ಶುಕ್ರವಾರ, ನವೆಂಬರ್ 15, 2019
22 °C
ಅಕ್ಕಿಯಲ್ಲಿ ಪೋಷಕಾಂಶ ಅಡಕಗೊಳಿಸುವುದರಿಂದ ಲಾಭವಾಗುವುದು ಬಹುರಾಷ್ಟ್ರೀಯ ಕಂಪನಿಗಳಿಗೇ ಹೊರತು, ಜನರಿಗಲ್ಲ ಎಂಬ ದೂರಿದೆ

ಅಕ್ಕಿಯ ಸಾರವರ್ಧನೆ ಉಚಿತವೇ?

Published:
Updated:
Prajavani

ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಹುಸಂಖ್ಯಾತ ಶ್ರೀಸಾಮಾನ್ಯನ ಆಹಾರ ಇನ್ನು ಮೇಲೆ ಸತ್ವಪೂರ್ಣವಾಗಲಿದೆ. ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಮತ್ತಷ್ಟು ರುಚಿಯಾಗಿ ವಿದ್ಯಾರ್ಥಿಗಳ ಮನೋದೈಹಿಕ ಬೆಳವಣಿಗೆಗೆ ಬೇಕಾದ ಸಂಪೂರ್ಣ ಪೋಷಣೆ ದೊರೆಯಲಿದೆ. ಬೆಳೆಯುವ ಮಕ್ಕಳ ಅಪೌಷ್ಟಿಕತೆ ದೂರಮಾಡುವ ವಿಟಮಿನ್ ಬಿ12, ಫೋಲಿಕ್ ಆಮ್ಲ ಮತ್ತು ಕಬ್ಬಿಣವನ್ನು ಅಕ್ಕಿಗೆ ಸೇರಿಸಿ, ಅದರಿಂದ ತಯಾರಿಸಿದ ಅನ್ನವನ್ನು ತಟ್ಟೆಗೆ ಬಡಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೊ ಭಾಷಣ ‘ಮನ್‍ ಕೀ ಬಾತ್‍’ನಲ್ಲಿ ಹೇಳಿದ್ದಾರೆ.

ದೇಹದೊಳಗಿನ ರಾಸಾಯನಿಕ ಕ್ರಿಯೆಗಳನ್ನು ಉದ್ದೀಪಿಸುವ ಕಿಣ್ವಗಳು ಮತ್ತು ಬೆಳವಣಿಗೆಯನ್ನು ಪ್ರಭಾವಿಸುವ ಹಾರ್ಮೋನುಗಳನ್ನು ಉತ್ಪಾದಿಸಲು ದೇಹಕ್ಕೆ ಸೂಕ್ಷ್ಮ ಪೋಷಕಾಂಶಗಳ ಅಗತ್ಯವಿರುತ್ತದೆ. ಅವು ನಾವು ತಿನ್ನುವ ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿದ್ದರೆ ವ್ಯಕ್ತಿಯ ಮನೋದೈಹಿಕ ಬೆಳವಣಿಗೆಗಳೆರಡೂ ಸರಿಯಾಗಿರುತ್ತವೆ. ಸದ್ಯದ ಲೆಕ್ಕದಂತೆ, ದೇಶದ ಐದು ವರ್ಷದ ಕೆಳಗಿನ ಶೇ 38ರಷ್ಟು ಮಕ್ಕಳು ಕುಬ್ಜತೆಯಿಂದ ಬಳಲುತ್ತಿದ್ದಾರೆ ಮತ್ತು ಶೇ 36ರಷ್ಟು ಮಕ್ಕಳು ಕಡಿಮೆ ತೂಕ ಉಳ್ಳವರಾಗಿದ್ದಾರೆ. ಇದು ವಿದ್ಯಾರ್ಥಿಗಳ ಕಲಿಕಾಕ್ಷಮತೆ, ಆರೋಗ್ಯ ಮತ್ತು ಆಟೋಟಗಳ ಮೇಲೆ ನೇರ ಪ್ರಭಾವ ಬೀರುತ್ತದೆ. ಪೋಷಕಾಂಶರಹಿತ ಆಹಾರ ಸೇವಿಸುವ ಮಕ್ಕಳು ಏಕಾಗ್ರತೆಯ ಕೊರತೆ, ಸುಸ್ತು, ದೃಷ್ಟಿಮಾಂದ್ಯತೆಯಿಂದಾಗಿ ಕಲಿಕೆಯಲ್ಲೂ ಹಿಂದೆ ಬಿದ್ದಿರುವುದು ಅನೇಕ ವರದಿಗಳಿಂದ ರುಜುವಾತಾಗಿದೆ.

ನಮ್ಮ 24 ರಾಜ್ಯಗಳಲ್ಲಿ, ಮದುವೆಯಾದ ಹೆಣ್ಣುಮಕ್ಕಳ ರಕ್ತಹೀನತೆಯ ಪ್ರಮಾಣ ಶೇ 50ರಷ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಅದು 40ರಷ್ಟಿದ್ದರೂ ತೀರಾ ಅಪಾಯಕಾರಿ ಮತ್ತು ಜನಿಸುವ ಮಕ್ಕಳು ಮೆದುಳಿನ ಅಸಹಜ ಬೆಳವಣಿಗೆ ಹಾಗೂ ಬೆನ್ನುಹುರಿಯ ಕಾಯಿಲೆಯಿಂದ ಬಳಲುತ್ತಾರೆ.

ಆರಂಭಿಕ ಯೋಜನೆಯಾಗಿ 15 ರಾಜ್ಯಗಳ 15 ಜಿಲ್ಲೆಗಳಲ್ಲಿ ಆಹಾರ ಸಾರವರ್ಧನೆಯ ಯೋಜನೆ ಈ ಮುಂಗಾರು ಹಂಗಾಮಿನಿಂದಲೇ ಶುರುವಾಗಲಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಬಡವರಿಗೆ ನೀಡಲಾಗುತ್ತಿರುವ ಅಕ್ಕಿಯಲ್ಲೂ ಈ ಪೋಷಕಾಂಶಗಳನ್ನು ಅಡಕಗೊಳಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಆದರೆ ಇಂಥ ಕ್ರಮದಿಂದ ದೊಡ್ಡ ಪ್ರಯೋಜನವೇನೂ ಆಗುವುದಿಲ್ಲ, ಬದಲಿಗೆ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುವ ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಕೋಟಿ ರೂಪಾಯಿಗಳ ಲಾಭ ಗಳಿಸಲಿವೆ ಎಂಬ ದೂರು ಕೇಳಿಬಂದಿದೆ.

ಒಂದು ಅಂದಾಜಿನಂತೆ, ಆಹಾರ ಸಾರವರ್ಧನೆಯ ಯೋಜನೆಯು ವಾರ್ಷಿಕ ಮೂರು ಸಾವಿರ ಕೋಟಿ ರೂಪಾಯಿಯ ವ್ಯವಹಾರ ಕುದುರಿಸಲಿದೆ. ಸೂಕ್ಷ್ಮ ಪೋಷಕಾಂಶ ತಯಾರಿಸುವ ಯಾವ ಕಂಪನಿಯೂ ನಮ್ಮಲ್ಲಿಲ್ಲ. ಜರ್ಮನಿಯ ಬಿಎಎಸ್‍ಎಫ್, ಸ್ವಿಟ್ಜರ್ಲೆಂಡಿನ ಲೊಂಜ, ಫ್ರಾನ್ಸ್‌ನ ಅಡಿಸ್ವಿಯೊ ಮತ್ತು ನೆದರ್‍ಲೆಂಡಿನ ರಾಯಲ್ ಡಿಎಸ್‍ಎಮ್ ಹಾಗೂ ಎಡಿಮ್ ಕಂಪನಿಗಳು ಆಹಾರಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶಗಳನ್ನು ತಯಾರಿಸುವ ವಿಶ್ವದ ಐದೇ ಐದು ಕಂಪನಿಗಳಾಗಿವೆ.

ಭಾರತದ ಖಾಸಗಿ ಕಂಪನಿಗಳು ಅಲ್ಲಿಂದ ಆಮದು ಮಾಡಿಕೊಂಡು ಇಲ್ಲಿನ ಆಹಾರಕ್ಕೆ ಸೇರಿಸಬೇಕು. ಈ ಐದು ಕಂಪನಿಗಳು ಇಡೀ ವಿಶ್ವದ ಸೂಕ್ಷ್ಮ ಪೋಷಕಾಂಶ ಮಾರುಕಟ್ಟೆಯನ್ನು ಹತೋಟಿಯಲ್ಲಿ ಇಟ್ಟುಕೊಂಡಿವೆ. ಸರ್ಕಾರ ಈಗಾಗಲೇ ಎಣ್ಣೆ, ಉಪ್ಪು, ಹಾಲು ಮತ್ತು ಗೋಧಿಗಳಲ್ಲಿ ಸಾರವರ್ಧಕಗಳನ್ನು ಸೇರಿಸಿ ವಿತರಿಸುತ್ತಿದೆ. ಈಗ ಅಕ್ಕಿಯ ಸರದಿ. ಹಾಲು, ಉಪ್ಪು, ಎಣ್ಣೆಗೆ ಪೋಷಕಾಂಶಗಳನ್ನು ಸೇರಿಸುವುದು ಸುಲಭ. ಆದರೆ ಅಕ್ಕಿ, ಗೋಧಿಗೆ ಸೇರಿಸಲು ಸಂಕೀರ್ಣ ಕ್ರಮ ಮತ್ತು ಸಾಕಷ್ಟು ಹಣ ಎರಡೂ ಬೇಕಾಗುತ್ತವೆ. ಅಲ್ಲದೆ ಪೋಷಕಾಂಶ ಅಡಕಗೊಂಡ ಅಕ್ಕಿ, ಗೋಧಿಯನ್ನು ವಿಶೇಷ ಪ್ಯಾಕಿಂಗ್ ಬಳಸಿ ಅವುಗಳ ಸತ್ವವನ್ನು ಕಾಪಾಡಬೇಕಾಗುತ್ತದೆ.

‘ಅಮುಲ್‍’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸೋಧಿ ‘ನಾವು ವಿಟಮಿನ್ ಕೊರತೆ ನೀಗಿಸಲು ನೈಸರ್ಗಿಕ ಸಾರವರ್ಧಕಗಳನ್ನು ಸ್ವಾಗತಿಸುತ್ತೇವೆ. ಆದರೆ, ಈಗ ಸರ್ಕಾರ ಹೇಳುತ್ತಿರುವ ಕೃತಕ ಸಾರವರ್ಧನೆಯಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು’ ಎಂದಿದ್ದಾರೆ. ಹೀಗೆ ಪೋಷಕಾಂಶ ಸೇರಿಸಿದ ಆಹಾರ ಸೇವಿಸಿದರೆ ಅಪೌಷ್ಟಿಕತೆ ನಿವಾರಣೆಯಾಗುತ್ತದೆ ಎಂಬುದು ವಿಶ್ವದ ಯಾವ ಭಾಗದಲ್ಲೂ ರುಜುವಾತಾಗಿಲ್ಲ ಎಂದಿದ್ದಾರೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ಮಹಾವಿದ್ಯಾಲಯದ ಗ್ಯಾಸ್ಟ್ರೊ ಎಂಟರಾಲಜಿ ಮತ್ತು ಮಾನವ ಪೋಷಕಾಂಶ ವಿಭಾಗದ ಹಿರಿಯ ವೈದ್ಯ ಉಮೇಶ್ ಕಪಿಲ್. ಮಕ್ಕಳತಜ್ಞ ಅರುಣ್ ಗುಪ್ತ, ಕೃತಕವಾಗಿ ಸೇರಿಸಲಾಗುವ ಪೋಷಕಾಂಶಗಳು ನಾವು ಸೇವಿಸುವ ಆಹಾರದಲ್ಲಿ ನೈಸರ್ಗಿಕವಾಗಿ ಅಡಕಗೊಂಡಿರುವ ಅಪರ್ಯಾಪ್ತ ಕೊಬ್ಬು ಮತ್ತು ಫೈಟೋಕೆಮಿಕಲ್‍ಗಳ ಮೇಲೆ ಅಡ್ಡ ಪರಿಣಾಮ ಬೀರುತ್ತವೆ ಎಂದಿದ್ದಾರೆ.

ಕಳೆದ 3 ವರ್ಷಗಳಲ್ಲಿ ಪೋಷಕಾಂಶಗಳ ಬೆಲೆ ಶೇ 40ರಷ್ಟು ಏರಿಕೆ ಕಂಡಿದೆ. ಮೊದಲು ಈ ಬೆಲೆ ಏರಿಕೆಯನ್ನು ತಡೆಯಬೇಕು ಎಂದಿದ್ದಾರೆ ಸ್ವದೇಶಿ ಜಾಗರಣಮಂಚ್‌ನ ಅಶ್ವಿನಿ ಮಹಾಜನ್. ಈ ನಡುವೆ, ಪೋಷಕಾಂಶದ ಮೇಲಿನ ಜಿಎಸ್‍ಟಿಯನ್ನು ರದ್ದುಗೊಳಿಸುವಂತೆ ನೀತಿ ಆಯೋಗವು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಗೆ ಸಲಹೆ ನೀಡಿದೆ.

ಪ್ರತಿಕ್ರಿಯಿಸಿ (+)