ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಂಚನೆಯ ತಂತ್ರ-ಜ್ಞಾನ

ತಂತ್ರಜ್ಞಾನವೊಂದು ತನ್ನಷ್ಟಕ್ಕೆ ತಾನೇ ಪರಿಹಾರ ಒದಗಿಸದು
Last Updated 22 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಇರುವ ತಂತ್ರಜ್ಞಾನಗಳ ವೃದ್ಧಿಗೆ ದೊರೆಯುತ್ತಿರುವಷ್ಟು ಮನ್ನಣೆ, ಆ ತಂತ್ರಜ್ಞಾನಗಳ ಸಾಧಕ-ಬಾಧಕಗಳ ಪರಿಶೀಲನೆ ಮತ್ತು ಅವು ನಿಜಕ್ಕೂ ಪರಿಹರಿಸಬೇಕಿರುವ ಸಮಸ್ಯೆಗಳತ್ತ ಗಮನಹರಿಸಲು ದೊರೆಯುತ್ತಿದೆಯೇ ಎನ್ನುವ ಅನುಮಾನ ಕಾಡದಿರದು.

ಬಹುತೇಕ ಸಮಸ್ಯೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕವೇ ಪರಿಹಾರ ಕಂಡುಕೊಳ್ಳಬಹುದೆಂಬ ಭಾವನೆ ಬಲಗೊಳ್ಳುತ್ತಿರುವ ಹೊತ್ತಿನಲ್ಲಿ, ಎಷ್ಟೋ ಸಮಸ್ಯೆಗಳ ಮೂಲ ಸಮಾಜದಲ್ಲಿ ಮೌಲ್ಯಗಳ ರೂಪದಲ್ಲಿ ಬೇರೂರಿರುವ ಚಿಂತನೆಗಳು ಮತ್ತು ಅದರಿಂದ ರೂಪುಗೊಳ್ಳುವ ಜಡ ಮನಸ್ಥಿತಿಯಲ್ಲಿದೆ ಎಂಬುದನ್ನೂ ಮನಗಾಣುವ ಅಗತ್ಯವಿದೆ.

ಶೌಚ ಗುಂಡಿಗಳನ್ನು ಶುಚಿಗೊಳಿಸಲು ನಿಷೇಧದ ಹೊರತಾಗಿಯೂ ಇನ್ನೂ ಜಾರಿಯಲ್ಲಿರುವ ಮನುಷ್ಯರನ್ನು ಬಳಸಿಕೊಳ್ಳುವ ಪ್ರವೃತ್ತಿ ಕುರಿತಂತೆ ಮಾತನಾಡುವಾಗಲೆಲ್ಲ ಸಫಾಯಿ ಕರ್ಮಚಾರಿಗಳ ಪರವಾಗಿ ಹೋರಾಡುವ ಬೆಜವಾಡ ವಿಲ್ಸನ್ ಅವರು ಆಡುವ ಮಾತು ಮತ್ತು ತಳೆಯುವ ನಿಲುವು ಗಮನಾರ್ಹವಾದುದು. ‘ಸಮಸ್ಯೆಯ ಮೂಲ ಇರುವುದು ಸೂಕ್ತ ತಂತ್ರಜ್ಞಾನದ ಅಲಭ್ಯತೆಯಲ್ಲಲ್ಲ, ಸಮಾಜದಲ್ಲಿ ಬೇರೂರಿರುವ ಜಾತಿ ಪ್ರಜ್ಞೆಯಲ್ಲಿ. ಈ ಸಮಸ್ಯೆಗೆ ತಂತ್ರಜ್ಞಾನವಷ್ಟೇ ಪರಿಹಾರ ಒದಗಿಸಲಾರದು’ ಎನ್ನುವ ಅವರು, ಸ್ವಚ್ಛ ಭಾರತದ ಭಾಗವಾಗಿ ಕಟ್ಟಲ್ಪಡುತ್ತಿರುವ ಶೌಚಾಲಯಗಳ ಸಂಖ್ಯೆ ಹೆಚ್ಚಿದಂತೆಲ್ಲ ಆ ಶೌಚಾಲಯಗಳ ತ್ಯಾಜ್ಯ ಶೇಖರಗೊಳ್ಳುವ ಗುಂಡಿಗಳನ್ನು ಶುಚಿಗೊಳಿಸಲು ಮನುಷ್ಯರನ್ನು ಬಳಸುವ ಪ್ರವೃತ್ತಿಯೂ ಹೆಚ್ಚಲಿದೆ ಎಂದು ಅಭಿಪ್ರಾಯಪಡುತ್ತಾರೆ. ಶೌಚಾಲಯಗಳನ್ನು ನಿರ್ಮಿಸಿ ಬೀಗುವ ಅಧಿಕಾರಶಾಹಿ, ಅವುಗಳ ತ್ಯಾಜ್ಯ ವಿಲೇವಾರಿ ಕುರಿತೂ ಅಷ್ಟೇ ಮುತುವರ್ಜಿ ತೋರುತ್ತಿದೆಯೇ?

ಮಾನವರನ್ನು ಬಳಸಿಕೊಳ್ಳದೆ ಒಳಚರಂಡಿ ಶುಚಿಗೊಳಿಸಲು ಇರುವ ಸಾಧ್ಯತೆಗಳನ್ನು ಅನ್ವೇಷಿಸುವ ಸಲುವಾಗಿ ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‍ಸಿ) ಹ್ಯಾಕಥಾನ್ ಆಯೋಜಿಸಲಾಗಿತ್ತು. ಅದರಲ್ಲಿ ಒಳಚರಂಡಿಗಳನ್ನು ಸ್ವತಃ ಶುಚಿಗೊಳಿಸುವ ಕಾಯಕದಲ್ಲಿ ತೊಡಗಿಕೊಂಡಿರುವವರು, ವಿಜ್ಞಾನಿಗಳು ಹಾಗೂ ತಂತ್ರಜ್ಞರು ಪಾಲ್ಗೊಂಡಿದ್ದರು. ಇಂತಹ ಪ್ರಯತ್ನಗಳ ಮೂಲಕವಾದರೂ ತಂತ್ರಜ್ಞಾನಗಳು ಎಲ್ಲಿ ಯಾರನ್ನು ತಲುಪಬೇಕು ಎನ್ನುವುದನ್ನು ಕಂಡುಕೊಳ್ಳಬೇಕಿದೆ.

ಹಾಸನದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಾಧ್ಯಾಪಕ ಕುಂಬಕೋಣಂ ರಾಜಗೋಪಾಲ್, ಸಂವಾದದ ವೇಳೆ ಪ್ರಸ್ತಾಪಿಸಿದ ಅಂಶವೊಂದು ಆಸಕ್ತಿದಾಯಕವಾಗಿತ್ತು. ‘ಹಿಂದೆ ಗಣಿತ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಭಾರತದಲ್ಲಿ ಇಂದು ಆ ಕ್ಷೇತ್ರ ಕಳೆಗುಂದಿದೆ. ಎಲ್ಲರ ಕೈಯಲ್ಲೂ ಇಂದು ಕ್ಯಾಲ್ಕುಲೇಟರ್ ಹಾಗೂ ಮೊಬೈಲ್‍ನಂಥ ಗ್ಯಾಡ್ಜೆಟ್‍ಗಳು ಇರುವುದರಿಂದ ಯಾರೂ ಲೆಕ್ಕಾಚಾರ ಮಾಡಲು ತಮ್ಮಲ್ಲಿನ ವಿಶ್ಲೇಷಣಾತ್ಮಕ ಸಾಮರ್ಥ್ಯ ಒರೆಗೆ ಹಚ್ಚುತ್ತಿಲ್ಲ. ನಾನು ಕಾರ್ಯನಿರ್ವಹಿಸುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಬರುವ ವಿದ್ಯಾರ್ಥಿಗಳ ಪೈಕಿ ಅಭಿವೃದ್ಧಿ ಹೊಂದದ, ಆರ್ಥಿಕವಾಗಿ ಹಿಂದುಳಿದಿರುವ ಭಾಗಗಳಿಂದ ಬರುವ ವಿದ್ಯಾರ್ಥಿಗಳಲ್ಲಿನ ಗಣಿತ ಜ್ಞಾನ ಉಳಿದವರಿಗಿಂತ ಉತ್ತಮವಾಗಿರುವುದನ್ನು ಗಮನಿಸಿದ್ದೇನೆ’ ಎಂದರು. ಆ ಮೂಲಕ ತಂತ್ರಜ್ಞಾನ, ಕಲಿಕೆ-ಗ್ರಹಿಕೆ ಹಾಗೂ ದೇಶವೊಂದರ ಆರ್ಥಿಕ– ಸಾಮಾಜಿಕ ಸ್ಥಿತಿಗತಿಗೆ ಇರಬಹುದಾದ ನಂಟಿನ ಚಿತ್ರಣವನ್ನೂ ಕಟ್ಟಿಕೊಟ್ಟಿದ್ದರು.

ಕಲಿಕೆಯ ಗುಣಮಟ್ಟ ಸುಧಾರಿಸಲು ಪೂರಕವಾಗಿರುವ ಸಂಪನ್ಮೂಲಗಳನ್ನು ಒದಗಿಸುವ ಗೋಜಿಗೆ ಹೋಗದೆ, ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ಹಂಚುವ ಘೋಷಣೆಯಲ್ಲೇ ಗುಣಮಟ್ಟ ಕಂಡುಕೊಳ್ಳುವವರಿಗೆ ರಾಜಗೋಪಾಲ್ ಹಂಚಿಕೊಂಡ ವಿಚಾರ ಮನವರಿಕೆಯಾಗುವುದೇ?

ಸ್ಮಾರ್ಟ್ ಕ್ಲಾಸ್‍ರೂಮ್‍ಗಳು, ಉಚಿತ ವೈ-ಫೈ, ಗ್ಯಾಡ್ಜೆಟ್‍ಗಳ ಮೂಲಕ ಹೊರಹೊಮ್ಮುವ ‘ಅಪ್‍ಡೇಟೆಡ್ ಕಲಿಕೆ’ಯು ಈ ಸಮಾಜ ಮತ್ತು ಅದರಲ್ಲಿನ ಗೋಜಲುಗಳನ್ನು ಅರಿಯಲು ನೆರವಾಗುವುದೇ? ಸಾಮಾಜಿಕ ಪ್ರಜ್ಞೆ ಒಳಗೊಳ್ಳದೆ, ಮಾರುಕಟ್ಟೆಯ ‘ಲಾಭ’ದ ದೃಷ್ಟಿ
ಕೋನದಿಂದ ಹೊರಹೊಮ್ಮುವ ತಂತ್ರಜ್ಞಾನಗಳು ನಮ್ಮೆಲ್ಲರ ಕೊಳ್ಳುವ ಉಮೇದು ವೃದ್ಧಿಸಬಲ್ಲವೇ ಹೊರತು ಎಲ್ಲರನ್ನೂ ಒಳಗೊಳ್ಳುವ ಪ್ರಜ್ಞೆ ಉದ್ದೀಪಿಸಲಾರವು.

ಇಂಟರ್‌ನೆಟ್ ಡೇಟಾ ಕೈಗೆಟುಕುವ ದರದಲ್ಲಿ ಎಲ್ಲರಿಗೂ ಸಿಗಲಾರಂಭಿಸಿದ ನಂತರ ಅದರಿಂದ ಜನರ ಬದುಕಿನ ಮೇಲಾದ ಪರಿಣಾಮಗಳು ಹಾಗೂ ಒಟ್ಟಾರೆ ಸಮಾಜ ಎದುರಿಸಲಾರಂಭಿಸಿರುವ ಸಂದಿಗ್ಧತೆ ಕುರಿತು ಅಧ್ಯಯನ ಕೈಗೊಳ್ಳಲು ಈಗಲಾದರೂ ಮುಂದಾಗಬಾರದೆ? ವಿಜ್ಞಾನ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಗಳಲ್ಲಿ ಮಾರುಕಟ್ಟೆ ಕೇಂದ್ರಿತ ಗ್ರಹಿಕೆಯ ಆಚೆಗೆ ಸಾಮಾಜಿಕ ಪ್ರಜ್ಞೆ ಮೂಡಿಸಲು ನೆರವಾಗಬಹುದಾದ ಪಠ್ಯದ ಓದು ಅಗತ್ಯವೆನಿಸುವುದಿಲ್ಲವೇ?

ತಂತ್ರಜ್ಞಾನ ಅಭಿವೃದ್ಧಿಪಡಿಸುವ ಹಾಗೂ ಅದನ್ನು ಬಳಸುವ ಮನಸ್ಸುಗಳಲ್ಲಿ ಸಾಮಾಜಿಕ ಪ್ರಜ್ಞೆ ಜಾಗೃತಗೊಳ್ಳದ ಹೊರತು, ತಂತ್ರಜ್ಞಾನವೊಂದು ತನ್ನಷ್ಟಕ್ಕೆ ತಾನೆ ಯಾವ ಸಮಸ್ಯೆಗೂ ಪರಿಹಾರ ಒದಗಿಸಲಾರದು. ಆದರೆ, ತೀರಾ ಸಂಕೀರ್ಣವಾದ ಹೊಸ ಸಮಸ್ಯೆಗಳ ಸೃಷ್ಟಿಗೆ ವಿನೂತನ ತಂತ್ರಜ್ಞಾನಗಳು ತಮ್ಮದೇ ಕೊಡುಗೆ ನೀಡಬಲ್ಲವು ಎಂಬುದನ್ನು ಮನಗಾಣದೆ ಹೋದರೆ, ಬಹುಶಃ ನಾವು ಆಯ್ದುಕೊಳ್ಳುವ ತಂತ್ರಜ್ಞಾನ ಮೋಹಿ ‘ಅಭಿವೃದ್ಧಿ ಮಾದರಿ’ಯೇ ನಮ್ಮನ್ನು ಹೊಸ ಸಮಸ್ಯೆಗಳ ಕಂದಕಕ್ಕೆ ದೂಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT