜ್ಞಾನ ಯುಗದಲ್ಲಿ ಕಲೆಯ ಪ್ರಸ್ತುತತೆ ಏನೆಂದು ಪುನರ್ ಪರಿಶೀಲಿಸಬೇಕಾಗಿದೆ.

ಕಲೆ ಒಂದು ಸಾಂಸ್ಕೃತಿಕ ಪರಂಪರೆ. ಅದು ಸಂಸ್ಕೃತಿಯನ್ನು ಮುಂದುವರಿಸುತ್ತಾ, ಕಾಲಕ್ಕೆ ಅನುಗುಣವಾಗಿ ಮಾರ್ಪಡಿಸುತ್ತದೆ. ಬದುಕಿನ ಅರ್ಥವಾಗದ ಪ್ರಕ್ರಿಯೆಗಳನ್ನು ಎದುರಿಸಲು ಮತ್ತು ಅರ್ಥ ಮಾಡಿಕೊಳ್ಳಲು ಕಲೆ ಸಹಾಯಕ. ತಂತ್ರಜ್ಞಾನದ ಅಬ್ಬರದಲ್ಲಿ ಸುತ್ತಲಿನ ಪ್ರಪಂಚದ ನಂಟು ಕಳೆದುಕೊಂಡು, ಪರಕೀಯತೆ ಅನುಭವಿಸುತ್ತಿರುವ ಮನುಷ್ಯನಿಗೆ, ತನ್ನ ಅಂತರಾತ್ಮದ ಒಳಧ್ವನಿ ಕೇಳಿಸಿಕೊಳ್ಳಲು ಕಲೆಯ ಅಗತ್ಯವಿದೆ. ಹಾಗಿದ್ದಲ್ಲಿ, ನಿಕೃಷ್ಟ ಎನಿಸಿಕೊಂಡಿರುವ ಕಲೆ ಮತ್ತು ಮಹತ್ವ ಎನಿಸಿರುವ ವಿಜ್ಞಾನಕ್ಕಿರುವ ವೈರುಧ್ಯಗಳೇನು? ಮುಖ್ಯವಾಗಿ, ಒಂದು ಶ್ರೇಷ್ಠ, ಮತ್ತೊಂದು ಉಪಯೋಗವಿಲ್ಲದ್ದು ಎಂದೇಕೆ ಪರಿಗಣಿತವಾಗಿವೆ?

ಹಾಗೆ ನೋಡಿದರೆ, ಕಲೆಯು ವಿಜ್ಞಾನದಷ್ಟು ಸುಲಭವಾಗಿ ದಕ್ಕುವುದಿಲ್ಲ. ಅದು ಸಂಕೀರ್ಣ ಮತ್ತು ಅಭಿವ್ಯಕ್ತತೆಯನ್ನು ನಿರೀಕ್ಷಿಸುತ್ತದೆ. ಇದಕ್ಕೆ ವಿರುದ್ಧವಾಗಿ, ವಿಜ್ಞಾನವು ಅಭಿವ್ಯಕ್ತಿರಹಿತ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಪ್ರಸ್ತುತ ವರ್ತಮಾನದ ಜಾಗತಿಕ ಮತ್ತು ವೈಯಕ್ತಿಕ ಸಮಸ್ಯೆಗಳಿಗೆ, ತತ್ವಶಾಸ್ತ್ರದ ಮೂಲದಿಂದ ಚಿಗುರೊಡೆದ ಎಲ್ಲ ಕಲಾಪ್ರಕಾರಗಳ ಮೂಲಕ ಉತ್ತರ ಹುಡುಕುವ ಅಗತ್ಯವಿದೆ. ಬದುಕಿನ ಸಂದಿಗ್ಧ ಕ್ಷಣಗಳಲ್ಲಿ, ಸತ್ಯದರ್ಶನದ ಮೂಲಕ ಕಲೆ, ಜೀವನದರ್ಶನ ಮಾಡಿಸಿ ಬಲು ಸೂಕ್ಷ್ಮವಾಗಿ ಸಮಸ್ಯೆಗಳನ್ನು ಸರಳೀಕರಿಸುತ್ತದೆ. ಆದರೆ, ಕಲೆಯ ದೊಡ್ಡ ಸಮಸ್ಯೆಯೆಂದರೆ, ಅದು ಯಾವುದೇ ಸ್ಪಷ್ಟ ನಿರೂಪಣೆಗೆ ಸಿಗುವುದಿಲ್ಲ. ಸಾಮಾನ್ಯವಾಗಿ ಹೇಳುವುದಾದರೆ, ಕಲೆಯ ಮೂಲಕ ನಾವು ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳುತ್ತಾ, ಅರ್ಥವಾಗದ್ದನ್ನು ಪ್ರಶ್ನಿಸುತ್ತಾ, ಹೊಸ ಅರ್ಥಕೊಡಲು ಪ್ರಯತ್ನಿಸುತ್ತಾ, ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತೇವೆ. ಉತ್ತಮ ಕಲೆ ಬರೀ ವಸ್ತುಸ್ಥಿತಿಯನ್ನು ನಮ್ಮ ಮುಂದಿಡುವುದಲ್ಲದೆ, ಇದಕ್ಕಿರಬಹುದಾದ ಹೊಸ ಆಯಾಮಗಳತ್ತ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕುಂಠಿತವಾಗುತ್ತಿರುವ ಈ ಕಾಲದಲ್ಲಿ, ಕಲೆ ವಿವಿಧ ರೂಪಕಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಕಟಿಸಲು ಸಹಾಯ ಮಾಡುತ್ತದೆ.

ವಿಶೇಷವಾಗಿ ಗಮನಿಸಿದರೆ, ಶ್ರೇಷ್ಠ ವಿಜ್ಞಾನಿಯ ಜೀವನಚರಿತ್ರೆಯು ‘ಯಾವುದಾದರೊಂದು ಕಲಾಪ್ರಕಾರದಲ್ಲಿ ತೊಡಗಿಸಿಕೊಂಡಿದ್ದರಿಂದ ಸೃಜನಶೀಲತೆ ಜಾಗೃತವಾಗಿ, ತಮ್ಮ ವೈಜ್ಞಾನಿಕ ಸಂಶೋಧನೆಯಲ್ಲಿ ಯಶಸ್ಸು ಗಳಿಸಲು ಸಹಾಯವಾಯಿತು’ ಎನ್ನುವ ಅಂಶದತ್ತ ಬೆಳಕು ಚೆಲ್ಲುತ್ತದೆ. ಹಾಗಾಗಿ, ವಿಜ್ಞಾನವಷ್ಟೇ ಅನಿವಾರ್ಯ ಎಂದುಕೊಂಡಿರುವ ನಾವು, ಕಲಾನುಭವಕ್ಕೆ ನಮ್ಮನ್ನು ಒಡ್ಡಿಕೊಂಡರೆ ಪರಿಪೂರ್ಣತೆ ಸಾಧಿಸಬಹುದು.

ವಿಜ್ಞಾನವು ಜ್ಞಾನದ ಶೋಧನೆಯಾದರೆ, ಕಲೆ, ಆ ಜ್ಞಾನ. ಕಲೆ, ಪ್ರಕೃತಿಯ ಸ್ವಾಭಾವಿಕ ಬಂಧಗಳನ್ನು ಗುರುತಿಸಿದರೆ, ವಿಜ್ಞಾನವು ಪ್ರಕೃತಿಯನ್ನು ಅಸ್ವಾಭಾವಿಕವಾಗಿ ಮಾರ್ಪಡಿಸಲು ಪ್ರಯತ್ನಿಸುತ್ತದೆ. ಕಲೆಯ ಸತ್ವವಿಲ್ಲದ ವಿಜ್ಞಾನವು ವಿನಾಶಕಾರಿಯಾಗಬಹುದಷ್ಟೆ. ವಿಜ್ಞಾನವನ್ನಷ್ಟೇ ಆಸ್ವಾದಿಸಿದರೆ, ನಾವು ರಸರಹಿತ ಕಬ್ಬಿನಜಲ್ಲೆಯಂತೆ ಸತ್ವಹೀನರಾಗುತ್ತೇವೆ. ಈ ನಿಟ್ಟಿನಲ್ಲಿ, ವೈಜ್ಞಾನಿಕ ಆವಿಷ್ಕಾರಗಳನ್ನು ಕಲಾ ದೃಷ್ಟಿಕೋನಗಳಿಂದ ವಿಶ್ಲೇಷಿಸುವ ಅಗತ್ಯವಿದೆ. ಯಾಕೆಂದರೆ ಕಲೆ ಮನುಷ್ಯರನ್ನು ಒಟ್ಟುಗೂಡಿಸಿದರೆ, ವೈಜ್ಞಾನಿಕ ಆವಿಷ್ಕಾರಗಳು ಮನುಷ್ಯರನ್ನು ಒಂಟಿಯಾಗಿಸುತ್ತಿವೆ.

ಪ್ರತಿಕ್ರಿಯಿಸಿ (+)