ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನೃತ್ಯ ಪರೀಕ್ಷೆ– ಸುಧಾರಣೆ ಸಾಧ್ಯವೇ?

ನೃತ್ಯ, ಸಂಗೀತ ಪರೀಕ್ಷೆಗಳು ನಾವು ‘ಬಹುಮುಖ್ಯ’ ಎಂದು ಭಾವಿಸುವ ಶೈಕ್ಷಣಿಕ ಶಾಲಾ ಪರೀಕ್ಷೆಗಳಿಗಿಂತ ಭಿನ್ನ
Published 28 ಏಪ್ರಿಲ್ 2023, 20:35 IST
Last Updated 28 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ವಿಶ್ವ ನೃತ್ಯ ದಿನದ (ಏ. 29) ಸಂದರ್ಭದಲ್ಲಿಯೇ ಕರ್ನಾಟಕದ ನೃತ್ಯ ಜಗತ್ತಿನಲ್ಲಿ ಬಹುದಿನಗಳ ನಂತರ ಹೊಸತೊಂದು ಸಂಭವಿಸಿದೆ! ನೃತ್ಯ, ಸಂಗೀತ, ತಾಳವಾದ್ಯಗಳಿಗೆ ಸಂಬಂಧಿಸಿದ ವಿಶೇಷ ಪರೀಕ್ಷೆಗಳ ನಿರ್ವಹಣೆಯ ಹೊಣೆಯನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲಾಗಿದೆ. ಈ ಹಿಂದೆಯೂ ಈ ವರ್ಗಾವಣೆ ನಡೆದಿತ್ತು! ಆಗ ವಿಶ್ವವಿದ್ಯಾಲಯ ಆ ಹೊಣೆಗಾರಿಕೆಯನ್ನು ಒಪ್ಪದೆ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೂ ಹೊಣೆ ಹೊರಲು ನಿರಾಕರಿಸಿ, ಒಂದು ವರ್ಷ ಪರೀಕ್ಷೆಗಳೇ ನಡೆಯದೆ, ಆಮೇಲೆ ‘ಮೇ’ಯಲ್ಲಿ ನಡೆಯಬೇಕಿದ್ದ ಪರೀಕ್ಷೆ ಒಂದೂವರೆ ವರ್ಷಗಳಷ್ಟು ತಡವಾಗಿ ಅಕ್ಬೋಬರ್ ತಿಂಗಳಲ್ಲಿ ನಡೆದಿತ್ತು. ಈಗ ವಿಶ್ವವಿದ್ಯಾಲಯ ತೆರೆದ ಕೈಗಳಿಂದ ಪರೀಕ್ಷೆಯ ಜವಾಬ್ದಾರಿ ಹೊರಲು ಸಿದ್ಧವಾಗಿರುವುದು ಸ್ವಾಗತಾರ್ಹ ಮತ್ತು ಅಚ್ಚರಿಯ ಬೆಳವಣಿಗೆಯೇ.

ಆದರೆ ಒಂದು ಮಂಡಳಿಯಿಂದ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿದ ಮಾತ್ರಕ್ಕೆ ಪರೀಕ್ಷಾ ಕ್ರಮದಲ್ಲಿ ಸುಧಾರಣೆ ಸುಲಭ ಸಾಧ್ಯವೆಂದು ಹೇಳಲು ಬರುವಂತಿಲ್ಲ. ಅದರ ಕಾರಣಗಳನ್ನು ಹುಡುಕಲು, ಇರುವ ಅಡ್ಡಿಗಳನ್ನು ಸರಿಪಡಿಸಲು ನಡೆಯಬೇಕಾದ ಚರ್ಚೆ, ಅಧ್ಯಯನ ಅಪಾರ. ಕಲಾವಿದರು, ನೃತ್ಯ, ಸಂಗೀತ ಶಿಕ್ಷಕರನ್ನು ಒಂದೆಡೆ ಸೇರಿಸಿ ಅಭಿಪ್ರಾಯಗಳನ್ನು ಸಂಗ್ರಹಿಸುವುದೂ ಅಗತ್ಯ.

ನೃತ್ಯ, ಸಂಗೀತ ಪರೀಕ್ಷೆಗಳು ನಾವು ‘ಬಹುಮುಖ್ಯ’ ಎಂದು ಭಾವಿಸುವ ‘ಶೈಕ್ಷಣಿಕ’ ಶಾಲಾ ಪರೀಕ್ಷೆಗಳಿಗಿಂತ ಭಿನ್ನ. ಹತ್ತು ವರ್ಷ ವಯಸ್ಸು ದಾಟಿದ ಯಾರೂ ಜೂನಿಯರ್ ಪರೀಕ್ಷೆ ತೆಗೆದುಕೊಳ್ಳಬಹುದು. ಹತ್ತು ವರ್ಷದಿಂದ 60 ವರ್ಷದವರೆಗಿನ ಅಭ್ಯರ್ಥಿಗಳು ಒಂದೇ ಶಾಸ್ತ್ರ (ಥಿಯರಿ) ಪ್ರಶ್ನೆಪತ್ರಿಕೆ, ಪ್ರಯೋಗ (ಪ್ರ್ಯಾಕ್ಟಿಕಲ್) ಪರೀಕ್ಷೆಗಳಲ್ಲಿ ಭಾಗಿಯಾಗುತ್ತಾರೆ. ನಾವು ಇವುಗಳನ್ನು ‘ವಿಶೇಷ’ ಎಂದು ಭಾವಿಸುವುದು ಬರೀ ಈ ಅಂಶದಿಂದಷ್ಟೇ ಅಲ್ಲ!

ಸಾಮಾನ್ಯವಾಗಿ ಇಡೀ ವರ್ಷ ಓದಿ, ಆಗಾಗ್ಗೆ ಕಿರುಪರೀಕ್ಷೆ ಬರೆದು, ಶಾಲೆಯಲ್ಲಿ ಮಾರ್ಚ್ ತಿಂಗಳಲ್ಲಿ ದೊಡ್ಡ ಪರೀಕ್ಷೆ ಬರೆದರೆ, ಇಲ್ಲಿ ಹಾಗಲ್ಲ. ವಾರಕ್ಕೆ ಎರಡೇ ತರಗತಿ, ಅದೂ ಹೆಚ್ಚೆಂದರೆ ಒಂದು ಗಂಟೆ ಬಂದು, ಮಧ್ಯೆ ಮಧ್ಯೆ ತಪ್ಪಿಸಿ, ಆಮೇಲೆ ಮೇ ತಿಂಗಳಲ್ಲಿ ಊರಿಗೂ ಹೋಗಿ, ಹೇಗೋ ಶಾಸ್ತ್ರ ಉರು ಹೊಡೆದು, ಮೇ ತಿಂಗಳಲ್ಲಿ ಗುರು-ಶಿಷ್ಯ ಇಬ್ಬರೂ ಗಂಟೆಗಟ್ಟಲೆ ‘ಸಾಧನೆ’ ಮಾಡಿ ಒಮ್ಮೆಲೇ ಪರೀಕ್ಷೆ ಎದುರಿಸಬೇಕು. ಇದು ‘ವಿಶೇಷ’ವೇ ಅಲ್ಲವೇ? ನೃತ್ಯ ಕ್ಷೇತ್ರದಲ್ಲಿಯಂತೂ ಪಕ್ಕವಾದ್ಯ, ಹಾಡುಗಾರಿಕೆಗಳನ್ನೂ ಅಭ್ಯರ್ಥಿ ಒದಗಿಸಿಕೊಳ್ಳದೆ ವಿಧಿಯಿಲ್ಲ. ಆದ್ದರಿಂದ ಪರೀಕ್ಷೆ ಎಂದರೆ ಬಹಳಷ್ಟು ಖರ್ಚಿನ ಬಾಬತ್ತೇ. ಆದರೂ ಶೈಕ್ಷಣಿಕ ಟ್ಯೂಷನ್‍ಗಳು, ಶಾಲೆಗಳಿಗೆ ನಾವು ಸುರಿಯುವಷ್ಟು ಖರ್ಚಲ್ಲ!

ಪೋಷಕರು ದುಡ್ಡಿಗಾಗಿಯೇ ಪರೀಕ್ಷೆ ಕಟ್ಟಿಸುತ್ತಾರೆ ಎಂದು ದೂರಿದರೂ, ಪರೀಕ್ಷೆಯ ಸರ್ಟಿಫಿಕೇಟಿಗಾಗಿ ಹಾತೊರೆಯುವ ವಿದ್ಯಾರ್ಥಿ-ಪೋಷಕ ವೃಂದವೂ ಈ ವ್ಯವಸ್ಥೆಯ ಪಾಲುದಾರರೇ. ಸಂಗೀತ-ನೃತ್ಯಗಳ ಸಾಧನೆಗೆ ನಿರ್ದಿಷ್ಟ ಕಾಲಾವಧಿಯ ನಿರಂತರ ಅಭ್ಯಾಸ, ನಿಗದಿತ ಪಠ್ಯಕ್ರಮದ ಕಲಿಕೆಗೆ ಈ ಪರೀಕ್ಷೆಗಳು ನೆರವಾಗುತ್ತವೆ ಎಂಬುದು ನಿಜದ ಮಾತೇ.

ನೃತ್ಯ, ಸಂಗೀತ, ತಾಳವಾದ್ಯಗಳು ಪ್ರದರ್ಶನ ಕಲೆಗಳಷ್ಟೆ. ಹಾಗಾಗಿ ಬರೀ ಶಾಸ್ತ್ರ ಬಂದರೆ ಸಾಲದು. ಪ್ರಾಯೋಗಿಕ ಪ್ರದರ್ಶನವೇ ಇಲ್ಲಿ ಮಹತ್ವದ್ದು. ಹಾಗೆ ಪ್ರಾಯೋಗಿಕ ಪರೀಕ್ಷೆ ಮಾಡುವ ಪರೀಕ್ಷಾ ಮಂಡಳಿಯಲ್ಲಿ ಇರುವ ಪರೀಕ್ಷಕರ ಕಲಿಕೆಗೂ ಅಭ್ಯರ್ಥಿಯ ಕಲಿಕೆಯ ರೀತಿಗೂ ವ್ಯತ್ಯಾಸಗಳಿರಲು ಸಾಧ್ಯವಿದೆ. ಹಲವು ವಿಧದ, ಸರಿಯೇ ಆದ ಕಲಿಸುವ ಕ್ರಮಗಳಿರಲು ಸಾಧ್ಯ ಎಂಬ ವಿಶಾಲ ಮನೋಭಾವ ಎಲ್ಲ ಶಿಕ್ಷಕರಿಗೆ ಇರಬೇಕೆಂದಿಲ್ಲ. ಹಾಗಾಗಿ ಸಂಗೀತ, ನೃತ್ಯ ಪರೀಕ್ಷೆಗಳಲ್ಲಿ ಗೊಂದಲ, ದೂರುಗಳು ಬಲು ಸಾಮಾನ್ಯ.

ಇತ್ತೀಚಿನವರೆಗೆ, ಅಂದರೆ ಜನವರಿ 2023ರವರೆಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪಾಲಿಸಿಕೊಂಡು ಬಂದಿರುವ ಪರೀಕ್ಷಾ ಪಠ್ಯಕ್ರಮ ರೂಪುಗೊಂಡದ್ದು 1994ರಲ್ಲಿ. ಅಂದರೆ ಬರೋಬ್ಬರಿ 29 ವರ್ಷಗಳ ಹಿಂದೆ! ಪಠ್ಯಕ್ರಮ ರೂಪುಗೊಂಡ ನಂತರ ಸುಮಾರು ನಾಲ್ಕೈದು ವರ್ಷಗಳಲ್ಲಿ ಅದನ್ನನುಸರಿಸಿಯೇ ಪರೀಕ್ಷೆಗಳು ನಡೆಯಲಾರಂಭಿಸಿದವು. ನೃತ್ಯ, ಸಂಗೀತ ಕ್ಷೇತ್ರಗಳಲ್ಲಿ ನಡೆದಿರಬಹುದಾದ ಹೊಸ ಅಧ್ಯಯನ, ಪ್ರಯೋಗಾತ್ಮಕತೆ, ಸಂಶೋಧನೆ ಯಾವುದನ್ನೂ ಅಳವಡಿಸುವ ಪ್ರಯತ್ನವೇ ನಡೆದಿಲ್ಲ ಅಥವಾ ಪ್ರಾಥಮಿಕ ಹಂತದ 10 ವರ್ಷ ವಯಸ್ಸಿನ ಅಭ್ಯರ್ಥಿಗೆ, ‘ಕಷ್ಟ’ ಎನಿಸಬಲ್ಲ ಪ್ರಶ್ನೆಪತ್ರಿಕೆ, ಪರೀಕ್ಷಾ ಕ್ರಮ, ಸೀನಿಯರ್ ಹಂತಕ್ಕೆ ಸುಮಾರು 13-14ರ ವಯಸ್ಸಿಗೆ, ವಿದ್ವತ್‌ಪೂರ್ವ ಹಂತಕ್ಕೆ ‘ಕಡಿಮೆ ಗುಣಮಟ್ಟ’ದ, ‘ಪರೀಕ್ಷೆ ತೆಗೆದುಕೊಂಡರೆ ಪಾಸೇ ಆಗುವ’ ಸಾಧ್ಯತೆಯಾಗಿ ಬದಲಾಗಿಬಿಡುತ್ತದೆ. ಅಂದರೆ ಯಾವುದೇ ಪಠ್ಯಕ್ರಮ, ಪರೀಕ್ಷಾ ಕ್ರಮ ಜಾರಿಗೆ ಬಂದ ಮೇಲೆ ಸುಮಾರು ಹತ್ತು ವರ್ಷಗಳ ನಂತರ ಅದರ ಮೌಲ್ಯಮಾಪನ ನಡೆಯಬೇಕಾದ ಅಗತ್ಯವನ್ನು ಇದು ಎತ್ತಿ ತೋರಿಸುತ್ತದೆ. ನಾವು ‘ಅತಿ ಮುಖ್ಯ’ ಎಂದು ಭಾವಿಸುವ ಶಾಲಾ ಶಿಕ್ಷಣ ಕ್ರಮದಲ್ಲಿಯೇ ಗೊಂದಲಗಳು ವ್ಯಾಪಕವಾಗಿರುವಾಗ ಇನ್ನು ‘ವಿಶೇಷ’ ಪರೀಕ್ಷೆಗಳ ಮಾತೇನು?!

ಪಠ್ಯಕ್ರಮದ ಬಗ್ಗೆ ಗಮನವನ್ನೇ ಹಾಯಿಸದ ಆಡಳಿತ ವ್ಯವಸ್ಥೆ, ನಿಯಮಗಳನ್ನು ಮಾತ್ರ ಮನಬಂದಂತೆ ಆಗಾಗ್ಗೆ ಬದಲಿಸುತ್ತ ಬಂದಿದೆ! ಇಡೀ ಕೇಂದ್ರಕ್ಕೆ ಒಬ್ಬರೇ ಮೃದಂಗದವರು, ಇಬ್ಬರೇ ಹಾಡುವವರು ಎಂದು ಗೋಗರೆದರೂ, ‘ಅದು ನಮ್ಮ ತಲೆನೋವಲ್ಲ, ಬೇಕಾದರೆ ಪರೀಕ್ಷೆ ಕಟ್ಟಿ’ ಎಂದು ತಿರಸ್ಕರಿಸಲಾಗುತ್ತದೆ. ನೇರವಾಗಿ ಸೀನಿಯರ್ ಕಟ್ಟಬಹುದು, ಜೂನಿಯರ್ ಮಾಡಿಯೇ ಕಟ್ಟಬೇಕು ಇಂಥ ಗೊಂದಲಗಳು ಆಗಾಗ ಬದಲಾಗುತ್ತಲೇ ಇವೆ. ಪ್ರಶ್ನೆಪತ್ರಿಕೆಗಳಲ್ಲಿಯೂ ಬರೆಯುವವರ ವಯಸ್ಸು, ಶ್ರಮವನ್ನು ಬದಿಗಿಟ್ಟು, ಜ್ಞಾನದ ಬದಲು ಬರೀ ಬರಹದ ಕೌಶಲವನ್ನು ಪರೀಕ್ಷಿಸುವಂತೆ ಪ್ರಶ್ನೆಗಳು ಬಂದ ಉದಾಹರಣೆಗಳು ಬಹಳಷ್ಟು.

100- 150 ಪುಟಗಳ ಜೂನಿಯರ್ ಸಂಗೀತ ಪರೀಕ್ಷೆಯ ಪಠ್ಯಪುಸ್ತಕದಲ್ಲಿರುವ ಜೀವನಚರಿತ್ರೆಗೆ, ಒಂದು ಪ್ರಶ್ನೆಗೆ 15 ಅಂಕಗಳು. ಈ ರೀತಿ ಸುಮಾರು 4 ಪ್ರಶ್ನೆಗಳು. ಮಕ್ಕಳ ಜ್ಞಾನ ಪರೀಕ್ಷಿಸುವ ಒಂದು ಅಂಕದ ಪ್ರಶ್ನೆಗಳು ಬರೀ 20! ಮೂರು ಹಿಂದೂಸ್ತಾನಿ ಸಂಗೀತ ವಾದ್ಯ ಹೆಸರಿಸಿ ಎಂಬ ಪ್ರಶ್ನೆಗೆ 15 ಅಂಕ! 10 ವರ್ಷದ ವಿದ್ಯಾರ್ಥಿಗಳು ಮೂರು ಹೆಸರು ಬರೆದಿಟ್ಟು ಬಂದರೆ, 19 ವರ್ಷದ ವಿದ್ಯಾರ್ಥಿಗಳು ಅದೇ ಪತ್ರಿಕೆಗೆ ಮೂರೂ ವಾದ್ಯಗಳ ಚಿತ್ರ, ರಚನಾ ಕ್ರಮ ಬರೆದಿಡುವ ಪರಿಸ್ಥಿತಿ! ಇದರ ಬಗ್ಗೆ ಮಂಡಳಿಯ ಗಮನ ಸೆಳೆದರೆ ಬರುವ ಉತ್ತರ ‘ಬ್ಲೂ ಪ್ರಿಂಟ್ ಇರುವುದೇ ಹಾಗೆ!’

ಕಲಿಕೆಯ ಗುಣಮಟ್ಟವನ್ನು ವರ್ಧಿಸದ ಪರೀಕ್ಷಾ ಕ್ರಮದಿಂದ ಸಂಪನ್ಮೂಲಗಳ ವೃಥಾ ವ್ಯಯ! ಹಿಂದಿನಂತೆ ನಿರಾಕರಿಸದೆ ಪರೀಕ್ಷೆಗಳನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ವಿಶ್ವವಿದ್ಯಾಲಯ ಎತ್ತಿಕೊಂಡಿದೆ. ಪಠ್ಯಕ್ರಮದ ಪರಿಷ್ಕರಣೆ, ಪರೀಕ್ಷಾ ಕ್ರಮದ ಸುಧಾರಣೆಗಳೂ ಬಹುಕಾಲದ ನಂತರ ಸಾಧ್ಯವಾಗಬಹುದೇ?! ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT