ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾಯಿತು ‘ಒಳಗೊಳ್ಳುವಿಕೆ ಅಭಿವೃದ್ಧಿ?’

ಎಲ್ಲರ ಅಭ್ಯುದಯ ಸಾಧನೆ ಸಾಧ್ಯವೇ ಎನ್ನುವ ಪ್ರಶ್ನೆ ನಮ್ಮ ಮುಂದಿದೆ
Last Updated 6 ಮೇ 2019, 19:59 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನದ ಸಮಯ ಸಮೀಪಿಸುತ್ತಿರುವಾಗಲೂ ರಾಜಕೀಯ ಪಕ್ಷಗಳಿಗೆ, ತೀವ್ರ ಸ್ವರೂಪ ತಾಳಿರುವ ಆರ್ಥಿಕ ಅಸಮಾನತೆಯ ಸಮಸ್ಯೆಯ ನೆನಪು ಕೂಡ ಆಗುತ್ತಿಲ್ಲ. ಈ ಸಮಸ್ಯೆಗೆ ತುಸು ಪರಿಹಾರವಾಗಬಲ್ಲ ‘ಒಳಗೊಳ್ಳುವಿಕೆಯುಳ್ಳ ಅಭಿವೃದ್ಧಿ’ಯ ಪರಿಕಲ್ಪನೆಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ಸಿಕ್ಕ ಸ್ಥಾನ ಏನೇನೂ ಸಾಲದು.

ಜಾನ್ ಎಫ್. ಕೆನಡಿ ಅಮೆರಿಕದ ಅಧ್ಯಕ್ಷರಾಗಿದ್ದಾಗ ಹೇಳಿದ ನುಡಿಮುತ್ತೊಂದನ್ನು ಮತ್ತೆ ನೆನಪಿಸಿಕೊಳ್ಳುವಂತಾಗಿದೆ: ‘ಯಾವುದೇ ಸ್ವತಂತ್ರ ಸಮಾಜವಾದರೂ ದೊಡ್ಡ ಸಂಖ್ಯೆಯಲ್ಲಿರುವ ಬಡವರಿಗೆ ನೆರವಾಗದಿದ್ದರೆ ಅದು, ಸಣ್ಣ ಸಂಖ್ಯೆಯಲ್ಲಿರುವ ಶ್ರೀಮಂತರನ್ನು ರಕ್ಷಿಸಿಕೊಳ್ಳಲಾರದು’. ವಿಶ್ವದ ಎರಡನೇ ಅತಿ ದೊಡ್ಡ ಪ್ರಜಾಪ್ರಭುತ್ವದ ಅಧ್ಯಕ್ಷರು ಎಷ್ಟೋ ವರ್ಷಗಳ ಹಿಂದೆ ಹೇಳಿದ್ದಕ್ಕೆ, ಅತಿ ದೊಡ್ಡ ಪ್ರಜಾಸತ್ತೆಯನ್ನು ಹೊಂದಿರುವ ಭಾರತದಲ್ಲಿ ಈಗಲೂ ಮಹತ್ವವಿದೆ. ಲೋಕಸಭಾ ಚುನಾವಣೆಯ ನಂತರ ಯಾವುದೇ ಪಕ್ಷ ಹಸ್ತಿನಾವತಿಯ ಗದ್ದುಗೆ ಏರಲಿ, ಅದರ ಮುಂದೆ ಆರ್ಥಿಕ ಅಸಮಾನತೆ ಸವಾಲಾಗಿ ನಿಲ್ಲಲಿದೆ.

ಭಾರತದಲ್ಲಿ ಕಳೆದ 30 ವರ್ಷಗಳಿಂದ ಉಳ್ಳವರು ಮತ್ತು ಇಲ್ಲದಿರುವವರ ನಡುವಣ ಅಂತರ ಹೆಚ್ಚುತ್ತಿರುವುದು ಕಳವಳಕಾರಿ. ಈ ಸಮಸ್ಯೆಯ ತೀವ್ರತೆಯನ್ನು ಜಾಗತಿಕ ಮಟ್ಟದ ವರದಿಗಳು (2018ರ ಆಕ್ಸ್‌ಫಾಮ್ ಇಂಡಿಯಾ ವರದಿಯೂ ಸೇರಿದಂತೆ) ಬಯಲು ಮಾಡುತ್ತಿವೆ. 1991ರಿಂದ ಆರ್ಥಿಕ ಸುಧಾರಣೆಗಳ (ತ್ರಿಕರಣಗಳ) ಯುಗ ಪ್ರಾರಂಭವಾದ ಮೇಲೆ ಅಸಮಾನತೆಯ ತೀವ್ರತೆ ಏರಿಕೆಯಾಗುತ್ತಾ ಹೋಗಿದ್ದಕ್ಕೆ ಬೇಕಾದಷ್ಟು ಆಧಾರಗಳಿವೆ. 103 ರಾಷ್ಟ್ರಗಳಲ್ಲಾದ ಒಳಗೊಳ್ಳುವಿಕೆ ಅಭಿವೃದ್ಧಿಯ ಮಟ್ಟವನ್ನು ತೋರಿಸುವ ವರದಿಯನ್ನು ವಿಶ್ವ ಆರ್ಥಿಕ ವೇದಿಕೆಯು 2018ರ ಜ.22ರಂದು ಬಿಡುಗಡೆ ಮಾಡಿತು. ಇದರಲ್ಲಿ, ನೆರೆಯ ರಾಷ್ಟ್ರಗಳಾದ ಚೀನಾ, ನೇಪಾಳ, ಶ್ರೀಲಂಕಾ ಮತ್ತು ಪಾಕಿಸ್ತಾನಗಳಿಗಿಂತ ಭಾರತ ಬಹಳ ಕೆಳಗಿನ ಸ್ಥಾನದಲ್ಲಿದ್ದ ಸತ್ಯ ಬಹಿರಂಗವಾಗಿತ್ತು.

ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರು 1992ರ ಮಾರ್ಚ್‌ 9ರಂದು ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ನಡೆದ ಚರ್ಚೆಗೆ ನೀಡಿದ ಉತ್ತರದಲ್ಲಿ, 1991ರ ಹೊಸ ಆರ್ಥಿಕ ನೀತಿಯ ಲಾಭ ಸಾಮಾಜಿಕ ವ್ಯವಸ್ಥೆಯ ಕೆಳಸ್ತರಗಳಿಗೆ ಧಾರಾಳವಾಗಿ ಹರಿದು ಉದ್ಯೋಗ ಸೃಷ್ಟಿಯಾಗಲಿದೆ, ಬಡತನ ನಿವಾರಣೆಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದರು. ಅಂದರೆ, ಅರ್ಥಶಾಸ್ತ್ರದಲ್ಲಿ ಪ್ರಚಲಿತವಿರುವ ಅಧೋಮುಖ ಹರಿವಿನ ಸಿದ್ಧಾಂತದಲ್ಲಿ (ಟ್ರಿಕಲ್ ಡೌನ್ ಥಿಯರಿ) ನರಸಿಂಹರಾಯರಿಗೆ ಅಪಾರ ವಿಶ್ವಾಸವಿತ್ತು.

ರಾಯರ ಲೆಕ್ಕಾಚಾರ ಏಕೋ ಸರಿಹೋಗಲಿಲ್ಲ. ಅಧೋಮುಖ ಹರಿವಿನ ಪರಿಣಾಮ ಸೃಷ್ಟಿಯಾಗದೇ ಇರಲು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಅಡ್ಡಿಯಾಯಿತು. ಇಂಥ ಪರಿಣಾಮದ ಸೃಷ್ಟಿಗೆ ಬೇಕಾದ ಆಡಳಿತ ಪರಿಪಾಲನೆ ಇರಲಿಲ್ಲವಾದ್ದರಿಂದ 2005-06ರ ಹೊತ್ತಿಗೆ ಆರ್ಥಿಕ ಬೆಳವಣಿಗೆ ದರ ಶೇ 9ಕ್ಕಿಂತ ಜಾಸ್ತಿಯಾದರೂ ಬಡತನ ನಿರ್ಮೂಲನೆಯು ಗುರಿಯಾಗಿಯೇ ಉಳಿಯಿತು. ಅದು ಸಾಧನೆಯಾಗಲಿಲ್ಲ ಎಂಬುದನ್ನು ಯುಪಿಎ ಮೊದಲ ಅವಧಿಯ ಸರ್ಕಾರ ಒಪ್ಪಿಕೊಳ್ಳಬೇಕಾಯಿತು. ಆರ್ಥಿಕ ಅಸಮಾನತೆ ಆಗಲೇ ಅಸಾಮಾನ್ಯ ರೂಪ ತಾಳಿದ್ದರಿಂದ, 11ನೇ ಪಂಚವಾರ್ಷಿಕ ಯೋಜನೆ ಪ್ರಾರಂಭವಾಗುವ ಸಮಯಕ್ಕೆ, ಒಳಗೊಳ್ಳುವಿಕೆಯುಳ್ಳ ಇಲ್ಲವೇ ಸೇರ್ಪಡೆಯುಳ್ಳ ಅಭಿವೃದ್ಧಿ ಪರಿಕಲ್ಪನೆಯೆಂಬ ನಾಣ್ಯ ಚಲಾವಣೆಗೆ ಬಂದಿತು. 11ನೇ ಯೋಜನೆಯ ದಾಖಲೆಪತ್ರ ಅಸಮಾನತೆಯ ವಿವಿಧ ಮುಖಗಳನ್ನು ಪರಿಚಯಿಸಿದ ರೀತಿ ಇಂದಿಗೂ ಪ್ರಭಾವಪೂರ್ಣವಾಗಿದೆ.

ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದ ಒಳಗೊಳ್ಳುವಿಕೆಯ ಆರ್ಥಿಕ ಅಭಿವೃದ್ಧಿಯ ಪರಿಕಲ್ಪನೆಯನ್ನು ವ್ಯಾಖ್ಯಾನಿಸುವಲ್ಲೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂಚೂಣಿಗೆ ಬಂದರು. ಎಲ್ಲರನ್ನೂ ಒಳಗೊಳ್ಳುವುದು ಎಂದರೆ ಅತಿ ಹೆಚ್ಚಿನ ಸಂಖ್ಯೆಯ ಜನರ ಅತಿ ಹೆಚ್ಚಿನ ಪ್ರಮಾಣದ ಕ್ಷೇಮಾಭಿವೃದ್ಧಿ ಎಂದು ಅರ್ಥೈಸಬೇಕಾದ ಅಗತ್ಯವೇ ಇಲ್ಲವೆಂದು ನಿಖರವಾಗಿ ಹೇಳಿದ ಕಾಂಗ್ರೆಸ್ ನಾಯಕಿ, ಸತ್ಯವಾಗಿಯೂ ಇದು ಎಲ್ಲರ ಅಭ್ಯುದಯ ಎಂದು ಘೋಷಿಸಿದರು. ಈ ಘೋಷಣೆ ಶರವೇಗದಲ್ಲಿ ಮತ ಗಳಿಸುವ ತಂತ್ರವಾಗಿ ಬಿಡಬೇಕೇ! ಕಾಂಗ್ರೆಸ್ ನಾಯಕರೆಲ್ಲ ಅವಕಾಶ ಸಿಕ್ಕಾಗ ಸೋನಿಯಾ ಘೋಷಣೆಯನ್ನು ಪುನರುಚ್ಚರಿಸಿ ಧನ್ಯರಾದರು!

ಕೇಂದ್ರ ವಿತ್ತ ಸಚಿವರಾಗಿದ್ದ ಪ್ರಣವ್ ಮುಖರ್ಜಿ ತಮ್ಮ 2009-10ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಸೋನಿಯಾ ಅವರ ಘೋಷಣೆಯನ್ನು ಪೂರ್ತಿಯಾಗಿ ಉದ್ಧರಿಸುವ ಭಾಗ್ಯಶಾಲಿಯಾಗಿದ್ದರು. ದ್ವಿತೀಯ ಯುಪಿಎ ಅವಧಿಯಲ್ಲಿ ವಿತ್ತ ಸಚಿವರಾದ ಚಿದಂಬರಂ, ಒಳಗೊಳ್ಳುವಿಕೆಯುಳ್ಳ ಅಭಿವೃದ್ಧಿ ತಮ್ಮ ಸರ್ಕಾರದ ‘ಮೂಲ ಮಂತ್ರ’ ಎಂದು ಲೋಕಸಭೆಯಲ್ಲಿ ಸೋನಿಯಾ ಉಪಸ್ಥಿತಿಯಲ್ಲೇ ಸಾರಿದ್ದರು. 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸಂಗೀತದಂತೆ ಇಂಪಾಗಿದ್ದ, ‘ಎಲ್ಲರ ಜತೆಗೂಡಿ ಎಲ್ಲರ ವಿಕಾಸ’ ಎನ್ನುವ ನರೇಂದ್ರ ಮೋದಿ ಅವರ ಘೋಷಣೆ ಈಗ ಕೇಳಿಸುತ್ತಲೇ ಇಲ್ಲ. ಬೆಳವಣಿಗೆ ದರ ಇನ್ನೂ ಕೇವಲ ಶೇ 7ರಷ್ಟಿರುವಾಗ, ಎರಡಂಕಿ ಬೆಳವಣಿಗೆ ಸದ್ಯಕ್ಕಂತೂ ಸಾಧ್ಯವಿಲ್ಲದಿರುವಾಗ, ಸೇರ್ಪಡೆಯುಳ್ಳ ಅಭಿವೃದ್ಧಿ ಮೂಲಕ ಎಲ್ಲರ ಅಭ್ಯುದಯ ಸಾಧಿಸುವುದು ಸಾಧ್ಯವೇ ಎನ್ನುವ ಪ್ರಶ್ನೆ ಮುಂದೆ ಬಂದಿದೆ. ಹೀಗಿರುವಾಗ, ಈ ಅಭಿವೃದ್ಧಿ ಪರಿಕಲ್ಪನೆಯೇ ಈಗ ಕಣ್ಣಿಗೆ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಹಿಂದೆ ಸರಿದುಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT