ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಾಧನೆಗೆ ಅಡ್ಡಿಯಾಗದಿರಲಿ ಸಹಜ ಕ್ರಿಯೆ

ಈ ಸಹಜ ಕ್ರಿಯೆಯನ್ನು ಹೆಣ್ಣುಮಕ್ಕಳು ಎಲ್ಲದಕ್ಕೂ ನೆಪವಾಗಿ ಬಳಸಿಕೊಂಡರೆ, ತಮ್ಮ ಶೈಕ್ಷಣಿಕ ಮತ್ತು ಇತರ ಸಾಧನೆಗಳಿಗೆ ಸ್ವತಃ ಅಡ್ಡಗಾಲು ಹಾಕಿಕೊಂಡಂತೆ ಆಗುತ್ತದೆ
Published 26 ಮೇ 2023, 23:02 IST
Last Updated 26 ಮೇ 2023, 23:02 IST
ಅಕ್ಷರ ಗಾತ್ರ

ಅವು ತೊಂಬತ್ತರ ದಶಕದ ದಿನಗಳು. ನಾನು ವೈದ್ಯಕೀಯ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದೆ. ಹಾಸ್ಟೆಲಿನ ಕೋಣೆಯಲ್ಲಿ ನನ್ನ ಜೊತೆಗಿದ್ದಾಕೆ ಸ್ತ್ರೀ ಹಾಗೂ ಪ್ರಸೂತಿ ರೋಗ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ. ಒಂದು ಬೆಳಿಗ್ಗೆ ಆಕೆ ನೋವು ನಿವಾರಕ ಚುಚ್ಚುಮದ್ದು ಮತ್ತು ಸಿರಿಂಜ್‍ನೊಂದಿಗೆ ನನ್ನಲ್ಲಿಗೆ ಬಂದು, ‘ಇದನ್ನು ಈ ಕೂಡಲೇ ನನಗೆ ಕೊಡು’ ಎಂದಳು. ನಾನು, ‘ಏನಾಯಿತು’ ಎಂದು ಅಚ್ಚರಿಯಲ್ಲಿ ಕೇಳಿದಾಗ, ಆಕೆ ತನಗೆ ತನ್ನ ಪ್ರಾಧ್ಯಾಪಕರು ಆ ದಿನ ಮುಖ್ಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಲು ಅವಕಾಶ ಕೊಡುವವರಿದ್ದಾರೆಂದೂ, ಆದರೆ ತನಗೆ ತಿಂಗಳ ಋತುಸ್ರಾವದ ದಿನಗಳಾದ್ದರಿಂದ ವಿಪರೀತ ಕಿಬ್ಬೊಟ್ಟೆ ನೋವಿರುವುದೆಂದೂ, ಪ್ರಾಧ್ಯಾಪಕರು ಅನುಗ್ರಹಿಸಿರುವ ಆ ಅವಕಾಶವನ್ನು ತಾನು ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲವೆಂದೂ, ಹಾಗಾಗಿ ಆ ಚುಚ್ಚುಮದ್ದನ್ನು ತನಗೆ ಕೊಡಬೇಕೆಂದೂ ಹೇಳಿದ್ದಳು.

ನೋವು ನಿವಾರಕ ಚುಚುಮದ್ದಿನ ಸಹಾಯ ಪಡೆದು, ಎಂದಿನ ಕ್ಷಮತೆಯನ್ನೇ ಕಾಪಾಡಿಕೊಂಡು ಶಸ್ತ್ರಚಿಕಿತ್ಸೆಯ ತಂತ್ರಗಳನ್ನು ಕಲಿಯುವ ಆಶಯ ಆಕೆಯದಾಗಿತ್ತು. ಎಲ್ಲವೂ ಅವಳು ನಿಶ್ಚಯಿಸಿದಂತೆಯೇ ನಡೆದು ಸಂಜೆ ಅತ್ಯಂತ ಖುಷಿಯಿಂದ ಮಹತ್ವದ ಶಸ್ತ್ರಚಿಕಿತ್ಸೆಗೆ ಮೊದಲನೇ ಸಹಾಯಕಿ ಆಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿತು ಎಂದು ಸಂಭ್ರಮಪಟ್ಟಿದ್ದಳು.

ಋತುಸ್ರಾವದ ನೋವಿನ ನೆಪವೊಡ್ಡಿ ತನ್ನ ವೃತ್ತಿ ಬದುಕಿನ ಮಹತ್ತರವಾದ ಕಲಿಕೆಯಿಂದ ವಂಚಿತಳಾಗದಿರಲು, ಆಕೆ ಲಭ್ಯವಿದ್ದ ಮಾರ್ಗೋಪಾಯ ಹುಡುಕಿ ಯಶಸ್ವಿಯಾಗಿದ್ದಳು. ಇಂತಹ ದೃಢ ನಿರ್ಧಾರ ಗಟ್ಟಿಗಿತ್ತಿಯರಿಗೆ ಮಾತ್ರ ಸಾಧ್ಯ. ಆದರೆ, ಮೂವತ್ತು ವರ್ಷ ಹಿಂದಿನ ನನ್ನ ಸಹಪಾಠಿಯ ನಿಲುವೇ ಈ ವರ್ಷದ ಮುಟ್ಟಿನ ನೈರ್ಮಲ್ಯದ ದಿನದ (ಮೇ 28) ಪರಿಕಲ್ಪನೆಯೂ ಆಗಿದೆ. ‘ಋತುಸ್ರಾವದ ನೆಪ ಹೇಳಿ ಜೀವನದ ಮಹತ್ವದ ವಿದ್ಯಮಾನಗಳಿಂದ ವಂಚಿತರಾಗದಿರಿ, ಅದೊಂದು ಸಹಜ ಮತ್ತು ಸ್ವಾಭಾವಿಕ ಕ್ರಿಯೆ ಎಂದು ಒಪ್ಪಿಕೊಳ್ಳಿ’ ಎಂಬುದು ಈ ವರ್ಷದ ಕರೆ.

ನಿಜ, ಹೆಣ್ಣುಮಕ್ಕಳಲ್ಲಿ ಕಂಡುಬರುವ ಸ್ವಾಭಾವಿಕ ಶಾರೀರಿಕ ಕ್ರಿಯೆ ಮಾಸಿಕ ಋತುಸ್ರಾವ. ಶರೀರದ ರಸದೂತಗಳ ಸ್ರವಿಸುವಿಕೆಯ ಪರಿಣಾಮದಿಂದ ಆಗುವ ಕ್ರಿಯೆ ಇದಾದರೂ, ಇದರ ಅನುಭವ ಪ್ರತಿಯೊಬ್ಬ ಹೆಣ್ಣುಮಗಳಲ್ಲಿಯೂ ಭಿನ್ನ. ಕೆಲವರಲ್ಲಿ ಯಾವುದೇ ತೊಡಕು ತೊಂದರೆಗಳಿಲ್ಲದೆ ಸಂಭವಿಸುವ ಈ ಮಾಸಿಕ ಕ್ರಿಯೆ, ಇನ್ನು ಕೆಲವರನ್ನು ದೈಹಿಕವಾಗಿಯೂ ಮಾನಸಿಕವಾಗಿಯೂ ಕುಗ್ಗಿಸುತ್ತದೆ. ಆ ಸಮಯದಲ್ಲಿ ಅವರು ಓದು, ಆಟೋಟದಂತಹ ಚಟುವಟಿಕೆಗಳಲ್ಲಿ ಎಂದಿನಂತೆ ಆಸಕ್ತಿಯಿಂದ ಭಾಗವಹಿಸಲು ಕಷ್ಟ ಎನ್ನಿಸಬಹುದು. ಒಂದಿಷ್ಟು ಕುಟುಂಬಗಳಲ್ಲಿ ಪೋಷಕರೂ ಅದಕ್ಕೆ ಸಮ್ಮತಿಸುತ್ತಾ ಆ ದಿನಗಳಲ್ಲಿ ಮಕ್ಕಳು ಆಟೋಟಗಳಲ್ಲಿ ತೊಡಗಿಕೊಳ್ಳುವುದನ್ನು ಸಂಪೂರ್ಣ ನಿಷೇಧಿಸಬಹುದು. ಆದರೆ, ಪ್ರತಿ ತಿಂಗಳೂ ಇದು ಪುನರಾವರ್ತಿಸಿದಾಗ, ಮಕ್ಕಳು ಎಷ್ಟೋ ಚಟುವಟಿಕೆಗಳಲ್ಲಿ ಒಳ್ಳೆಯ ಅವಕಾಶಗಳಿಂದ ವಂಚಿತರಾಗಬಹುದು. ಹೀಗೆಯೇ ಮುಂದುವರಿದಾಗ ಅನೇಕ ಹೆಣ್ಣುಮಕ್ಕಳ ಉತ್ತಮ ಸಾಧನೆಗೂ ಇದು ಅಡ್ಡಿಯಾಗಬಹುದು. ಇಂತಹ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.

ಮುಂದುವರಿದ ಔದ್ಯೋಗಿಕ ಬದುಕಿನಲ್ಲಿಯೂ ಇಂತಹ ವಿನಾಯಿತಿ ಮುಂದುವರಿದು, ಸಂಸ್ಥೆಯ ಅಥವಾ ಕಚೇರಿಯ ಮುಖ್ಯ ಆಗುಹೋಗುಗಳಲ್ಲಿ ಭಾಗವಹಿಸಲು ಹೆಣ್ಣುಮಕ್ಕಳು ತಪ್ಪಿಸಿಕೊಳ್ಳುವಂತೆ ಆಗಬಹುದು. ಇದರಿಂದಾಗಿ ಮಹಿಳೆಯರು ಪ್ರತಿಭೆಯಿದ್ದೂ, ಒಳ್ಳೆಯ ಸ್ಥಾನಗಳಿಗೆ ಏರುವುದರಿಂದ ಮತ್ತು ಮುಂದಿನ ಹುದ್ದೆಗಳಿಗೆ ಬಡ್ತಿ ಹೊಂದುವುದರಿಂದ ವಂಚಿತರಾಗುವುದೂ ಇದೆ. ಆದರೆ ಇವೆಲ್ಲವೂ ಅನೇಕ ವರ್ಷಗಳ ಹಿಂದಿನ ಕತೆ. ಈ ದಿನಗಳಲ್ಲಿ ಹೆಣ್ಣುಮಕ್ಕಳ ಎಲ್ಲಾ ಕ್ಷೇತ್ರಗಳಲ್ಲಿನ ಸಾಧನೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಅಂತರಿಕ್ಷ ಯಾನದಿಂದ ಹಿಡಿದು ಕ್ಲಿಷ್ಟಕರ ವೈಜ್ಞಾನಿಕ ಸಂಶೋಧನೆಗಳಲ್ಲಿಯೂ ಮಹಿಳೆಯರು ಸಾಧನೆ ಮಾಡಿದ್ದಾರೆ. ಪುರುಷರಷ್ಟೇ ಸಾಮರ್ಥ್ಯವನ್ನು ತೋರುತ್ತಾ ಮಹಿಳೆಯರು ವಿವಿಧ ರಂಗಗಳಲ್ಲಿ ದಾಪುಗಾಲು ಹಾಕಿದ್ದಾರೆ. ಮಹಿಳೆಯರ ಈ ಹಾದಿ ಇನ್ನೂ ಸುಗಮವಾಗಬೇಕು, ಅವರು ಯಾವುದೇ ನಿರ್ಬಂಧವಿಲ್ಲದೆ, ಅಳುಕಿಲ್ಲದೆ ಎಲ್ಲೆಡೆಯೂ ಕ್ಷಮತೆಯಿಂದ ತೊಡಗಿಕೊಳ್ಳಬೇಕು. ಇಂತಹದ್ದು ಸಾಧ್ಯವಾಗಬೇಕೆಂದರೆ, ಋತುಸ್ರಾವದ ಬಗ್ಗೆ ಇರುವ ಕಳಂಕ ಮತ್ತು ಮೂಢನಂಬಿಕೆಗಳನ್ನು ಹೊಡೆದೋಡಿಸುವ ಕಾರ್ಯವಾಗಬೇಕು. ಜೊತೆಯಲ್ಲಿಯೇ ಋತುಸ್ರಾವವನ್ನು ನಿರ್ವಹಿಸಲು ಈ ದಿನಗಳಲ್ಲಿ ಲಭ್ಯವಿರುವ ನವೀನ ರೀತಿಯ ಸಾಧನಗಳ ಬಗ್ಗೆ ಅರಿವು ಮೂಡಿಸುವ ಕೆಲಸವೂ ಆಗಬೇಕು.

ಮುಟ್ಟಿನ ಸುರಕ್ಷತೆ ಮತ್ತು ನೈರ್ಮಲ್ಯಕ್ಕಾಗಿ ಆಧುನಿಕ ವೈದ್ಯವಿಜ್ಞಾನದಲ್ಲಿ ಆವಿಷ್ಕಾರಗೊಂಡ ಪರಿಕರಗಳ ಬಗ್ಗೆ ಹೆಣ್ಣುಮಕ್ಕಳಿಗೆ ಮತ್ತು ಪೋಷಕರಿಗೆ ತಿಳಿಸಬೇಕು. ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಇದೊಂದು ಸಹಜ ಕ್ರಿಯೆ, ಇದನ್ನು ಯಾವುದಕ್ಕೂ ನೆಪವಾಗಿ ಬಳಸಿಕೊಳ್ಳಬಾರದು ಎಂಬ ದೃಢ ನಿಲುವನ್ನು ನಮ್ಮ ಹೆಣ್ಣುಮಕ್ಕಳು ತಾಳಬೇಕು. ಮನಸ್ಸಿನಲ್ಲಿ ಗಟ್ಟಿ ನಿರ್ಧಾರವಾದರೆ ಎಲ್ಲವೂ ಸಾಧ್ಯ, ಸುಗಮ.

ಇದು ಒಂದು ಆಯಾಮವಾದರೆ, ಇನ್ನು ಕೆಲವಡೆ ಮುಟ್ಟಿನ ಕ್ರಿಯೆಯನ್ನು ಮೈಲಿಗೆಯಂತೆ ನೋಡುವುದು, ಮುಖ್ಯ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದನ್ನು ನಿಷೇಧಿಸುವುದು, ಆ ಸಮಯದಲ್ಲಿ ವಿಶ್ರಾಂತಿ ಬೇಕೆಂದು ಮನೆಯಲ್ಲಿಯೇ ಮಕ್ಕಳನ್ನು ಕೂರಿಸಿಕೊಳ್ಳುವುದು ನಡೆದೇ ಇದೆ. ಕುಟುಂಬದವರ ಈ ನಿಲುವನ್ನು ಕೆಲವೆಡೆ ಹೆಣ್ಣುಮಕ್ಕಳೂ ಬೆಂಬಲಿಸಿ ವಿನಾಯಿತಿ ಪಡೆಯುವುದುಂಟು. ಇದು ಹೀಗೆಯೇ ನಡೆದುಕೊಂಡು ಹೋದರೆ ನಷ್ಟ ಹೆಣ್ಣುಮಕ್ಕಳಿಗೇ. ಕುಂಟುನೆಪಗಳನ್ನು ಹೇಳುತ್ತಾ ತಮ್ಮ ಶೈಕ್ಷಣಿಕ ಮತ್ತು ಇತರ ಸಾಧನೆಗಳಿಗೆ ತಾವೇ ಅಡ್ಡಗಾಲು ಹಾಕಿಕೊಂಡಂತೆ ಆಗುತ್ತದೆ. ಮುಂದುವರಿದ ವೈದ್ಯ ವಿಜ್ಞಾನದ ಸೌಲಭ್ಯವನ್ನು ಎಲ್ಲರೂ ಪಡೆಯಬೇಕು. ಸ್ತ್ರೀರೋಗ ತಜ್ಞರ ಸಲಹೆ ಮತ್ತು ಮಾರ್ಗದರ್ಶನ ಪಡೆದು, ಆ ಸಮಯದಲ್ಲಿ ಬಳಸಬಹುದಾದ ನವೀನ ಮಾದರಿಯ ಪರಿಕರಗಳ ನೆರವನ್ನು ಪಡೆದು, ಇತರ ದಿನಗಳಂತೆಯೇ ಆ ದಿನಗಳಲ್ಲಿಯೂ ಕ್ರಿಯಾಶೀಲರಾಗಿರಲು ಮನಸ್ಸು ಮಾಡಬೇಕು. ಇದಕ್ಕೆ ಪೋಷಕರು ಮತ್ತು ಕುಟುಂಬದ ಇತರ ಸದಸ್ಯರ ಸಹಾಯವೂ ಅತ್ಯಗತ್ಯ.

ವೈದ್ಯರ ಸಮಾಲೋಚನೆಯ ಜೊತೆಯಲ್ಲಿ, ಆ ದಿನಗಳಲ್ಲಿಯೂ ತಾನು ಸಹಜವಾಗಿಯೇ ಇರುವೆನೆಂಬ ಛಲ, ದೃಢ ಸಂಕಲ್ಪವೂ ನಮ್ಮ ಹೆಣ್ಣುಮಕ್ಕಳಿಗೆ ಅತ್ಯಗತ್ಯ. ಈ ದಿಸೆಯಲ್ಲಿ, ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವತ್ತ ಯುವತಿಯರು ಚಿತ್ತ ಹರಿಸಬೇಕು. ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ, ಬಹಳಷ್ಟು ನೀರು, ಯೋಗ, ನಡಿಗೆ, ಪ್ರಾಣಾಯಾಮ, ಧ್ಯಾನದಂತಹ ಅಭ್ಯಾಸಗಳೂ ಸಹಕಾರಿ. ಆದರೆ ಎಲ್ಲಕ್ಕಿಂತ ಮುಖ್ಯವಾದದ್ದು ದೃಢ ನಿಲುವು ಮತ್ತು ಮನಸ್ಸನ್ನು ಅಣಿ ಮಾಡಿಕೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT