ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವಿಕಾಸದ ವೇದಿಕೆಯಾಗಲಿ ವಿದ್ಯಾಲಯ

Last Updated 7 ಡಿಸೆಂಬರ್ 2022, 21:08 IST
ಅಕ್ಷರ ಗಾತ್ರ

ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವೊಂದರ ಸಂಪೂರ್ಣ ಕೈಬರಹದ ಪ್ರತಿ ಅದು. ಮಕ್ಕಳ ಈ ಬರವಣಿಗೆಯ ಫೋಟೊ ಪ್ರತಿಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ನೋಡಿ ಆಶ್ಚರ್ಯವಾಗಿತ್ತು! ಕುತೂಹಲವನ್ನು ತಣಿಸುವಂತೆ ಹಿಂದಿನಿಂದಲೆ ದೂರವಾಣಿ ಕರೆಯೂ ಬಂದಿತ್ತು.

‘ಸರ್, ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆಯ ಅವಧಿಯಲ್ಲಿ ಸರದಿಯಂತೆ ಮಕ್ಕಳು ‘ಪ್ರಜಾವಾಣಿ’ ಪತ್ರಿಕೆಯಲ್ಲಿನ ಮುಖ್ಯಾಂಶಗಳನ್ನು ಓದುತ್ತಾರೆ. ಇದು ನಮ್ಮ ನಿತ್ಯದ ಪದ್ಧತಿ’ ಎಂದು ಹೇಳಿದ ಪ್ರಾಥಮಿಕ ಶಾಲೆಯ ಆ ಶಿಕ್ಷಕರ ಮಾತು ವಿಶೇಷವೆನಿಸಲಿಲ್ಲ. ಹಲವು ಶಾಲೆಗಳಲ್ಲಿ ಹೀಗೆ ಪ್ರಮುಖ ಸುದ್ದಿ ಓದುವ ಪರಿಪಾಟವಿದೆ. ಆದರೆ ಕುತೂಹಲ ಕೆರಳಿಸಿದ್ದು ಅವರು ಮುಂದೆ ಹೇಳಿದ ವಿಚಾರ. ‘ನನ್ನ ತರಗತಿಯಲ್ಲಿ ಪದಬಂಧವನ್ನು ಬಿಡಿಸುವ ಚಟುವಟಿಕೆ ನೀಡುತ್ತೇನೆ. ಪದಗಳನ್ನು ಹುಡುಕುವಾಗ ಮಕ್ಕಳು ಉತ್ಸಾಹದ ಬುಗ್ಗೆ. ಇನ್ನು ಲೇಖನಗಳಲ್ಲಿ ಮಕ್ಕಳ ಅರಿವಿಗೆ ನಿಲುಕುವಂತಹ ವಿಚಾರವಿದ್ದರೆ ಅದನ್ನು ಪೂರ್ಣವಾಗಿ ಬರೆದುಕೊಂಡು ಬರುವಂತೆ ಆಯ್ದ ವಿದ್ಯಾರ್ಥಿಗಳಿಗೆ ಸೂಚಿಸುತ್ತೇನೆ. ಇದೇ ಅವರಿಗೆ ಹೋಮ್‍ವರ್ಕ್. ಮಕ್ಕಳು ಬರೆದು ತಂದ ಅಂತಹ ಒಂದು ಲೇಖನವನ್ನೇ ವಾಟ್ಸ್‌ಆ್ಯಪ್‍ನಲ್ಲಿ ನಿಮಗೆ ಕಳುಹಿಸಿದ್ದು’.

‘ಇದರಿಂದ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ?’ ಎಂಬ ಪ್ರಶ್ನೆಗೆ ಆ ಮೇಷ್ಟ್ರು ಉದ್ದೇಶ ವಿವರಿಸಿದಾಗ ‘ಶಹಬ್ಬಾಷ್’ ಎಂಬ ಉದ್ಗಾರ ಅರಿವಿಲ್ಲದೇ ಹೊರಬಂದಿತ್ತು!

‘ಇದು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಸಣ್ಣ ಮಾರ್ಗ. ಅವರೇ ಓದಿ, ಬರೆದು, ಅರ್ಥವಾಗದ್ದನ್ನು ಕೇಳಿ ತಿಳಿದುಕೊಳ್ಳುತ್ತಾರೆ. ತಿಳಿವೂ ವಿಸ್ತಾರವಾಗುತ್ತದೆ. ಪತ್ರಿಕೆ ಓದಬೇಕೆಂಬ ಆಸಕ್ತಿ ಮೊಳೆಯುತ್ತದೆ. ಜೊತೆಗೆ ಬರವಣಿಗೆಯೂ ಸುಧಾರಿಸುತ್ತದೆ. ತರಗತಿಯಲ್ಲಿ ಪಠ್ಯದ ಹೊರತಾಗಿ ಹೊಸತೊಂದನ್ನು ಓದುವ, ಬರೆಯುವ, ಅರಿಯುವ ಕೌಶಲ ಬೆಳೆದಾಗ ಸಹಜವಾಗಿಯೇ ವಿಶ್ವಾಸ ಮೂಡಿ ಗಟ್ಟಿ ಕಾಳುಗಳಾಗಿ ಪರಿವರ್ತನೆಯಾಗಬಲ್ಲರು’ ಅವರು ಹೇಳುತ್ತಾ ಹೋದರು.

ಕೊರೊನೋತ್ತರ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮನಃಸ್ಥಿತಿ ಸಂಪೂರ್ಣ ಬದಲಾಗಿದೆ ಎಂಬ ದೂರೀಗ ಸಾರ್ವತ್ರಿಕ. ಯಾವುದಕ್ಕೂ ಬಾಯಿ ಬಿಡರು, ಹೆಚ್ಚು ಹೆಚ್ಚು ಒಂಟಿಯಾಗುತ್ತಿದ್ದಾರೆ, ಅಭ್ಯಾಸದಲ್ಲಿ ಆಸಕ್ತಿಯನ್ನೇ ತೋರರು, ಬರವಣಿಗೆಯನ್ನೇ ಮರೆತಿದ್ದಾರೆ ಎಂದೆಲ್ಲಾ ಹತ್ತಾರು ಆಕ್ಷೇಪಗಳು ಶಿಕ್ಷಕರು, ಹೆತ್ತವರ ಕಡೆಯಿಂದ ಸಾಮಾನ್ಯವಾಗಿವೆ. ಆನ್‍ಲೈನ್ ತರಗತಿಗಾಗಿ ಅನಿವಾರ್ಯವಾಗಿ ಮೊಬೈಲ್ ಹಿಡಿದ ಕೋಮಲ ಕೈಗಳು ಈಗ ಅಗತ್ಯವಿಲ್ಲದಿದ್ದರೂ ಅದನ್ನು ಬಿಡಲು ಒಪ್ಪುತ್ತಿಲ್ಲ. ಓದು, ಬರಹದಲ್ಲಿ ಮನಸ್ಸನ್ನು ತೊಡಗಿಸಲಾಗದ ಒತ್ತಡದಿಂದ ಕುಗ್ಗುತ್ತಿದ್ದಾರೆ. ಮಕ್ಕಳ ಈ ಪರಿಯ ಮಾನಸಿಕ ಸ್ಥಿತಿಯನ್ನು ಸುಧಾರಿಸಲಾಗದೆ ಶಿಕ್ಷಕರು, ಪೋಷಕರು ಆತಂಕಿತರಾಗಿದ್ದಾರೆ. ಎಳೆಯರನ್ನು ಮೊಬೈಲ್ ವ್ಯಸನದಿಂದ ಮುಕ್ತಗೊಳಿಸಿ ಬೌದ್ಧಿಕ ವಿಕಾಸಕ್ಕೆ ಅನುವು ಮಾಡಿಕೊಡುವುದು ಇಂದಿನ ತುರ್ತು ಅಗತ್ಯವೂ ಹೌದು.

‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಎಂಬ ಧ್ಯೇಯದೊಂದಿಗೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಜೊತೆಗೆ ಅವರ ಜ್ಞಾನವಿಕಾಸದ ದಿಸೆಯಲ್ಲಿ ಬೋಧಕರ ಇಂತಹ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಶಾಲೆಗಳು ಪಠ್ಯವನ್ನಷ್ಟೇ ಬೋಧಿಸುವ, ಪರೀಕ್ಷೆಗಾಗಿ ಉರು ಹೊಡೆಸುವ, ಅಂಕಗಳ ರೂಪದಲ್ಲಿ ಉತ್ತಮ ಫಲಿತಾಂಶ ನೀಡಿ ಬೀಗುವ ಕೇಂದ್ರಗಳಾಗಬಾರದು. ಜೀವನ ಕೌಶಲಗಳ ಕಲಿಕೆ ಜೊತೆಗೆ ಸಮಗ್ರ ವಿಕಾಸಕ್ಕೆ ನೆರವಾಗುವ ವೇದಿಕೆಗಳಾಗಬೇಕು. ಇದಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ಎಲ್ಲಾ ಮಕ್ಕಳು ಪಾಲ್ಗೊಳ್ಳುವಂತೆ ಹುರಿದುಂಬಿಸಿ ಪ್ರೋತ್ಸಾಹಿಸಿ
ದಾಗಲಷ್ಟೆ ವ್ಯಕ್ತಿತ್ವ ವಿಕಸನ ಸಾಧ್ಯ. ಹೀಗೆ ತರಬೇತಾದ ಮಕ್ಕಳೇ ಮುಂದೆ ಯಶಸ್ಸನ್ನು ಆಲಿಂಗಿಸುವವರು. ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಅಳುಕಿಲ್ಲದೆ ಧೈರ್ಯದಿಂದ ಎದುರಿಸುವವರು. ನಮ್ಮಲ್ಲಿ ಹಲವಾರು ಉತ್ಸಾಹಿ, ಸೃಜನಶೀಲ ಶಿಕ್ಷಕರು ಇಂತಹ ಹತ್ತಾರು ಪ್ರಯೋಗಗಳ ಮೂಲಕ ತಮ್ಮ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ.

ಯಶಸ್ಸನ್ನು ಅಂಕಗಳಲ್ಲಿ ಮಾತ್ರ ಅಳೆಯುವ ಇಂದಿನ ದಿನಗಳಲ್ಲಿ ಮಕ್ಕಳನ್ನು ಪಠ್ಯದ ಜೊತೆಗೆ ಪಠ್ಯೇತರ ಓದಿನತ್ತಲೂ ಸೆಳೆಯುವ ಅಗತ್ಯವಿದೆ. ಸೃಜನಶೀಲ, ಸಾಂಸ್ಕೃತಿಕ, ಸಂಸ್ಕಾರಯುತ, ಸಾಹಿತ್ಯಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಇದು ಸಹಕಾರಿ. ಹೋಳು ಹೋಳಾದ ಈ ಹೊತ್ತಿನ ಕುಟುಂಬ ವ್ಯವಸ್ಥೆಯಲ್ಲಿ ಶಾಲೆಗಳಲ್ಲಿ ಮಾತ್ರ ಇಂತಹ ಪ್ರೇರಣೆ ಹೊಮ್ಮಿಸಲು ಸಾಧ್ಯ. ನಮ್ಮ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ
ಯಾಗುವಂತಹ ವಾತಾವರಣ ನಿರ್ಮಿಸುವುದು
ಅಧ್ಯಾಪಕರದ್ದಷ್ಟೇ ಅಲ್ಲ ಸಮಾಜದ ಹೊಣೆಗಾರಿಕೆಯೂ ಹೌದು. ಹಿಂಜರಿಕೆ, ಮುಜುಗರ, ಕೀಳರಿಮೆ,
ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಅಗತ್ಯ ಕೌಶಲಗಳನ್ನು ಕಲಿಸಿದಾಗ ಸ್ಪರ್ಧೆಯಲ್ಲಿ ಮುನ್ನುಗ್ಗಿ ಜಯ ಪಡೆಯುವಮನೋದಾರ್ಢ್ಯವನ್ನು ಖಂಡಿತವಾಗಿಯೂ
ಬೆಳೆಸಿಕೊಳ್ಳಬಲ್ಲರು.

ಪಾಠ-ಪ್ರವಚನದ ಜೊತೆ ಜೊತೆಗೆ ಮಕ್ಕಳ ಬೌದ್ಧಿಕ ವಿಕಸನಕ್ಕೆ ವಿಶಿಷ್ಟ ರೀತಿಯಲ್ಲಿ ಶ್ರಮಿಸುತ್ತಿರುವ ತುಮಕೂರು ಜಿಲ್ಲೆ, ಮಧುಗಿರಿಯ ಭಕ್ತರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಘು ಅವರ ಕಾರ್ಯವೈಖರಿ ನಿಜಕ್ಕೂ ಮಾದರಿ. ಜ್ಞಾನಾರ್ಜನೆಯ ಜೊತೆಗೆ ತಾಯ್ನುಡಿಯನ್ನು ಉಳಿಸಿ, ಬೆಳೆಸುವ ಇಂತಹ ಕ್ರಿಯಾಶೀಲತೆಯನ್ನು ನಿಜಾರ್ಥದಲ್ಲಿ ಶಿಲ್ಪಿಗಳ
ಸ್ಥಾನದಲ್ಲಿರುವ ನಮ್ಮೆಲ್ಲಾ ಶಿಕ್ಷಕವೃಂದ ಅಳವಡಿಸಿ
ಕೊಂಡಾಗ ಮಾತ್ರ ಸಂವೇದನಾಶೀಲ ವೈಚಾರಿಕ ನಾಡಿನ ನಿರ್ಮಾಣ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT