ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬೇಡ ಬೆರಳಿಗೆ ಉಗುಳಿನ ಉಂಗುರ!

ಪುಸ್ತಕ, ಪತ್ರಿಕೆ ಮತ್ತು ದಾಖಲೆ ಪತ್ರಗಳ ಪುಟ ಹೊರಳಿಸಲು, ನೋಟುಗಳನ್ನು ಎಣಿಸಲು ಬೆರಳಿಗೆ ಉಗುಳು ಹಚ್ಚಿಕೊಳ್ಳುವ ಅನಾರೋಗ್ಯಕರ ನಡೆ ಎಲ್ಲೆಡೆಯೂ ಕಾಣಿಸುತ್ತದೆ
Published 14 ಜುಲೈ 2023, 20:02 IST
Last Updated 14 ಜುಲೈ 2023, 20:02 IST
ಅಕ್ಷರ ಗಾತ್ರ

ರಾಜ್ಯವೊಂದರ ಮುಖ್ಯಮಂತ್ರಿ ಉತ್ಸಾಹದಿಂದ ಬಜೆಟ್ ಮಂಡಿಸುತ್ತಿದ್ದರು. ನಾನು ಟಿ.ವಿ. ಮುಂದೆ ಕುಳಿತು ಬಜೆಟ್ ಮಂಡನೆಯನ್ನು ಪೂರ್ಣ ವೀಕ್ಷಿಸಿದೆ. ಆ ಗಣ್ಯರು ಬಜೆಟ್ ಓದುವಾಗ ಪುಸ್ತಕದ ಪುಟ ತಿರುವಲು ತಮ್ಮ ಬೆರಳನ್ನು ನಾಲಿಗೆಗೆ ತಾಗಿಸಿ ಹಸಿ ಮಾಡಿಕೊಳ್ಳುತ್ತಿದ್ದರು. ಅವರಿಗೆ ಸ್ವಲ್ಪ ಕೆಮ್ಮು ಇರುವುದು ಕಾಣಿಸಿತು. ಅವರು ಅದೇ ಕೈಯಿಂದ ಲೋಟ ಎತ್ತಿ ನೀರು ಕುಡಿದರು. ನಂತರ ಮತ್ತೆ ಬೆರಳಿಗೆ ಉಗುಳು ಹಚ್ಚಿಕೊಂಡು ಬಜೆಟ್ ಪುಸ್ತಕದ ಪುಟಗಳನ್ನು ತಿರುಗಿಸಿದ್ದು ನೋಡಿ ಬೇಸರವಾಯಿತು.

ಗಣ್ಯರು, ಅಧಿಕಾರಿಗಳು, ಕಚೇರಿಯ ಸಿಬ್ಬಂದಿ, ಅಧ್ಯಾಪಕರು, ವಿದ್ಯಾರ್ಥಿಗಳು ಸಹಜವಾಗಿ ಬೆರಳಿಗೆ ಉಗುಳು ಲೇಪಿಸಿ ಪುಟ ತಿರುವುತ್ತಾರೆ. ಪುಸ್ತಕ, ಪತ್ರಿಕೆ ಮತ್ತು ದಾಖಲೆ ಪತ್ರಗಳ ಪುಟ ಹೊರಳಿಸಲು ಬೆರಳಿಗೆ ಉಗುಳು ಹಚ್ಚಿಕೊಳ್ಳುವ ಅನಾರೋಗ್ಯಕರ ನಡೆ ಎಲ್ಲ ಕಡೆಗೂ ಕಾಣಿಸುತ್ತದೆ. ಸಾರ್ವಜನಿಕ ವಾಚನಾಲಯಗಳಲ್ಲಿ ಓದುಗರು ತಮ್ಮ ಬೆರಳಿಗೆ ಉಗುಳು ಹಚ್ಚಿಕೊಂಡು ಪುಟ ತಿರುಗಿಸುವ ಚಿತ್ರ ಸಾಮಾನ್ಯವಾಗಿ ಕಂಡುಬರುತ್ತದೆ. ಇಂಥ ಪುಸ್ತಕ, ಪತ್ರಿಕೆಗಳನ್ನು ಕೈಗೆತ್ತಿಕೊಂಡು ಓದುವುದಕ್ಕೆ ಬಹಳ ಮುಜುಗರವಾಗುತ್ತದೆ.

ಕೆಲವು ತಿಂಗಳುಗಳ ಹಿಂದೆ ಕಬ್ಬಿನ ಬೆಳೆಗೆ ಸಂಬಂಧಿಸಿದ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲು ಅಹಮದ್ ನಗರಕ್ಕೆ ಹೋಗಿದ್ದೆ. ಕಾರ್ಯಕ್ರಮದಲ್ಲಿ ವಿದೇಶಿ ಕೃಷಿ ವಿಜ್ಞಾನಿಗಳು 12 ಮಂದಿ ಭಾಗವಹಿಸಿದ್ದರು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸಿದ್ಧಪಡಿಸಿದ ತಮ್ಮ ಭಾಷಣದ ಪ್ರತಿ ಓದುವಾಗ ಬೆರಳಿಗೆ ಉಗುಳು ಲೇಪಿಸಿ ಪುಟ ತಿರುವುತ್ತಿದ್ದರು. ಅವರ ವರ್ತನೆ ಅಸಹ್ಯಕರವಾಗಿ ಕಾಣುತ್ತಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಸಚಿವರು ವಿದೇಶಿ ವಿಜ್ಞಾನಿಗಳ ಕೈಕುಲುಕಲು ಮುಂದಾದಾಗ ಅವರು ಸಂಕೋಚದಿಂದ ಹಿಂದೆ ಸರಿದು ಕೈಜೋಡಿಸಿ ನಮಸ್ಕರಿಸಿದರು. ವಿಚಾರಿಸಿದಾಗ, ಸಚಿವರು ಭಾಷಣ ಮಾಡುವಾಗ ಅನುಸರಿಸಿದ ಅಸಂಸ್ಕೃತ ನಡೆ ಅದಕ್ಕೆ ಕಾರಣ ಎಂಬ ಮಾಹಿತಿ ಬಹಿರಂಗಗೊಂಡಿತು. 

ಗಾಂಧೀಜಿ ಸ್ವಚ್ಛತೆಗೆ ಆದ್ಯತೆ ಕೊಡುತ್ತಿದ್ದರು. ಅವರ ಪುತ್ರ ಹರಿಲಾಲ್ ಅನಾರೋಗ್ಯದಿಂದ ಬಳಲುತ್ತಿದ್ದರು. ಸಣ್ಣ ವಯಸ್ಸಿನಲ್ಲಿಯೇ ವೃದ್ಧನಂತೆ ಕಾಣುತ್ತಿದ್ದರು. ಹಲ್ಲುಗಳ ತೊಂದರೆಯಿಂದ ಅವರು ಸದಾ ಬಾಯಲ್ಲಿ ಬೆರಳು ಇಟ್ಟುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಗಾಂಧೀಜಿ ಮಗನಿಗೆ ‘ಪದೇ ಪದೇ ಬಾಯಲ್ಲಿ ಬೆರಳು ಹಾಕಿಕೊಳ್ಳುವುದು ಸರಿಯಲ್ಲ. ಊಟಕ್ಕೆ ಮೊದಲು ಚೆನ್ನಾಗಿ ಕೈ ತೊಳೆದುಕೊಳ್ಳಬೇಕು. ಈ ಸರಳ ವಿಧಾನ ಅನುಸರಿಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಬಹಳಷ್ಟು ತೊಂದರೆಗಳು ದೂರವಾಗುತ್ತವೆ’ ಎಂದು ಮಾರ್ಗದರ್ಶನ ಮಾಡಿದ್ದರು.

ಮುಂಬೈ ನಗರದ ಒಂದು ಸ್ವಯಂ ಸೇವಾ ಸಂಸ್ಥೆಯು ಕೊಳೆಗೇರಿ ಪ್ರದೇಶದಲ್ಲಿ ವಾಸವಾಗಿರುವ 2,000 ಕುಟುಂಬಗಳಿಗೆ ಸ್ವಚ್ಛವಾಗಿ ಕೈ ತೊಳೆದುಕೊಳ್ಳುವ ಅಭಿಯಾನದ ಅಡಿಯಲ್ಲಿ ಉಚಿತವಾಗಿ ಸಾಬೂನು ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆರು ತಿಂಗಳ ನಂತರ ನಡೆಸಿದ ಸಮೀಕ್ಷೆಯಲ್ಲಿ, ಆ ಕುಟುಂಬಗಳ ಸದಸ್ಯರ ಆರೋಗ್ಯದಲ್ಲಿ ಭಾರಿ ಸುಧಾರಣೆಯಾಗಿದ್ದು ಕಂಡುಬಂದಿತ್ತು. ಸಾಬೂನು ಬಳಸಿ ಸ್ವಚ್ಛವಾಗಿ ಕೈ ತೊಳೆದುಕೊಂಡು ಊಟ ಮಾಡುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಕೊಳೆಗೇರಿ ವಾಸಿಗಳಲ್ಲಿ ಬಹಳಷ್ಟು ಅರಿವು ಮೂಡಿತ್ತು. ಸ್ವಯಂ ಸೇವಾ ಸಂಸ್ಥೆ ಉಚಿತವಾಗಿ ಸಾಬೂನು ಕೊಡುವುದನ್ನು ನಿಲ್ಲಿಸಿದೆ. ಆದರೆ ಕೊಳೆಗೇರಿವಾಸಿಗಳು ತಾವೇ ಸಾಬೂನು ಖರೀದಿಸಿ ಬಳಸುವ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ.

ನೋಟುಗಳನ್ನು ಎಣಿಸಲು ಬೆರಳಿಗೆ ಉಗುಳು ಹಚ್ಚಿಕೊಳ್ಳುವ ಪದ್ಧತಿ ಬಹಳ ಕಡೆ ಕಂಡುಬರುತ್ತದೆ. ನೋಟುಗಳ ಸಂಚಲನ ತುಂಬಾ ಅಧಿಕವಾಗಿರುವುದರಿಂದ ಅನಾರೋಗ್ಯ ಹರಡುವುದು ಹೆಚ್ಚಾಗುತ್ತದೆ. ನೋಟುಗಳು ಕೊಳೆಯಾಗುವುದಕ್ಕೆ ಇದು ಮುಖ್ಯ ಕಾರಣವಾಗಿದೆ.

ಬೆರಳಿಗೆ ಉಗುಳು ಹಚ್ಚಿಕೊಳ್ಳುವುದು ಸುಸಂಸ್ಕೃತ ನಡೆ ಎನಿಸುವುದಿಲ್ಲ. ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಜನ ಆರೋಗ್ಯಕರ ನಿಯಮಗಳನ್ನು ಪಾಲಿಸುವುದಕ್ಕೆ ಹೆಚ್ಚಿನ ಗಮನ ಕೊಡುತ್ತಿದ್ದರು. ಈಗ ಆ ಭಯ ಕಡಿಮೆಯಾಗಿದೆ. ಹೀಗಾಗಿ ಜನ ಬೆರಳಿಗೆ ಉಗುಳು ಹಚ್ಚಿಕೊಳ್ಳುವ ಕೆಟ್ಟ ವಿಧಾನವನ್ನು ಪುನರಾರಂಭಿಸಿದ್ದಾರೆ.

ಉತ್ತರಪ್ರದೇಶ ಸರ್ಕಾರ ಒಂದು ಸುತ್ತೋಲೆ ಹೊರಡಿಸಿ, ಕೈ ಬೆರಳಿಗೆ ಉಗುಳು ಹಚ್ಚಿ ದಾಖಲೆ ಪತ್ರಗಳು, ಪುಸ್ತಕಗಳು, ಕಡತಗಳು ಹಾಗೂ ದಫ್ತರುಗಳ ಪುಟ ತಿರುಗಿಸುವುದು ಅನಾರೋಗ್ಯಕರ, ಅಸಾಂಸ್ಕೃತಿಕ ವಿಧಾನ, ಇದನ್ನು ತಕ್ಷಣ  ನಿಲ್ಲಿಸಬೇಕು ಎಂದು ಸೂಚನೆ ನೀಡಿದೆ. ಉಗುಳು ಹಚ್ಚುವುದರಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ವಿವರವನ್ನು ಸುತ್ತೋಲೆಯಲ್ಲಿ ನೀಡಲಾಗಿದೆ. ಜಾಗೃತಿ ಫಲಕಗಳನ್ನು ಜನಸಂಚಾರ ಹೆಚ್ಚಾಗಿರುವ ಪ್ರದೇಶಗಳಲ್ಲಿ  ಅಳವಡಿಸಲಾಗಿದೆ. ಇದನ್ನೊಂದು ಆರೋಗ್ಯ ಜಾಗೃತಿ ಅಭಿಯಾನವಾಗಿ ಅಲ್ಲಿನ ಸರ್ಕಾರ ನಡೆಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಮಾದರಿಯನ್ನು ಅನುಸರಿಸುವುದು ತೀರ ಅವಶ್ಯವಾಗಿದೆ. ಅವಶ್ಯವಿರುವ ಕಡೆ ನೀರಿನ ಸ್ಪಂಜ್ ಪ್ಯಾಡ್ ಬಳಸುವ ವಿಧಾನ ಜಾರಿಗೆ ತರಬೇಕು. ಪುಟ ತಿರುಗಿಸುವುದಕ್ಕೆ ಬೆರಳು ಹಸಿ ಮಾಡಿಕೊಳ್ಳುವುದು ಅನಿವಾರ್ಯವಲ್ಲ. ಆಸಕ್ತಿಯಿಂದ ಸರಳವಾಗಿ ಪುಟ ತಿರುಗಿಸಬಹುದು. ಇದನ್ನು ರೂಢಿಸಿಕೊಳ್ಳಬೇಕು.

--

-ಮಲ್ಲಿಕಾರ್ಜುನ ಹೆಗ್ಗಳಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT