ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ– ಪರೀಕ್ಷೆ: ಆತ್ಮಸಾಕ್ಷಿಗಿಂತ ಪಹರೆ ಬೇಕೇ?

ಪೂರ್ವಸಿದ್ಧತೆಗೆ ಗರಿ ಮೂಡದೆ ಗೆಲ್ಲುವ ಸಂಕಲ್ಪಕ್ಕೆ ಅರ್ಥವಿರದು
Last Updated 21 ಏಪ್ರಿಲ್ 2022, 19:22 IST
ಅಕ್ಷರ ಗಾತ್ರ

ಪರೀಕ್ಷೆ ಕುರಿತು ಆತಂಕಗೊಂಡ ದ್ವಿತೀಯ ಪಿಯು ವಿದ್ಯಾರ್ಥಿಗಳು ಕೆಲವರು ಸಾಮೂಹಿಕ ತೇರ್ಗಡೆ ಮಾಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಮನವಿ ಮಾಡಿರುವುದು (ಪ್ರ.ವಾ., ಏ. 21) ಅಚ್ಚರಿಯ ಜೊತೆಗೆ ಬೇಸರ ತಂದಿತು. ‘ಪರೀಕ್ಷೆ’ ಎಂದರೆ ಮಕ್ಕಳೇಕೆ ಹೆದರುತ್ತಾರೆ?

ವಾಸ್ತವವೆಂದರೆ ಪರೀಕ್ಷಾ ಭಯ ಎನ್ನುವುದೇ ಹುಸಿ. ಮಕ್ಕಳು ಆ ಭ್ರಮೆಗೆ ಒಳಗಾಗುತ್ತಾರೆ ಇಲ್ಲವೇ ಅವರಲ್ಲಿ ಆ ಭೀತಿಯನ್ನು ಸೃಷ್ಟಿಸಲಾಗುತ್ತದೆ. ನಿನ್ನ ಹೆಸರೇನು, ವಾಸವೆಲ್ಲಿ, ಓದುತ್ತಿರುವುದು ಯಾವ ಶಾಲೆ, ಯಾವ ಕ್ರೀಡೆ ನಿನಗಿಷ್ಟ ಮುಂತಾದ ಪ್ರಶ್ನೆಗಳನ್ನು ಎದುರಿಸುವಷ್ಟೇ ಸಲೀಸಾಗಿ ಅವರು ಪರೀಕ್ಷೆಯನ್ನು ನಿರ್ವಹಿಸಬಲ್ಲರು. ಈ ವಿವರಗಳನ್ನೇನು ಅವರು ಉರು ಹೊಡೆದಿರುವುದಿಲ್ಲ! ಅವು ಮನಸ್ಸಿಗೆ ನಾಟಿರುತ್ತವೆ. ಹಾಗೆಯೇ ಆಯಾ ವಿಷಯದ ಅಧ್ಯಾಯದ ಅಂಶಗಳು ಮಕ್ಕಳು ಅಲ್ಪಸ್ವಲ್ಪ ಮನನ ಮಾಡಿಕೊಂಡರೂ ಸಹಜ
ವಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಖಂಡಿತ ಸಾಧ್ಯ.

ವಿಖ್ಯಾತ ವಿಜ್ಞಾನಿ ಐನ್‍ಸ್ಟೀನ್ ಅವರ ನುಡಿ ಮನನೀಯ: ‘ಎಲ್ಲರೂ ಮೇಧಾವಿಗಳೇ. ಆದರೆ ಮೀನನ್ನು ಮರವೇರುವುದೋ ಇಲ್ಲವೋ ಎಂದು ಪರೀಕ್ಷಿಸಲು ಮುಂದಾದರೆ ಅದು ತಾನು ಮೂರ್ಖ ಎಂದು ತನ್ನ ಜೀವನಪರ್ಯಂತವೂ ಭಾವಿಸುವುದು’. ಮಕ್ಕಳು ಸುಲಭವಾಗಿ ಚಾಂಚಲ್ಯಕ್ಕೆ ಒಳಗಾಗುತ್ತಾರೆ. ನಾಳೆ, ನಿನ್ನೆ ಕುರಿತು ಚಿಂತಿಸುವರೇ ವಿನಾ ಅತಿ ಮಹತ್ವದ್ದಾದ ಇಂದಿನ ಬಗ್ಗೆ ಅವರು ಅವಲೋಕಿಸರು. ಒತ್ತಡ, ದುಗುಡವನ್ನು ನಿಭಾಯಿಸಲಾರರು. ಇತಿಮಿತಿಗಳನ್ನು ಹಿರಿಯರು ವೈಭವೀಕರಿಸಿದರೆ ಅವರ ತಳಮಳ ಮತ್ತೂ ಹೆಚ್ಚೀತು. ಅವರಲ್ಲಿ ಧೈರ್ಯ ತುಂಬಬೇಕು. ಮರ್ಕಟ ಮನಸ್ಸನ್ನು ನಿಯಂತ್ರಿಸಿ ವರ್ತಮಾನದಲ್ಲಿಕ್ರಿಯಾಶೀಲರಾಗಿರುವಂತೆ ಪ್ರಭಾವಿಸಬೇಕು.

ದಿನದಲ್ಲಿ 24 ತಾಸುಗಳಿವೆ. ಎರಡು ತಾಸುಗಳು ವ್ಯರ್ಥವಾದರೆ ಚಿಂತಿಸದೆ ಉಳಿದ ಅಮೂಲ್ಯ ಸಮಯವನ್ನು ಸದುಪಯೋಗಿಸಿಕೊಳ್ಳುವುದು ವಿವೇಕ. ಪರೀಕ್ಷೆಯ ತಯಾರಿಗೆ ವಿಳಂಬ ಎನ್ನುವುದೇ ಇಲ್ಲ. ಪೂರ್ವಸಿದ್ಧತೆಗೆ ಗರಿ ಮೂಡದೆ ಗೆಲ್ಲುವ ಸಂಕಲ್ಪಕ್ಕೆ ಅರ್ಥವಿರದು. ನಮ್ಮ ಉತ್ತರಪತ್ರಿಕೆಯಲ್ಲಿ ದಾಖಲಿಸಬೇಕಾದ್ದು ನಾವು ಗಳಿಸಿದ ಅರಿವು, ಇತರರು ಗಳಿಸಿದ್ದಲ್ಲ. ಪ್ರಜ್ಞೆ, ಧ್ಯೇಯ ಈ ಮಟ್ಟದವರೆಗೆ ವಿಸ್ತಾರಗೊಂಡರೆ ಪರೀಕ್ಷಾ ವ್ಯವಸ್ಥೆಯಲ್ಲಿ ಬಹುಮಟ್ಟಿಗೆ ನಕಲು, ಅಕ್ರಮ ಶಮನವಾಗುವುದು.

ಅಬ್ಬಾ! ನಕಲು ತಡೆಯಲು ಅದೆಷ್ಟು ಮಾನವ ಸಂಪನ್ಮೂಲ ವ್ಯಯವಾಗುವುದು? ಒಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ನಿಯೋಜನೆ ಗಮನಿಸಿ. ಮುಖ್ಯ ಮೇಲ್ವಿಚಾರಕರು, ಕೊಠಡಿ ಮೇಲ್ವಿಚಾರಕರು, ಅವರಿಗೆ ಬಿಡುವು ನೀಡುವ ಮೇಲ್ವಿಚಾರಕರು, ಇನ್ನು ಜಾಗೃತ ಪಡೆಗಳು- ಸ್ಥಾನಿಕ ದಳ, ಅನಿರೀಕ್ಷಿತ ದಳ, ಇಲಾಖೆ ಅಥವಾ ವಿಶ್ವವಿದ್ಯಾಲಯ ರಚಿಸಿರುವ ದಳ... ಆಯಾ ದಿನ ಪರೀಕ್ಷೆ ಮುಗಿಯುತ್ತಲೆ ಶಿಕ್ಷಕರೊಬ್ಬರ ಉಸ್ತುವಾರಿಯಲ್ಲಿ ಉತ್ತರಪತ್ರಿಕೆಗಳ ಬಂಡಲ್ ವಿಲೇವಾರಿಯಾಗಬೇಕು. ಒಬ್ಬರೇ ಒಬ್ಬರು ಪರೀಕ್ಷೆಗೆ ಹಾಜರಿರಲಿ, 20ಕ್ಕೂ ಹೆಚ್ಚು ಮಂದಿ ಕೈಜೋಡಿಸಬೇಕು. ಈ ಪರಿಯ ಕಣ್ಗಾವಲು ಏಕೆ? ಮಕ್ಕಳುನಂಬಲರ್ಹರಾದರೆ ನಿಸ್ಸಂದೇಹವಾಗಿ ಅಗತ್ಯವಿಲ್ಲ. ಮುಖ್ಯ ಅವರ ಅಂತಃಸಾಕ್ಷಿ ಮೆರೆಯಬೇಕಷ್ಟೆ.

ಶಿಕ್ಷಣ ತಜ್ಞ, ವಿಚಾರವಾದಿ ಡಾ. ಎಚ್.ನರಸಿಂಹಯ್ಯ ಅವರು ನ್ಯಾಷನಲ್ ಕಾಲೇಜಿನಪ್ರಾಚಾರ್ಯರಾಗಿದ್ದಾಗ ಕೊಠಡಿ ಮೇಲ್ವಿಚಾರಕ
ರಿಲ್ಲದೆ ಪರೀಕ್ಷೆ ನಡೆಸುವ ಪ್ರಯೋಗ ಮಾಡಿಯಶಸ್ವಿಯಾಗಿದ್ದರು. ನಕಲು ಹತ್ತಿಕ್ಕಲು ಆತ್ಮಸಾಕ್ಷಿಗಿಂತ ಉಸಾಬರಿ ಬೇಕಿಲ್ಲ. ಒಂದು ದೇಶದ ಅವನತಿಗೆ ವೈರಿ ದೇಶಗಳು ಪ್ರಯೋಗಿಸಬಹುದಾದ ಬಾಂಬ್ ಅಥವಾ ಕ್ಷಿಪಣಿಗಳಷ್ಟೇ ಕಾರಣವಾಗಬೇಕಿಲ್ಲ. ದೇಶದಲ್ಲಿನ ಶಿಕ್ಷಣ ಮಟ್ಟ ಕುಸಿತ, ಪರೀಕ್ಷೆಗಳಲ್ಲಿನ ಅಕ್ರಮಗಳಿಂದಲೂ ಅದರ ವಿನಾಶ ಸಂಭಾವ್ಯ. ಕಾಪಿ ಮಾಡುವುದರಿಂದ ನಮ್ಮ ನೈಜ ಕಲಿಕೆಗೆ ನಾವೇ ಅಡ್ಡ ಬಂದಂತಾಗುವುದು. ನಕಲು ಎಸಗಿ ನಾವು ಮೋಸಗೊಳಿಸುವುದಾದರೂ ಯಾರನ್ನು? ಈ ಪ್ರಶ್ನೆಗೆ ಉತ್ತರ, ಅದು ನಮ್ಮನ್ನೇ!

ಕಲಿಯದಿದ್ದರೆ ಕಲಿಯದವರ ಹೊರತು ಬೇರೆ ಯಾರಿಗೂ ನಷ್ಟವಿಲ್ಲ. ನೀವು ಬರೆದ ಉತ್ತರಗಳನ್ನು ಬೇರೆಯವರಿಗೆ ತೋರಿಸುವುದೂ ಪ್ರಮಾದವೇ. ಅವರ ಕಲಿಯುವ ಶ್ರದ್ಧಾಸಕ್ತಿ,ಆತ್ಮವಿಶ್ವಾಸವನ್ನು ನೀವು ಅಪಹರಿಸಿದಂತಾದೀತು. ಪರೀಕ್ಷಾ ಅಕ್ರಮ ಸಮಾಜದ ನೈತಿಕ ತಳಹದಿ ಅಲುಗಾಡಿಸುವ ಅಪಾಯಕಾರಿ ಪೆಡಂಭೂತ. ಅದು ಯುವ ಮನಸ್ಸುಗಳಲ್ಲಿ ಹೊಣೆಗೇಡಿತನ ಮತ್ತು ಅಪರಾಧದ ಬೀಜ ಬಿತ್ತುತ್ತದೆ.

ಪರೀಕ್ಷಾ ಕೊಠಡಿಯಲ್ಲಿ ಸಹಪಾಠಿಗಳು ಒಂದು ಹೆಚ್ಚುವರಿ ಹಾಳೆ ಪಡೆದುಕೊಂಡರೂ ವಿಚಲಿತರಾಗುವ ವಿದ್ಯಾರ್ಥಿಗಳುಂಟು. ಉತ್ತರಪತ್ರಿಕೆಯ ತೂಕದಿಂದ ಅದರ ಸತ್ವ ನಿಷ್ಕರ್ಷೆಯಾಗದು! ನೀವು ಒಂದು ಹಾಳೆ ಕಡಿಮೆ ಪಡೆದ ಮಾತ್ರಕ್ಕೆ ನಿಮ್ಮಲ್ಲಿನ ಜ್ಞಾನ ಕಳಪೆ, ಕಡಿಮೆ ಎಂದಲ್ಲ. ಪರೀಕ್ಷೆಯಲ್ಲಿ ಉತ್ತೀರ್ಣತೆಗಿಂತ ಯಶಸ್ಸು, ಕೀರ್ತಿಯಿಲ್ಲ, ಅನುತ್ತೀರ್ಣತೆಗಿಂತ ವೈಫಲ್ಯ, ಅವಮಾನವಿಲ್ಲ ಎಂಬ ಪರಿಭಾವನೆಯಿಂದವಿದ್ಯಾರ್ಥಿಗಳನ್ನು ಬೋಧಕರು, ಪೋಷಕರುಮುಕ್ತಗೊಳಿಸಬೇಕು. ಆಗ ಅವರಿಗೆ ಪರೀಕ್ಷೆ
ಅಪಮಾರ್ಗಗಳಿಂದಲಾದರೂ ಸರಿಯೆ ಜಯಿಸುವಷ್ಟು ಅಮೂಲ್ಯವಲ್ಲ ಎನ್ನುವುದು ಮನವರಿಕೆಯಾದೀತು.

ಇಸವಿ 1965. ಮೈಸೂರಿನಲ್ಲಿ ಪಿಯುರಸಾಯನಶಾಸ್ತ್ರ ಪರೀಕ್ಷೆ ಬರೆಯುವ ಸಂದರ್ಭ. ನಮಗೆ ಕೊಠಡಿ ಮೇಲ್ವಿಚಾರಕರಾಗಿದ್ದ ಪ್ರಾಧ್ಯಾಪಕರು‘ಅಕ್ಕಪಕ್ಕದವರ ಉತ್ತರಗಳು ಸರಿಯೆಂಬ ಖಾತರಿಯೇನು? ಆದ್ದರಿಂದ ನಿಮ್ಮದೇ ತಪ್ಪುಗಳಿರಲಿ ಬಿಡಿ’ ಎನ್ನುತ್ತ ನಮ್ಮನ್ನು ನವಿರಾಗಿ ಎಚ್ಚರಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT