ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಅಮರತ್ವಕ್ಕಾಗಿ ಹೆಸರಳಿಸುವ ಮುನ್ನ...

ಸೂಕ್ಷ್ಮ ಗ್ರಹಿಕೆಯ ಅಭಾವದ ರಾಜಕಾರಣದಿಂದಾಗುವ ತಪ್ಪುಗಳಿಗೆ ಪಶ್ಚಾತ್ತಾಪದ ನೆರವೂ ಸಿಗುವುದಿಲ್ಲ
Last Updated 20 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

‘ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ’ (‘ವಿಕ್ರಮಾರ್ಜುನ ವಿಜಯ’ದಲ್ಲಿ ಲೌಕಿಕ ಧರ್ಮವನ್ನೂ, ‘ಆದಿಪುರಾಣ’ದಲ್ಲಿ ಜೈನ ಧರ್ಮವನ್ನೂ ಬೆಳಗುವೆನು) ಎಂದು ಬರೆದ ಪಂಪ, ತನ್ನ ಎರಡೂ ಕೃತಿಗಳಲ್ಲಿ ಎಲ್ಲ ಕಾಲಕ್ಕೂ ಸಲ್ಲುವ ರಾಜಕೀಯ ಸೂಕ್ಷ್ಮಗಳನ್ನು ಹೇಳುತ್ತಾನೆ. ಸಮಕಾಲೀನ ರಾಜಕಾರಣ ಸೂಕ್ಷ್ಮತೆ
ಯನ್ನು ಕಳೆದುಕೊಂಡು ವಿವೇಕಹೀನ ನಡವಳಿಕೆ ಮತ್ತು ಹೇಳಿಕೆಗಳಿಂದ ಅಗ್ಗವಾಗುತ್ತಿರುವುದು ಜನಸಮುದಾಯದಲ್ಲಿ ವಿಷಾದ ಹುಟ್ಟಿಸಿದೆ.

ತನ್ನ ಆಯುಧಾಗಾರದಲ್ಲಿ ವಿಶಿಷ್ಟವಾದ ಚಕ್ರರತ್ನ ಸೃಷ್ಟಿಯಾದ ಹಿನ್ನೆಲೆಯಲ್ಲಿ ಭರತನು ಷಟ್ಖಂಡಗಳನ್ನು ಗೆಲ್ಲಲು ಸೈನ್ಯ ಸಮೇತ ಹೊರಟು ವಿಜಯಯಾತ್ರೆ ಮಾಡಿಕೊಂಡು ಬರುವಾಗ, ವೃಷಭಾಚಲದ ತುದಿಯ ಬಂಡೆಯಲ್ಲಿ ತನ್ನ ಕೀರ್ತಿಶಾಸನ ಬರೆಸುವ ಆಶಯದಿಂದ ಉಬ್ಬಿ ಹೋಗುತ್ತಾನೆ. ಆಂತರ್ಯದಲ್ಲಿ ‘ನ ಭೂತೋ ನ ಭವಿಷ್ಯತಿ’ ಅನ್ನುವಂತಹ ಸಾಧನೆಯನ್ನು ತಾನು ಮಾಡಿರುವುದಾಗಿಯೂ ಇದು ಆಚಂದ್ರಾರ್ಕವಾಗಿ ಉಳಿಯಬೇಕೆಂದೂ ಭಾವಿಸಿ ಹೋಗಿ ನೋಡಿದರೆ ಅಲ್ಲಿ ಅವನಿಗೆ ಆಘಾತ ಕಾದಿರುತ್ತದೆ. ಸೂಜಿಯ ಮೊನೆಯಿಡುವಷ್ಟೂ ಜಾಗವಿಲ್ಲದಂತೆ ಈಗಾಗಲೇ ಈ ಸಾಧನೆಯನ್ನು ಮಾಡಿ ಮಡಿದುಹೋದ ಅಸಂಖ್ಯಾತ ಚಕ್ರವರ್ತಿಗಳ ಇಂಥದ್ದೇ ವಿಜಯಶಾಸನಗಳಿಂದ ಆ ಬಂಡೆ ತುಂಬಿಹೋಗಿತ್ತು. ಆದರೆ ಆಳುವವರ ಅಹಂಕಾರ ಮತ್ತು ಅವಿವೇಕ ಅಲ್ಲಿಗೇ ಮುಗಿಯುವಂತಹದ್ದಲ್ಲ ಎನ್ನುವುದನ್ನು ಪಂಪ ಸೂಚಿಸುವ ಹಾಗೆ, ಬಂಡೆಯಲ್ಲಿನ ಕೆಲವು ಹೆಸರುಗಳನ್ನು ಅಳಿಸಿಹಾಕಿ ತನ್ನ ಹೆಸರಿನ ಶಾಸನ ಬರೆಯುತ್ತಾನೆ ಭರತ. ಇದು ಮನುಷ್ಯನ, ಅದರಲ್ಲೂ ಅಧಿಕಾರಸ್ಥರ ಸಣ್ಣತನದ ಶಾಶ್ವತ ಸಂಕೇತವಾಗಿ ಉಳಿದುಬಿಟ್ಟಿದೆ.

ಇತಿಹಾಸಪ್ರಜ್ಞೆಯಿರುವ ಆಡಳಿತಗಾರರಲ್ಲಿ ತನಗೆ ಇಂದು ಸರಿ ಎಂದು ಕಾಣುವ ಒಂದು ಸಣ್ಣ ಬದಲಾವಣೆ ತನ್ನ ನಂತರವೂ ಸರಿಯಾಗಿಯೇ ಕಾಣಬಹುದೇ ಎಂದು ಆಲೋಚಿಸುವ ದೂರದರ್ಶಿತ್ವ ಜಾಗೃತವಾಗಿರುತ್ತದೆ. ಒಳಗಣ್ಣ ಹೊಳಪು ಕಳೆದುಕೊಂಡ ಭರತನಂತಹವರಿಗೆ ತನ್ನ ನಂತರ ಬರುವ, ತನಗಿಂತ ಪರಾಕ್ರಮಿ ಚಕ್ರವರ್ತಿಗಳು ತನ್ನಂತೆಯೇ ಅಸಾಧ್ಯವಾದುದನ್ನು ಸಾಧಿಸಿ ತನ್ನ ಹೆಸರನ್ನೇ ಅಳಿಸಿ ಹಾಕಿ ಅವರ ಹೆಸರನ್ನು ಬರೆಯುವ ಅಪಾಯವನ್ನು ಮುಂಗಾಣಲು ಸಾಧ್ಯವಾಗುವುದಿಲ್ಲ. ಅಂತಿಮವಾಗಿ ಇಲ್ಲಿ ಯಾರ ಹೆಸರೂ ಶಾಶ್ವತವಾಗಿ ಉಳಿಯುವುದಿಲ್ಲ. ಅಧಿಕಾರ ಅನುಭವಿಸಿದ ಆನಂದದಲ್ಲಿ ತನ್ನ ಹೆಸರು ದಾಖಲಾದ ತಾತ್ಕಾಲಿಕ ಸಮಾಧಾನ ಹೊಂದಬಹುದು ಅಷ್ಟೇ.

ಆದ್ದರಿಂದಲೇ ಪಂಪ ಆಳುವವರನ್ನು ಅವಿವೇಕಿ ಗಳೆಂದೂ ಚಂಚಲ ಮನಸ್ಸಿನವರೆಂದೂ ಕರೆಯುತ್ತಾನೆ. ಅಧಿಕಾರಸ್ಥರು ಬೇಕಾದವರನ್ನು ಏರಿಸಿ ಕುಣಿಸುವ, ಬೇಡವಾದವರನ್ನು ಕೆಳಗಿಳಿಸಿ ಮೂದಲಿಸುವ ಕುಟಿಲ ಬುದ್ಧಿಯುಳ್ಳವರು ಎಂದು ಜರಿಯುತ್ತಾನೆ. ಈ ಹೊತ್ತಿನ ರಾಜಕಾರಣ ಇಂಥದ್ದೇ ಅವಲಕ್ಷಣಗಳಿಂದ ತುಂಬಿ ಹೋಗಿದೆ. ಅಧಿಕಾರವನ್ನು ಪಡೆಯಲು ಅನುಸರಿಸುವ ವಾಮಮಾರ್ಗದ ನಡವಳಿಕೆಗಳನ್ನೇ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೂ ಅನುಸರಿಸುವುದೇ ನಿಜವಾದ ರಾಜಕೀಯ ಎನ್ನುವಂತಾಗಿದೆ.

ನೈತಿಕ ರಾಜಕಾರಣದ ಮಾದರಿಗೆ ಅಗತ್ಯವಾದ ಸಂಹಿತೆಗಳನ್ನು ಬಸವಣ್ಣನವರ ನಾಯಕತ್ವದ ಸಾಮಾಜಿಕ ಸೂಕ್ಷ್ಮಗಳಿಂದ ಗ್ರಹಿಸಬೇಕು. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ತನ್ನ ಬಣ್ಣಿಸಬೇಡ, ಅನ್ಯರಿಗೆ ಅಸಹ್ಯಪಡಬೇಡ, ಇದಿರ ಹಳಿಯಲು ಬೇಡ’– ಅಂತರಂಗ ಬಹಿರಂಗಗಳೆರಡರ ಶುದ್ಧಿಗೂ ಬೇಕಾದ ಪ್ರಾಥಮಿಕ ಮತ್ತು ಆತ್ಯಂತಿಕ ನಡೆಗಳು ಇವು. ಆದರೆ ರಾಜಕಾರಣದ ಅಸಲಿಯತ್ತು ಹೇಗಿದೆ ಎಂದರೆ, ಬಸವಣ್ಣ ಯಾವುದನ್ನೆಲ್ಲ ನಿರಾಕರಿಸುತ್ತಾರೋ ಅವು ನಿಜಕ್ಕೂ ಬೇಕು ಎನ್ನುವಂತಿದೆ.

ವಿಸ್ತಾರವಾದ ಓದು ಮತ್ತು ಸೂಕ್ಷ್ಮ ಗ್ರಹಿಕೆಯ ಅಭಾವದ ರಾಜಕಾರಣದಿಂದ ಸಂಭವಿಸುವ ತಪ್ಪುಗಳಿಗೆ ಪಶ್ಚಾತ್ತಾಪದ ನೆರವೂ ಸಿಗುವುದಿಲ್ಲ. ಕಳೆದ ಮೂರು ದಶಕಗಳ ಕಾಲದ ರಾಜಕೀಯ ಏರುಪೇರುಗಳ ತಕ್ಕಡಿಯಲ್ಲಿ ಸೈದ್ಧಾಂತಿಕ ತೂಕದ ಬಟ್ಟುಗಳನ್ನಿಟ್ಟುಕೊಂಡ ತಟ್ಟೆ ನೆಲ ಬಿಟ್ಟು ಮೇಲೆದ್ದಿಲ್ಲ. ಅದೇ ಏನೂ ಇಲ್ಲದ ತಟ್ಟೆ ಮೇಲೆದ್ದು ತೂಗಾಡುತ್ತಿದೆ. ತಕ್ಕಡಿಯನ್ನು ಎತ್ತಿ ಹಿಡಿಯುವವನ ಕೈ ಕೂಡ ಇದನ್ನು ನೋಡಿಯೂ ನೋಡದಂತೆ ಅಸಹಾಯಕವಾಗಿದೆ.ಮೇಲೇರುವುದೇ ಮುಖ್ಯವಾದಾಗ ಅರಿವಿನ ಭಾರವೇತಕ್ಕೆ ಬೇಕು?

ಒಂದನಳಿಸಿ ಮತ್ತೊಂದನುಳಿಸುವ ಕುಟಿಲ ರಾಜನೀತಿ ಅಪ್ರಬುದ್ಧರನ್ನಷ್ಟೇ ಹುಟ್ಟಿಸುತ್ತದೆ. ಪಂಪನ ಭರತ ಅಯೋಧ್ಯೆಗೆ ಹಿಂತಿರುಗಿ ಸೋದರರಿಗೆ ಶರಣಾಗಲು ಆದೇಶಿಸಿದ. ಬಾಹುಬಲಿಯ ಹೊರತಾಗಿ ಉಳಿದವರೆಲ್ಲಾ ಅಣ್ಣನ ನಡವಳಿಕೆಗೆ ಬೇಸತ್ತು ಕಾಡಿಗೆ ಹೊರಟ ಪ್ರತಿಭಟನೆಯಿಂದಾದರೂ ಭರತ ಬದಲಾಗಬಹುದಿತ್ತು. ಬಾಹುಬಲಿ ಗೆದ್ದು ನರಳಿ ‘ಸಮಸ್ತವೂ ನಿನಗೇ ಇರಲಿ’ ಅಂತ ಎಲ್ಲ ಬಿಟ್ಟು ಹೊರಟಾಗಲಾದರೂ ಭರತನ ಎದೆಗಣ್ಣು ತೆರೆಯಬೇಕಿತ್ತು. ಅಧಿಕಾರದ ಅಹಮ್ಮಿನಿಂದ ಬಾಹುಬಲಿಯನ್ನು ಕೊಲ್ಲುವಂತೆ ಚಕ್ರಕ್ಕೆ ಆದೇಶಿಸುತ್ತಾನೆ. ರಕ್ತಮಾಂಸಗಳಿಂದ ಕೂಡಿದ ಕಣ್ಣು ಕಿವಿ ನಾಲಗೆ ಹೃದಯಗಳನ್ನು ಹೊಂದಿದ ಮನುಷ್ಯನೊಬ್ಬನ ಅನ್ಯಾಯದ ಆದೇಶವನ್ನು ಪಂಚೇಂದ್ರಿಯಗಳಿಲ್ಲದ ಚಕ್ರ ಧಿಕ್ಕರಿಸಿ ಬಾಹುಬಲಿಗೆ ನಮಸ್ಕರಿಸಿ ನ್ಯಾಯಪ್ರಜ್ಞೆಯನ್ನು ಸ್ಥಾಪಿಸುತ್ತದೆ. ಇಂದ್ರಿಯಗಳು ಈ ನ್ಯಾಯಪ್ರಜ್ಞೆಯನ್ನು ಅನುಸರಿಸುವಂತೆ ಎಚ್ಚರದಿಂದ ಇಟ್ಟುಕೊಳ್ಳುವ ಹೃದಯವಂತಿಕೆ ಅಧಿಕಾರ ಕೇಂದ್ರದ ಕಾಳಜಿಯಾಗಿರಬೇಕಾಗುತ್ತದೆ.

ಇದು ಎಲ್ಲ ಕಾಲದ ಆಳುವವರು ಅನುಸರಿಸಬೇಕಾದ ನ್ಯಾಯಪ್ರಜ್ಞೆ. ಅನ್ಯರಿಗೆ ಅಸಹ್ಯಪಡದ, ಅವಸರವೂ ನಿಧಾನದ ಬೆನ್ನೇರಿದ ರಾಜನೀತಿಯ ಅನುಸಂಧಾನ ಇಂದಿನ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT