ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಂದೇಶ ರವಾನಿಸುವ ಮುನ್ನ...

ಸುಳ್ಳು ಹಾಗೂ ಖಚಿತವಲ್ಲದ ಸುದ್ದಿ, ಮಾಹಿತಿಗಳನ್ನು ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರವೃತ್ತಿಯು ಹಲವು ತೊಂದರೆಗಳಿಗೆ ಕಾರಣವಾಗುತ್ತದೆ
Published 25 ಮೇ 2023, 1:03 IST
Last Updated 25 ಮೇ 2023, 1:03 IST
ಅಕ್ಷರ ಗಾತ್ರ

ಡಾ. ಎಚ್.ಬಿ.ಚಂದ್ರಶೇಖರ್‌

ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಮತಗಟ್ಟೆಯಲ್ಲಿ ಪಕ್ಷವೊಂದರ ಅಭ್ಯರ್ಥಿಯ ಪೋಲಿಂಗ್ ಏಜೆಂಟ್‌, ‘ಸರ್‌, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಅವರ ಆಧಾರ್‌ ಕಾರ್ಡ್‌ ಅಥವಾ ವೋಟರ್‌ ಐ.ಡಿ ಕಾರ್ಡ್‌ ತೋರಿಸಿ ವೋಟ್‌ ಮಾಡಬಹುದೇ?’ ಎಂದು ಕೇಳಿದರು. ಇದಕ್ಕೆ, ‘ಮತಗಟ್ಟೆಗೆ ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರಿದ್ದವರಷ್ಟೇ ಮತ ಹಾಕಲು ಸಾಧ್ಯ, ಉಳಿದವರಿಗೆ ಅವಕಾಶವಿಲ್ಲ’ ಎಂದು ಹೇಳಿದೆ. ಇದೇ ಪ್ರಶ್ನೆಯನ್ನು, ಚುನಾವಣಾ ಅಧಿಕಾರಿಗಳಿಗೆ ನೀಡಿದ ತರಬೇತಿಯ ಸಂದರ್ಭದಲ್ಲಿಯೂ ಅನೇಕರು ಕೇಳಿದ್ದನ್ನು ನೆನಪಿಸಿಕೊಂಡೆ.

ಇದಕ್ಕೆ ಕಾರಣ, ಕೆಲ ದಿನಗಳ ಹಿಂದೆ ‘ನಿಮ್ಮ ಹೆಸರು ವೋಟರ್‌ ಲಿಸ್ಟ್‌ನಲ್ಲಿ ಇಲ್ಲವಾದರೆ ಆಧಾರ್‌ ಕಾರ್ಡ್‌ ಅಥವಾ ವೋಟರ್‌ ಐ.ಡಿ ಕಾರ್ಡ್‌ ತೋರಿಸಿ, ಚಾಲೆಂಜ್‌ ವೋಟ್‌ ಮಾಡಬಹುದು’ ಎಂಬ ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ಎಲ್ಲೆಡೆ ಹರಿದಾಡಿತ್ತು. ಇದು, ಜನರು ತಪ್ಪು ತಿಳಿವಳಿಕೆ ಹೊಂದಲು ಕಾರಣವಾಗಿತ್ತು.

ಈಗ್ಗೆ ಕೆಲ ವರ್ಷಗಳಿಂದ, ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗುವ ಕೆಲ ದಿನಗಳ ಆಸುಪಾಸಿನಲ್ಲಿ, ನಮ್ಮ ಬಹುತೇಕರ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವೊಂದು ಹರಿದಾಡುತ್ತದೆ. ಇನ್ಫೊಸಿಸ್‌ ಪ್ರತಿಷ್ಠಾನ ಬೆಂಬಲಿತ ಪ್ರೇರಣಾ ಎಂಬ ಎನ್.ಜಿ.ಒ, ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 80ರಷ್ಟು ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ, ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಲಿದೆ ಎಂದೂ ಇದಕ್ಕಾಗಿ ಸರಸ್ವತಿ, ಶಿವಕುಮಾರ್‌, ಬಿಂದು ಎಂಬ ವ್ಯಕ್ತಿಗಳ ಮೊಬೈಲ್‌ಗೆ ಕರೆ ಮಾಡಬೇಕೆಂದೂ ಮನವಿ ಮಾಡುತ್ತಾ, ಅವರ ಮೊಬೈಲ್‌ ಸಂಖ್ಯೆಯ ವಿವರ ಹಾಗೂ ಜಾಲತಾಣದ ಲಿಂಕ್‌ ಹೊಂದಿದ ಸಂದೇಶ ನೀಡಲಾಗಿರುತ್ತದೆ. ಈ ಸಂದೇಶವನ್ನು ಸ್ವೀಕರಿಸಿದವರಲ್ಲಿ ಹೆಚ್ಚಿನವರು ಸ್ವಲ್ಪವೂ ತಡಮಾಡದೆ, ಬಡ ಮಕ್ಕಳ ಮೇಲಿನ ವಿಶೇಷ ಕಾಳಜಿಯಿಂದ, ತಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ವಾಟ್ಸ್‌ಆ್ಯಪ್‌ ಗುಂಪುಗಳಿಗೆ ಸಂದೇಶವನ್ನು ಫಾರ್ವರ್ಡ್‌ ಮಾಡಿ, ಧನ್ಯರಾಗುತ್ತಾರೆ. ಇವರು ಸಂದೇಶದಲ್ಲಿರುವ ಮೊಬೈಲ್‌ ಸಂಖ್ಯೆಗಳಿಗೆ ಕರೆ ಮಾಡುವುದಾಗಲಿ ಅಥವಾ ಜಾಲತಾಣಕ್ಕೆ ಭೇಟಿ ನೀಡಿ ಸುದ್ದಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲಾಗಲಿ ಪ್ರಯತ್ನಿಸುವುದಿಲ್ಲ.

ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಸುಳ್ಳು ಹಾಗೂ ಖಚಿತವಲ್ಲದ ಸುದ್ದಿ, ಮಾಹಿತಿಗಳನ್ನು ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರವೃತ್ತಿಯು ಹಲವು ಬಗೆಯ ತೊಂದರೆಗಳಿಗೆ ಕಾರಣವಾಗುತ್ತದೆ. ಜನರು ಈ ಸುದ್ದಿಗಳನ್ನು ನಿಜವೆಂದು ನಂಬಿ, ಅವನ್ನು ಇತರರಿಗೆ ಹಂಚುವುದು ಅಥವಾ ಮೌಖಿಕವಾಗಿ ತಿಳಿಸುವುದನ್ನು ಮಾಡುತ್ತಾ ಹೋಗುವ ಕಾರಣ, ಹೆಚ್ಚಿನವರು ಆ ಸುದ್ದಿಗಳನ್ನು ನಿಜವೆಂದೇ ನಂಬುತ್ತಾರೆ. ಇಂತಹ ಸುದ್ದಿಗಳಿಂದ ಸಮಾಜದಲ್ಲಿ ಕೆಲವೊಮ್ಮೆ ಸಾಮರಸ್ಯ ಕೆಡುವಂತಹ ವಾತಾವರಣವೂ ಸೃಷ್ಟಿಯಾಗುತ್ತದೆ. ಕೆಲವು ಖಾಸಗಿ ಯುಟ್ಯೂಬ್‌ ಚಾನೆಲ್‌ಗಳು, ‘ಈ ಪ್ರಸಿದ್ಧ ತಾರೆ ಈಗ ತಾನೇ ನಿಧನರಾದರು’, ‘ಶೋಕಸಾಗರದಲ್ಲಿ ಚಿತ್ರರಂಗ’ ಎಂಬಂತಹ ಸುದ್ದಿಗಳನ್ನು ಪ್ರಸಾರ ಮಾಡುತ್ತವೆ. ಕೆಲ ದಿನಗಳ ಹಿಂದೆ, ಕನ್ನಡದ ಹಿರಿಯ ನಟರೊಬ್ಬರು ನಿಧನರಾಗಿದ್ದಾರೆ ಎಂಬ ಸಂದೇಶ ಎಲ್ಲೆಡೆ ಹರಿದಾಡಿತು. ಆಗ ಸ್ವತಃ ಆ ನಟರೇ ವಿಡಿಯೊ ಸಂದೇಶದ ಮೂಲಕ, ತಾವು ಆರೋಗ್ಯದಿಂದ ಇರುವ ಕುರಿತು ಸ್ಪಷ್ಟೀಕರಣ ನೀಡಿದ್ದನ್ನು ಸ್ಮರಿಸಬಹುದು.

ಕೆಲವರಂತೂ ಪ್ರತಿ ದಿನ ತಮ್ಮ ಪರಿಚಿತರಿಗೆ ಗುಡ್‌ ಮಾರ್ನಿಂಗ್‌ ಸಂದೇಶವನ್ನು ಕಳುಹಿಸುತ್ತಾರೆ. ಇದರ ಜೊತೆಗೆ ಪ್ರೇರಣಾದಾಯಕ, ಆರೋಗ್ಯ ಅಥವಾ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ನೂರಾರು ಸಂದೇಶಗಳು ಬರುವ ಕಾರಣ, ಅನೇಕರು ಇಂತಹ ಸಂದೇಶಗಳನ್ನು ತೆರೆದು ಓದಲು ಹೋಗುವುದಿಲ್ಲ. ದಿನವೂ ಬರುವ ಈ ಬಗೆಯ ಸಂದೇಶಗಳು ಉಂಟು ಮಾಡುವ ಕಿರಿಕಿರಿಯಿಂದ ಕೆಲವರು ಅಂತಹ ವ್ಯಕ್ತಿಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಆರ್ಕೈವ್‌ ಮಾಡಿರುತ್ತಾರೆ ಅಥವಾ ಸಂದೇಶ ನೋಡದೆ ತಕ್ಷಣವೇ ಡಿಲೀಟ್‌ ಮಾಡಿಬಿಡುತ್ತಾರೆ. ಇದರಿಂದ, ಇಂತಹ ಮೆಸೇಜ್‌ಗಳ ಜೊತೆಗೆ ಬರಬಹುದಾದ ಪ್ರಮುಖ ಸಂದೇಶಗಳನ್ನೂ ಓದದೇ ಹೋಗುವ ಸಂಭವ ಇರುತ್ತದೆ.

ಕೆಲ ವರ್ಷಗಳ ಹಿಂದೆ, ನನ್ನ ಹತ್ತಿರದ ಸಂಬಂಧಿಯೊಬ್ಬರು ತಮ್ಮ ಮಗನ ಮದುವೆಯ ಆಹ್ವಾನ ಪತ್ರಿಕೆಯನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿದ್ದರು. ಆದರೆ ಅವರು ಪ್ರತಿದಿನ ಕಳುಹಿಸುತ್ತಿದ್ದ ಗುಡ್‌ ಮಾರ್ನಿಂಗ್‌ ಮಾದರಿಯ ಸಂದೇಶವೇ ಇದೂ ಇರಬೇಕು ಎಂದುಕೊಂಡು ನಾನು ಅದನ್ನು ತೆರೆದು ನೋಡುವ ಗೋಜಿಗೇ ಹೋಗಲಿಲ್ಲ. ಇಂತಹ ಸಮಸ್ಯೆಗಳು ಉಂಟಾಗದಂತೆ ಅಗತ್ಯವಾದ ಸಂದರ್ಭಗಳಲ್ಲಿ ಮಾತ್ರ ಸಂದೇಶಗಳನ್ನು ಕಳುಹಿಸುವ ಮನೋಭಾವ ಹೊಂದಬೇಕು. ನಾವು ಕಳುಹಿಸುವ ಸಂದೇಶಗಳಿಂದ ಅವರಿಗೆ ಕಿರಿಕಿರಿ ಆಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಪ್ರಪಂಚದಲ್ಲಿಯೇ ಅತಿ ಹೆಚ್ಚು ಸಂದೇಶಗಳನ್ನು ಮುಂದಕ್ಕೆ ಜಾರಿಸುವ ದೇಶ ನಮ್ಮದು. ಸುಮಾರು 25 ಕೋಟಿಗೂ ಅಧಿಕ ಜನ ತಮ್ಮ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್‌ ಹೊಂದಿದ್ದಾರೆ. ಖಚಿತವಾದ ಮಾಹಿತಿ, ವಿಷಯಗಳನ್ನು ಹೊಂದಿದ ಸಂದೇಶ, ವಿಡಿಯೊಗಳು ನಮಗೆ ಉಪಯುಕ್ತವಾಗಬಹುದು. ಆದರೆ ಖಚಿತವಲ್ಲದ ಮತ್ತು ಹಾನಿಕಾರಕ ಸಂದೇಶಗಳಿಂದ ಸಮಸ್ಯೆ ಕಟ್ಟಿಟ್ಟಬುತ್ತಿ.

ಉಚಿತ, ಕಳುಹಿಸುವುದು ಸುಲಭ, ನಾನೇ ಮೊದಲಿಗನಾಗಬೇಕು ಎಂಬ ಮನೋಭಾವ, ಸ್ವತಃ ಬರೆಯುವುದಕ್ಕಿಂತ ಬಂದ ಸಂದೇಶವನ್ನು ಕಳುಹಿಸುವುದು ಸುಲಭ, ಚಿತ್ರದಲ್ಲಿ ಕಾಣುತ್ತಿರುವುದು ಸತ್ಯ ಎಂಬಂತಹ ಕಾರಣಗಳಿಂದ ಸಂದೇಶ ಹಾಗೂ ಚಿತ್ರಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ. ನಮ್ಮ ಮೊಬೈಲ್‌ಗೆ ಬರುವ ಎಲ್ಲಾ ಸಂದೇಶಗಳನ್ನು ಎಗ್ಗಿಲ್ಲದೆ ಮುಂದೆ ಜಾರಿಸುವ ಮುನ್ನ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ, ಅನಗತ್ಯ ಸಂದೇಶಗಳನ್ನು ಕಳುಹಿಸುವುದರಿಂದ ಅದನ್ನು ಪಡೆದುಕೊಂಡವರಿಗೆ ಆಗುವ ಕಿರಿಕಿರಿಯ ಬಗ್ಗೆಯೂ ಚಿಂತಿಸಬೇಕು.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT