ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ನಪುಂಸಕ’ ನಿಂದನೆ ತರವೇ?

Last Updated 3 ಜೂನ್ 2022, 19:31 IST
ಅಕ್ಷರ ಗಾತ್ರ

ಭಿನ್ನಾಭಿಪ್ರಾಯಗಳನ್ನು ಸಂವಾದ ಅಥವಾ ವಾಗ್ವಾದಗಳಲ್ಲಿ ಮಂಡಿಸುತ್ತಾ ರಚನಾತ್ಮಕವಾಗಿ ಚರ್ಚೆಯನ್ನು ವಿಸ್ತರಿಸುವುದು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣ. ಆದರೆ, ಬೌದ್ಧಿಕ ದಿವಾಳಿತನದಿಂದಾಗಿ ನಮ್ಮ ರಾಜಕಾರಣಿಗಳು ಆಯ್ದುಕೊಳ್ಳುತ್ತಿರುವುದು ನಿಂದನಾತ್ಮಕ ಭಾಷೆಯನ್ನು. ‘ಗಂಡಸ್ತನ’, ‘ನಪುಂಸಕ’ ಎಂಬಂಥ ‘ನುಡಿಮುತ್ತು’ಗಳು ಇತ್ತೀಚಿನ ದಿನಗಳಲ್ಲಿ ಹಾರಾಡುತ್ತಿವೆ.

ಎಲ್ಲ ರಾಜಕೀಯ ಪಕ್ಷಗಳೂ ಪರಸ್ಪರರ ಕುರಿತಾದ ದಾಳಿಗಳಲ್ಲಿ ಇಂಥಾ ಪದಗಳ ಬಳಕೆಯಲ್ಲಿ ಯಾವುದೇ ಮುಜುಗರ ತೋರುತ್ತಿಲ್ಲ. ತಮಗಿರುವ ಸಾಂವಿಧಾನಿಕ ಸ್ಥಾನಮಾನ ಹಾಗೂ ಪ್ರಜಾಪ್ರಭುತ್ವದ ಮೂಲ ಲಕ್ಷಣವೇ ಆದ ವಾಗ್ವಾದವನ್ನು ಯಾವ ಮಟ್ಟಕ್ಕೆ ಇಳಿಸುತ್ತಿದ್ದೇವೆ
ಎಂಬ ಪರಿವೆಯೇ ಇಲ್ಲದೆ ನಾಲಿಗೆ ಹರಿಬಿಡುತ್ತಿರುವುದು
ಶೋಚನೀಯ. ಈ ಕೆಸರೆರಚಾಟಕ್ಕೆ ನಾಡಿನ ವಿದ್ವತ್ ಲೋಕವನ್ನೂ ಎಳೆದುತಂದಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಬರಹಗಾರರನ್ನು ‘ವಿಚಾರ ನಪುಂಸಕರು’ ಎಂದು ಹಳಿದಿದ್ದಾರೆ.

‘ಲೈಂಗಿಕ ಸಾಮರ್ಥ್ಯ’ ಇಲ್ಲದವರು ಎಂಬ ಅರ್ಥವನ್ನು ‘ನಪುಂಸಕ’ ಪದ ಧ್ವನಿಸುತ್ತದೆ. ಬಲಶಾಲಿ ಹಾಗೂ ಪುರುಷತ್ವದ ವಿಜೃಂಭಣೆಗೆ ತದ್ವಿರುದ್ಧ ಪದ ಇದು. ಈ ಪದದ ಅಂತರಾರ್ಥಗಳು ಹುಟ್ಟು ಪಡೆದಿರುವುದು ಗಂಡಾಳ್ವಿಕೆಯ ಸಂಸ್ಕೃತಿಯಲ್ಲಿ ಎಂಬುದನ್ನು ನಮ್ಮ ರಾಜಕೀಯ ನೇತಾರರ ಸಂವೇದನೆಗೆ ಇಳಿಸುವುದು ಸಾಧ್ಯವಿದೆಯೇ?

ವಾಗ್ವಾದಕ್ಕಿಂತ ನಿಂದನೆಗಳೇ ಸಹಜ ವಿದ್ಯಮಾನವಾಗಿ ಪರಿಣಮಿಸುತ್ತಿರುವುದು ಸದ್ಯದ ರಾಜಕೀಯ ಸಂಕಥನವಾಗಿಬಿಟ್ಟಿದೆ. 2014ರಲ್ಲಿ ಲೋಕಸಭೆ ಚುನಾವಣೆಗೆ ಮುಂಚೆ, ಆಗಿನ ಕೇಂದ್ರ ಸಚಿವರಾಗಿದ್ದ ಕಾಂಗ್ರೆಸ್‌ನ ಸಲ್ಮಾನ್ ಖುರ್ಷಿದ್ ಅವರು ನರೇಂದ್ರ ಮೋದಿ ಅವರನ್ನು ‘ನಪುಂಸಕ’ ಎಂದು ಕರೆದಿದ್ದರು. ಅಷ್ಟೊಂದು ಶಕ್ತಿಶಾಲಿ ವ್ಯಕ್ತಿಯೆಂದು
ಪ್ರತಿಪಾದಿಸಿಕೊಳ್ಳುತ್ತಾ ಪ್ರಧಾನಿಯಾಗಬಯಸುವ
ವ್ಯಕ್ತಿ, 2002ರ ಗುಜರಾತ್ ಕೋಮುಗಲಭೆ ಸಂದರ್ಭದಲ್ಲಿ ಗೋಧ್ರಾ ಜನರನ್ನು ರಕ್ಷಿಸಲು ವಿಫಲವಾದ ‘ನಪುಂಸಕ’ ಎಂದು ಜರೆದಿದ್ದರು.

2004ರಲ್ಲಿ ಬಿಜೆಪಿಯ ಯಶವಂತ ಸಿನ್ಹಾ ಅವರು, ಆಗಿನ ಪ್ರಧಾನಿ ಮನಮೋಹನ್‌ ಸಿಂಗ್ ಅವರನ್ನು ‘ಶಿಖಂಡಿ’ ಎಂದಿದ್ದರು. ಅಷ್ಟೇ ಅಲ್ಲ, 2012ರಲ್ಲಿ ಅಣ್ಣಾ ಹಜಾರೆ ತಂಡದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಪ್ರಶಾಂತ್ ಭೂಷಣ್ ಅವರೂ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್‌ಗೆ ಮಹಾಭಾರತದ ಶಿಖಂಡಿ ಯಂತಿದ್ದಾರೆ ಎಂದು ಟೀಕಿಸಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬಿಜೆಪಿ ನಾಯಕರೊಬ್ಬರು ‘ಹಿಜ್ರಾ’ ಎಂದು ಕರೆದದ್ದೂ ಇದೆ.

ಲೋಕಸಭೆಯಲ್ಲೂ ನಪುಂಸಕ ಪದ ಬಳಕೆ ಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪದೇ ಪದೇ ಮುಂದೂಡಿಕೆ ಕೋರುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಆಗ ಸಂಸದರಾಗಿದ್ದ
ಡಾ. ಸುಬ್ರಮಣಿಯನ್ ಸ್ವಾಮಿ ಅವರು ವಾಜಪೇಯಿ ನೇತೃತ್ವದ ಸರ್ಕಾರವನ್ನು ಟೀಕಿಸಲು 1998ರಲ್ಲಿ ‘ನಪುಂಸಕ’ ಪದ ಬಳಸಿದ್ದರು. ಸಚಿವ ರಾಮ್ ನಾಯಕ್ ಪ್ರತಿಭಟಿಸಿದಾಗ ಸುಬ್ರಮಣಿಯನ್ ಸ್ವಾಮಿ ‘ಶಕ್ತಿಹೀನರು ಎಂಬುದನ್ನು ಹೇಳಲು ಸಂಸದೀಯ ಪದ ‘ಇಂಪೊಟೆಂಟ್’ ಬಳಸಿದ್ದೇನೆ. ವಯಾಗ್ರಾ ಅರ್ಥದಲ್ಲಿ ಬಳಸಿಲ್ಲ!’ ಎಂದಿದ್ದರು. ಎಲ್ಲರಿಗೂ ‘ಇಂಪೊಟೆಂಟ್’ ಎಂದರೆ ಏನೆಂದು ಅರ್ಥವಾಗುತ್ತದೆ’ ಎಂದು ಲಾಲು ಪ್ರಸಾದ್ ಹೇಳಿದ ನಂತರ, ಸಭಾಪತಿ ಪಿ.ಎಂ.ಸಯೀದ್ ಅವರು ನಪುಂಸಕ ಪದವನ್ನು ಕಡತದಿಂದ ಕಿತ್ತುಹಾಕಲು ನಿರ್ಧರಿಸಿದರು. ಆದರೆ ಇಂಗ್ಲಿಷ್ ಪದ ‘ಇಂಪೊಟೆಂಟ್’ ದಾಖಲೆಗಳಲ್ಲಿ ಉಳಿಯಿತು.

ನಮ್ಮ ಚಿಂತನೆಗಳನ್ನು ಧ್ವನಿಸುವಂತಹದ್ದು ಭಾಷೆ. ವ್ಯಕ್ತಿಯ ಚಹರೆ, ಜೀವಶಾಸ್ತ್ರೀಯ ಗುಣಲಕ್ಷಣಗಳನ್ನು
ನಿಂದನೆಯ ವಸ್ತುವಾಗಿಸುವುದು ಎಷ್ಟು ಸರಿ? ಭಾಷೆಯಲ್ಲಿ ಧ್ವನಿಸುವ ನಕಾರಾತ್ಮಕ ಸಂವೇದನೆಯು ಬಹುಪಾಲು ಜನರ ಮಧ್ಯೆ ಸಹಜವೆಂಬಂತೆ ಸ್ವೀಕೃತಗೊಳ್ಳುತ್ತಾ ಸಾಗಿದರೆ, ಈವರೆಗೆ ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಹೋರಾಟಗಳಿಂದ ಪಡೆದು ಕೊಂಡಿರುವುದು ಎಲ್ಲಿಗೆ ಹೋಗಿ ಮುಟ್ಟುತ್ತದೆ?

ಸಾರ್ವಜನಿಕ, ಖಾಸಗಿ ಹಾಗೂ ವರ್ಚುವಲ್ ತಾಣಗಳಲ್ಲಿ ಮಹಿಳೆಯನ್ನು ಅಂಜಿಸಿ ಹಿಂಸಿಸುವ, ತುಚ್ಛೀಕರಿಸುವ ಹಾಗೂ ಸ್ತ್ರೀ ದ್ವೇಷದ ನಿಂದನೀಯ ನಡವಳಿಕೆಗಳನ್ನು ನಿಯಂತ್ರಿಸಲು ಶಾಸನ ರಚಿಸಬೇಕೆಂದು ತಮಿಳುನಾಡು ಶಾಸಕಿ ಎ. ತಮಿಳ್ಅರಸಿ, ತಿರುವನಂತಪುರದಲ್ಲಿ ಇತ್ತೀಚೆಗೆ ನಡೆದ ಮಹಿಳಾ ಶಾಸಕರ ಸಮ್ಮೇಳನದಲ್ಲಿ ಮಂಡಿಸಿದ ನಿರ್ಣಯದಲ್ಲಿ ಕರೆ ನೀಡಿದ್ದಾರೆ. ಸ್ತ್ರೀದ್ವೇಷ ಅಥವಾ ಮಹಿಳೆ ವಿರುದ್ಧದ ಪೂರ್ವಗ್ರಹದ ಮಾತುಗಳನ್ನು ದ್ವೇಷ ಅಪರಾಧಗಳ ವರ್ಗಕ್ಕೆ ಸೇರಿಸಬೇಕೆಂಬ ಚರ್ಚೆ ಬ್ರಿಟನ್‌ನಲ್ಲಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ನಡೆದಿರುವುದನ್ನೂ ಗಮನಿಸಬೇಕು.

ಕೇಂದ್ರ ಆರೋಗ್ಯ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ ರಾಷ್ಟ್ರೀಯ ಆರೋಗ್ಯ ಸಮೀಕ್ಷೆ-5 (ಎನ್ಎಫ್ಎಚ್ಎಸ್-5) ಪ್ರಕಾರ, ಭಾರತದಲ್ಲಿ ಪ್ರತೀ ಮೂವರು ವಿವಾಹಿತ ಮಹಿಳೆಯರಲ್ಲಿ ಒಬ್ಬರು, ಗಂಡನಿಂದ ಲೈಂಗಿಕ ಅಥವಾ ಭಾವನಾತ್ಮಕ ಹಿಂಸಾ ಚಾರಕ್ಕೆ ಒಳಗಾಗುತ್ತಾರೆ. ಆಶ್ಚರ್ಯದ ಸಂಗತಿ ಎಂದರೆ, ಕರ್ನಾಟಕದಲ್ಲಿನ ಶೇ 48.4ರಷ್ಟು ಮಹಿಳೆಯರು ಗಂಡನಿಂದ ಹಿಂಸೆ ಅನುಭವಿಸುತ್ತಿದ್ದು, ಈ ವಿಷಯದಲ್ಲಿ ರಾಜ್ಯವು ರಾಷ್ಟ್ರದಲ್ಲೇ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಮೂಲ ಕಾರಣ, ಮಹಿಳೆ ವಿರುದ್ಧದ ಪೂರ್ವಗ್ರಹಗಳೇ ಎಂಬುದನ್ನು ನಾವು ಹಾಗೂ ಶಾಸನಗಳನ್ನು ರಚಿಸುವ ದೊಡ್ಡ ಜವಾಬ್ದಾರಿ ಹೊಂದಿರುವ ನಮ್ಮ ಜನಪ್ರತಿನಿಧಿಗಳು ಮರೆಯದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT