ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನಂ ಸಮ್ಮತಿ ಲಕ್ಷಣಂ...!

Last Updated 4 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಅಕ್ಟೋಬರ್ 28ರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವಿಶ್ವವಿದ್ಯಾಲಯಗಳನ್ನು ಕುರಿತ ‘ಒಳನೋಟ’– ‘ಕೋಟಿ ವಿದ್ಯೆ ಇದ್ದರೆ ಕುಲಪತಿ’ ಮತ್ತು ಅ. 30ರ ಸಂಚಿಕೆಯಲ್ಲಿ ಪ್ರಕಟವಾದ ‘ಹೊರಬರಲಾಗದ ವಿಷ ವರ್ತುಲದೊಳಗೆ ವಿ.ವಿ.ಗಳು’ ಎಂಬ ಸಂಪಾದಕೀಯ ಬರಹಗಳು ಸಕಾಲಿಕ ಮಾತ್ರವಲ್ಲ, ನಮ್ಮ ವಿಶ್ವವಿದ್ಯಾಲಯಗಳ ಸ್ಥಿತಿಗತಿಯ ಸಮಗ್ರ ಚಿತ್ರಣವನ್ನು ನೀಡಿವೆ.

ಉನ್ನತ ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ವಿಸ್ತಾರಗೊಳ್ಳುತ್ತದೆ, ಕೌಶಲ ವೃದ್ಧಿಯಾಗುತ್ತದೆ, ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ, ಉತ್ತಮ ಉದ್ಯೋಗದ ಅವಕಾಶಗಳು ಲಭಿಸುತ್ತವೆ ಎಂದು ನಾವು ಭಾವಿಸಿದ್ದೇವೆ. ಘನತೆಯ ಜೀವನಕ್ಕಾಗಿ ಉನ್ನತ ಶಿಕ್ಷಣ ಅತ್ಯಗತ್ಯವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಅಗತ್ಯವಿರುವ ಹೊಸಹೊಸ ಆಲೋಚನೆಗಳನ್ನು ಮುನ್ನೆಲೆಗೆ ತರುತ್ತವೆ. ದೇಶವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ನಮ್ಮ ನಂಬಿಕೆ.

ಆದರೆ ಇಂದು ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯಲು ಬರುತ್ತಿರುವವರ ಸಂಖ್ಯೆ ತೀರಾ ಕಡಿಮೆ ಇದೆ. ಈ ಕ್ಷೇತ್ರದಲ್ಲಿ ಶೇ 25.8 ರಷ್ಟು ದಾಖಲಾತಿ ಆಗುತ್ತಿದೆ ಎಂದು ಅಂಕಿ- ಅಂಶಗಳು ಹೇಳುತ್ತವೆಯಾದರೂ ಇದರಲ್ಲಿ ಶೇ 83ರಷ್ಟು ವಿದ್ಯಾರ್ಥಿಗಳು ಪದವಿ ಹಂತದಲ್ಲಿದ್ದಾರೆ. ಹೀಗೆ ಶಿಕ್ಷಣ ಪಡೆಯಲು ಬರುವವರಲ್ಲೂ ಅರ್ಧದಷ್ಟು ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸುತ್ತಿದ್ದಾರೆ.

ಗುಣಮಟ್ಟದ ಕೊರತೆ, ಬೋಧಕರಿಲ್ಲದಿರುವುದು, ಕೆಟ್ಟ ಪಠ್ಯಕ್ರಮ ಮತ್ತು ಬೋಧನಾ ವಿಧಾನ, ಅತಿಯಾದ ಹಣಕಾಸಿನ ಹೊರೆ, ತಾರತಮ್ಯ, ಸ್ವಜನಪಕ್ಷಪಾತ, ಓದಿಗೆ ತಕ್ಕ ಉದ್ಯೋಗ ಸಿಗದಿರುವುದು... ಇಂತಹ ಎಷ್ಟೋ ಕಾರಣಗಳು ಇದರ ಹಿಂದೆ ಇವೆ.

ಒಟ್ಟಾರೆ, ನಮ್ಮ ವಿಶ್ವವಿದ್ಯಾಲಯಗಳು ದುರಂತ ಸ್ಥಿತಿಯಲ್ಲಿದ್ದು ಅದರ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳಾದ ನಾವು ಅನುಭವಿಸಬೇಕಿದೆ. ಕ್ಯಾಂಪಸ್‍ಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತೇವೆ ಎಂಬ ಕನಸನ್ನು ಇಟ್ಟುಕೊಂಡು ಬಂದ ನಮಗೆ, ಇಲ್ಲಿನ ಕರ್ಮಕಾಂಡಗಳನ್ನು ನೋಡಿ ಭ್ರಮನಿರಸನವಾಗಿದೆ. ಆರೋಗ್ಯಪೂರ್ಣವಾದ ಶೈಕ್ಷಣಿಕ ವಾತಾವರಣವಿಲ್ಲದ ಕಾರಣ ನಮ್ಮಂಥ ಸಾವಿರಾರು ವಿದ್ಯಾರ್ಥಿಗಳು ಓದುವ ಹಂಬಲವನ್ನೇ ಕಳೆದುಕೊಳ್ಳುತ್ತಿದ್ದೇವೆ.

ಕೋರ್ಸ್‌ ಆಯ್ಕೆ ಪ್ರಕ್ರಿಯೆಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ಇದರ ಜೊತೆಯಲ್ಲೇ ಬೋಧಕರು ಮತ್ತು ಸೌಲಭ್ಯಗಳ ಕೊರತೆ, ಮೌಲ್ಯಮಾಪನದಲ್ಲಿ ಅಕ್ರಮ... ಎಲ್ಲವೂ ವಿದ್ಯಾರ್ಥಿಗಳ ಮೇಲೆ ಒತ್ತಡ ಸೃಷ್ಟಿಸುತ್ತವೆ. ಇದರಿಂದಾಗಿ ‘ಯಾಕಾದರೂ ಇಲ್ಲಿಗೆ ಬಂದೆವೋ’ ಎಂದು ಅನ್ನಿಸಿಬಿಡುತ್ತಿದೆ.

‘ಈ ಸಮಸ್ಯೆಗಳಿಗೆ ಸುಲಭ ಪರಿಹಾರಗಳಿಲ್ಲ’ ಎಂಬ ‘ಪ್ರಜಾವಾಣಿ’ಯ ನಿಲುವು ನೂರಕ್ಕೆ ನೂರರಷ್ಟು ಸರಿ. ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗೆ, ಮುಕ್ತ ಮನಸ್ಸಿನಿಂದ ತೊಡಗಿಕೊಂಡು, ದೀರ್ಘಾವಧಿಯ ಸಮಗ್ರ ಪರ್ಯಾಯ ಯೋಜನೆಯೊಂದನ್ನು ಎಲ್ಲಿಂದಾದರೂ ಆರಂಭಿಸಬೇಕಿದೆ.

ನಮ್ಮ ಉನ್ನತ ಶಿಕ್ಷಣವು ಮೂಲಸೌಕರ್ಯಗಳು ಮತ್ತು ಬೋಧಕರ ನೇಮಕಾತಿಯಂತಹ ಕ್ರಮಗಳನ್ನು ತುರ್ತಾಗಿ ಬೇಡುತ್ತಿದೆ. ಕುಲಪತಿಗಳ ನೇಮಕದಲ್ಲಿ ಆಗುತ್ತಿರುವ ಭ್ರಷ್ಟಾಚಾರದಿಂದ ಹಿಡಿದು ಸೀಟು ಆಯ್ಕೆಗೆ ಲಂಚ ಕೊಡುವಲ್ಲಿಯವರೆಗೆ ವಿಶ್ವವಿದ್ಯಾಲಯಗಳ ಹುಲುಸಾದ ಹುಲ್ಲುಗಾವಲನ್ನು ಮೇಯುವುದಕ್ಕೆ ಯಾವುದೇ ಅಡೆ-ತಡೆ ಇಲ್ಲದಿರುವುದಕ್ಕೆ ಸರ್ಕಾರಗಳ ಸ್ವಜನಪಕ್ಷಪಾತವೇ ಕಾರಣ. ಇದು ಪರೋಕ್ಷವಾಗಿ ವಿಶ್ವವಿದ್ಯಾಲಯಗಳ ಗುಣಮಟ್ಟ ಕುಸಿತಕ್ಕೆ ಕಾರಣವಾಗಿದೆ. ‘ಖಾಸಗಿ ಶಿಕ್ಷಣ’ದ ಲೂಟಿಕೋರರ ಹುನ್ನಾರವೂ ಇದರ ಹಿಂದೆ ಅಡಗಿರುವಂತೆ ಕಾಣಿಸುತ್ತಿದೆ.

‘ಭಾರತದ ಭವಿಷ್ಯವು ಈ ದೇಶದ ತರಗತಿ ಕೊಠಡಿಗಳಲ್ಲಿ ರೂಪಿತವಾಗುತ್ತದೆ’ ಎಂದು ಕೊಠಾರಿ ಕಮಿಷನ್ 1966ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಶಿಕ್ಷಣ ವರದಿಯ ಆರಂಭಿಕ ಸಾಲುಗಳಲ್ಲಿ ಹೇಳಿತ್ತು. ಇಂದಿನ ವಿಷಮ ಪರಿಸ್ಥಿತಿಯಲ್ಲಿ, ತರಗತಿ ಕೊಠಡಿಗಳನ್ನು ಭ್ರಷ್ಟಾಚಾರ
ದಿಂದ ಮುಕ್ತಗೊಳಿಸುವುದು ಸುಭದ್ರ, ಸದೃಢ ಭಾರತದ ಆಶಯ ಹೊಂದಿರುವ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ದಿಕ್ಕಿನಲ್ಲಿ ಅಧ್ಯಯನ, ಅವಲೋಕನ ಮತ್ತು ಕ್ರಮಗಳ ಬಗ್ಗೆ ಪ್ರಜ್ಞಾವಂತರು ಚಿಂತಿಸಬೇಕಿದೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ತಲೆಕೆಡಿಸಿಕೊಳ್ಳದ ಸರ್ಕಾರಕ್ಕೆ ಎಚ್ಚರಿಕೆ ನೀಡಲು ನವೆಂಬರ್ 24 ರಂದು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸೇರಿ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯನ್ನು ನಡೆಸಲು ನಿರ್ಧರಿಸಿದ್ದೇವೆ. ಉನ್ನತ ಶಿಕ್ಷಣ ಸಚಿವರು ಈ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು, ಬೋಧಕರು, ಸಚಿವ, ಶಾಸಕರು, ಸಾರ್ವಜನಿಕರು, ಮಾಧ್ಯಮದವರನ್ನು ಒಳಗೊಂಡ ದುಂಡು ಮೇಜಿನ ಸಭೆಯೊಂದನ್ನು ಕರೆಯಬೇಕೆಂದು ಒತ್ತಾಯಿಸುತ್ತೇವೆ. ಕರ್ನಾಟಕ ವಿದ್ಯಾರ್ಥಿ ಸಂಘಟನೆಯಂತಹ ಸಂಘ ಸಂಸ್ಥೆಗಳು ಈ ವಿಚಾರವಾಗಿ ಜನಾಭಿಪ್ರಾಯ ರೂಪಿಸಲು ಮುಂದಾಗಿರುವುದು ಒಳ್ಳೆಯ ವಿಚಾರ. ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣದ ಪರ ಹೋರಾಟವನ್ನು ನಿರಂತರವಾಗಿ ಚಾಲ್ತಿಯಲ್ಲಿಟ್ಟು ಕಾನೂನು ಹೋರಾಟಕ್ಕೂ ಕೈಹಾಕಬೇಕೆಂದು ಯೋಚಿಸುತ್ತಿದ್ದೇವೆ.

ನಮಗೆ ಅನ್ಯಾಯವಾಗುತ್ತಿರುವಾಗ, ನಮ್ಮ ಕಣ್ಣೆದುರೇ ಅಪರಾಧ ನಡೆಯುತ್ತಿರುವಾಗ, ಸುಮ್ಮನೆ ಸಹಿಸಿಕೊಳ್ಳುವುದು ಅಪರಾಧಕ್ಕೆ ಸಮ್ಮತಿಯಾಗಿಬಿಡುತ್ತದೆ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ದನಿ ಎತ್ತುತ್ತಿದ್ದೇವೆ. ಇದು ನಮ್ಮ ಕರ್ತವ್ಯ ಕೂಡ ಆಗಿದೆ.

ಸಂತೋಷ್ ಎಚ್.ಎಂ., ಹಂಪಿ ವಿ.ವಿ,ಪಲ್ಲವಿ, ಬೆಂಗಳೂರು ವಿ.ವಿ, ಸೋಮಶೇಖರ್ ಚಲ್ಯ, ಮೈಸೂರು ವಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT