ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ದೋಷರಹಿತ ಮೌಲ್ಯಮಾಪನದ ನಿಷ್ಕರ್ಷೆ

ಉತ್ತರಪತ್ರಿಕೆಗಳ ಮೌಲ್ಯಮಾಪನದಂತಹ ಹೆಮ್ಮೆಯ, ಅಷ್ಟೇ ಜವಾಬ್ದಾರಿಯುತ ಕಾಯಕದಲ್ಲಿ ಎಷ್ಟೇ ನಿಗಾ ವಹಿಸಿದರೂ ಸಾಲದು
Last Updated 15 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮೌಲ್ಯಮಾಪನದಲ್ಲಿ ಲೋಪ ಎಸಗಿದ ಕಾರಣಕ್ಕಾಗಿ 1,200 ಶಿಕ್ಷಕರನ್ನು ಕಪ್ಪುಪಟ್ಟಿಗೆ ಸೇರಿಸಿರುವ ಸುದ್ದಿ (ಪ್ರ.ವಾ., ಏ. 13) ಶಿಕ್ಷಕರಷ್ಟೇ ಅಲ್ಲ, ಇಡೀ ಸಮಾಜ ತನ್ನ ಕರ್ತವ್ಯಕ್ಷಮತೆ, ನಿಲುವುಗಳನ್ನು ಪರಿಷ್ಕರಿಸಿಕೊಳ್ಳಲು ಜಾಗೃತಿ, ಇಂಬು ನೀಡುತ್ತದೆ. ಬದುಕಿನ ಎಲ್ಲ ರಂಗಗಳಲ್ಲೂ ಒಂದಲ್ಲ ಒಂದು ಬಗೆಯಲ್ಲಿ ಮೌಲ್ಯಮಾಪನ ನೆರವೇರಿಯೇ ಇರುತ್ತದೆ. ಸರಿ, ತಪ್ಪುಗಳ ನಿಷ್ಕರ್ಷೆಗೆ ಒಡ್ಡಿಕೊಳ್ಳದ ಸಂಗತಿಗಳಿಲ್ಲ.

ಪರೀಕ್ಷೆ ಮತ್ತು ಮೌಲ್ಯಮಾಪನವು ಶಿಕ್ಷಣ ಕ್ರಮದ ಪರಸ್ಪರ ಅಭೇದ್ಯವಾದ ಬಹುಮುಖ್ಯ ಘಟಕಗಳು. ಯಾವುದೇ ಒಂದು ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನವು ಶೈಕ್ಷಣಿಕ ನಿಲುವು, ನಿರ್ಧಾರಗಳನ್ನು ಪುನರ್‌ ಅವಲೋಕಿಸುವಷ್ಟು ಮಹತ್ವದ್ದು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ತಪ್ಪೆಸಗಿದ ಶಿಕ್ಷಕರನ್ನು ದಂಡಸಮೇತ ಕಪ್ಪುಪಟ್ಟಿಯಲ್ಲಿ ಇರಿಸುವುದಿರಲಿ, ಪ್ರಮಾದಗಳಾಗಲು ಕಾರಣಗಳು ಯಾವ್ಯಾವು ಎಂಬುದನ್ನು ಪರಿಶೀಲಿಸುವುದು ಅಗತ್ಯ. ಮೂರು ಅಥವಾ ನಾಲ್ಕು ವರ್ಷಗಳ ಬೋಧನಾನುಭವ ಇದ್ದರಾಯಿತು, ಮೌಲ್ಯಮಾಪನ ಕರ್ತವ್ಯಕ್ಕೆ ನೇಮಿಸಿಕೊಳ್ಳಲು ಅಡ್ಡಿಯಿಲ್ಲ. ಆದರೆ ಮೌಲ್ಯಮಾಪನ ಎಂದರೇನು? ಅಂಕಗಳ ವಿತರಣೆ ಹೇಗೆ? ಅದರ ನಿರ್ವಹಣೆಗೆ ಪೂರ್ವ ತಯಾರಿ ಎಂತು?- ಈ ಕುರಿತು ಕನಿಷ್ಠ ಮೂರು ದಿನಗಳ ಅವಧಿಯ ಕಮ್ಮಟವಾದರೂ ಶಿಕ್ಷಕರಿಗೆ ಅಗತ್ಯವಿದೆ.

ಉತ್ತರಪತ್ರಿಕೆಗಳ ಮೌಲ್ಯಮಾಪನದಂತಹ ಹೆಮ್ಮೆಯ, ಅಷ್ಟೇ ಜವಾಬ್ದಾರಿಯುತ ಕಾಯಕದಲ್ಲಿ ಎಷ್ಟೇ ನಿಗಾ ವಹಿಸಿದರೂ ಸಾಲದು. ಅತಿ ವಿಶ್ವಾಸವೂ ತಪ್ಪು ಹೆಜ್ಜೆಯೆ. ಎಸ್‌ಎಸ್‌ಎಲ್‌ಸಿ, ಪಿ.ಯು., ಪದವಿ- ಪರೀಕ್ಷೆ ಯಾವುದೇ ಇರಲಿ ಮೌಲ್ಯಮಾಪನ ಕಾರ್ಯ ಅತ್ಯಂತ ಸಾವಧಾನ, ಸಮಾಧಾನದ ವಾತಾವರಣವನ್ನು ಬಯಸುತ್ತದೆ. ಶಿಕ್ಷಕರು ಮೌಲ್ಯಮಾಪನ ಕಾರ್ಯ ಪ್ರಾರಂಭಕ್ಕೆ ಒಂದು ವಾರ ಮೊದಲೇ ಪ್ರಶ್ನೆಪತ್ರಿಕೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದರೆ ಆತ್ಮವಿಶ್ವಾಸ ಮೂಡುವುದು. ಹೊಣೆ ಕಠಿಣವೆನ್ನಿಸದೆ ಹಿರಿಮೆ ಎನ್ನಿಸೀತು. ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧವಾಗುವಂತೆಯೇ ಶಿಕ್ಷಕರು ಮೌಲ್ಯಮಾಪನಕ್ಕೆ ಪೂರ್ವತಯಾರಿ ನಡೆಸಬೇಕು. ತನ್ಮೂಲಕ ಪ್ರಶ್ನೆಗಳಿಗೆ ಪರ್ಯಾಯ ಉತ್ತರಗಳನ್ನು ಆಲೋಚಿಸಲು ವ್ಯವಧಾನವಾದೀತು.

‘ಈಗಾಗಲೇ ಮೌಲ್ಯಮಾಪನ ಆರಂಭಗೊಂಡಿದೆ, ಕೆಲವೇ ದಿನಗಳಲ್ಲಿ ಮುಗಿಯಲಿದೆ’, ‘ತ್ವರಿತವಾಗಿ ಫಲಿತಾಂಶ ಹೊರಬೀಳಲಿದೆ. ಪೋಷಕರಿಗೆ ಗಾಬರಿ ಬೇಡ’ ಮುಂತಾಗಿ ಸಂಬಂಧಿಸಿದ ಇಲಾಖೆ ಅಥವಾ ವಿಶ್ವವಿದ್ಯಾಲಯ ಘೋಷಿಸಬಾರದು. ಇವು ಭರವಸೆ
ಗಳಲ್ಲ, ಮೌಲ್ಯಮಾಪನ ಪ್ರಕ್ರಿಯೆಗೆ ಅನಗತ್ಯ ಅವಸರ ತರುವ ಒತ್ತಾಸೆ. ದಿನಕ್ಕೆ ಇಂತಿಷ್ಟು ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲೇಬೇಕೆಂಬ ಒತ್ತಾಯ ಕೂಡ ಸಲ್ಲದು. ಮೈಯೆಲ್ಲ ಕಣ್ಣಾಗಿ, ನಿಧಾನವೇ ಪ್ರಧಾನವಾಗಿ, ಮೌಲ್ಯಮಾಪನವೆಂಬ ಮಹತ್ಕಾರ್ಯ ಯಜ್ಞೋ
ಪಾದಿಯಾಗಿ ನೆರವೇರಬೇಕಾಗುತ್ತದೆ. ಶಾಂತಿ, ನೀರವತೆಯೇ ಈ ಯಜ್ಞದ ರೂವಾರಿಗಳು. ಪೋಷಕರು ತಮ್ಮ ಆತುರ, ಕಾತರಗಳನ್ನು ಹಿಡಿದಿಟ್ಟುಕೊಳ್ಳುವುದು ಲೇಸು.

ಅಂದಹಾಗೆ ಮೌಲ್ಯಮಾಪನ ಕೇಂದ್ರಕ್ಕೆ ಹೊರ ಊರಿನಿಂದ ಬಂದು ಹೋಗಿ ಮಾಡುವುದು ಸಾವಕಾಶದ ಕರ್ತವ್ಯಪಾಲನೆಗೆ ತಡೆಯೊಡ್ಡುತ್ತದೆ. ಹಾಗಾಗಿ ಮೌಲ್ಯಮಾಪನ ಕೇಂದ್ರವಿರುವ ಸ್ಥಳದಲ್ಲೇ ಮೌಲ್ಯಮಾಪಕರು ತಂಗುವುದು ಸೂಕ್ತ. ಪರೀಕ್ಷಾರ್ಥಿಗಳು, ಅವರಿಗೂ ಮಿಗಿಲಾಗಿ ಅವರ ಪೋಷಕರು ಏನೆಲ್ಲ ನಿರೀಕ್ಷೆ, ಅಪೇಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಪಾಸು, ನಪಾಸಿನ ಮಾತಿರಲಿ. ಒಂದೆರಡು ಅಂಕಗಳು ಕಡಿಮೆಯೆನ್ನಿಸಿದರೂ ಆಕಾಶವೇ ಕಳಚಿಬಿದ್ದಂತೆ ಕಂಗಾಲಾಗುವ ದುರ್ಬಲ ಮನಸ್ಸಿನವರಿರುತ್ತಾರೆ.

ಕೆಲವು ಪರೀಕ್ಷಾರ್ಥಿಗಳ ಕೈಬರಹವೋ ಓದಲಾಗದಷ್ಟು ಅಸ್ಪಷ್ಟ. ಸುಮಾರು ಆರು ದಶಕಗಳ ಹಿಂದೆ ಪ್ರಶ್ನೆ ಪತ್ರಿಕೆಯಲ್ಲಿ ‘ದುಂಡಾದ ಮತ್ತು ಕಾಗುಣಿತ ತಪ್ಪಿರದ ಅಕ್ಷರಗಳಿಗೆ 5 ಅಂಕ ಮೀಸಲಿದೆ’ ಎಂಬ ಸೂಚನೆ ಇರುತ್ತಿತ್ತು. ಹಿಗ್ಗಿನಿಂದ ಇದರ ಕೃಪೆಗೆ ಪಾತ್ರರಾಗಿ ‘ಶೂನ್ಯ ಸಂಪಾದನೆ’ ತಪ್ಪಿಸಿಕೊಂಡವರೆಷ್ಟೋ! ಮೌಲ್ಯಮಾಪಕರು ನಿಗ್ರಹಿಸಬೇಕಾದ ವಿಶಿಷ್ಟವೂ ಸ್ವಾರಸ್ಯಕರವೂ ಆದ ಇನ್ನೊಂದು ಸವಾಲಿದೆ. ಅದುವೇ ಪರೀಕ್ಷಾರ್ಥಿಗಳ ಕೋರಿಕೆಗಳು. ಉತ್ತರ ಬರೆಸಿಕೊಳ್ಳಬೇಕಾದ ಹಾಳೆಗಳಲ್ಲಿ ಗೋಗರೆತಗಳು! ‘ದಯವಿಟ್ಟು ನನಗೆ ಕನಿಷ್ಠ ತೇರ್ಗಡೆ ಅಂಕಗಳನ್ನು ದಯಪಾಲಿಸಿ ಪುಣ್ಯ ತಂದುಕೊಳ್ಳಿ’ ಎಂದೋ ‘ಈ ಬಾರಿ ನಾನು ಫೇಲಾದರೆ ನನ್ನ ಆತ್ಮಹತ್ಯೆಗೆ ನೀವೇ ಕಾರಣ’ ಎಂದೋ ಒಕ್ಕಣೆಗಳು. ‘ಭಾವೀ ಪತಿಗೆ ಪಾಸಾಗುವುದಾಗಿ ಹೇಳಿರುವೆ’ ಅಂತ ಅಳಲು ಮತ್ತೊಂದೆಡೆ. ಸಾಲದ್ದಕ್ಕೆ ಮತ್ತೆ ಕೆಲವರಿಂದ ಉತ್ತೀರ್ಣರಾದರೆ ಐನಾತಿ ಉಡುಗೊರೆಗಳ ಆಶ್ವಾಸನೆಗಳು ಬೇರೆ. ಛೇ! ಈ ಹುಚ್ಚು ನಿವೇದನೆಗಳ ಬದಲು ಶ್ರಮಪಟ್ಟು ಓದಬಹುದಿತ್ತಲ್ಲ ಎಂಬ ಉದ್ಗಾರಗಳು ಮೌಲ್ಯಮಾಪಕರಿಂದ ಹೊರಟಿರುತ್ತವೆ.

ಮೌಲ್ಯಮಾಪನ ಕೈಂಕರ್ಯದಲ್ಲಿ ಶಿಕ್ಷಕರು ಹಾಜರಿರ‌ಬೇಕಾದ್ದು ಕೇವಲ ಕರ್ತವ್ಯ ದೃಷ್ಟಿಯಿಂದಲ್ಲ. ಪಠ್ಯಕ್ರಮ ಹಾಗೂ ಬೋಧನಾ ವಿಧಾನದಲ್ಲಿ ಅನುಸರಿಸಲರ್ಹ ಸುಧಾರಣೆಗಳು, ಪರಾಮರ್ಶನ ಗ್ರಂಥಗಳ ಪರಿಚಯ, ಪಠ್ಯೇತರ ಚಟುವಟಿಕೆಗಳು- ಈ ಬಗೆಗಿನ ಸೃಜನಶೀಲ ಉಭಯ ಕುಶಲೋಪರಿಯೇ ಅಲ್ಲಿ ಸಾಗಿರುತ್ತದೆ. ಮೇಲಾಗಿ ಸಲಹೆ, ಮಾರ್ಗದರ್ಶನ ನೀಡುವ ಹಿರಿಯ ಗುರುವರ್ಯರ ಒಡನಾಟವೇ ಒಂದು ಸುಯೋಗ ತಾನೆ? ಎಂದಮೇಲೆ ಮೌಲ್ಯಮಾಪನ ಕೇಂದ್ರವು ಸಂತಸ, ಸಡಗರದ ತಾಣ, ಶೈಕ್ಷಣಿಕ ಅನುಭಾವ ತರುವ ‘ಅನುಭವ ಮಂಟಪ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT