ಬಂದ್ ಕರೆ ಹಿಂದಿನ ರಾಜಕೀಯ

7

ಬಂದ್ ಕರೆ ಹಿಂದಿನ ರಾಜಕೀಯ

Published:
Updated:

ಉತ್ತರ ಕರ್ನಾಟಕ ಬಂದ್ ಕರೆ ಕಳೆದ ಕೆಲವು ದಿನಗಳಿಂದ ಇಡೀ ರಾಜ್ಯದಲ್ಲಿ ಮೂಡಿಸಿರುವ ಸಂಚಲನ ಸಣ್ಣದಲ್ಲ. ಇದರ ಹಿಂದೆ ನಿಜವಾಗಿಯೂ ಉತ್ತರ ಕರ್ನಾಟಕದ ಅಭಿವೃದ್ಧಿಯ ಹಂಬಲ ಇದೆಯೇ? ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವುದಕ್ಕೂ ಬಂದ್ ಕರೆಗೂ ಸಂಬಂಧ ಇಲ್ಲವೇ? ಇಲ್ಲವಾದರೆ ಹೊಸ ಸಮ್ಮಿಶ್ರ ಸರ್ಕಾರ ರಚನೆಯಾದ ಕೂಡಲೇ ಈ ಕೂಗು ಎದ್ದುದು ಏಕೆ? 

ರಾಜಕೀಯವೇ ಹಾಗೆ. ಬಂದ್ ಕರೆಯ ಹಿಂದೆ ರಾಜಕೀಯ ಇಲ್ಲ ಎಂದು ಹೇಳುವುದು ಬಹಳ ಕಷ್ಟ. ಅದಕ್ಕೆ ಕಾರಣವಿದೆ: ಈಚಿನ ವಿಧಾನಸಭೆ ಚುನಾವಣೆ ನಡೆದ ನಂತರ ಬಹುಮತದ ತೀರಾ ಹತ್ತಿರಕ್ಕೆ ಬಂದು ಬಿಜೆಪಿ ಅಧಿಕಾರದಿಂದ ವಂಚಿತವಾಯಿತು. ಆ ಪಕ್ಷ, ಲಿಂಗಾಯತ ನಾಯಕರಾದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಹಿಸಿಕೊಂಡರಾದರೂ ಅಧಿಕಾರಕ್ಕೆ ಅಗತ್ಯವಾದ ಸಂಖ್ಯಾಬಲವನ್ನು ಗಳಿಸಲು ಆಗಲಿಲ್ಲ; ಲಿಂಗಾಯತ ನಾಯಕನ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಗಾಯದ ಮೇಲೆ ಬರೆ ಎಳೆದಂತೆ, ಒಕ್ಕಲಿಗ ಸಮುದಾಯದ, ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ರಾಜಕೀಯ ಪ್ರಾಬಲ್ಯವುಳ್ಳ ಜೆ.ಡಿ(ಎಸ್)ನ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಒಂದು ವೇಳೆ ಅವರು ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದರೆ ಈ ವಿವಾದ ಹುಟ್ಟುತ್ತಿತ್ತೇ? ಇಲ್ಲ ಎನಿಸುತ್ತದೆ. ಅಧಿಕಾರ ವಂಚಿತರಾಗಿರುವ ಲಿಂಗಾಯತರ ಹೊಟ್ಟೆಯಲ್ಲಿ ಈಗ ಕಿಚ್ಚು ಹಚ್ಚಬೇಕು. ಹೇಗೆ? ಅವರ ಸಂಖ್ಯೆ ಹೆಚ್ಚು ಇರುವ ಉತ್ತರ ಕರ್ನಾಟಕದಲ್ಲಿ ಅಸಮಾಧಾನದ ಹೊಗೆ ಎಬ್ಬಿಸಬೇಕು. ಮತ್ತು ಹೊಸ್ತಿಲಿಗೆ ಬಂದಿರುವ ಲೋಕಸಭೆ ಚುನಾವಣೆಯಲ್ಲಿ ಇದರ ಲಾಭ ಪಡೆಯಬೇಕು. ಬಂದ್ ಕರೆಯ ಹಿಂದೆ ಇರುವ ತಕ್ಷಣದ ರಾಜಕಾರಣವಿದು.

ಆದರೆ, ಈಗ ಕೇಳುತ್ತಿರುವ ಆಕ್ರೋಶಕ್ಕೆ ಬಹಳ ದೀರ್ಘ ಹಿನ್ನೆಲೆ ಇದೆ. ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ನಡುವೆ ಏಕೀಕರಣದ ಕಾಲದಿಂದಲೂ ಪೈಪೋಟಿ ನಡೆದಿದೆ. ದಕ್ಷಿಣ ಕರ್ನಾಟಕದ ಒಕ್ಕಲಿಗರು ಏಕೀಕರಣದ ವಿರುದ್ಧವಿದ್ದರು. ಏಕೀಕರಣವಾದರೆ ತಮ್ಮ ಕೈಯಲ್ಲಿನ ಅಧಿಕಾರ ತಪ್ಪಿ ಲಿಂಗಾಯತರ ಕೈ ಸೇರುತ್ತದೆ ಎಂದು ಅವರಿಗೆ ಗೊತ್ತಿತ್ತು. 1956ರ ನವೆಂಬರ್ ಒಂದರಂದು ಕರ್ನಾಟಕದ ಏಕೀಕರಣವಾದ ನಂತರ, ಒಕ್ಕಲಿಗರು ಯಾವುದಕ್ಕೆ ಅಂಜಿದ್ದರೋ ಅದೇ ಆಯಿತು. ಅದುವರೆಗೆ ಮುಂದೆ ನಿಂತು ವಿಧಾನಸೌಧ ಕಟ್ಟಿಸಿದ್ದ ಒಕ್ಕಲಿಗ ಸಮುದಾಯದ ಕೆಂಗಲ್ ಹನುಮಂತಯ್ಯ ಅದರ ಒಳಗೆ ಹೋಗಿ ಅಧಿಕಾರ ಮಾಡಲು ಆಗಲಿಲ್ಲ. ಲಿಂಗಾಯತರಾದ ಎಸ್.ನಿಜಲಿಂಗಪ್ಪನವರು ಮುಖ್ಯಮಂತ್ರಿಯಾದರು. ಏಕೀಕೃತ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಲು ಒಕ್ಕಲಿಗರು ನಲವತ್ತು ವರ್ಷ ಕಾಯಬೇಕಾಯಿತು. ದೇವೇಗೌಡರು 1996ರಲ್ಲಿ ಮೊದಲ ಒಕ್ಕಲಿಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಹಿಂದೆ-ಮುಂದೆ ನಿಜಲಿಂಗಪ್ಪನವರಲ್ಲದೇ ಬಿ.ಡಿ.ಜತ್ತಿ, ವೀರೇಂದ್ರ ಪಾಟೀಲ (ಎರಡು ಸಾರಿ), ಜೆ.ಎಚ್.ಪಟೇಲ್, ಎಸ್.ಆರ್.ಬೊಮ್ಮಾಯಿ, ಯಡಿಯೂರಪ್ಪ, ಜಗದೀಶ ಶೆಟ್ಟರ್ ಅವರಂಥ ಲಿಂಗಾಯತರು ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಬ್ರಾಹ್ಮಣರಾದರೂ ಅವರನ್ನು ಲಿಂಗಾಯತರು ತಮ್ಮ ಪ್ರಶ್ನಾತೀತ ನಾಯಕ ಎಂದುಕೊಂಡಿದ್ದರು. ಹೆಗಡೆ ಮತ್ತು ದೇವೇಗೌಡರ ನಡುವಿನ ವಿರಸಕ್ಕೆ ಈ ಕೋನವೂ ಇತ್ತು. ಬಂದ್ ಕರೆಯ ಹಿಂದಿನ ಜಾತಿಕಾರಣವಿದು.

ಬಂದ್ ಕರೆಗೆ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ಸಿನ ಕೆಲವು ನಾಯಕರೂ ಧ್ವನಿಗೂಡಿಸಿದ್ದಾರೆ. ಕುಮಾರಸ್ವಾಮಿಯವರ ಸಂಪುಟದಲ್ಲಿ ಎಚ್.ಕೆ.ಪಾಟೀಲ್ ಮತ್ತು ಎಂ.ಬಿ.ಪಾಟೀಲ್ ಅವರಂಥ ಹಿರಿಯ ಶಾಸಕರಿಗೆ ಅವಕಾಶ ಸಿಕ್ಕಿಲ್ಲ. ಇವರು ಇಬ್ಬರೂ ಉತ್ತರ ಕರ್ನಾಟಕದವರು. ಎಂ.ಬಿ.ಪಾಟೀಲರಂತೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದ ಹೋರಾಟದ ಮುಂಚೂಣಿಯಲ್ಲಿ ಇದ್ದವರು. ಇವರು ಇಬ್ಬರನ್ನೂ ಸಂಪುಟದಿಂದ ಹೊರಗೆ ಇಟ್ಟುದು ಹಾಗೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು 1990ರ ದಶಕದಲ್ಲಿ ಧ್ವನಿ ಎತ್ತಿದ್ದ ಎಚ್.ಕೆ.ಪಾಟೀಲರು ಮತ್ತೆ ಅದೇ ಧ್ವನಿ ಎತ್ತುತ್ತಿರುವುದು ಕೇವಲ ಕಾಕತಾಳೀಯ ಇರಲಾರದು. ಬಂದ್‌ಗೆ ಒತ್ತಾಸೆಯಾಗಿರುವ ಇನ್ನೊಂದು ರಾಜಕೀಯ ಮುಖವಿದು.

 ಆದರೆ, ಅಭಿವೃದ್ಧಿಯಲ್ಲಿನ ಅಸಮಾನತೆಯ ವಿರುದ್ಧ ಕೇಳಿಬಂದಿದ್ದ ಕೂಗಿಗೆ ಸ್ಪಂದಿಸಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಡಾ.ಡಿ.ಎಂ.ನಂಜುಂಡಪ್ಪ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿದ್ದರು. ನಂಜುಂಡಪ್ಪ ಸಮಿತಿಯು 900 ಪುಟಗಳಿಗೂ ಮಿಗಿಲಾದ ತನ್ನ ವರದಿಯಲ್ಲಿ 2002 ರಿಂದ 2010 ರ ನಡುವಿನ ಅವಧಿಯಲ್ಲಿ ₹ 16,000 ಕೋಟಿಯನ್ನು ರಾಜ್ಯದ ಎಲ್ಲ ಭಾಗದ 114 ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಬಳಸಬೇಕು ಎಂದು ಸಲಹೆ ಮಾಡಿತ್ತು. ಈ ಕುರಿತು ಮುಂದಿನ ಐದು ವರ್ಷಗಳ ಕಾಲ ಯಾವ ಸರ್ಕಾರವೂ ಏನೂ ಮಾಡಲಿಲ್ಲ.

2007-08 ರಿಂದ 2016-17ರ ನಡುವಿನ ಅವಧಿಯಲ್ಲಿ ಬಂದ ಸರ್ಕಾರಗಳು ಒಟ್ಟು ₹ 25,438 ಕೋಟಿ ಹಂಚಿಕೆ ಮಾಡಿ, ಅದರಲ್ಲಿ ₹ 19,016 ಕೋಟಿ ಬಿಡುಗಡೆ ಮಾಡಿ, ಅದರಲ್ಲಿ ₹ 17,499 ಕೋಟಿಯನ್ನು ಇದಕ್ಕಾಗಿ ವ್ಯಯ ಮಾಡಿದುವು. ಇನ್ನು ಮುಂದೆಯೂ ಸರ್ಕಾರಗಳು ಇದಕ್ಕಾಗಿ ಹಣ ಇಡುತ್ತವೆ. ಆದರೆ, ಹಣ ಖರ್ಚು ಮಾಡುವುದಕ್ಕೂ ವಾಸ್ತವದಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗುವುದಕ್ಕೂ ವ್ಯತ್ಯಾಸ ಇದೆ. ನಿಜವಾಗಿಯೂ ಹಣದ ಸದ್ಬಳಕೆ ಆಗಿದ್ದರೆ ಈಗಿನ ಕೂಗು ಏಳಬೇಕಿರಲಿಲ್ಲ. ಹೀಗೆ ಹಣದ ಅಪವ್ಯಯವಾಗಬಹುದು ಎಂಬ ಚಿಂತೆ ನಂಜುಂಡಪ್ಪ ಅವರಿಗೆ ಇತ್ತು. ಅದಕ್ಕಾಗಿಯೇ ಅವರು ಉದ್ದೇಶಿತ ಅಭಿವೃದ್ಧಿ ಸಾಧಿಸಲು ಏನೆಲ್ಲ ಮಾಡಬೇಕು ಎಂದು ತಮ್ಮ ವರದಿಯಲ್ಲಿ ನಮೂದಿಸಿದ್ದರು. ಅದು ಈಗಲೂ ಒಂದು ಬೈಬಲ್ ಇದ್ದ ಹಾಗೆ ಇದೆ. ಸರ್ಕಾರದಲ್ಲಿ ಇದ್ದವರು ಅದನ್ನು ಓದಬೇಕು.

ಅಭಿವೃದ್ಧಿ ಆಗದ ನೋವು ಕೆಲವು ಸಾರಿ ಭೌತಿಕವಾಗಿದ್ದರೆ ಬಹಳ ಸಾರಿ ಭಾವನಾತ್ಮಕವಾಗಿರುತ್ತದೆ. ದಕ್ಷಿಣದ ಜಿಲ್ಲೆಗಳಿಂದ ತಮ್ಮ ಪಕ್ಷಕ್ಕೆ ಹೆಚ್ಚು ಬಲ ಗಳಿಸಿರುವ ಕುಮಾರಸ್ವಾಮಿಯವರು ಹಾಗೂ ಅವರ ತಂದೆ ದೇವೇಗೌಡರು ತಮ್ಮ ಬಲ ಹೆಚ್ಚು ಇಲ್ಲದ ಉತ್ತರದ ಜಿಲ್ಲೆಗಳ ಕಡೆಗೆ ಹೆಚ್ಚಿನ ಕಾಳಜಿ ತೋರಿಸಬೇಕು; ಅಲ್ಲಿನ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ದೇವೇಗೌಡರು ಪ್ರಧಾನಿಯಾಗಿದ್ದಾಗ ಕೃಷ್ಣಾ ಯೋಜನೆಗೆ ₹ 120 ಕೋಟಿಯನ್ನು ತ್ವರಿತ ನೀರಾವರಿ ಯೋಜನೆಯಡಿ ಒದಗಿಸಿದ್ದರು. ಅದು ಆಗ ಬಹಳ ದೊಡ್ಡ ಮೊತ್ತ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿ ಬೆಳಗಾವಿಯಲ್ಲಿ ವಿಧಾನಸಭೆಯ ಅಧಿವೇಶನ ನಡೆಸಿದ್ದರು. ಅವರೇ ಅಲ್ಲಿ ಸುವರ್ಣಸೌಧ ಕಟ್ಟಲು ಚಾಲನೆಯನ್ನೂ ನೀಡಿದ್ದರು. ಸಾರ್ವಜನಿಕರಿಗೆ ಮರೆವು ಜಾಸ್ತಿ; ಹಾಗೂ ಕುಮಾರಸ್ವಾಮಿಯವರು ಈಗ ಮೊದಲಿನ ಹಾಗೆ ಮಾಧ್ಯಮದ 'ಡಾರ್ಲಿಂಗ್' ಅಲ್ಲ!

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !