ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ– ಅವಿವೇಕದ ಬುನಾದಿ ‘ಬೈನರಿ’ ಧೋರಣೆ: ಎಚ್.ಕೆ ಶರತ್ ಲೇಖನ

‘ಬೈನರಿ’ ಕನ್ನಡಕದಲ್ಲಿ ಜಗತ್ತನ್ನು ನೋಡಲು ಹೊರಡುವುದರಿಂದ ಕುಬ್ಜಗೊಳ್ಳುವುದು ನಮ್ಮದೇ ವ್ಯಕ್ತಿತ್ವ ಎಂಬ ಸತ್ಯ
Last Updated 3 ಅಕ್ಟೋಬರ್ 2022, 0:30 IST
ಅಕ್ಷರ ಗಾತ್ರ

ಯಾಂತ್ರಿಕ ವ್ಯವಸ್ಥೆಯೊಂದರ ಸ್ವಯಂಚಾಲಿತ ನಿರ್ವ ಹಣೆಗೆ ಅಗತ್ಯವಿರುವ ಸೂಚನೆಗಳನ್ನು ನೀಡಲು ಬಳಸುವ ಪ್ರೋಗ್ರಾಮಿಂಗ್ ವಿಧಾನಗಳನ್ನು ಕಲಿಸುವ ಸಂದರ್ಭದಲ್ಲೆಲ್ಲ, ‘ಯಂತ್ರಗಳಿಗೆ ಅರ್ಥವಾಗುವುದು ಬೈನರಿ ಭಾಷೆ ಮಾತ್ರ. ನಾವು ಏನನ್ನೇ ಬರೆದರೂ ಅಂತಿಮವಾಗಿ ಯಂತ್ರ ಅದನ್ನು ಅರ್ಥಮಾಡಿ
ಕೊಳ್ಳುವುದು ಸೊನ್ನೆ ಮತ್ತು ಒಂದರ ಮೂಲಕವಷ್ಟೇ. ಮನುಷ್ಯರು ಬಳಸುವ ಭಾಷೆಯನ್ನು ನೇರವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಯಂತ್ರಗಳಿಗೆ ಇಲ್ಲ’ ಎಂದು ಹೇಳಿಕೊಡಲಾಗುತ್ತಿತ್ತು. ಮೊದಲೆಲ್ಲ ಯಂತ್ರಗಳ ಭಾಷೆಯೆಂದೇ ಪರಿಗಣಿಸಲ್ಪಟ್ಟಿದ್ದ ಬೈನರಿ ಭಾಷೆ ಇಂದು ಮನುಷ್ಯರದ್ದೂ ಆಗಿದೆಯೇ ಎನ್ನುವ ಅನುಮಾನ ಮೂಡದಿರದು.

ಮನುಷ್ಯರನ್ನು ಅರ್ಥಮಾಡಿಕೊಳ್ಳಲು ನಾವು ಇಂದು ಯಥೇಚ್ಛವಾಗಿ ಬಳಸುತ್ತಿರುವುದು ಕೂಡ ಬೈನರಿ ಧೋರಣೆಯನ್ನೇ ಎನ್ನಲು ಸಕಾರಣಗಳಿವೆ. ಸಾರ್ವಜನಿಕ ಸಂವಾದಗಳಲ್ಲಿ ಹಾಗೂ ವೈಯಕ್ತಿಕ ಮಾತುಕತೆಗಳಲ್ಲಿ ಪದೇ ಪದೇ ಎದುರಾಗುವ ‘ಇದಲ್ಲದಿದ್ದರೆ ಅದೇ ಆಗಿರಬೇಕು’ ಎನ್ನುವಂತಹ ಧೋರಣೆ ಮನುಷ್ಯರನ್ನು ಮನುಷ್ಯರ ಭಾಷೆಯಲ್ಲಿ ಅರ್ಥಮಾಡಿಕೊಳ್ಳಬೇಕು ಎಂಬ ವಿವೇಕವನ್ನು ನೇಪಥ್ಯಕ್ಕೆ ಸರಿಸುತ್ತಿರುವ ಹಾಗೆ ಭಾಸವಾಗುತ್ತಿದೆ.

ಕೆಲ ದಿನಗಳ ಹಿಂದೆ ಆತ್ಮೀಯರೊಬ್ಬರು ಪರಿಚಿತ ಹುಡುಗನ ಫೋಟೊ ಕಳಿಸಿ, ‘ಈ ಹುಡುಗ ನಿಮಗೆ ಗೊತ್ತಂತೆ... ಹುಡುಗ ಹೇಗೆ? ನಮ್ಮ ಸ್ನೇಹಿತನ ತಂಗಿಗೆ ಮದುವೆ ಪ್ರಪೋಸಲ್ ಬಂದಿದೆಯಂತೆ’ ಎಂದು ವಿಚಾರಿಸಿದರು. ‘ಹುಡುಗ ಹೇಗೆ ಎಂದು ಹೇಳುವಷ್ಟು ಅವನ ಬಗ್ಗೆ ನನಗೆ ಗೊತ್ತಿಲ್ಲ. ಅವನು ವಿದ್ಯಾರ್ಥಿಯಾಗಿ ಮಾತ್ರ ನನಗೆ ಗೊತ್ತಿರೋದು’ ಅಂತ ತಿಳಿಸಿದೆ. ‘ಜನರಲ್ಲಾಗಿ ಹೇಳಿ ಪರವಾಗಿಲ್ಲ’ ಅಂದ್ರು. ಏನು ಹೇಳಬೇಕೋ ತೋಚದೆ ಸುಮ್ಮನಾದೆ.

ಬಹುತೇಕ ಸಂದರ್ಭಗಳಲ್ಲಿ ಇಂತಹ ಪ್ರಶ್ನೆಗ ಳನ್ನು ಕೇಳುವವರು ನಿರೀಕ್ಷಿಸುವುದು ‘ಒಳ್ಳೆಯವನು’ ಅಥವಾ ‘ಸರಿಯಿಲ್ಲ’ ಎಂಬ ಎರಡು ಉತ್ತರಗಳ ಪೈಕಿ ಒಂದನ್ನು. ವ್ಯಕ್ತಿಯೊಬ್ಬರು ಒಳ್ಳೆಯವರೋ ಕೆಟ್ಟವರೋ, ಸಂಭಾವಿತರೋ ದುಷ್ಟರೋ ಎಂದು ಸರಳವಾಗಿ ಹೇಳಲು ಸಾಧ್ಯವೇ? ಮನುಷ್ಯನ ವ್ಯಕ್ತಿತ್ವ ಹಲವಾರು ವಿರೋಧಾಭಾಸಗಳು, ಭಿನ್ನ ಮುಖಗಳನ್ನು ಹೊಂದಿರುವ ಸಂಕೀರ್ಣ ಸಂಗತಿಯಲ್ಲವೇ? ಹೀಗಿರು ವಾಗ ಮನುಷ್ಯರನ್ನು ಅಳೆಯಲು ‘ಇದಲ್ಲದಿದ್ದರೆ ಅದೇ?’ ಎನ್ನುವ ಬೈನರಿ ಧೋರಣೆ ಬಳಸುವುದು ಸೂಕ್ತವೇ?

ನಾಯಕ-ಖಳನಾಯಕ, ಒಳ್ಳೆಯವರು-ಕೆಟ್ಟವರು ಎಂಬ ಕಪ್ಪು-ಬಿಳುಪಿನ ಪಾತ್ರಗಳನ್ನೇ ನೋಡುತ್ತಾ, ಸಂಭ್ರಮಿಸುತ್ತಾ, ಮೆರೆಸುತ್ತಾ ಬಂದಿರುವ ನಮಗೆ, ಮನುಷ್ಯರನ್ನು ಅರ್ಥಮಾಡಿಕೊಳ್ಳಲು ಇದಷ್ಟೇ ಸಾಕೆನಿಸುವುದು ಅಚ್ಚರಿ ತರುವ ಸಂಗತಿಯೇನಲ್ಲ. ಒಂದು ದಶಕದಿಂದೀಚೆಗೆ ದೇಶದ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಬೈನರಿ ಧೋರಣೆ ಕೂಡ ನಮ್ಮ ದೃಷ್ಟಿಕೋನಕ್ಕೆ ಸಂಕುಚಿತತೆಯ ಮುಸುಕು ತೊಡಿಸುವಲ್ಲಿ ಸಫಲವಾಗಿರುವುದನ್ನು ಅಲ್ಲಗಳೆಯಲಾದೀತೆ? ರಾಜಕೀಯ ನಾಯಕರೊಬ್ಬರನ್ನು ಎಲ್ಲ ಗೊತ್ತಿರುವ ‘ವಿಶ್ವಗುರು’ವಾಗಿ ಬಿಂಬಿಸುವ, ಮತ್ತೊಬ್ಬರನ್ನು ಏನೂ ಅರಿಯದ ‘ಪಪ್ಪು’ ಎಂದು ಹೀಗಳೆಯುವ ಕಾರ್ಯಸೂಚಿ ಅಳವಡಿಸಿಕೊಂಡಿದ್ದು ಕೂಡ ಬೈನರಿ ಧೋರಣೆಯನ್ನೇ ಅಲ್ಲವೆ?

ವ್ಯಕ್ತಿಗಳ ಕುರಿತು ತಿಳಿದುಕೊಳ್ಳುವ ಸಂಯಮ
ಇರದಿದ್ದರೂ, ಅವರು ನಾಯಕರೋ ಖಳನಾಯಕರೋ ಎಂಬ ನಿರ್ಧಾರಕ್ಕೆ ಬರಲು ತುದಿಗಾಲಲ್ಲಿ ನಿಲ್ಲುವ ನಮ್ಮ ಮನಃಸ್ಥಿತಿಯನ್ನೇ ಬಂಡವಾಳವನ್ನಾಗಿಸಿಕೊಂಡು ಹಬ್ಬಿಸ ಲಾಗುತ್ತಿರುವ ತಪ್ಪು ಮಾಹಿತಿ, ಬಿತ್ತಲಾಗುತ್ತಿರುವ ದ್ವೇಷದ ನಂಜಿಗೆ ಸಮಾಜದ ಸ್ವಾಸ್ಥ್ಯವೂ ಬಲಿಯಾಗುವುದಿಲ್ಲವೇ? ನಾವು ಇದುವರೆಗೂ ಗೌರವಿಸಿಕೊಂಡು ಬಂದ ವ್ಯಕ್ತಿಗಳ ಕುರಿತು ನಮಗಿರುವ ಅಭಿಮಾನವನ್ನು ಅಳಿಸಿ, ಅವರಿಂದಾಗಿಯೇ ದೇಶ ಹಾಳಾಯಿತು ಎನ್ನುವ ಅಸಮಾಧಾನ ಮೂಡುವ ಹಾಗೆ ನೋಡಿಕೊಳ್ಳುವ ಕಾರ್ಯಸೂಚಿ ಜಾರಿಯಲ್ಲಿರುವುದು ಕಣ್ಣೆದುರಿಗಿನ ವಾಸ್ತವ.

ಜನಮಾನಸದಲ್ಲಿ ನಾಯಕರಾಗಿ ನೆಲೆನಿಂತಿರುವ ವರನ್ನು ಖಳನಾಯಕರ ಸಾಲಿಗೆ ನೂಕುವ ಸಲುವಾಗಿ ಕೆಲವರ ಹೆಸರುಗಳನ್ನು ಮುನ್ನೆಲೆಗೆ ತರುತ್ತಿರುವುದು ಗುಟ್ಟಿನ ವಿಚಾರವೇನಲ್ಲ. ಯಾವುದೇ ವ್ಯಕ್ತಿ ಅಥವಾ ವಿಚಾರಧಾರೆಯ ಕುರಿತೇ ಆದರೂ ನಮ್ಮದೇ ಆದ ಅಭಿಪ್ರಾಯ ಹೊಂದಲು ನಾವೆಲ್ಲರೂ ಸ್ವತಂತ್ರರು. ಆದರೆ, ಯಾವುದೇ ವ್ಯಕ್ತಿತ್ವದ ವಿಮರ್ಶೆಗೆ ಇಳಿಯುವ ಮುನ್ನ ಅವರ ಕುರಿತು ಸಮಗ್ರವಾಗಿ ತಿಳಿದುಕೊಳ್ಳುವ ಉತ್ಸಾಹವನ್ನೂ ತೋರಬೇಕಲ್ಲವೇ?

ತಪ್ಪು ಮಾಹಿತಿ ಹರಡಲೆಂದೇ ಬಳಸಿಕೊಳ್ಳಲಾಗುತ್ತಿರುವ ವಿವಿಧ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಒಂದೆರಡು ಚಿತ್ರಗಳು, ವಿಡಿಯೊಗಳು, ನಾಲ್ಕಾರು ಸಾಲುಗಳ ಬರಹಗಳ ಆಧಾರದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಹಾಗೂ ಸ್ವಾತಂತ್ರ್ಯದ ನಂತರ ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದ ನಾಯಕರನ್ನು ಖಳನಾಯಕರೆಂದು ಹೀಗಳೆಯಬಹುದೇ? ವಿಶ್ವಾಸಾರ್ಹವಲ್ಲದ ಮಾಹಿತಿ ಮೂಲಗಳು ಹರಡುವ ಸುಳ್ಳುಗಳನ್ನೇ ಇತಿಹಾಸವೆಂದು ಭಾವಿಸಿ, ‘ಬೈನರಿ’ ಕನ್ನಡಕದಲ್ಲಿ ಜಗತ್ತನ್ನು ನೋಡಲು ಹೊರಡುವುದರಿಂದ ಕುಬ್ಜಗೊಳ್ಳುವುದು ನಮ್ಮದೇ ವ್ಯಕ್ತಿತ್ವ ಮತ್ತು ರೋಗಗ್ರಸ್ತವಾಗುವುದು ನಮ್ಮದೇ ಮನಸ್ಸು ಎಂಬ ಸತ್ಯವನ್ನಾದರೂ ಒಪ್ಪಿಕೊಳ್ಳ
ಬೇಕಲ್ಲವೇ?

ಭಿನ್ನಾಭಿಪ್ರಾಯಗಳಿಗೆ ಬೆನ್ನು ತೋರಿ ಕಟ್ಟಿಕೊಳ್ಳುವ ವಿವೇಕದ ಸೌಧದ ತಳಪಾಯವೇ ಸಡಿಲವಾಗಿರುವ ಸಾಧ್ಯತೆಯೇ ಹೆಚ್ಚು. ಆದರೆ, ಇಂತಹ ಸಡಿಲ ತಳಪಾಯಗಳತ್ತ ನಮ್ಮ ದೃಷ್ಟಿ ಹಾಯಲು, ನಾವು ಅಪ್ಪಿಕೊಳ್ಳಲು ಹೊರಟಿರುವ ಬೈನರಿ ಧೋರಣೆ ಅನುವು ಮಾಡಿಕೊಡಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT