ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ ಅಂಕಣ | ಎಳೆಯರ ಮನದಲ್ಲೆದ್ದಿದೆ ಅವ್ಯಕ್ತ ಸುನಾಮಿ!

ವ್ಯವಸ್ಥೆ ಹಳಿ ತಪ್ಪದಂತೆ ಇರಬೇಕಾದರೆ ಎಳೆಯರು ಕಲಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ
Last Updated 2 ಮಾರ್ಚ್ 2023, 23:30 IST
ಅಕ್ಷರ ಗಾತ್ರ

ಹನ್ನೊಂದು ವರ್ಷದ ಆ ಹುಡುಗನನ್ನು ತಂದೆ-ತಾಯಿ ತುಂಬಾ ಮುಜುಗರದಿಂದಲೇ ಆಪ್ತ ಸಮಾಲೋಚನೆಗೆ ಕರೆತಂದಿದ್ದರು. ಆರನೇ ತರಗತಿಯಲ್ಲಿರುವ ಆತ ಶಾಲೆಗೇ ಹೋಗುತ್ತಿಲ್ಲ. ಹಾಗಂತ ಈ ಸಮಸ್ಯೆ ಇತ್ತೀಚೆಗೆ ಕಾಣಿಸಿಕೊಂಡಿದ್ದಲ್ಲ. ಹಿಂದಿನ ವರ್ಷದಿಂದಲೇ ತರಗತಿ ತಪ್ಪಿಸುವ ಚಾಳಿ ಆರಂಭವಾಗಿ ಈಗ ತುಂಬಾ ಗಂಭೀರವಾಗಿದೆ!

‘ಕೋವಿಡ್‍ಗೆ ಮೊದಲು ಇವನು ಹೀಗಿರ್ಲಿಲ್ಲ. ನೆಟ್ಟಗೆ ಸ್ಕೂಲಿಗೆ ಹೋಗ್ತಿದ್ದ. ಓದೋದ್ರಲ್ಲೂ ಚುರುಕಿದ್ದ. ಆಮೇಲೆ ಹೀಗಾಗಿದ್ದು. ಹೊಡೆದು, ಬಡಿದು, ಬುದ್ಧಿ ಹೇಳಿ, ಹೇಳ್ಸಿ ಎಲ್ಲಾ ಆಯ್ತು. ಏನೂ ಉಪಯೋಗ ಆಗ್ಲಿಲ್ಲ. ಪೂಜೆ, ಹೋಮ, ಗ್ರಹಚಾರ ಶಾಂತಿನೂ ಮಾಡ್ಸಿ ಆಯ್ತು. ದಿನದಿಂದ ದಿನಕ್ಕೆ ಮೊಂಡುತನ ಜಾಸ್ತಿ ಆಗ್ತಿದೆ. ನಮ್ಗಂತೂ ದಿಕ್ಕೇ ತೋಚ್ತಿಲ್ಲ...’ ತಮ್ಮ ವ್ಯಥೆಯನ್ನು ಹೇಳುತ್ತಾ ಹೋದರು ಆ ಉದ್ಯೋಗಸ್ಥ ದಂಪತಿ. ಇನ್ನೂ ಆಳಕ್ಕೆ ಕೆದಕಿದಾಗ ಹೊರಬಿದ್ದ ಸಂಗತಿಗಳು ಮತ್ತಷ್ಟು ದಿಗಿಲು ಹುಟ್ಟಿಸುವಂತಿದ್ದವು.

‘ಇವ್ನಿಗೆ ಈಗ ಸ್ನೇಹಿತರೇ ಇಲ್ಲ. ಮನೇಲಿ ಟಿ.ವಿ. ಮುಂದೆ ಕೂತ್ರೆ ಏಳಲ್ಲ. ಬಲವಂತದಿಂದ ಎಬ್ಬಿಸಿದ್ರೆ ಮೊಬೈಲ್ ಹಿಡ್ಕೊತಾನೆ. ಅದನ್ನೂ ಕಸಿದುಕೊಂಡ್ರೆ ಹೊರ್ಗಡೆ ಸುತ್ತಕ್ಕೆ ಹೋಗ್ತಾನೆ. ಸ್ಕೂಲಿಗೆ ಹೋಗು ಅಂತ ಜಾಸ್ತಿ ಒತ್ತಡ ಹಾಕಕ್ಕೂ ಹೆದ್ರಿಕೆ ಆಗುತ್ತೆ. ಜೀವಕ್ಕೇನಾದ್ರೂ ಮಾಡ್ಕೊಂಡ್ರೆ ಅಂತ ಭಯ’ ಏಕೈಕ ಪುತ್ರನಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸಲ್ಲಿ ಪಾಪ ಆ ಹೆತ್ತವರು ತಾವು ಮಾಡಲು ಸಾಧ್ಯವಿದ್ದದ್ದನ್ನೆಲ್ಲಾ ಮಾಡಿದ್ದರು. ಆದರೆ ಅವನದ್ದು ಮಾತ್ರ ಒಂದೇ ಹಟ ‘ನಂಗಿಷ್ಟವಿಲ್ಲ, ನಾನು ಸ್ಕೂಲಿಗೆ ಹೋಗಲ್ಲ’ ಅಂತ.

ಹಲವು ಬಾರಿ ಬಲವಂತವಾಗಿಯೇ ಶಾಲೆಯೊಳಗೆ ದೂಡಿ ಬಂದಿದ್ದರು. ಯಾವುದೋ ಮಾಯೆಯಲ್ಲಿ ಶಿಕ್ಷಕರ ಕಣ್ಣುತಪ್ಪಿಸಿ ಓಡಿಬರುತ್ತಿದ್ದ. ಇದೇ ಕಾರಣಕ್ಕೆ ಒಂದೆರಡು ಬಾರಿ ಮನೆ ಬಿಟ್ಟು ಹೋದವನನ್ನು ಪತ್ತೆ ಹಚ್ಚಿ ವಾಪಸ್‌ ಕರೆತಂದ ಪ್ರಸಂಗ ವಿವರಿಸುವಾಗ ಗದ್ಗದಿತರಾಗಿದ್ದರು. ಯಾವ ರೀತಿ ರಮಿಸಿ ಕೇಳಿದರೂ ‘ಸ್ಕೂಲಿಗೆ ಹೋಗಲು ಇಷ್ಟವಿಲ್ಲ’ ಎಂಬ ಆ ಖಡಕ್ ಉತ್ತರ, ಹಟ ನಿಜಕ್ಕೂ ಕಳವಳಕಾರಿಯಾಗಿತ್ತು.

ಹೌದು, ಕೋವಿಡ್ ಸಾಂಕ್ರಾಮಿಕವು ಮಕ್ಕಳ ಕಲಿಕೆಯ ಎರಡು ಸುವರ್ಣ ವರ್ಷಗಳನ್ನು ಕಸಿದುಕೊಂಡಿರುವುದಷ್ಟೇ ಅಲ್ಲ ಎಳೆಯ ಮನಗಳಿಗೆ ಊಹಿಸಲಾಗದ ಮಟ್ಟದಲ್ಲಿ ಆಘಾತ ನೀಡಿದೆ. ತೀವ್ರವಾಗಿ ಬಾಧಿತರಾಗಿರುವ ಇಂತಹ ಮಕ್ಕಳನ್ನು ಓಲೈಸಿ ಮರಳಿ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸುವುದು ಕ್ಲಿಷ್ಟಕರ ಕಾರ್ಯ. ಎಳೆಯರ ಮನದಲ್ಲಿರುವ ಈ ಅವ್ಯಕ್ತ ಸುನಾಮಿಯನ್ನು ಶಮನಗೊಳಿಸಿ ಸಹಜತೆ ತರುವ ಕೆಲಸ ತುರ್ತಾಗಿ ಆಗಬೇಕಿದೆ.

ಶಾಲೆಗಳನ್ನು ಆಕರ್ಷಣೆಯ ತಾಣವಾಗಿಸಿ ಮಕ್ಕಳು ನಲಿವಿನಿಂದಲೇ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತಹ ಕಾರ್ಯಸಾಧು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಜರೂರತ್ತೂ ಎದುರಾಗಿದೆ. ಗ್ಯಾಜೆಟ್‍ಗಳ ಸೆರೆಗೆ ಸಿಲುಕಿ ಶಾಲೆ ಬಗ್ಗೆ ನಿರಾಸಕ್ತಿ ಬೆಳೆಸಿಕೊಳ್ಳುತ್ತಿರುವ ಚಿಣ್ಣರನ್ನು ಈ ಚಕ್ರವ್ಯೂಹದಿಂದ ನಾಜೂಕಾಗಿ ಬಿಡಿಸಿಕೊಳ್ಳುವ ಕೌಶಲ ಕಲಿಯಬೇಕಿದೆ.

ಹಿಂದಿನ ವರ್ಷದ ನವೆಂಬರ್‌ನಲ್ಲಿ ಹೈಕೋರ್ಟ್ ನೀಡಿದ ನಿರ್ದೇಶನದಂತೆ, ನಾಡಿನೆಲ್ಲೆಡೆ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಮೀಕ್ಷೆ ನಡೆದಿದೆ. ಅಂತಹ ಇಪ್ಪತ್ತನಾಲ್ಕು ಸಾವಿರಕ್ಕೂ ಅಧಿಕ ಮಕ್ಕಳನ್ನು ಗುರುತಿಸಲಾಗಿದ್ದು, ಇವರಲ್ಲಿ ಹದಿನೇಳು ಸಾವಿರದಷ್ಟು ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಸರ್ಕಾರ ತಿಳಿಸಿದೆ. ಹೊರಗುಳಿದವರ ವಾಸ್ತವ ಸಂಖ್ಯೆ ಇನ್ನೂ ದೊಡ್ಡ ಪ್ರಮಾಣದಲ್ಲಿದೆ ಎಂಬ ಅನುಮಾನಗಳಿವೆ. ಹೌದು, ಮನೆಯ ಬಡತನದಿಂದಾಗಿ ಎಳೆಯ ಕೈಗಳೂ ಕೆಲಸ ಮಾಡಬೇಕಾದ ಒತ್ತಡ, ವಲಸೆ ಸಮಸ್ಯೆ, ಪಾಲಕರ ನಿರಾಸಕ್ತಿ, ಅನಾರೋಗ್ಯ, ನಾಪತ್ತೆಯಂತಹ ಕಾರಣಗಳಿಂದ ಶಾಲೆ ಬಿಡುವವರ ಸಂಖ್ಯೆ ಮೊದಲಿನಿಂದಲೂ ಆತಂಕಕಾರಿ ಪ್ರಮಾಣದಲ್ಲಿದೆ. ಈಗ ಕೋವಿಡ್‍ನಿಂದಾದ ತಲ್ಲಣ, ಪಲ್ಲಟಗಳು ಈ ಅಂಕಿ ಅಂಶಗಳು ಮತ್ತಷ್ಟು ಉಬ್ಬಲು ಕಾರಣವಾಗುತ್ತಿರುವುದಕ್ಕೆ ಪುರಾವೆಗಳು ಢಾಳಾಗಿ ಕಾಣಿಸುತ್ತಿವೆ!

ಶಿಕ್ಷಣದ ಮಹತ್ವ ಅರಿತಿರುವ ಜಾಗೃತ ಪೋಷಕರಾಗಿದ್ದರೆ ಮಕ್ಕಳು ಶಾಲೆ ಬಿಡದಂತೆ ಎಚ್ಚರ ವಹಿಸುತ್ತಾರೆ. ಆದರೆ ಎಳೆಯರನ್ನೂ ವಿವಿಧ ಕಾರಣಗಳಿಗಾಗಿ ದುಡಿಮೆಗೆ ಹಚ್ಚುವ ಹೆತ್ತವರಿದ್ದಾಗ ಸಹಜವಾಗಿಯೇ ಮಕ್ಕಳು ಶಿಕ್ಷಣ ವಂಚಿತರಾಗುತ್ತಾರೆ. ಇಂತಹ ಚಿಣ್ಣರನ್ನು ಗುರುತಿಸಿ ಮರಳಿ ಶಾಲೆಗೆ ಕರೆತರುವ ಗುರುತರ ಜವಾಬ್ದಾರಿ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳದ್ದಾದರೂ ಇಲ್ಲಿ ಸಮಾಜ, ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯ.

ಅಕ್ಷರವಂಚಿತ ಮಕ್ಕಳನ್ನು ಆಸೆ–ಆಮಿಷಗಳಿಗೆ ಬಲಿಯಾಗಿಸಿ ಹಾದಿ ತಪ್ಪಿಸುವ ಖಳರ ಸಂಖ್ಯೆಯೂ ದೊಡ್ಡದಿದೆ. ಮಕ್ಕಳಿಗೆ ಮದ್ಯ, ಮಾದಕದ್ರವ್ಯಗಳ ಚಟ ಹಿಡಿಸುವ, ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ, ಅವರನ್ನು ಭಿಕ್ಷಾಟನೆ, ಡ್ರಗ್ಸ್ ದಂಧೆಗೆ ತಳ್ಳುವ ಜಾಲವೂ ಸಕ್ರಿಯವಾಗಿದೆ. ಶಾಲೆಯಿಂದ ಹೊರಗುಳಿದು ಬೀದಿ ಸುತ್ತುವ ಮಕ್ಕಳು ಇಂತಹ ಖೆಡ್ಡಾಕ್ಕೆ ಬೀಳುವ ಅಪಾಯ ಹೆಚ್ಚು. ಹಾಗಾಗಿ ಆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾತ್ರವಲ್ಲ ಸಾಮಾಜಿಕ ನೆಮ್ಮದಿಗಾಗಿ, ವ್ಯವಸ್ಥೆ ಹಳಿ ತಪ್ಪದಿರಲು ಎಳೆಯರು ಕಲಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT