ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವ್ಯಾಪಕ ಅರಿವಿಗಾಗಿ ಅವಿರತ ಹೋರಾಟ

ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಮಕ್ಕಳನ್ನು ಹೇಗೆ ಬದಲಿಸಬೇಕು ಎಂಬಬಗ್ಗೆ ಗಂಭೀರವಾದ ಚಿಂತನೆ ನಡೆಯಬೇಕಾದ
Last Updated 14 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಮ್ಮೆಲ್ಲರನ್ನೂ ಬೆಚ್ಚಿಬೀಳಿಸುವ ಕುಕೃತ್ಯ ನಡೆದಿದೆ. ಗಾಯದ ಮೇಲೆ ಬರೆ ಎಳೆಯುವಂತೆ, ಲೈಂಗಿಕ ದೌರ್ಜನ್ಯದ ಮೇಲೆ ಮಗುವಿನ ಕೊಲೆ. 10 ವರ್ಷದ ಮಗುವನ್ನು, ಚಾಕೊಲೇಟ್ ಆಸೆ ತೋರಿ ಟ್ಯೂಷನ್ ಶಿಕ್ಷಕ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಕೊಲೆ ಮಾಡಿರುವ ಪ್ರಕರಣವು ಕೆಲವೇ ದಿನಗಳಲ್ಲಿ ಮಾಧ್ಯಮಗಳಿಂದ, ನಮ್ಮ ಮಾತುಕತೆಯಿಂದ ಮಾಯವಾಗಿಬಿಡಬಹುದು. ಆದರೆ ಇಂತಹ ಸಂಗತಿಗಳು ಮನದಾಳದಲ್ಲಿ ಕುಳಿತು, ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಭಯದ ವಾತಾವರಣವನ್ನು ನಿರ್ಮಿಸುವ ಸಾಧ್ಯತೆ ಇದೆ.

ಮೊದಲೇ, ಓದಲು ಶಾಲೆಗೆ ಕಳಿಸಿದರೆ, ಹೊರಗೆ ಓಡಾಡಿದರೆ ಏನಾದೀತೆಂದು ಹೆದರಿ ಹಿಂದೆ ಸರಿಯುವ ಅಪ್ಪ-ಅಮ್ಮಂದಿರನ್ನು ಮತ್ತಷ್ಟು ಹಿಂದಕ್ಕೆಳೆಯಬಹುದು. ಆದ್ದರಿಂದ ಈ ಪ್ರಕರಣವನ್ನು ಕಾರಣವಾಗಿಸಿ ಕೊಂಡಾದರೂ, ನಾವು ಒಂದು ‘ಸಮಾಜ’ವಾಗಿ ಎಲ್ಲಿ ಸೋತಿದ್ದೇವೆ, ಹೇಗೆ ಸರಿಪಡಿಸಿಕೊಳ್ಳಬೇಕು, ‘ಮಕ್ಕಳು ಮುಗ್ಧರು’ ಎಂಬಷ್ಟಕ್ಕೇ ಮುಕ್ತಾಯ ಮಾಡದೆ, ‘ಮಕ್ಕಳು ಮುಗ್ಧರಾದರೂ ಮಾಹಿತಿಯುಳ್ಳವರು, ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲವರು’ ಎಂಬಂತೆ ಹೇಗೆ ಬದಲಿಸಬೇಕು ಎಂಬುದನ್ನು ವಿವರವಾಗಿ ನೋಡಬೇಕಾದುದು ಈ ಹೊತ್ತಿನ ಅಗತ್ಯ.

ಇಂಥ ಪ್ರಕರಣಗಳನ್ನು ನೋಡಿದಾಗ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ನಮ್ಮಲ್ಲಿ ಅರಿವು ಮೂಡಿಸುವ ಕಾರ್ಯ ಇನ್ನೂ ಸಶಕ್ತವಾಗಿ ನಡೆದಿಲ್ಲ ಎಂಬ ಬಗ್ಗೆ ನನ್ನಂತಹ ಮನೋವೈದ್ಯರಿಗೆ ನೋವುಂಟಾಗುತ್ತದೆ, ಅಪರಾಧಿ ಪ್ರಜ್ಞೆ ಮೂಡುತ್ತದೆ. ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ‘ಬೇಕೆ-ಬೇಡವೆ’ ಎಂಬ ಚರ್ಚೆ ಮಾಡುವ ನಾವು ಸಹಜವಾಗಿ ಮಕ್ಕಳಿಗೆ ‘ಒಳ್ಳೆಯ ಸ್ಪರ್ಶ- ಕೆಟ್ಟ ಸ್ಪರ್ಶಗಳ ಬಗೆಗೆ ಹೇಳಿಕೊಡುವುದಕ್ಕೂ ಹಿಂಜರಿಯುತ್ತೇವೆ. ‘ಕೆಟ್ಟ ಸ್ಪರ್ಶ’ ಎಂದ ತಕ್ಷಣ ಉಳಿದ ಲೈಂಗಿಕ ವಿಷಯಗಳ ಬಗ್ಗೆ ಮಕ್ಕಳು ಪ್ರಶ್ನೆ ಕೇಳಿದರೆ ಉತ್ತರಿಸುವುದು ಹೇಗೆ?! ಹಾಗಾಗಿ ದೇಹದ ಮುಟ್ಟಬಾರದ ಸ್ಥಳಗಳ (ಎದೆ-ಪೃಷ್ಟ-ಜನನಾಂಗ) ಬಗೆಗೆ ನಾವು ಚಿಕ್ಕ ಮಕ್ಕಳ ಬಳಿ ಮಾತನಾಡುವುದು ಬಲು ಕಡಿಮೆ. ಆದರೆ ಈ ಬಗ್ಗೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಹೇಳಿಕೊಡಬೇಕಾದ್ದು ಅಪೇಕ್ಷಣೀಯ.

ಲೈಂಗಿಕ ದೌರ್ಜನ್ಯದ ಬಗ್ಗೆ ಶಿಕ್ಷಣ ನೀಡುವ ಶಿಕ್ಷಕರು, ಕಾರ್ಯಕರ್ತರು, ಮನೋವೈದ್ಯರನ್ನು ಸಾಮಾನ್ಯವಾಗಿ ಹಿರಿಯರು ಕೇಳುವ ಪ್ರಶ್ನೆಗಳಿವೆ. ಅವುಗಳಲ್ಲಿ ಬಹುಮುಖ್ಯವಾದದ್ದು, ಇಂತಹ ಅರಿವಿನಿಂದ ನಿರಪರಾಧಿ ಹಿರಿಯರು ದೂಷಣೆಗೊಳಗಾದರೆ ಎಂಬ ಪ್ರಶ್ನೆ ಅಥವಾ ‘ಇಂತಹ ಅನುಭವಗಳೆಲ್ಲ ಬದುಕಿನಲ್ಲಿ ಇದ್ದದ್ದೇ. ಅದನ್ನು ನೀವು ಸುಮ್ಮನೆ ಗಂಭೀರವಾಗಿಸುತ್ತೀರಿ, ಮಕ್ಕಳ ತಲೆಯಲ್ಲಿ ಬೇಡದ ಮಾಹಿತಿ ತುಂಬುತ್ತೀರಿ’ ಎಂಬ ಟೀಕೆ. ಇಂತಹ ಪ್ರಶ್ನೆಗಳು ಎದುರಾದಾಗ ಪ್ರತಿಯೊಬ್ಬರೂ ತಮ್ಮ ಬಾಲ್ಯದ ಅನುಭವಗಳು, ಇಂದಿಗೂ ಜನಜಂಗುಳಿಯಲ್ಲಿ ಉಂಟಾಗಬಹುದಾದ ಕಹಿ ಅನುಭವಗಳನ್ನು ನೆನಪಿಸಿಕೊಳ್ಳಬೇಕು. ಬಾಲ್ಯದಲ್ಲಿ ಯಾವುದಾದರೊಂದು ‘ಕೆಟ್ಟ ಸ್ಪರ್ಶ’ದ ಅನುಭವವಿರುವ ಸಾಧ್ಯತೆ ಎಷ್ಟು ಹೆಚ್ಚೆಂದರೆ ‘ಸಾರ್ವತ್ರಿಕ’ ಎನ್ನುವಷ್ಟು!

ಮನಸ್ಸು ಸುಳ್ಳು ಹೇಳುವುದಿಲ್ಲ! ಸ್ಪರ್ಶವನ್ನು ಗುರುತಿಸುವುದರಲ್ಲಿ ತಪ್ಪು ಮಾಡುವುದಿಲ್ಲ! ಹಾಗಾಗಿ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ’ ಪರಿಹಾರ ಹುಡುಕಬೇಕಾದ ಗಂಭೀರ ಸಮಸ್ಯೆಯಾಗಿಯೇ ನಿಲ್ಲುತ್ತದೆ.

ಇತರ ಲೈಂಗಿಕ ದೌರ್ಜನ್ಯಗಳಿಗಿಂತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಹೆಚ್ಚು ಅಧ್ಯಯನಗಳು ನಡೆದಿವೆ. ವಿಶ್ವ ಆರೋಗ್ಯ ಸಂಸ್ಥೆಯು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸದ್ದು ಮಾಡದ ಆರೋಗ್ಯದ ತುರ್ತು ಪರಿಸ್ಥಿತಿ ಎಂದು ಗುರುತಿಸುತ್ತದೆ. ಜಗತ್ತಿನಾದ್ಯಂತ ಕಾನೂನು ವ್ಯವಸ್ಥೆಗಳು ಹೇಗೆ ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಸೋಲುತ್ತವೆ ಎಂಬುದನ್ನು ಒತ್ತಿ ಹೇಳುತ್ತದೆ. ಅಪರಾಧಕ್ಕೆ ಶಿಕ್ಷೆಯಾಗಲು ಸಾಕ್ಷ್ಯಾಧಾರಗಳ ರುಜುವಾತು ನಿರೂಪಿಸಲ್ಪಡುವ ಅವಧಿಯಲ್ಲಿ ಆಗಬಹುದಾದ ಅಪಾಯಗಳ ಬಗ್ಗೆ ಎಚ್ಚರ ನೀಡುತ್ತದೆ. ಪ್ರಸ್ತುತ
ಪ್ರಕರಣದಲ್ಲಿಯೂ ಆರೋಪಿಯ ಬಗ್ಗೆ ಈ ಹಿಂದೆಯೂ ದೂರುಗಳಿದ್ದವು, ಹಲವರು ತೊಂದರೆಗೊಳಗಾಗಿದ್ದಾಗ್ಯೂ ಕಾನೂನು ನೆರವನ್ನು ಪಡೆದಿರಲಿಲ್ಲ ಎನ್ನುವ ಸಂಗತಿ ಈ ಎಚ್ಚರವನ್ನೇ ನಮಗೆ ನೆನಪಿಸಬೇಕು.

ಇಂದು ಮಕ್ಕಳಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ವಿಪುಲವಾದ ಮಾಹಿತಿಯಿದೆ. ಮಕ್ಕಳು ಹೇಗೆ ಇಂತಹ ಸನ್ನಿವೇಶಗಳನ್ನು ನಿಭಾಯಿಸಬೇಕು ಎಂಬ ಬಗ್ಗೆಯೂ ಕಾರ್ಟೂನ್ ಚಿತ್ರಗಳಿವೆ. ‘ಚೈಲ್ಡ್ ಲೈನ್’ ಎಂಬ ಸ್ವಯಂ ಸೇವಾ ಸಂಸ್ಥೆಯು ದೇಶದಾದ್ಯಂತ 16 ಭಾಷೆಗಳಲ್ಲಿ ‘ಕೋಮಲ್’ ಎನ್ನುವ 7 ವರ್ಷದ ಮಗುವಿನ ಚಿತ್ರಣವನ್ನು ಶಾಲೆಗಳಲ್ಲಿ ಪ್ರದರ್ಶಿಸುವ ಪ್ರಯತ್ನ ಮಾಡಿದೆ. ಚಾಲಕ, ಶಿಕ್ಷಕ, ತಂದೆ, ಚಿಕ್ಕಪ್ಪ, ಅಪರಿಚಿತ, ಪರಿಚಿತ ಯಾರೇ ಇಂತಹ ನಡವಳಿಕೆ ತೋರಿದಾಗ ಅದನ್ನು ಗುರುತಿಸುವುದು, ಅದು ತನಗೆ ಸಹ್ಯವಲ್ಲ ಎಂದು ಹೇಳಿ ‘ನಿಲ್ಲು’ ಎಂದು ಕೂಗುವುದು, ತಾಯಿಯ ಬಳಿ ತತ್‍ಕ್ಷಣ ಹೇಳುವುದು ಇವುಗಳನ್ನು ಪ್ರಾಯೋಗಿಕವಾಗಿ ಹೇಳುವ ಬಗೆಗಳನ್ನು ಚಿತ್ರಿಸುವ ಕಿರುಚಿತ್ರಗಳು ಬಹಳಷ್ಟಿವೆ. ಆಡಳಿತ ವ್ಯವಸ್ಥೆ ಕನ್ನಡದಲ್ಲಿಯೂ ಇವುಗಳನ್ನು ಪ್ರಚುರಪಡಿಸಿ, ಶಾಲೆಗಳಲ್ಲಿ ಪ್ರದರ್ಶಿಸಬೇಕಾದ್ದು, ಕೊನೇಪಕ್ಷ ತಂದೆ-ತಾಯಿ ತಮ್ಮ ಮಕ್ಕಳಿಗೆ ಮನೆಯಲ್ಲಿಯೇ ತೋರಿಸುವ ಬಗ್ಗೆ ಮಾಹಿತಿ ನೀಡಬೇಕಾದ್ದು ಅತ್ಯವಶ್ಯ.

ಮಳವಳ್ಳಿಯಲ್ಲಿ ಅಸುನೀಗಿರುವ ಮಗುವಿನ ಕುಟುಂಬದ ತೀವ್ರ ದುಃಖದಲ್ಲಿ ನಾವೆಲ್ಲರೂ ಪಾಲುದಾರರೇ. ಕಾನೂನಿನ ಶಿಕ್ಷೆಗಷ್ಟೇ ಅಲ್ಲದೆ ಈ ಬಗ್ಗೆ ವ್ಯಾಪಕ ಅರಿವಿಗಾಗಿಯೂ ನಮ್ಮ ಹೋರಾಟ ಈಗ ನಡೆಯಬೇಕಾಗಿದೆ.

ಲೇಖಕಿ: ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT