ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ ಅಂಕಣ: ಮಕ್ಕಳ ಊಟ ಮನೇಲಲ್ವೇ?

Published : 17 ಸೆಪ್ಟೆಂಬರ್ 2024, 23:47 IST
Last Updated : 17 ಸೆಪ್ಟೆಂಬರ್ 2024, 23:47 IST
ಫಾಲೋ ಮಾಡಿ
Comments

ವಿದ್ಯಾರ್ಥಿಗಳ ಶಿಸ್ತು ಮತ್ತು ಕಲಿಕಾ ಪ್ರಗತಿಯ ಕುರಿತು ಇತ್ತೀಚೆಗೆ ಪೋಷಕರ ಸಭೆಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಪೋಷಕರು ಪರಸ್ಪರ ಚರ್ಚಿಸುತ್ತಿದ್ದ ಸಂದರ್ಭ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹಾಜರಾಗದಿರುವುದು, ಮಧ್ಯಾಹ್ನದ ನಂತರದ ಅವಧಿಯಲ್ಲಿ ಉಪವಾಸ ಇರುವುದು ಅಥವಾ ಕುಂಟುನೆಪ ಹೇಳಿ ತರಗತಿ ತಪ್ಪಿಸಿಕೊಳ್ಳುತ್ತಿರುವ ಬಗೆಗೆ ಚರ್ಚೆ ಸಾಗಿತ್ತು.

ತಮ್ಮ ಮಕ್ಕಳು ಬೆಳಿಗ್ಗೆ ಎದ್ದು ಮನೆಯಲ್ಲಿ ಉಪಾಹಾರವನ್ನೇ ಸೇವಿಸದೆ ಕಾಲೇಜಿಗೆ ಹೊರಟು ಬರುತ್ತಿರುವ ಬಗ್ಗೆ ಕೆಲವು ಪೋಷಕರು ಹೇಳಿಕೊಂಡರು. ಮಕ್ಕಳು ಮಧ್ಯಾಹ್ನದ ಊಟದ ಬುತ್ತಿಯನ್ನು ಕೊಂಡೊಯ್ಯಲು ನಿರಾಕರಿಸಿ ಬೀದಿಬದಿಯ ಅಂಗಡಿ-ಗಾಡಿಗಳ ಮುಂದೆ ಸಾಲುಗಟ್ಟುತ್ತಿರುವುದು ಕೂಡ ಇತ್ತೀಚೆಗೆ ಸಾಮಾನ್ಯವಾಗಿದೆ. ಹಲವು ವಿದ್ಯಾರ್ಥಿಗಳಲ್ಲಿ ದಿನಂಪ್ರತಿ ಒಂದಿಲ್ಲೊಂದು ಅನಾರೋಗ್ಯದ ಸಮಸ್ಯೆ ಗೋಚರಿಸುತ್ತಿದೆ. ಇದು, ಅವರ ಓದಿನ ಮೇಲೂ ಅಡ್ಡಪರಿಣಾಮ ಬೀರುತ್ತಿರುವುದು ಪೋಷಕರ ಕಳವಳಕ್ಕಿದ್ದ ಮತ್ತೊಂದು ಕಾರಣ.

ಹಾಗಾದರೆ ಮಕ್ಕಳಿಗೆ ಮನೆಯ ಊಟ ಸಪ್ಪೆಯಾಗಿ, ಹೊರಗಿನ ತಿಂಡಿತಿನಿಸು ಮಾತ್ರ ರುಚಿಸಲು ಕಾರಣವೇನು? ಬೆಳೆಯುವ ಮಕ್ಕಳ ಆರೋಗ್ಯಕ್ಕೆ ಬೇಕಾದ ಆಹಾರ ಪದ್ಧತಿ ಹೇಗಿರಬೇಕು? ‘ಪೌಷ್ಟಿಕಾಂಶ ಸಪ್ತಾಹ’ದ ನೆಪದಲ್ಲಿ (ಸೆಪ್ಟೆಂಬರ್ ಮೊದಲ ವಾರ) ಆಹಾರ ಮತ್ತು ಪೌಷ್ಟಿಕ ತಜ್ಞರನ್ನು ಕರೆಸಿ ಪೌಷ್ಟಿಕಾಂಶಗಳ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.

ನಾಲಿಗೆಯ ರುಚಿಗೂ ಶಾರೀರಿಕ ಅಗತ್ಯಕ್ಕೂ ತಾಳೆ ಹೊಂದದಿರುವುದೇ ನಮ್ಮ ದೊಡ್ಡ ಸಮಸ್ಯೆ
ಆಗಿರುವುದು ಇಲ್ಲಿ ಗಮನಾರ್ಹ. ದೇಹದ ಬೆಳವಣಿಗೆ, ಶಕ್ತಿ ಉತ್ಪಾದನೆ, ಆರೋಗ್ಯ, ನಿಯಂತ್ರಣಕ್ಕೆ ತಕ್ಕುದಾದ ಆಹಾರ ಪದಾರ್ಥಗಳು ನಾಲಿಗೆಗೆ ಹಿತಕರ ಎನಿಸುವುದಿಲ್ಲ ಎಂಬುದೇ ವಿಪರ್ಯಾಸ! ಹಾಗಾಗಿ, ಕೆಲವೇ ಸೆಕೆಂಡುಗಳ ಕಾಲ ತನ್ನ ಮೇಲೆ ಇರಿಸಿಕೊಳ್ಳುವ ನಾಲಿಗೆಯ ಚಪಲವನ್ನು ತಕ್ಕಮಟ್ಟಿಗೆ ನಿಯಂತ್ರಿಸಿಕೊಂಡು, ದೀರ್ಘಾವಧಿಯಲ್ಲಿ ಸಲ್ಲಬೇಕಾದ ದೈಹಿಕ ಮತ್ತು ಆರೋಗ್ಯದ ಕರೆಗೆ ಓಗೊಡಬೇಕಾದದ್ದು ಅನಿವಾರ್ಯ. ಆದ್ದರಿಂದ ನಾವೀಗ ಪೋಷಕಾಂಶಯುಕ್ತ ಆಹಾರ ದಿನಚರಿಗೆ ಒಗ್ಗಿಕೊಳ್ಳಲೇಬೇಕಾಗಿದೆ.

ಬೆಳವಣಿಗೆ, ಸಂಸ್ಕರಣೆ, ಶೇಖರಣೆಯ ಹಂತಗಳಲ್ಲಿ ವಿಷವುಂಡಿರುವ ಹಣ್ಣು-ತರಕಾರಿ, ದವಸ- ಧಾನ್ಯಗಳು ಅಡುಗೆಮನೆ ಪ್ರವೇಶಿಸುತ್ತಿವೆ. ಮಾರುಕಟ್ಟೆಯ ಸಂರಕ್ಷಿತ ಆಹಾರ ಪದಾರ್ಥಗಳು ಸಾರ್ವಜನಿಕ ಆರೋಗ್ಯಕ್ಕೆ ಸವಾಲೆಸೆದಿವೆ. ಹೋಟೆಲುಗಳ ಸಂಖ್ಯೆ ಹೆಚ್ಚಿದಂತೆಲ್ಲಾ ಆಸ್ಪತ್ರೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜನರ ಆರೋಗ್ಯಮಟ್ಟ ದಿನೇದಿನೇ ಕುಸಿಯುತ್ತಿದೆ. 

ಮನೆಯ ಹೊರಗಿನ ಆಹಾರ ಸೇವನೆಯಲ್ಲಿನ ಗಂಭೀರ ಸಮಸ್ಯೆ ಏನೆಂದರೆ, ಗ್ರಾಹಕರನ್ನು ಸೆಳೆಯಲು ಹೋಟೆಲು, ರೆಸ್ಟೊರೆಂಟ್ ಮತ್ತು ಬೀದಿಬದಿ ಅಂಗಡಿಗಳ ತಿಂಡಿತಿನಿಸುಗಳಲ್ಲಿ ಪರಿಮಳ ಹಾಗೂ ಬಾಯಿರುಚಿಗೆ ಒತ್ತು ಕೊಟ್ಟಿರುತ್ತಾರೆ ಎಂಬ ದೂರಿದೆ. ಗೋಬಿ ಮಂಚೂರಿ, ಪಾನಿಪೂರಿ, ನೂಡಲ್ಸ್, ಫ್ರೈಡ್‌ರೈಸ್, ಸೂಪ್‌ನಂತಹ ಹಲವಾರು ಆಹಾರ ಪದಾರ್ಥಗಳಲ್ಲಿ ಅಸುರಕ್ಷಿತ ಮತ್ತು ಹಾನಿಕಾರಕ ರಾಸಾಯನಿಕಗಳ ಬಳಕೆ ಹೆಚ್ಚಿದೆ ಎಂಬ ವರದಿಗಳಿವೆ. ಅಡುಗೆಎಣ್ಣೆಯ ಕಲಬೆರಕೆ ಮತ್ತು ಪುನಃಪುನಃ ಬಳಸಲಾಗುತ್ತಿರುವ ಕರಿದ ಎಣ್ಣೆ, ವಿಶೇಷವಾಗಿ ಮಿತಿಮೀರಿ  ಬಳಸಲಾಗುತ್ತಿರುವ ‘ಮಾನೊಸೋಡಿಯಂ ಗ್ಲುಟಮೇಟ್’ (ಎಂಎಸ್‌ಜಿ) ಎಂಬ ಪರಿಮಳವರ್ಧಕವಾದ ಲವಣವು ನಿಧಾನ ವಿಷವಾಗಿದೆ. ಮಾರುಕಟ್ಟೆಗಳಲ್ಲಿ ‘ಅಜಿನೋಮೋಟೊ’ ಎಂಬ ಜಪಾನಿ ಹೆಸರಿನಿಂದ ಗುರುತಿಸಲ್ಪಡುವ ಇದು ಅನೇಕ ಸಂಶೋಧನೆಗಳ ಪ್ರಕಾರ ನಿರ್ಜಲೀಕರಣ, ತಲೆನೋವು, ಎದೆನೋವು, ಉಸಿರಾಟ ದೋಷ, ಮೂಳೆ ಸವೆತ, ಮಧುಮೇಹ, ರಕ್ತದೊತ್ತಡ, ಬೊಜ್ಜು ಹೀಗೆ ಅಪರಿಮಿತ ರೋಗಗಳಿಗೆ ಮೂಲವಾಗಬಲ್ಲದು.

ರುಚಿಕರ ವಿಷಕಾರಿ ಅಜಿನೋಮೋಟೊದ ಹೆಚ್ಚಿನ ಸೇವನೆಯು ಕೇಂದ್ರ ನರಮಂಡಲವನ್ನು ಗಾಸಿಗೊಳಿಸುತ್ತದೆ ಮತ್ತು ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗುತ್ತದೆ. ಇಲಿಗಳ ಮೇಲಿನ ಅನೇಕ ಪ್ರಯೋಗಗಳು ಇದನ್ನು ದೃಢಪಡಿಸಿರುವ ಬಗ್ಗೆ ವರದಿಗಳಿವೆ. ಎಂಎಸ್‌ಜಿಯನ್ನು ಉಪಯೋಗಿಸಿ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ತಿನ್ನುವವರನ್ನು ಚೈನೀಸ್ ರೆಸ್ಟೊರೆಂಟ್ ಸಿಂಡ್ರೋಮ್ ಬಾಧಿಸುತ್ತದೆ.

ಎಂಎಸ್‌ಜಿಗೆ ಮೂಲವಾದ ಗ್ಲುಟಮಿಕ್ ಆ್ಯಸಿಡ್ ದೇಹದಲ್ಲಿಯೇ ಉತ್ಪತ್ತಿಯಾಗುವ ಅಮಿನೊ ಆಮ್ಲವಾಗಿದ್ದು, ಇದು  ನೈಸರ್ಗಿಕವಾಗಿ ತರಕಾರಿಗಳು, ಟೊಮ್ಯಾಟೊ, ಮೀನು, ಮಾಂಸ, ಮೊಟ್ಟೆ, ಚೀಸ್, ಡೈರಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಮಿತಬಳಕೆ ಹಾನಿಕರವಲ್ಲ. ಪುರಾತನ ಕಾಲದಿಂದಲೂ ಬಳಸ
ಲಾಗುತ್ತಿರುವ ಪದಾರ್ಥವಿದು. ಆದರೆ ಅತಿಯಾದಮತ್ತು ನಿರಂತರ ಸೇವನೆಯು ಹಾನಿಕಾರಕವಾದ್ದರಿಂದ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ಆಹಾರ ಪದಾರ್ಥಗಳಲ್ಲಿ ಎಂಎಸ್‌ಜಿ ಇಲ್ಲದಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು ಅವಶ್ಯಕ.

ಚಿಕ್ಕಪ್ರಾಯದಲ್ಲೇ ಹೃದಯಾಘಾತ, ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯಕ್ಕೆ ಆಹಾರದ ಕಲಬೆರಕೆ ಮುಖ್ಯ ಕಾರಣ. ಮನೆಯಾಚೆಯ ಆಹಾರ ಸೇವನೆ ಹೆಚ್ಚಿದಂತೆಲ್ಲಾ ಪೋಷಕಾಂಶಗಳ ಕೊರತೆ ಮತ್ತು ಹಲ
ವಾರು ರೋಗಬಾಧೆಗಳು ಎದುರಾಗುತ್ತವೆ. ಬೆಳೆಯುವ ಮಕ್ಕಳು ಕೃತಕ ಬಣ್ಣ, ರುಚಿ, ವಾಸನೆಗೆ ಮರುಳಾಗದೆ, ಮನೆಯಲ್ಲಿ ಶುಚಿರುಚಿಯಾಗಿ ತಯಾರಿಸಿದ ತಾಜಾ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸುವಂತೆ ಮನವರಿಕೆ ಮಾಡಿಕೊಡುವುದು ಅತ್ಯಂತ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT