ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನಳಪಾಕಕ್ಕಿರಲಿ ನಿಂಬೆ, ಕುಂಬಳ

ಹಾಗೂ ಹೀಗೂ ಕೈಗೂಡಿದ ಫಸಲು ಗುಲಗಂಜಿಯಷ್ಟೂ ಪೋಲಾಗದೆ ಸದ್ಬಳಕೆಯಾದರೆ ಮಾತ್ರ ಬೆಳೆಗಾರನ ದುಡಿಮೆಯ ಸಾರ್ಥಕ್ಯ
Last Updated 5 ಅಕ್ಟೋಬರ್ 2022, 18:47 IST
ಅಕ್ಷರ ಗಾತ್ರ

ಹಾದಿ–ಬೀದಿಗಳಲ್ಲಿ ಕಾಲಿಗೆ ಸಿಗುವ ನಿಂಬೆ, ಬೂದುಗುಂಬಳ ಹೋಳುಗಳು. ನಿಗಾ ತಪ್ಪಿದರೆ ಕಾಯಿ ಚೂರುಗಳು ಚುಚ್ಚಿಕೊಳ್ಳುವ ಸಾಧ್ಯತೆ. ಇದು ನಿವಾಳಿಕೆಯ ಫಲವೆಂದು ಬೇರೆ ಹೇಳಬೇಕಿಲ್ಲ! ಸಂಭ್ರಮ, ಸಡಗರ ಯಾವುದರ ನಿಮಿತ್ತವೇ ಇರಲಿ ಆಡಂಬರ ಮೆರೆದು ಸಾಂಕೇತಿಕತೆ ಸೊರಗಬಾರದು ಅಲ್ಲವೇ?

ಬೂದುಗುಂಬಳ ಬಹು ಪುಷ್ಟಿದಾಯಕ ಕಾಯಿಪಲ್ಲೆ. ಅದು ನಮ್ಮ ಆಹಾರಕ್ರಮದಲ್ಲಿದ್ದರೆ
ಆರೋಗ್ಯದ ದೃಷ್ಟಿಯಿಂದ ಪ್ರಯೋಜನಗಳು ಬಹುಮುಖಿ. ಬೂದುಗುಂಬಳದಿಂದ ಬಗೆ ಬಗೆ ಸಾರು, ಸಾಂಬಾರು ಒಳಗೊಂಡಂತೆ ಸಲಾಡ್, ಕೆಚಪ್, ದಂರೋಟ್ ಸಿದ್ಧಗೊಳ್ಳುತ್ತವೆ. ಅದರ ಹೋಳುಗಳನ್ನು ಬೇಯಿಸಿ ಸೇವಿಸುವುದೇ ಆಹ್ಲಾದಕರ. ಕಡಿಮೆ ಕ್ಯಾಲೊರಿ ಮತ್ತು ಹೆಚ್ಚು ನೀರಿನಾಂಶವುಳ್ಳ ಬೂದುಗುಂಬಳಕಾಯಿ ದೇಹದ ತೂಕ ಇಳಿಸಬಲ್ಲದು.

ಇನ್ನು ನಿಂಬೆಹಣ್ಣು ಯಾವುದೇ ಮೇಲೋಗರದ ತಯಾರಿಕೆಗೆ ಅನಿವಾರ್ಯ. ನಿಂಬೆ, ಬೂದುಗುಂಬಳ ಒಂದೊಂದರಿಂದಲೂ ಪಾನಕ ಸಿದ್ಧಪಡಿಸಬಹುದು
ಎನ್ನುವುದು ಸರ್ವವೇದ್ಯ ಸಂಗತಿ. ನಿಂಬೆಹಣ್ಣು ಸಾಮಾನ್ಯವಾಗಿ ಕಾಡುವ ನಾನಾ ವ್ಯಾಧಿಗಳಿಗೆ ಮನೆಮದ್ದು. ಅದು ವ್ರಣ, ರಕ್ತಸ್ರಾವ, ಕೀಲೂತಗಳ ನಿವಾರಕ. ಅಮೂಲ್ಯವಾದ ಬೂದುಗುಂಬಳ, ನಿಂಬೆ ಜರ್ಜರಿತವಾಗಿ ಬೀದಿಯಲ್ಲಿ ಬಿದ್ದಿರುವುದನ್ನು ಕಂಡಾಗ ಇವುಗಳ ಮಹತ್ವದ ಬಗ್ಗೆ ಮೆಲುಕು ಹಾಕುವ ಮನಸ್ಸಾಯಿತು.

ಪ್ರೀತಿ ಮತ್ತು ಭಕ್ತಿಯಿಂದ ಯಾರೇ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಹನಿ ನೀರು ನೀಡಿದರೂ ಸಂತೋಷದಿಂದ ಸ್ವೀಕರಿಸುತ್ತೇನೆಂದು ಶ್ರೀ ಕೃಷ್ಣನೇ ಭಗವದ್ಗೀತೆಯಲ್ಲಿ ಹೇಳುತ್ತಾನೆ. ಆರಾಧನೆಯ ಪ್ರಧಾನ ಭಾಗ ಹೃದಯವೇ ವಿನಾ ಅದ್ಧೂರಿತನ ಅಲ್ಲ ಎನ್ನುವುದು ಆತನ ಪಾಠ. ಮತ್ತೂ ಗಮನಾರ್ಹವೆಂದರೆ, ‘ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೇನೆ. ನೀನು ಯುಕ್ತಾಯುಕ್ತ ವಿವೇಚಿಸಿ ಕೈಗೊಳ್ಳುವ ತೀರ್ಮಾನವೇ ಆಖೈರು’ ಎಂಬ ಅವನ ನುಡಿ. ಯಾವುದೇ ಧರ್ಮವು ಭವ್ಯತೆ, ದೊಡ್ಡಸ್ತಿಕೆಯನ್ನು ಮಾನ್ಯ ಮಾಡುವುದಿಲ್ಲ. ಅಪೌಷ್ಟಿಕತೆಯಿರಲಿ, ಅದೆಷ್ಟೋ ಮಂದಿಗೆ ದಿನಕ್ಕೆ ಒಂದೇ ಹೊತ್ತು ಮಾತ್ರ ಆಹಾರ ಲಭಿಸುತ್ತಿದೆ.

ಸುಮಾರು ನಲವತ್ತು ವರ್ಷಗಳ ಹಿಂದಿನ ಮಾತು. ಆಗ ತೆಂಗಿನಕಾಯಿ ಲಗ್ಷುರಿ. ಚಿಲ್ಲರೆ ಅಂಗಡಿಗಳಲ್ಲಿ ಕಾಯಿ ಬದಲು ಕಾಯಿ ಚೂರು ಮಾರಾಟ. ಅಂಗಡಿಯವ ಕಲಾತ್ಮಕವಾಗಿ ತೆಂಗಿನಕಾಯಿ ಭೇದಿಸಿ ತಿರುಳನ್ನು ಅಂದವಾಗಿ ಸಮ ಸಮ ಚೂರುಗಳನ್ನಾಗಿಸಿನೀರಿನಲ್ಲಿ ಮುಳುಗಿಸಿಡುತ್ತಿದ್ದ. ನಿಂಬೆ, ಕುಂಬಳ, ತೆಂಗಿನಕಾಯಿ ಅಡುಗೆಗೆ ವಿನಿಯೋಗವಾಗಲಿ. ಆ ಮೂಲಕ ಹಣ್ಣು, ಕಾಯಿ ಹಸಿದವರ ಉದರ ಸೇರಲಿ. ತ್ಯಾಜ್ಯದ ರಾಶಿಯೂ ಕಡಿಮೆಯಾಗಿ ಅಷ್ಟರಮಟ್ಟಿಗೆ ‘ಶೂನ್ಯ ತ್ಯಾಜ್ಯ’ ಗುರಿಯತ್ತ ಒಂದು ಪುಟ್ಟ ಹೆಜ್ಜೆಯೂ ಆದೀತು.

ಪರಂಪರೆಯಲ್ಲಿ ಸಾಗಿ ಬಂದ ಎಲ್ಲ ನಂಬಿಕೆಗಳು, ನಡಾವಳಿಗಳು ಹುಸಿಯೆಂಬ ನಿರ್ಣಯ ಸರಿಯಲ್ಲ. ಯಾವುದು ಸರಿ, ಯಾವುದು ಅಲ್ಲ ಎಂದು ವಿವೇಚಿಸುವುದು ಪ್ರಬುದ್ಧತೆ. ಮೌಢ್ಯಗಳಿಂದ ಮುಕ್ತಗೊಳ್ಳುವ ಹಾದಿ ಸುಗಮವಾಗಲು ಆಚಾರ, ವಿಚಾರಗಳನ್ನು ಜೊತೆ ಜೊತೆಗೇ ಕರೆದೊಯ್ಯುವುದು ಪೂರಕವೆ.

ಅಮೆರಿಕದ ಖ್ಯಾತ ಹಾಸ್ಯಪಟು ಮತ್ತು ಕಿರುತೆರೆ, ಸಿನಿಮಾ ನಿರ್ದೇಶಕರಾಗಿದ್ದ ಗ್ರೌಚೊ ಮಾರ್ಕ್ಸ್‌ ಅವರನ್ನು ಸಂದರ್ಶನವೊಂದರಲ್ಲಿ ‘ನಿಮ್ಮ ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಏನು ಮಾಡುವಿರಿ’ ಎಂದು ಕೇಳಲಾಯಿತಂತೆ. ಅದಕ್ಕವರು ‘ಅದು ಎಲ್ಲಿಗೋ ಹೊರಟಿದೆ ಎಂದು ಭಾವಿಸುತ್ತೇನೆ’ ಎಂದರಂತೆ! ಕಾಲ ಎಲ್ಲದರ ಪರಿಷ್ಕರಣೆ ಬಯಸುತ್ತದೆ.

ಕೃಷಿಭೂಮಿ ಕಡಿಮೆಯಾಗುತ್ತಿದೆ. ಜನಸಂಖ್ಯೆ ಏರುತ್ತಿದೆ. ಆಹಾರ ಪದಾರ್ಥಗಳ ಅಭಾವ ಜಾಗತಿಕ ಸಮಸ್ಯೆಯೇ ಆಗಿದೆ. ಹೀಗಿರುವಾಗ, ಹಿಂದಿನಿಂದ ಬಂದ ಆಚರಣೆಗಳನ್ನು ಕೈಬಿಡಲಾದೀತೆ ಎನ್ನುವುದು ಒಣ ತರ್ಕ.

‘ಕಲ್ಲು ನಾಗರಕ್ಕೆ ಹಾಲು ಬೇಡ, ಮಕ್ಕಳಿಗೆ ಹಾಲು ನೀಡಿ’ ಎಂಬ ಅಭಿಯಾನಕ್ಕೆ ಕೆಲ ವರ್ಷಗಳಿಂದ ಚಾಲನೆ ದೊರೆತಿರುವುದು ಶ್ಲಾಘನೀಯ. ಯಂತ್ರ, ವಾಹನ, ಪರಿಕರಗಳಿಗೆ ಪೂಜೆಯೆಂದರೆ ಅವನ್ನು ಪರಿಸರಸ್ನೇಹಿ
ಯಾಗಿರುವಂತೆ ನಿರ್ವಹಿಸಲು ಸಂಕಲ್ಪಿಸುವುದು.

ಎಲೆಯು ಸಸ್ಯದ ಆಹಾರ ಕಾರ್ಖಾನೆ. ಎಲೆಗಳನ್ನು ಕಿತ್ತರೆ ಫಲ ಬರುವುದು ಹೇಗೆ ತಾನೆ ಸಾಧ್ಯ? ತೋರಣ ಕೇವಲ ಸಾಂಕೇತಿಕವಾಗಿರಬೇಕು. ಇಲ್ಲವಾದರೆ ಅಪಾರ ಪ್ರಮಾಣದಲ್ಲಿ ಬಾಳೆಲೆ, ಮಾವಿನೆಲೆ ಕೀಳಲ್ಪಟ್ಟರೆ ಅಷ್ಟರಮಟ್ಟಿಗೆ ಬೆಳೆಯುವ ಹಂತದಲ್ಲೇ ಗಿಡ, ಮರ ಸೊರಗುತ್ತವೆ. ಇಳುವರಿಯೂ ಕ್ಷೀಣಿಸಿ ತ್ಯಾಜ್ಯಪರ್ವತದ ಎತ್ತರವೂ ಏರುತ್ತದೆ. ಭೂಮಿ ಹದಗೊಳಿಸಿ ಬೀಜ ಬಿತ್ತಿ, ಗೊಬ್ಬರ ಹಾಕಿ ಅನಾವೃಷ್ಟಿ, ಅತಿವೃಷ್ಟಿ ವೈಪರೀತ್ಯಗಳ ತೂಗುಗತ್ತಿಯನ್ನು ಎದುರಿಸುತ್ತಾರೆ ಶ್ರಮಜೀವಿಗಳಾದ ರೈತರು. ಹಾಗೂ ಹೀಗೂ ಕೈಗೂಡಿದ ಫಸಲು ಗುಲಗಂಜಿಯಷ್ಟೂ ಪೋಲಾಗದೆಸದ್ಬಳಕೆಯಾದರೆ ಮಾತ್ರ ಬೆಳೆಗಾರನ ದುಡಿಮೆಯ ಸಾರ್ಥಕ್ಯ.

ಬೂದುಗುಂಬಳವು ದಂರೋಟ್‌, ನಿಂಬೆಯು ಆಯಾಸ ಅಡಗಿಸುವ ಷರಬತ್ತು, ವ್ಯಂಜನವಾಗಿ ಊಟದ ಮೇಜಿಗೆ ಬರಬೇಕೆ ವಿನಾ ವ್ಯರ್ಥವಾಗಬಾರದು. ನಾವು ವೈಭವೀಕರಿಸಬೇಕಾದ್ದು ಆಚರಣೆಗಳ ಹಿಂದಿನ ಅರ್ಥ, ಅರುಹುಗಳನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT