ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಆಯ್ಕೆಯ ಮಾದರಿ: ಮೆರೆಯಲಿ ವಿವೇಕ

ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ನಮಗಿಂತ ತೀರಾ ಕೆಳಗಿರುವ ರಾಜ್ಯಗಳನ್ನೇ ನಾವು ಮಾದರಿಯಾಗಿ ಪರಿಗಣಿಸುವುದು ಎಷ್ಟು ಸರಿ?
Last Updated 23 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ತಮ್ಮ ಅಭಿವೃದ್ಧಿ ಮಾದರಿಯನ್ನು ದೇಶದ ಮುಂದಿಡಲು ಕೆಲವು ರಾಜ್ಯಗಳು ಬಹಳಷ್ಟು ಉತ್ಸುಕವಾಗಿವೆ. ತಾವು ಅನುಸರಿಸುತ್ತಿರುವ ಆಡಳಿತ ಮಾದರಿಯೇ ಉತ್ತಮವಾದುದು ಎಂಬ ಅಭಿಪ್ರಾಯವನ್ನು ಜನರ ಮನಸ್ಸಿನಲ್ಲಿ ನೆಲೆಯೂರಿಸಲು ದೆಹಲಿ, ಉತ್ತರಪ್ರದೇಶ, ತೆಲಂಗಾಣದಂತಹ ರಾಜ್ಯ ಸರ್ಕಾರಗಳು ಪೈಪೋಟಿಗೆ ಇಳಿದಿವೆ. ಇದಕ್ಕಾಗಿ ಬಹಳಷ್ಟು ಸಂಪನ್ಮೂಲಗಳನ್ನೂ ವ್ಯಯಿಸುತ್ತಿವೆ.

ಹೀಗೆ ಕೆಲ ರಾಜ್ಯ ಸರ್ಕಾರಗಳು ತಮ್ಮದೇ ಮಾದರಿಗೆ ಪ್ರಚಾರ ನೀಡಲು ಕಾರ್ಯತಂತ್ರ ರೂಪಿಸುತ್ತಿದ್ದರೆ, ನಮ್ಮ ರಾಜ್ಯ ಸರ್ಕಾರಕ್ಕೆ ತಾನು ನೆಚ್ಚಿಕೊಂಡಿರುವ ಆಡಳಿತ ಮತ್ತು ಅಭಿವೃದ್ಧಿ ಮಾದರಿ ಕುರಿತು ವಿಶ್ವಾಸ ಇರುವಂತೆ ತೋರುತ್ತಿಲ್ಲ. ಹೀಗಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೆಲ ಸಚಿವರು ಆಗಾಗ ‘ಉತ್ತರಪ್ರದೇಶ ಮಾದರಿ’ ಅಥವಾ ‘ಯೋಗಿ ಮಾದರಿ’ಯನ್ನು, ಅಪರೂಪಕ್ಕೆ ಒಮ್ಮೊಮ್ಮೆ ‘ಗುಜರಾತ್ ಮಾದರಿ’ಯನ್ನು ರಾಜ್ಯದಲ್ಲೂ ಅನುಷ್ಠಾನಕ್ಕೆ ತರುವ ದಿಸೆಯಲ್ಲಿ ಚಿಂತಿಸಲಾಗುವುದು ಎಂದು ಹೇಳತೊಡಗಿದ್ದಾರೆ.

ಅಸಲಿಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವವ
ರಿಗೆ ಮಾದರಿಯಾಗಬೇಕಿರುವುದು ಏನು? ಅವರು ಮೊದಲು ಪರಿಗಣಿಸಬೇಕಿರುವುದು ಸಂವಿಧಾನವು ಮುಂದಿಡುವ ಆಡಳಿತ ಮಾದರಿಯನ್ನಲ್ಲವೇ?

ಗುಣಮಟ್ಟ ನಿರ್ವಹಣೆ ವಿಷಯದಲ್ಲಿ ಇತರರನ್ನು ನೋಡಿ ಕಲಿಯಲು ಅನುಸರಿಸ
ಬೇಕಿರುವ ಮಾನದಂಡಗಳನ್ನು ‘ಪ್ರಮಾಣೀಕರಣ ನಿಗದಿ’ (ಬೆಂಚ್‍ಮಾರ್ಕಿಂಗ್‍) ಎಂಬ ಪರಿಕಲ್ಪನೆ ಮನಗಾಣಿಸುತ್ತದೆ. ರಾಜ್ಯ ಸರ್ಕಾರದ ಆಡಳಿತ ಗುಣಮಟ್ಟ ಸುಧಾರಣೆಗೆ ನಿಜಕ್ಕೂ ಇಚ್ಛಾಶಕ್ತಿ ಇದ್ದಲ್ಲಿ, ಮುಖ್ಯಮಂತ್ರಿ ಹಾಗೂ ಸಚಿವರು ‘ನಿರ್ದಿಷ್ಟ ಮಾದರಿ’ಯ ಆಯ್ಕೆಗೂ ಅನುಸರಿಸಬೇಕಿರುವುದು ಬೆಂಚ್‍ಮಾರ್ಕಿಂಗ್‌ ಮೂಲಭೂತ ನಿಯಮಗಳನ್ನೇ. ಬೆಂಚ್‍ಮಾರ್ಕಿಂಗ್ ಮಾಡಲು ಹೊರಡುವವರು ಮೊದಲಿಗೆ ಯಾರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳ
ಬೇಕು ಎಂಬುದನ್ನು ನಿರ್ಧರಿಸಬೇಕು.

ನಮಗಿಂತ ಉತ್ತಮ ಗುಣಮಟ್ಟದ ಉತ್ಪನ್ನ ತಯಾರಿಸಲು, ಸೇವೆ ಒದಗಿಸಲು, ಆಡಳಿತ ನಿರ್ವಹಿಸಲು ಇತರರಿಗೆ ಹೇಗೆ ಸಾಧ್ಯವಾಗುತ್ತಿದೆ? ಅವರಲ್ಲಿ ಸಾಧ್ಯ ವಿರುವುದನ್ನು ನಮ್ಮಲ್ಲೂ ಸಾಧ್ಯವಾಗಿಸಲಿಕ್ಕೆ ಯಾವ ರೀತಿಯ ಬದಲಾವಣೆಗಳಿಗೆ ನಮ್ಮನ್ನು ಒಡ್ಡಿಕೊಳ್ಳ
ಬೇಕು ಎಂಬ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳುವಂತೆ ‘ಬೆಂಚ್‍ಮಾರ್ಕಿಂಗ್’ ಪರಿಕಲ್ಪನೆ ಸೂಚಿಸುತ್ತದೆ. ಇದನ್ನೇ ಆಧರಿಸಿ ‘ಆಡಳಿತ ಮಾದರಿ’
ಗಳನ್ನು ಆಯ್ದುಕೊಳ್ಳಲು ನಮ್ಮ ರಾಜ್ಯ ಸರ್ಕಾರ ಮುಂದಾಗುವುದಾದರೆ, ಅದು ಮೊದಲಿಗೆ ಗಮನಿಸ ಬೇಕಿರುವುದು ನೀತಿ ಆಯೋಗ ಪ್ರಕಟಿಸುವ ‘ಸುಸ್ಥಿರ ಅಭಿವೃದ್ಧಿ ಗುರಿ’ ಸಾಧನೆಯಲ್ಲಿ ಯಾವೆಲ್ಲ ರಾಜ್ಯಗಳು ಮುಂದಿವೆ ಎಂಬುದನ್ನು.

ಸಾಮಾಜಿಕ, ಆರ್ಥಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ಮಾನದಂಡಗಳ ಆಧಾರದಲ್ಲಿ ತಯಾರಿಸುವ ‘ಸುಸ್ಥಿರ ಅಭಿವೃದ್ಧಿ ಗುರಿ’ ಸಾಧನೆ ಪಟ್ಟಿಯು ನೀತಿ ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯವಿದೆ. 2020-21ರ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ಪಟ್ಟಿಯಲ್ಲಿ ಕರ್ನಾಟಕ 7ನೇ ಸ್ಥಾನದಲ್ಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟದ ಸಚಿವರು ಜಪಿಸುತ್ತಿರುವ ಉತ್ತರ
ಪ್ರದೇಶವು 25ನೇ ಸ್ಥಾನದಲ್ಲಿದ್ದರೆ, ಗುಜರಾತ್ 10ನೇ ಸ್ಥಾನದಲ್ಲಿದೆ. ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ನಮಗಿಂತ ತೀರಾ ಕೆಳಗಿರುವವರನ್ನೇ ನಾವು ಮಾದರಿಯಾಗಿ ಪರಿಗಣಿಸುವುದು ವಿವೇಚನೆ
ಯುಳ್ಳವರು ಕೈಗೊಳ್ಳುವ ತೀರ್ಮಾನವೇ? ಉತ್ತರ
ಪ್ರದೇಶ ಮಾದರಿಗಿಂತ ಕರ್ನಾಟಕ ಮಾದರಿಯೇ ಉತ್ತಮವಾಗಿದೆ ಎಂಬುದನ್ನು ಅಂಕಿಅಂಶಗಳೇ ಹೇಳುತ್ತಿರುವಾಗಲೂ, ನಮ್ಮನ್ನು ಆಳುವವರು ಏಕೆ ತಮ್ಮದೇ ಮಾದರಿಯನ್ನು ಮೂಲೆಗುಂಪಾಗಿಸಿ ಅಧಃಪತನದ ಮಾದರಿಯ ಹಿಂದೆ ಓಡಲು
ಹವಣಿಸುತ್ತಿದ್ದಾರೆ?

ನಮ್ಮ ಗುರಿಯು ಸುಸ್ಥಿರ ಅಭಿವೃದ್ಧಿ ಹೊಂದುವು
ದಾಗಿದ್ದರೆ ನಾವು ಅನುಸರಿಸಬೇಕಿರುವುದು ಈ ಪಟ್ಟಿಯಲ್ಲಿ ಕರ್ನಾಟಕಕ್ಕಿಂತ ಮೇಲಿರುವ ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಉತ್ತರಾಖಂಡ, ಗೋವಾ ಸರ್ಕಾರಗಳು ಅಳವಡಿಸಿ
ಕೊಂಡಿರುವ ಮಾದರಿಗಳನ್ನು. ಉತ್ತರ
ಪ್ರದೇಶ ಮಾದರಿಯ ಜಪ ಮಾಡುತ್ತಿರುವವರು ಎಂದಾದರೂ ಈ ರಾಜ್ಯಗಳ ಮಾದರಿ ಅನುಸರಿಸುವ
ಮಾತನಾಡಿದ್ದಾರೆಯೇ?

ನಮ್ಮ ರಾಜ್ಯವನ್ನು ಆಳುವವರು ಯೋಗಿ ಆಡಳಿತ ಮಾದರಿಯಿಂದ ಕಲಿಯಲು ಹೊರಟಿರುವುದು ಏನನ್ನು? ಪೊಲೀಸರೇ ನ್ಯಾಯಾಧೀಶರ ಸ್ಥಾನದಲ್ಲಿ ನಿಂತು, ಆರೋಪ ಸಾಬೀತಾಗುವ ಮುನ್ನವೇ ಆರೋಪಿಗಳನ್ನು ಕೊಲ್ಲುವುದನ್ನೇ? ಈ ಅನುಮಾನ ಮೂಡಲು ಕಾರಣ, ಕಳೆದ ಎರಡು ವರ್ಷಗಳಲ್ಲಿ, ಪೊಲೀಸರ ವಶದಲ್ಲಿದ್ದಾಗಲೇ ಆರೋಪಿಗಳು
ಸಾವನ್ನಪ್ಪಿರುವ ಅತ್ಯಧಿಕ ಪ್ರಕರಣಗಳು ಸಂಭವಿಸಿರು ವುದು ಉತ್ತರಪ್ರದೇಶದಲ್ಲಿ. ಎರಡು ವರ್ಷಗಳಲ್ಲಿ ಅಲ್ಲಿ 952 ಮಂದಿ ಪೊಲೀಸ್‌ ವಶದಲ್ಲಿದ್ದಾಗ ಸತ್ತಿದ್ದರೆ, ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಸಂಭವಿಸಿರುವುದು 18 ಸಾವುಗಳು. ಈ ಸಂಖ್ಯೆಯೇ ಎಲ್ಲವನ್ನೂ
ಹೇಳುವಂತಿದೆ.

ಬೇರೆಯವರೊಂದಿಗೆ ಹೋಲಿಸಿಕೊಳ್ಳುವ ಮುನ್ನ ತಮಗಿರುವ ಶಕ್ತಿ, ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಕುರಿತು ಅರಿಯಬೇಕಲ್ಲವೇ? ಜನಸಾಮಾನ್ಯರಲ್ಲೂ ಸಹಜವಾಗಿಯೇ ಬೇರೂರಿರುವ ವಿವೇಕ, ಯಾರನ್ನು ನೋಡಿ ಕಲಿ ಎಂದು ಹೇಳುತ್ತದೆ. ಹಾಳಾದವರನ್ನೋ ಅಥವಾ ಏಳಿಗೆ ಹೊಂದಿದವರನ್ನೋ? ನಮ್ಮನ್ನು ಆಳುವವರ ವಿವೇಕಕ್ಕೆ ಏನಾಗಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT