ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ: ಹೆಸರಷ್ಟೇ ಸಾಕೆ?

ಈ ಪ್ರದೇಶವು ಇತರ ಪ್ರದೇಶಗಳತ್ತ ನೋಡುತ್ತಾ ಕೊರಗುವಂತೆ ಆಗಬಾರದು
Last Updated 17 ಸೆಪ್ಟೆಂಬರ್ 2019, 4:43 IST
ಅಕ್ಷರ ಗಾತ್ರ

ಕರ್ನಾಟಕ ಏಕೀಕರಣವಾಗಿ ಆರು ದಶಕಗಳು ಕಳೆದರೂ ‘ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಬೇಕು’ ಎಂಬ ಕೂಗು ಹಾಗೇ ಇದೆ. ‘ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ’ಕ್ಕಾಗಿ ಆಗೊಮ್ಮೆ ಈಗೊಮ್ಮೆ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಇಂಥ ಸನ್ನಿವೇಶದಲ್ಲೇ, ಹೈದರಾಬಾದ್‌ ಕರ್ನಾಟಕವನ್ನು ‘ಕಲ್ಯಾಣ ಕರ್ನಾಟಕ’ ಎಂದು ರಾಜ್ಯ ಸರ್ಕಾರ ಮರುನಾಮಕರಣ ಮಾಡಿದೆ.

12ನೇ ಶತಮಾನದ ಶರಣ ಚಳವಳಿಗೆ ಮರುಜೀವ ನೀಡುವ ಉದ್ದೇಶದಿಂದ, ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯ ಸಹಮತ ವೇದಿಕೆಯು ರಾಜ್ಯದಲ್ಲಿ ‘ಮತ್ತೆ ಕಲ್ಯಾಣ’ ಅಭಿಯಾನವನ್ನು ಹಮ್ಮಿಕೊಂಡ ಬೆನ್ನಿಗೇ ನಡೆದ ಬೆಳವಣಿಗೆ ಇದು.

ಪರ– ವಿರೋಧ ಅಭಿಪ್ರಾಯಗಳ ನಡುವೆಯೇ, ಹೈದರಾಬಾದ್‌ ಕರ್ನಾಟಕ ವಿಮೋಚನೆಯ ದಿನವಾದ ಸೆಪ್ಟೆಂಬರ್ 17ರಂದು, ಬೀದರ್‌, ಕಲಬುರ್ಗಿ, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ‘ಕಲ್ಯಾಣ ಕರ್ನಾಟಕ ವಿಮೋಚನಾ ದಿನ’ವನ್ನು ಕಚೇರಿ, ಶಾಲೆ, ಕಾಲೇಜುಗಳಲ್ಲಿ ಆಚರಿಸಬೇಕು ಎಂದೂ ಸರ್ಕಾರ ಆದೇಶಿಸಿತ್ತು.

‘ಹೈದರಾಬಾದ್‌ ಕರ್ನಾಟಕ ವಿಮೋಚನೆ’ ಎಂಬ ಪದಗುಚ್ಛಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಅದನ್ನು ‘ಕಲ್ಯಾಣ ಕರ್ನಾಟಕ ವಿಮೋಚನೆ’ ಎಂದು ಕರೆಯಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶವನ್ನು ಹಿಂದಕ್ಕೆ ಪಡೆಯಲಾಯಿತು. ಈಗ ಅದನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಮರುನಾಮಕರಣಕ್ಕಾಗಿ ಹಲವರ ಹಕ್ಕೊತ್ತಾಯವೇನೋ ಈಡೇರಿದೆ. ಮುಂದೆ ಏನು ಎಂಬುದಕ್ಕೆ ಸ್ಪಷ್ಟ ಮುನ್ನೋಟ–ನಿಲುವುಗಳ ಬಗ್ಗೆ ಸರ್ಕಾರ ತನ್ನ ಅಭಿಪ್ರಾಯವನ್ನೇನೂ ವ್ಯಕ್ತಪಡಿಸಿಲ್ಲ. ‘ಕಲ್ಯಾಣ’ ಎಂಬ ಪದ ಮತ್ತು ಪರಿಕಲ್ಪನೆ ಕುರಿತು ಅದು ಏನು ಹೇಳುತ್ತದೆ ಎಂಬುದರ ಬಗ್ಗೆಯೂ ಉಲ್ಲೇಖಗಳು ಇಲ್ಲ. ಆರೂ ಜಿಲ್ಲೆಗಳಲ್ಲಿರುವ ಒಟ್ಟು 1.3 ಕೋಟಿ ಜನರ ಅಭಿವೃದ್ಧಿಗೆ ಸರ್ಕಾರ ಏನು ಮಾಡಲು ಬಯಸಿದೆ ಎಂಬುದೂ ಸ್ಪಷ್ಟವಿಲ್ಲ. ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸಚಿವರ ಬೀಸು ಹೇಳಿಕೆಗಳನ್ನು ನೆಚ್ಚಿಕೊಳ್ಳಲು ಬಾರದು.

ಇದುವರೆಗಿನ ಸರ್ಕಾರಗಳು ಹೈದರಾಬಾದ್‌ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷಿಸುತ್ತಲೇ ಬಂದಿವೆ ಎಂದು ದೂರುವ ಬಹುತೇಕರು ‘ಈ ಮರುನಾಮಕರಣದಿಂದ ಏನಾದರೂ ಪವಾಡವಾಗುತ್ತದೆ’ ಎಂದು ನಂಬುವ ಸ್ಥಿತಿಯಲ್ಲಿ ಇಲ್ಲ.

ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ತೊಡೆದುಹಾಕಲು ಡಾ. ಡಿ.ಎಂ.ನಂಜುಂಡಪ್ಪ ನೇತೃತ್ವದ ಸಮಿತಿ ರಚನೆಗೊಂಡು ಎರಡು ದಶಕ ಪೂರೈಸುವ ಹೊಸ್ತಿಲಲ್ಲಿದ್ದರೂ, ಅದು ನೀಡಿದ ಶಿಫಾರಸುಗಳ ಅನುಷ್ಠಾನ ಇನ್ನೂ ಪರಿಪೂರ್ಣವಾಗಿ ಆರೂ ಜಿಲ್ಲೆಗಳಲ್ಲಿ ಆಗಿಲ್ಲ.

ಸಮಿತಿಯ ಶಿಫಾರಸಿನಂತೆ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಅನುದಾನದ ಸಮರ್ಪಕ ಬಳಕೆಯಾಗುತ್ತಿಲ್ಲ. ಈ ಜಿಲ್ಲೆಗಳಿಂದ ಆ ಅನುದಾನ ಹಲವು ಬಾರಿ ವಾಪಸು ಹೋಗಿದೆ. ಗಣಿ ನಾಡು ಎಂದು ಪ್ರಖ್ಯಾತವಾದ ಬಳ್ಳಾರಿಯೂ ಇದಕ್ಕೆ ಹೊರತೇನಲ್ಲ. ಆಗದೇ ಇರುವ ಅಭಿವೃದ್ಧಿ ಕಾಮಗಾರಿಯನ್ನು ಆಗಿದೆ ಎಂದು ತಪ್ಪು ವರದಿ ನೀಡಿದ ನಿದರ್ಶನಗಳೂ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದಿವೆ.

ಆರೂ ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣ, ಉನ್ನತ ಶಿಕ್ಷಣಕ್ಕೆ ದಾಖಲಾಗುವವರ ಪ್ರಮಾಣ ನಿರಾಶಾದಾಯಕವಾಗಿಯೇ ಮುಂದುವರಿದಿವೆ. ಅತ್ಯಂತ ಕಷ್ಟಪಟ್ಟು ಪಡೆದ 371(ಜೆ) ಕಲಂ ತಿದ್ದುಪಡಿಯಿಂದ ಪ್ರದೇಶಕ್ಕೆ ಆಗಿರುವ ಪ್ರಯೋಜನಗಳ ಮೌಲ್ಯಮಾಪನವೂ ದೂರವೇ ಉಳಿದಿದೆ. ಕೆಲಸ ಹುಡುಕಿಕೊಂಡು ಜನರು ಗುಳೆ ಹೋಗುವ ಕಷ್ಟ ತಪ್ಪಿಲ್ಲ.

ಈ ಪ್ರದೇಶದಲ್ಲಿ ಜನರ ಜೀವನಮಟ್ಟ ಬದಲಾಗಬೇಕು. ಮೂಲಸೌಕರ್ಯಗಳ ಕೊರತೆ ನೀಗಿ ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಪಥದಲ್ಲಿ ಅದು ರಾಜ್ಯದ ಇತರ ಪ್ರದೇಶಗಳಿಗೆ ಸರಿಸಮನಾಗಿ ನಿಲ್ಲಲು ಮಹತ್ವದ, ದೂರದೃಷ್ಟಿಯುಳ್ಳ ಕಾರ್ಯಕ್ರಮಗಳೂ ರೂಪುಗೊಳ್ಳಬೇಕು. ಮುಂದುವರಿಯಬೇಕು ಎನ್ನುವುದು ಎಲ್ಲ ಪ್ರದೇಶಗಳ ಕನಸು, ಕನವರಿಕೆ. ಈಗ ‘ಕಲ್ಯಾಣ’ವಾಗಿರುವ ಪ್ರದೇಶವೂ ಇತರ ಪ್ರದೇಶಗಳತ್ತ ನೋಡುತ್ತಾ ಕೊರಗುವಂತೆ ಆಗಬಾರದು.

ಒಂದು ಹೆಸರುಳ್ಳ ಪ್ರದೇಶಕ್ಕೆ ಮತ್ತೊಂದು ಹೆಸರನ್ನು ಇಡುವ ಉದ್ದೇಶದಲ್ಲಿ, ಆ ಹೆಸರಿಗೆ ಮಾತ್ರ ಮಹತ್ವ ತಂದುಕೊಡುವ ಉದ್ದೇಶವೇ ಇದ್ದರೆ, ಆ ಪ್ರದೇಶಕ್ಕೆ ಯಾವ ಪ್ರಯೋಜನವೂ ಆಗುವುದಿಲ್ಲ. ‘ಕಲ್ಯಾಣ ಕರ್ನಾಟಕ’ವು ಇನ್ನುಳಿದ ಕರ್ನಾಟಕದ ಎದುರು ತಲೆ ಎತ್ತಿ ನಿಲ್ಲುವಂತೆ ಆಗಬೇಕು. ಅದು, ಈ ಪ್ರದೇಶಕ್ಕೆ ಮರುಜನ್ಮವನ್ನೂ ಕೊಡಬೇಕು. ಪ್ರಮುಖವಾಗಿ, ‘ಕಲ್ಯಾಣ ರಾಜ್ಯ’ದ ಆಶಯವಾದ ಅಭಿವೃದ್ಧಿ ಮತ್ತು ಸಂಪತ್ತಿನ ಅಸಮತೋಲನ ನೀಗಬೇಕು. ಅದಕ್ಕೆ ಹೊಸ ಅಭಿವೃದ್ಧಿ ನೀತಿಯೇ ರೂಪುಗೊಳ್ಳಬೇಕು. ನಾಮಕರಣ ಎಂಬುದು ಆರಂಭವಷ್ಟೇ.

ತಮ್ಮ ಮಗುವಿಗೆ ನಾಮಕರಣ ಮಾಡಿ ತಂದೆ–ತಾಯಿ ಸುಮ್ಮನಿರುವುದಿಲ್ಲ. ಅದರ ಬೆಳವಣಿಗೆಗಾಗಿ ನಿರಂತರ ಶ್ರಮಿಸುತ್ತಾರೆ. ಬೇಕು–ಬೇಡಗಳನ್ನು ಪೂರೈಸುತ್ತಾರೆ. ಇತರ ಮಕ್ಕಳ ನಡುವೆ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಈಗ ರಾಜ್ಯ ಸರ್ಕಾರವೂ ಅರ್ಧಂಬರ್ಧ ಬೆಳೆದ ತನ್ನದೇ ಕೂಸಿಗೆ ಹೊಸ ಹೆಸರಿಟ್ಟಿದೆ. ಇನ್ನು ಮುಂದೆ ಚೆನ್ನಾಗಿ ಸಾಕಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT