ಮಾರುಕಟ್ಟೆ ಮತ್ತು ಮಿತಬಳಕೆ

ಮಂಗಳವಾರ, ಏಪ್ರಿಲ್ 23, 2019
31 °C
ಮಾರುಕಟ್ಟೆಯ ಸುತ್ತಲೇ ಹೆಣೆದುಕೊಂಡಿರುವ ಆರ್ಥಿಕತೆಗೆ ಮಿತಬಳಕೆ ಮತ್ತು ಮರುಬಳಕೆ ಅಪಥ್ಯವಲ್ಲವೇ?

ಮಾರುಕಟ್ಟೆ ಮತ್ತು ಮಿತಬಳಕೆ

Published:
Updated:
Prajavani

ಜನರಲ್ಲಿನ ಕೊಳ್ಳುವ ಉಮೇದಿಗೆ ಮತ್ತಷ್ಟು ಹುರುಪು ತುಂಬಲು ಸದಾ ಹಂಬಲಿಸುವ ಮಾರುಕಟ್ಟೆ ಶಕ್ತಿಗಳು, ಪರಿಸರ ಹಾಗೂ ಸಮುದಾಯದ ಹಿತವನ್ನೇ ಮುನ್ನೆಲೆಗೆ ತಂದು, ಇದುವರೆಗೂ ತಾವು ಬಿತ್ತುತ್ತಾ ಬಂದ ಅತಿಬಳಕೆ ಮತ್ತು ಬಳಸಿ ಬಿಸಾಡುವ ಪ್ರವೃತ್ತಿಗೆ ಕಡಿವಾಣ ವಿಧಿಸಲು ಮುಂದಾಗುವವೇ? ಲಾಭವನ್ನೇ ಕೇಂದ್ರದಲ್ಲಿಟ್ಟುಕೊಂಡು ಕಾರ್ಯಾಚರಿಸುವ ಮಾರುಕಟ್ಟೆಯ ಸುತ್ತಲೇ ಹೆಣೆದುಕೊಂಡಿರುವ ಆರ್ಥಿಕತೆಗೂ ಮಿತಬಳಕೆ ಮತ್ತು ಮರುಬಳಕೆ ಅಪಥ್ಯವಲ್ಲವೇ?

ನಾವೆಲ್ಲ ಪ್ರತಿದಿನ ಬಳಸುವ ಟೂತ್ ಬ್ರಶ್ ವಿನ್ಯಾಸವನ್ನು ಬದಲಿಸಿ, ಅದೇ ಹಿಡಿಕೆಗೆ ಹೊಸ ಬ್ರಶ್ ಅಳವಡಿಸುವ ಅವಕಾಶ ಕಲ್ಪಿಸಿದರೆ ಅಷ್ಟರಮಟ್ಟಿಗೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬಹುದೆಂಬ ಸಲಹೆಯನ್ನು ಬಸವನಗೌಡ ಹೆಬ್ಬಳಗೆರೆ ನೀಡಿದ್ದಾರೆ (ವಾ.ವಾ., ಮಾರ್ಚ್‌ 15). ಆದರೆ, ಜನ ಪದೇ ಪದೇ ಕೊಳ್ಳುವಂತಹ ವಸ್ತುಗಳನ್ನೇ ಉತ್ಪಾದಿಸುವ ಅಥವಾ ತಾವು ಉತ್ಪಾದಿಸುವ ವಸ್ತುವನ್ನೇ ಜನ ಪದೇ ಪದೇ ಖರೀದಿಸುವಂತೆ ಪ್ರೇರೇಪಿಸುವ ಮಾರುಕಟ್ಟೆಯ ಚಿತ್ತ, ಉತ್ಪನ್ನವೊಂದರ ಬೇಡಿಕೆ ಹೆಚ್ಚಿಸುವತ್ತಲೇ ಕೇಂದ್ರೀಕೃತವಾಗಿರುತ್ತದೆ. ಜನರಲ್ಲಿ ಉತ್ಪನ್ನವೊಂದರ ಮರುಬಳಕೆ ಹಾಗೂ ಮಿತಬಳಕೆ ಕುರಿತು ಕಾಳಜಿ ಮೂಡಿಸುವುದರಲ್ಲಿ ಮಾರುಕಟ್ಟೆಗೆ ಲಾಭಕ್ಕಿಂತಲೂ ನಷ್ಟವೇ ಹೆಚ್ಚೆಂಬುದು ವರ್ತಮಾನದ ವಾಸ್ತವವೂ ಹೌದು.

ಸಾಕಷ್ಟು ಜನಪ್ರಿಯತೆ ಗಳಿಸಿದ ‘ರೇಜರ್’ ವಿನ್ಯಾಸಗೊಳಿಸಿದ ಕಿಂಗ್ ಕ್ಯಾಂಪ್ ಜಿಲೆಟ್‍ನ ಹಿನ್ನೆಲೆ ಮತ್ತು ‘ರೇಜರ್’ ಎಂಬ ಉತ್ಪನ್ನವನ್ನು ಆತ ಮಾರುಕಟ್ಟೆಗೆ ಪರಿಚಯಿಸಲು ಕಾರಣವಾದ ಅಂಶಗಳನ್ನು ಪರಿಗಣಿಸಿದರೆ, ಇಂದಿಗೂ ಇಡೀ ಮಾರುಕಟ್ಟೆ ಚಿಂತಿಸುವುದು ಜಿಲೆಟ್‍ನ ಹಾಗೆಯೇ ಎಂಬುದು ಮನದಟ್ಟಾಗದೇ ಇರದು. 1890ರ ದಶಕದಲ್ಲಿ ಹೊಟ್ಟೆಪಾಡಿಗೆ ಸೇಲ್ಸ್‌ಮನ್ ವೃತ್ತಿ ಮಾಡುತ್ತಿದ್ದ ಜಿಲೆಟ್‍ಗೆ ತಾನು ಹೇಗಾದರೂ ಮಾಡಿ ಹೆಚ್ಚು ಹಣ ಸಂಪಾದಿಸಬೇಕೆನ್ನುವ ಇಂಗಿತವಿತ್ತು. ಜನ ಪದೇ ಪದೇ ಬಳಸುವಂತಹ ಉತ್ಪನ್ನವೊಂದನ್ನು ಮಾರಲು ತೊಡಗಿದರೆ ತನ್ನ ಇಚ್ಛೆಯಂತೆ ಹೆಚ್ಚು ಹಣ ಗಳಿಸಬಹುದು ಅನಿಸಿತ್ತು. ಹೀಗೆ ಒಮ್ಮೆ ಅಷ್ಟೇನೂ ಬಳಕೆದಾರಸ್ನೇಹಿ ಅಲ್ಲದ, ತುದಿ ಹರಿತಗೊಳಿಸಿ ಮರುಬಳಕೆ ಮಾಡುವ ಬ್ಲೇಡ್‍ನಿಂದ ತನ್ನ ಗಡ್ಡ ಬೋಳಿಸಿಕೊಳ್ಳುತ್ತಿದ್ದವನಿಗೆ, ಜನರು ಸುಲಭವಾಗಿ ಗಡ್ಡ ಬೋಳಿಸಲು ಬಳಸಿ ಬಿಸಾಡುವಂತಹ ಬ್ಲೇಡ್ ತಯಾರಿಸಿದರೆ ಹೇಗೆ ಎಂಬ ಆಲೋಚನೆ ಮೂಡಿ ಅದು ಕಾರ್ಯರೂಪಕ್ಕೂ ಬಂದಿತು.

ಹೀಗೆ ಬಳಸಿ ಬಿಸಾಡುವ ಉತ್ಪನ್ನದ ಸೃಷ್ಟಿ ಅಥವಾ ಪ್ರವೃತ್ತಿಯ ಪೋಷಣೆಯಲ್ಲೇ ತನ್ನ ಹಿತ ಅಡಗಿದೆ ಎಂಬುದನ್ನು ಕಂಡುಕೊಂಡಿರುವ ಮಾರುಕಟ್ಟೆ ಶಕ್ತಿಗಳು, ಇಂದು ನಾವೆಲ್ಲರೂ ನಮಗರಿವಿದ್ದೋ ಇಲ್ಲದೆಯೋ ‘ಬಳಸಿ ಬಿಸಾಡುವ ಪ್ರವೃತ್ತಿ’ಯ ಪರಿಪಾಲಕರಾಗುವಂತೆ ಮಾಡುವಲ್ಲಿ ಯಶ ಕಂಡಿವೆ.

ಇದೇ ವೇಳೆ, ಯಾವುದಾದರೂ ಉತ್ಪನ್ನವನ್ನು ಹೆಚ್ಚು ಕಾಲ ಬಳಸದಿರುವಂತೆ ನೋಡಿಕೊಳ್ಳುವುದರಲ್ಲೂ ತನ್ನ ಹಿತ ಅಡಗಿದೆ ಎಂಬುದು ಮಾರುಕಟ್ಟೆಗೆ ಅರಿವಾಗಿದೆ. ಪ್ರತಿ ಆರು ತಿಂಗಳಿಗೋ ವರ್ಷಕ್ಕೋ ಒಂದರಂತೆ ಮೊಬೈಲ್ ಹ್ಯಾಂಡ್‍ಸೆಟ್ಟುಗಳನ್ನು ಕೊಂಡುಕೊಳ್ಳುವ ಮೂಲಕ ತಾವೂ ಅಪ್‍ಡೇಟ್ ಆಗುತ್ತೇವೆಂಬ ಟ್ರೆಂಡ್ ಸೃಷ್ಟಿಸಲು ಮೊಬೈಲ್ ಕಂಪನಿಗಳಿಗೆ ಸಾಧ್ಯವಾಗದೇ ಹೋಗಿದ್ದರೆ, ಮೊಬೈಲ್ ಮಾರುಕಟ್ಟೆ ಈ ಪರಿ ಚಲನಶೀಲವಾಗಿರಲು ಸಾಧ್ಯವೇ ಆಗುತ್ತಿರಲಿಲ್ಲ. ನಾವು ಬಳಸುತ್ತಿರುವ ಮೊಬೈಲ್, ಕಾರು, ಟಿ.ವಿ. ಹೀಗೆ ಯಾವುದೇ ಉತ್ಪನ್ನವಾಗಲಿ ಅದು ಸುಸ್ಥಿತಿಯಲ್ಲಿದ್ದರೂ ಹೊಸದನ್ನು ಕೊಂಡುಕೊಳ್ಳುವ ಉಮೇದು ನಮ್ಮೊಳಗೆ ಜಾಗೃತವಾಗಿ ಬಿಡುವುದರ ಹಿಂದೆ ಮಾರುಕಟ್ಟೆಯ ಚಿತಾವಣೆ ಇರುವುದನ್ನು ಅಲ್ಲಗಳೆಯಲು ಸಾಧ್ಯವೇ?

ಜನರನ್ನು ಪರಸ್ಪರ ದೂರವಿರಿಸಲು ಯಶಸ್ವಿಯಾದಷ್ಟೂ ಉತ್ಪನ್ನವೊಂದರ ಮಾರುಕಟ್ಟೆಯೂ ವಿಸ್ತಾರಗೊಳ್ಳುತ್ತದೆ ಎಂಬುದನ್ನು ಅರಿತಿರುವ ಮಾರುಕಟ್ಟೆ ಶಕ್ತಿಗಳು, ಜನರನ್ನು ಪರಸ್ಪರ ದೂರ ತಳ್ಳಲು ಅನುವಾಗುವ ವಾತಾವರಣ ರೂಪಿಸುವ ಪ್ರಕ್ರಿಯೆಗೆ ಚಾಲನೆ ಕೊಟ್ಟು ದಶಕಗಳೇ ಉರುಳಿವೆ. ಇಂದು ನಾವು ನೆಚ್ಚಿಕೊಂಡಿರುವ ಆರ್ಥಿಕತೆಯ ಬೆಳವಣಿಗೆಗೆ ಈ ಜನರನ್ನು ಪರಸ್ಪರ ದೂರವಿರಿಸುವ ಕಾರ್ಯತಂತ್ರವೂ ಪೂರಕವೆಂಬುದು ವಿಪರ್ಯಾಸವಾದರೂ ವಾಸ್ತವವೇ.

ಹಾಗೊಂದು ವೇಳೆ ಮಾರುಕಟ್ಟೆಯ ಪ್ರಭಾವಕ್ಕೆ ಒಳಗಾಗದೆ ಉತ್ಪನ್ನಗಳ ಮಿತಬಳಕೆ ಹಾಗೂ ಮರುಬಳಕೆಗೆ ಆದ್ಯತೆ ನೀಡಲು ಇಡೀ ಸಮುದಾಯವೇ ಮುಂದಾದರೆ, ಅದರಿಂದ ‘ಉತ್ಪಾದನೆ- ಮಾರಾಟ- ಲಾಭ ಗಳಿಕೆ’ಯ ಸೂತ್ರದ ಮೇಲೆ ವ್ಯತಿರಿಕ್ತ ಪರಿಣಾಮವಾಗಿ ಆರ್ಥಿಕತೆಗೆ ಪೆಟ್ಟು ಬೀಳಬಹುದು. ಅದರಿಂದಾಗಿ ಉದ್ಯೋಗಾವಕಾಶಗಳು, ಸಂಪತ್ತು ಸೃಷ್ಟಿಯಾಗದೇ ಹೋಗಬಹುದು. ಈ ಮಾರುಕಟ್ಟೆಯ ಸೂತ್ರದಿಂದ ನೇರವಾಗಿ ಹಾಗೂ ಪರೋಕ್ಷವಾಗಿ ಲಾಭ ಪಡೆಯುತ್ತಿರುವವರ ಆದಾಯಕ್ಕೂ ಹೊಡೆತ ಬೀಳಲಿದೆ.

ಪರಿಸರ ಮತ್ತು ಸಮುದಾಯದ ಹಿತಕ್ಕೆ ಇಂದಿನ ಮಾರುಕಟ್ಟೆ ಸೂತ್ರ ತಕ್ಕುದಾದುದಲ್ಲ ಎಂದಾದರೆ, ನಾವೆಲ್ಲರೂ ಮಿತಬಳಕೆಯ ಸೂತ್ರ ಜಾರಿಗೆ ತರಲು ಹಿಮ್ಮುಖ ಚಲನೆಯ ಮೊರೆ ಹೋಗಲೇಬೇಕು. ವಸ್ತುಕೇಂದ್ರಿತ ಆಧುನಿಕ ಜೀವನಶೈಲಿ ತೊರೆದು, ‘ಸರಳತೆ’ ಹಾಗೂ ‘ಅಲ್ಪ ಆಸೆ’ ಕೇಂದ್ರಿತ ಬದುಕಿನ ಶೈಲಿ ಅಳವಡಿಸಿಕೊಳ್ಳಬೇಕು. ಸಮುದಾಯದ ಮಟ್ಟದಲ್ಲಿ ಇದು ಸಾಧ್ಯವಾಗುವುದೇ?

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !