ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬೇಕು ದಕ್ಷತೆ ಹೆಚ್ಚಿಸುವ ಕಲೆ

ನಾಯಕನಿಗೆ ಸಿಬ್ಬಂದಿಯಿಂದ ಗುಣಾತ್ಮಕ ಕೆಲಸ ಮಾಡಿಸುವ ಜಾಣ್ಮೆ ಸಿದ್ಧಿಸಿರಬೇಕು
Last Updated 7 ಜುಲೈ 2022, 19:47 IST
ಅಕ್ಷರ ಗಾತ್ರ

ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ತಮ್ಮ ಆತ್ಮಕಥೆ ‘ಆನ್ ಮೈ ಟರ್ಮ್ಸ್‌’ ಕೃತಿಯಲ್ಲಿ ತಮ್ಮ ಕಾರು ಚಾಲಕನ ಬಗ್ಗೆ ತುಂಬ ಸೊಗಸಾಗಿ ಬರೆದಿದ್ದಾರೆ. ‘ಈತ ದಕ್ಷತೆಯಿಂದ ಕಾರು ಓಡಿಸುತ್ತಾನೆ. ಮಾತ್ರವಲ್ಲ, ನಮ್ಮ ವಾಹನ ಎಲ್ಲಿ ನಿಲ್ಲಿಸಬೇಕು, ಎಲ್ಲಿ ನಿಲ್ಲಿಸಬಾರದು ಎಂಬುದು ಅವನಿಗೆ ಚೆನ್ನಾಗಿ ಗೊತ್ತು. ಆತ ಜೊತೆಗಿದ್ದರೆ ಆತಂಕ ಇರುವುದಿಲ್ಲ’ ಎಂದು ಆತನ ಬಗ್ಗೆ ತಮಗಿರುವ ವಿಶ್ವಾಸವನ್ನು ದಾಖಲಿಸಿದ್ದಾರೆ.

ಈ ಬರಹವನ್ನು ಆ ಚಾಲಕ ಕಟ್ಟು ಹಾಕಿಸಿ ತಮ್ಮ ಮನೆಯ ಜಗುಲಿಯ ಮೇಲೆ ಇಟ್ಟಿದ್ದಾರೆ. ‘ಈ ಬರಹ ಓದಿಯೇ ಕೆಲಸಕ್ಕೆ ಹೋಗುತ್ತೇನೆ. ಹೀಗಾಗಿ ನನಗೆ ಮುಪ್ಪು ಆವರಿಸಿಲ್ಲ’ ಎಂದು 72 ವರ್ಷ ವಯಸ್ಸಿನ ಚಾಲಕ ಹೆಮ್ಮೆಯಿಂದ ಹೇಳುತ್ತಾರೆ. ಮಾಲೀಕ- ನೌಕರ ಸಂಬಂಧವು ಸಂಬಳದ ಆಚೆಗೂ ಇರುತ್ತದೆ ಎಂಬುದಕ್ಕೆ ಇವರಿಬ್ಬರ ನಡುವಿನ ಬಾಂಧವ್ಯವು ಒಂದು ನಿದರ್ಶನ.

ತಮ್ಮ ಬಳಿ ಕೆಲಸ ಮಾಡುವ ಸಿಬ್ಬಂದಿ, ಕೂಲಿಕಾರರಿಂದ ಗುಣಾತ್ಮಕ ಕೆಲಸ ಮಾಡಿಸಿ
ಕೊಳ್ಳುವುದು ಒಂದು ಕಲೆ. ಒಂದು ಸಂಸ್ಥೆ ಚೆನ್ನಾಗಿ ನಡೆಯುವುದಕ್ಕೆ ಕೆಲಸಗಾರರ ಉತ್ತಮ ತಂಡ ಕಟ್ಟುವುದು ಬಹಳ ಮುಖ್ಯ. ಇದು, ಹಿಂದೆಯೂ ಈಗಲೂ ಮತ್ತು ಮುಂದೆಯೂ ಪ್ರಸ್ತುತವಾಗಿಯೇ ಇರುವ ವಿಚಾರ. ಕೆಲಸದ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಅಗತ್ಯ.

ಕಚೇರಿ, ಸಂಘ-ಸಂಸ್ಥೆಗಳು, ಶಾಲೆ-ಕಾಲೇಜು, ಕೃಷಿ ಕೆಲಸಗಳಿಗೆ ಕೆಲಸಗಾರರ ಅವಶ್ಯಕತೆ ಇರುತ್ತದೆ. ಯಾರೂ ಪೂರ್ಣ ಸ್ವತಂತ್ರರಲ್ಲ. ಇನ್ನೊಬ್ಬರ ನೆರವು ಬೇಕೇ ಬೇಕು. ಸಿಬ್ಬಂದಿಗೆ ಹತ್ತಿರವೂ ಆಗಿ, ಅವರಿಂದ ಅಂತರವನ್ನೂ ಕಾಯ್ದುಕೊಂಡು ಕೆಲಸ ಮಾಡಿಸುವ ಕಲೆಯನ್ನು ನಾಯಕನಾದವನು ಕರಗತ ಮಾಡಿಕೊಂಡಿರಬೇಕು.

ಕೆಲಸಗಾರರು ಸಂಬಳಕ್ಕಾಗಿ ದುಡಿಯುತ್ತಾರೆ ಎನ್ನುವುದು ನಿಜ, ಅದಕ್ಕಿಂತಲೂ ಹೆಚ್ಚಾಗಿ ತಮ್ಮ ಕೆಲಸದ ಮೌಲ್ಯ ಗುರುತಿಸಬೇಕು, ಮೆಚ್ಚುಗೆ ಸೂಚಿಸಬೇಕು ಎಂದು ಅವರು ಬಯಸುತ್ತಾರೆ. ಮಾಲೀಕ ಅಥವಾ ಮೇಲಧಿಕಾರಿ ತಮ್ಮ ಬಳಿ ಕೆಲಸ ಮಾಡುವವರ ಶ್ರಮ ಹಾಗೂ ಶ್ರದ್ಧೆಯನ್ನು ಗುರುತಿಸಿ ಬೆನ್ನು ತಟ್ಟುವುದರಿಂದ ಕೆಲಸದ ಸ್ಥಳದಲ್ಲಿ ಪವಾಡಗಳೇ ಆಗಬಹುದು. ನೌಕರರನ್ನು ಅವರ ಸಹೋದ್ಯೋಗಿಗಳ ಮುಂದೆ ಟೀಕಿಸುವುದು, ಅವಮಾನಿಸುವುದು ಅವರ ಕೆಲಸದ ಕ್ಷಮತೆಯನ್ನು ಕುಗ್ಗಿಸುತ್ತದೆ. ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಸಂಸ್ಥೆಯು ಬೆಳೆಯಲು, ಅನವಶ್ಯಕ ಖರ್ಚು ಕಡಿಮೆ ಮಾಡಲು, ಉತ್ಪಾದಕತೆ ಹೆಚ್ಚಿಸಲು ಒಳ್ಳೆಯ ಸಲಹೆಗಳನ್ನು ನೀಡಲು ಅವಕಾಶ ಕೊಡಬೇಕು. ‘ನಮ್ಮ ಮಾತಿಗೂ ಮನ್ನಣೆ ದೊರೆಯುತ್ತದೆ’ ಎಂಬ ಭಾವನೆ ಮೂಡಿಸುವುದು ಬಹಳ ಅವಶ್ಯ. ನೌಕರರ ಸಲಹೆಗಳು ಸೂಕ್ತವಾಗಿದ್ದಾಗ ಅವುಗಳನ್ನು ಅನುಷ್ಠಾನಕ್ಕೆ ತರಬೇಕು.

ಬಾಗಲಕೋಟೆಯ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಲು ಸಮೀಪದ ಹಳ್ಳಿಗಳಿಂದ ನೂರಾರು ಕಾರ್ಮಿಕರು ಬರುತ್ತಾರೆ. ಅವರು ಮಧ್ಯಾಹ್ನ ಊಟಕ್ಕೆ ಬುತ್ತಿ ತರುತ್ತಾರೆ. ಅವರ ಊಟಕ್ಕೆ ಅನುಕೂಲ
ಆಗುವಂತೆ ಬಿಸಿಯಾದ ಸಾರು ಪೂರೈಸಲು ಆಡಳಿತ ಮಂಡಳಿಗೆ ಒಬ್ಬ ನೌಕರ ಸಲಹೆ ಮಾಡಿದ. ಆಡಳಿತ ಮಂಡಳಿ ತಕ್ಷಣ ಸ್ಪಂದಿಸಿ, ಉತ್ತಮ ಬೇಳೆಸಾರು ಪೂರೈಸತೊಡಗಿತು. ಈ ಸಣ್ಣ ಸಲಹೆಯು ಕಾರ್ಮಿಕರ ಕ್ರಿಯಾಶೀಲತೆಯಲ್ಲಿ ಗಣನೀಯ ಬದಲಾವಣೆ ತಂದಿದೆ.

ಕೆಲಸಗಾರರಲ್ಲಿ ಕೆಲವರು ಕವಿಗಳು, ನಾಟಕಕಾರರು, ಕಲಾವಿದರು ಇರುತ್ತಾರೆ. ಕೆಲಸದ ಸ್ಥಳದಲ್ಲಿ ಇವರು ಸಂತಸದ ವಾತಾವರಣ ಸೃಷ್ಟಿಸಬಲ್ಲರು.
ಕಲಾವಿದ ಗುರುರಾಜ್ ಹೊಸಕೋಟೆ ತಮ್ಮ ಓದು ಮುಗಿದ ಮೇಲೆ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ಕಾರ್ಮಿಕರಿಗೆ ಅಭಿನಯ, ಸಂಗೀತ ಕಲಿಸುತ್ತಿದ್ದರು. ಇದರಿಂದಾಗಿ ಕಾರ್ಮಿಕರು ಯಂತ್ರಗಳೊಂದಿಗೆ ಮಾತನಾಡುವುದರೊಂದಿಗೆ ಕಲೆ, ಸಂಸ್ಕೃತಿ, ಕಾವ್ಯದ ಬಗ್ಗೆಯೂ ಮಾತನಾಡುವ ಸಾಂಸ್ಕೃತಿಕ ವಾತಾವರಣ ರೂಪುಗೊಂಡಿತು.

ಅಮೆರಿಕದ ಗ್ಯಾರಿ ಚ್ಯಾಪ್‌ಮನ್‌ ಮತ್ತು ಪೌಲ್‌ ವೈಟ್‌ ಅವರು ‘ದಿ 5 ಲ್ಯಾಂಗ್ವೇಜಸ್ ಆಫ್ ಅಪ್ರಿಸಿಯೇಶನ್ ಇನ್ ದ ವರ್ಕ್‌ಪ್ಲೇಸ್’ ಎಂಬ ಮಹತ್ವದ ಗ್ರಂಥ ರಚಿಸಿದ್ದಾರೆ. ಅಮೆರಿಕದ ಕೈಗಾರಿಕೆಗಳು ತಮ್ಮ ಕೆಲಸಗಾರರ ಸಾಧನೆ ಹಾಗೂ ಅವರಲ್ಲಿನ ಕಲಾ ಪ್ರತಿಭೆಗೆ ಮನ್ನಣೆ ನೀಡುವ ಕಾರ್ಯಕ್ರಮ ಸಂಘಟಿಸುತ್ತವೆ. ಇದು ಕೆಲಸದ ಸ್ಥಳದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಸಲು ನೆರವಾಗಿದೆ ಎಂದು ಅವರು ಕೃತಿಯಲ್ಲಿ ದಾಖಲಿಸಿದ್ದಾರೆ.

ಸುಧಾಮೂರ್ತಿ ಅವರು ಬಿ.ಇ. ಪದವಿ ಪೂರೈಸಿದ ನಂತರ ಪುಣೆಯ ಟೆಲ್ಕೊ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಒಂದು ದಿನ ಅವರು ರಾತ್ರಿ 8 ಗಂಟೆ ಸಮಯದಲ್ಲಿ ಮನೆಗೆ ತೆರಳಲು ಸಿಟಿ ಬಸ್‍ಗಾಗಿ ಕಾಯುತ್ತಿದ್ದರು. ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಸಂಸ್ಥೆಯ ಮಾಲೀಕ ರತನ್ ಟಾಟಾ ಅವರು ಸುಧಾ ಅವರನ್ನು ಗಮನಿಸಿ ಕರೆದು ಮನೆಗೆ ತಲುಪಿಸಿದರು. ಇದೊಂದು ತಾವು ಬದುಕಿನುದ್ದಕ್ಕೂ ಮರೆಯಲಾಗದ ಅನುಭವ ಎಂದು ಸುಧಾಮೂರ್ತಿ ಒಂದೆಡೆ ಬರೆದಿದ್ದಾರೆ.

ಉದ್ದಿಮೆ, ಸಂಸ್ಥೆ, ಕಚೇರಿಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಕೆಲಸಗಾರರಿಗೆ ಮಾರ್ಗದರ್ಶಕರು, ಹಿತೈಷಿಗಳಾಗುವ ಮೂಲಕ ಸಂತಸದ ವಾತಾವರಣ ಮೂಡಿಸಬಹುದು. ಪ್ರಗತಿಯ ಸೌಧ ಕಟ್ಟಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT