ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈಗೆ ಬಂದದ್ದು ನಮ್ಮಲ್ಲಿಗೆ ಬಾರದೇ?

Last Updated 25 ಜೂನ್ 2019, 10:23 IST
ಅಕ್ಷರ ಗಾತ್ರ

ಮುಂದಿನ ವರ್ಷದ ವೇಳೆಗೆ ದೇಶದ 21 ನಗರಗಳು ನೀರಿಗಾಗಿ ಪರದಾಡುತ್ತವೆ, ಈ ನಗರಗಳಲ್ಲಿ ಅಂತರ್ಜಲ ಬರಿದಾಗಲಿದೆ ಎಂದು ಹೇಳುತ್ತಿರುವುದು ಬೇರೆ ಯಾರೂ ಅಲ್ಲ; ನಮ್ಮ ನೀತಿ ಆಯೋಗ. ಚೆನ್ನೈಗೆ ಈಗಲೇ ಅಂತಹ ಸ್ಥಿತಿ ಒದಗಿದೆ. ಅಲ್ಲಿನ ಮೂರು ನದಿಗಳು, ನಾಲ್ಕು ಸರೋವರಗಳು, ತೇವಾಂಶಭರಿತ ಐದು ಪ್ರದೇಶಗಳು ಮತ್ತು ಆರು ಕಾಡುಗಳು ಒಣಗಿಹೋಗಿವೆ. ತೂಕಡಿಸುತ್ತಿದ್ದ ತಮಿಳುನಾಡು ಸರ್ಕಾರ ಮತ್ತು ಚೆನ್ನೈ ಮಹಾನಗರದ ಜನ ಈಗ ಎಚ್ಚೆತ್ತುಕೊಂಡಿದ್ದಾರೆ.

ಕುಡಿಯುವ ನೀರನ್ನು ಜೊತೆಗೆ ತನ್ನಿ ಎಂದು ವಿದ್ಯಾರ್ಥಿಗಳನ್ನು ಶಾಲಾ– ಕಾಲೇಜುಗಳು ವಿನಂತಿಸಿಕೊಂಡಿವೆ. ಕೆಲವು ಕಡೆ ಶಾಲಾ– ಕಾಲೇಜುಗಳು ಮತ್ತು ಹೋಟೆಲುಗಳನ್ನು ಮುಚ್ಚಲಾಗಿದೆ. ಆಸ್ಪತ್ರೆಗಳಲ್ಲಿ ನೀರಿಲ್ಲದೇ ಇರುವುದರಿಂದ ರೋಗಿಗಳು ಹೇಳದೆ–ಕೇಳದೆ ಮನೆ ಕಡೆ ಹೊರಟಿದ್ದಾರೆ. ಮನೆಯಿಂದಲೇ ಕೆಲಸ ಮಾಡುವಂತೆ ಸಿಬ್ಬಂದಿಗೆ ಕಂಪನಿಗಳು ಸೂಚಿಸಿವೆ. ಕಚೇರಿಗೆ ಬಂದರೆ ನೀರನ್ನೂ ಜೊತೆಗೆ ತರುವಂತೆ ತಿಳಿಸಿವೆ. ಅಪಾರ್ಟ್‌ಮೆಂಟ್‌ಗಳಿಗೆ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳ ಪ್ರಮಾಣವನ್ನು ಮಿತಿಗೊಳಿಸಲಾಗಿದೆ. ಪೈಪ್‌ಗಳಲ್ಲಿ ಬರುತ್ತಿದ್ದ ನೀರು ಸಂಪೂರ್ಣವಾಗಿ ನಿಂತುಹೋಗಿದೆ.

ಚೆನ್ನೈನಲ್ಲಿ ಪ್ರಸ್ತುತ ನೀರು ಸರಬರಾಜು ಮಾಡುವ ಮಾಫಿಯಾ, ಒಂದು ಟ್ಯಾಂಕರ್‌ಗೆ ನಾಲ್ಕೈದು ಸಾವಿರ ರೂಪಾಯಿ ತೆಗೆದುಕೊಳ್ಳುತ್ತಿದೆ. ಚೆನ್ನೈ ನಗರಾಭಿವೃದ್ಧಿ ಪ್ರಾಧಿಕಾರವು ಸರಬರಾಜು ಮಾಡುವ ಟ್ಯಾಂಕರ್‌ ಅನ್ನು ಬುಕ್ ಮಾಡಿದರೆ, ನೀರು ಬರುವುದಕ್ಕೆ ಒಂದೆರಡು ವಾರಗಳಾದರೂ ಆಗಬಹುದು! ಆದಕಾರಣ, ಜನರು ವಿಧಿ ಇಲ್ಲದೆ ಹೆಚ್ಚು ಹಣ ತೆತ್ತು ನೀರು ಪಡೆಯಬೇಕಾಗಿದೆ. ಇದರಿಂದ ಬೇಸತ್ತ ಅನೇಕರು ಚೆನ್ನೈ ಬಿಟ್ಟು ಸಂಬಂಧಿಕರ ಊರುಗಳ ಕಡೆಗೆ ಹೊರಟು ಹೋಗುತ್ತಿದ್ದಾರೆ. ಕೆಲವರು ಬೆಂಗಳೂರಿಗೂ ವಲಸೆ ಬಂದಿದ್ದಾರೆ.

ಚೆನ್ನೈ ಕೂಡ ಒಂದು ಕಾಲದಲ್ಲಿ ಬೆಂಗಳೂರಿನಂತೆ ಅನೇಕ ಕೆರೆಗಳನ್ನು ಹೊಂದಿತ್ತು. ಸರ್ಕಾರವು 150 ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ರೂಪಿಸಿತು. ನಗರಕ್ಕೆ ನೀರು ಪೂರೈಸುತ್ತಿದ್ದ ನಾಲ್ಕು ದೊಡ್ಡ ಕೆರೆಗಳು ಈಗ ಸಂಪೂರ್ಣವಾಗಿ ಬತ್ತಿಹೋಗಿವೆ. ಮೂರು ಕೆರೆಗಳಲ್ಲಿ ಹೂಳು ತೆಗೆದು ಕೊಳವೆಬಾವಿಗಳನ್ನು ಕೊರೆದು ಅಲ್ಪಸ್ವಲ್ಪ ನೀರನ್ನು ಪೂರೈಸಲಾಗುತ್ತಿದೆ. ಚೆನ್ನೈ ನಗರಕ್ಕೆ ಒಂದು ದಿನಕ್ಕೆ ಕನಿಷ್ಠ 130 ಕೋಟಿ ಲೀಟರ್‌ ನೀರು ಬೇಕಾಗಿದ್ದು, ಈಗ ಕೇವಲ 50 ಕೋಟಿ ಲೀಟರ್‌ನಷ್ಟು ದೊರಕುತ್ತಿದೆ ಎನ್ನಲಾಗಿದೆ. ವೆಲ್ಲೂರಿನ ಕಡೆಯಿಂದ ನೀರು ತರಲು ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಚೆನ್ನೈ ನಗರ ಭೌಗೋಳಿಕವಾಗಿ ರೈನ್ ಶಾಡೋ ವಲಯದಲ್ಲಿ ಸಿಕ್ಕಿಕೊಂಡಿರುವ ನಗರವಾಗಿದ್ದು, ಸಾಮಾನ್ಯವಾಗಿ ಮುಂಗಾರು ಮಳೆ ಬೀಳುವುದಿಲ್ಲ. ಅಕ್ಟೋಬರ್- ನವೆಂಬರ್ ಅವಧಿಯಲ್ಲಿ ಶೇ 80ರಿಂದ ಶೇ 85ರಷ್ಟು ಹಿಂಗಾರು ಮಳೆ ಬೀಳುತ್ತದೆ. ಎರಡು ತಿಂಗಳಿನಿಂದ ಚೆನ್ನೈನ 1.10 ಕೋಟಿ ಜನ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಕೆಲವೇ ಕೊಡಗಳ ನೀರಿನಲ್ಲಿಯೇ ಬದುಕು ನಡೆಸುತ್ತಿದ್ದಾರೆ.
ಸುಮಾರು 200 ದಿನಗಳಿಂದ ಚೆನ್ನೈ ನಗರ ಮಳೆಯನ್ನೇ ನೋಡಿಲ್ಲ. ಇದು, ಏರುತ್ತಿರುವ ಜಾಗತಿಕ ತಾಪಮಾನದ ಪರಿಣಾಮ ಇರಬೇಕು. ಚೆನ್ನೈನಲ್ಲಿ ಈಗ ನೀರಿಗಾಗಿ ಸಣ್ಣಸಣ್ಣ ಜಗಳಗಳು ಸಹ ನಡೆಯುತ್ತಿವೆ. ನಗರಕ್ಕೆ ಬರುತ್ತಿರುವ ನೀರಿನ ಟ್ಯಾಂಕರ್‌ಗಳನ್ನು ಅಪಹರಿಸಲಾಗುತ್ತಿದ್ದು, ಚಾಲಕರ ಪ್ರಾಣಕ್ಕೆ ತೊಂದರೆ ಬಂದಿದೆ. ಪೊಲೀಸರು ಟ್ಯಾಂಕರ್‌ಗಳ ಸುತ್ತ ಕಾವಲು ಕಾಯುತ್ತಿದ್ದಾರೆ.

ಇದಕ್ಕೆಲ್ಲ ಮುಖ್ಯ ಕಾರಣಗಳೆಂದರೆ, ಏರುತ್ತಿರುವ ಜನಸಂಖ್ಯೆ, ಅಪಾರವಾದ ಅರಣ್ಯ ನಾಶ, ಅಂತರ್ಜಲ ಖಾಲಿ ಆಗುತ್ತಿರುವುದು, ಹಿಂದಿನಂತೆ ಋತುಮಾನಗಳಿಗೆ ತಕ್ಕಹಾಗೆ ಮಳೆ ಬೀಳದೇ ಹೋಗುತ್ತಿರುವುದು, ಮಿತಿ ಇಲ್ಲದೆ ಬಳಸುತ್ತಿರುವ ಸಂಪನ್ಮೂಲಗಳು ಮತ್ತು ಹಸಿರುಮನೆ ಅನಿಲಗಳ ಬಿಡುಗಡೆ. ಒಂದು ರೀತಿಯಲ್ಲಿ ಈಗಿನ ಸಮಸ್ಯೆಗಳನ್ನು ಸಂಪೂರ್ಣವಾಗಿ ಸರಿಪಡಿಸಲಾರದ ಸ್ಥಿತಿಗೆ ನಾವು ತಲುಪಿದ್ದೇವೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಇಂತಹ ಸಮಸ್ಯೆ ಬೆಂಗಳೂರಿಗೆ ಬರುವುದಿಲ್ಲ, ಯಾಕೆಂದರೆ ಕಾವೇರಿ ನದಿ ಇದೆಯಲ್ಲ ಎನ್ನುವ ಮಾತುಗಳನ್ನು ನಮ್ಮ ಜನ ಹೇಳುತ್ತಿರುತ್ತಾರೆ. ಆದರೆ ಕಾವೇರಿ ನೀರು ಎಷ್ಟು ಜನರಿಗೆ ತಲುಪುತ್ತಿದೆ ಎನ್ನುವ ವಿಚಾರ ಬಹಳ ಜನರಿಗೆ ತಿಳಿದಿಲ್ಲ. ಬೆಂಗಳೂರಿನ ಜನ ನೀರನ್ನು ಹೇಗೆ ಪೋಲು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿರುವ ವಿಷಯವೇ ಆಗಿದೆ. ನೀರು ದೊರಕುವ ಕಡೆ ಜನರು ಶವರ್ ಇಲ್ಲದೆ ಸ್ನಾನ ಮಾಡುವುದಿಲ್ಲ. ನಲ್ಲಿ ಬಿಟ್ಟುಕೊಂಡೇ ಪಾತ್ರೆಗಳನ್ನು ತೊಳೆಯುತ್ತಾರೆ. ಅಪಾರ್ಟ್‌ಮೆಂಟ್‌ಗಳ ಈಜುಕೊಳಗಳಲ್ಲಿ ನೀರು ತುಂಬಿ ತುಳುಕಾಡುತ್ತಿದೆ. ಸರ್ಕಾರ ಈಗಲೇ ಎಚ್ಚೆತ್ತು, ನೀರಿನ ಬಳಕೆಗೆ ಸಂಬಂಧಿಸಿದಂತೆ ಒಂದು ಕಾನೂನು ರೂಪಿಸಿ ಕಡಿವಾಣ ಹಾಕಬೇಕಿದೆ. ಇಲ್ಲವಾದರೆ ಚೆನ್ನೈ ಜನರಂತೆ ಬೆಂಗಳೂರಿಗರೂ ಊರುಬಿಟ್ಟು ಹೋಗಬೇಕಾದ ಪರಿಸ್ಥಿತಿ ಬರಬಹುದು.

ಲೇಖಕ: ಭೂವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT