ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನಗರ ಬಡತನ ನಿವಾರಣೆಗೆ ಬೇಕು ಆಸ್ಥೆ

ನಗರ ಬಡವರ ಬಗ್ಗೆ ನೈಜ ಕಾಳಜಿಯಾಗಲೀ ಬಡತನ ನಿವಾರಣೆಗೆ ಸಮರ್ಪಕ ಯೋಜನೆಗಳಾಗಲೀ ಇಲ್ಲ
Last Updated 16 ಅಕ್ಟೋಬರ್ 2022, 23:30 IST
ಅಕ್ಷರ ಗಾತ್ರ

ತಾಲ್ಲೂಕು ಕೇಂದ್ರದ ಕಾಲೇಜೊಂದರಲ್ಲಿ ‘ಪಾವರ್ಟಿ’ (ಬಡತನ) ಕುರಿತು ಪೋಸ್ಟರ್ ಪ್ರಸ್ತುತಿಯ ಸ್ಪರ್ಧೆ ಏರ್ಪಾಡಾಗಿತ್ತು. ವಿದ್ಯಾರ್ಥಿಗಳು ಸಲ್ಲಿಸಿದ ಬಹುಪಾಲು ಪೋಸ್ಟರ್‌ಗಳಲ್ಲಿ ತಲೆ ಕೆದರಿದ, ಹರಿದ ಉಡುಪಿನ, ಮೋಟು ಬೀಡಿ ಸೇದುತ್ತ ಕಟ್ಟೆಯ ಮೇಲೆ ಕೂತಿರುವ, ನಿಸ್ತೇಜ ಕಣ್ಣುಗಳಿಂದ ಆಕಾಶದೆಡೆ ಕಣ್ಣು ನೆಟ್ಟು ಕೂತಿರುವ ಹಳ್ಳಿಯ ಜನರ ಚಿತ್ರಗಳೇ ಇದ್ದವು. ಕೆಲವು ಚಿತ್ರಗಳಲ್ಲಿ ಚಿಂದಿ ಆಯುವ, ಭಿಕ್ಷೆ ಬೇಡುವ ಮಕ್ಕಳು, ವಯಸ್ಕರು ಇದ್ದರು. ಚಿತ್ರಗಳಲ್ಲಿ ದಾಖಲಾಗಿದ್ದ ಹಿನ್ನೆಲೆಯೆಲ್ಲಾ ಹಳ್ಳಿಮಯವಾಗಿತ್ತು. ನಗರದ ಬಡವರ ಬವಣೆ ಕುರಿತ ಒಂದೇ ಒಂದು ಪೋಸ್ಟರ್ ಅಲ್ಲಿರಲಿಲ್ಲ.

ಸರ್ಕಾರಗಳೂ ಅಷ್ಟೆ. ಬಡತನ ಎಂದಾಕ್ಷಣ ನಮ್ಮೆಲ್ಲ ಹಳ್ಳಿಗಳೂ ಅದನ್ನೇ ಹಾಸಿ ಹೊದ್ದು ಮಲಗಿವೆ ಎಂಬಂತೆ ಮಾತನಾಡುತ್ತವೆ. ಅವರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲು, ಸವಲತ್ತು ನೀಡಲು, ಅವರನ್ನು ಬಡತನ ರೇಖೆಯ ಆಸುಪಾಸಿನಲ್ಲೇ ಇರಿಸಲು ಪ್ರಯತ್ನಿಸುತ್ತವೆ. ನಗರಗಳಲ್ಲೂ ಬಡವರಿದ್ದಾರೆ, ಅವರಲ್ಲೂ ಅನಕ್ಷರಸ್ಥರಿದ್ದಾರೆ, ಉದ್ಯೋಗವಿಲ್ಲದೆ, ಘನತೆಯ ಬದುಕು ಬಾಳಲಾಗದೆ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಎಂಬುದು ಗೊತ್ತಿದ್ದರೂ ರಾಜಕಾರಣಿಗಳಿಗೆ, ಪಕ್ಷಗಳಿಗೆ ಅವರ ಅಭ್ಯುದಯದ ಬಗ್ಗೆ ನೈಜ ಕಾಳಜಿಯಾಗಲೀ ಸಮರ್ಪಕ ಯೋಜನೆಗಳಾಗಲೀ ಇಲ್ಲ.

ಬಡತನವು ಕೇವಲ ಆರ್ಥಿಕ ಸ್ವರೂಪದ್ದಲ್ಲ. ಅದು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟ ಬಿಂಬಿಸುವ ಪೌಷ್ಟಿಕತೆ, ಶಿಶು– ವಯಸ್ಕ ಮರಣ ಪ್ರಮಾಣ, ಹೆರಿಗೆ ನಂತರದ ಆರೈಕೆ, ಶಾಲಾ ಶಿಕ್ಷಣದ ಅವಧಿ, ಹಾಜರಾತಿ ಪ್ರಮಾಣ, ಅಡುಗೆ ಇಂಧನ ಸೌಲಭ್ಯ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ವಾಸದ ಮನೆ, ಜೀವನ ನಿರ್ವಹಣೆಗೆ ಸಾಮಾನು ಮತ್ತು ಬ್ಯಾಂಕ್ ಖಾತೆಗಳ ಲಭ್ಯತೆಯ ಅಂಶಗಳನ್ನು ಆಧರಿಸಿ ನಿರ್ಧರಿತವಾಗುತ್ತದೆ.

ಹಳ್ಳಿ- ಪಟ್ಟಣಗಳ ನಿರುದ್ಯೋಗ ಪ್ರಮಾಣ ಗಾಬರಿ ಹುಟ್ಟಿಸುವಷ್ಟು ದೊಡ್ಡದಾಗಿದೆ. ದೇಶದ ನಗರವಾಸಿಗಳ ಜನಸಂಖ್ಯೆ 49 ಕೋಟಿ. ಅಂಕಿಅಂಶಗಳ ಪ್ರಕಾರ, 8.4 ಕೋಟಿ ನಗರವಾಸಿಗಳು ಬಡತನ ರೇಖೆಗಿಂತ ಕೆಳಗಿದ್ದಾರೆ. ದೇಶದ ಒಟ್ಟು ಬಡವರ ಸಂಖ್ಯೆ 35 ಕೋಟಿ. ದಾಖಲೆಗಳ ಪ್ರಕಾರ, ಆರೂವರೆ ಕೋಟಿ ಮಂದಿ ದೇಶದ ಕೊಳೆಗೇರಿಗಳಲ್ಲಿರುವ 1.37 ಕೋಟಿ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ದೇಶದ ಶೇ 65ರಷ್ಟು ನಗರಗಳಲ್ಲಿ ಬೃಹತ್ ಕೊಳೆಗೇರಿಗಳಿವೆ. ರಾಜಧಾನಿ ದೆಹಲಿಯಲ್ಲಿ 6,343 ಕೊಳೆಗೇರಿಗಳಿದ್ದು, 10 ಲಕ್ಷಕ್ಕೂ ಹೆಚ್ಚು ಸಣ್ಣ ಸಣ್ಣ ಜೋಪಡಿಗಳಿವೆ. ದೆಹಲಿಯ ಗಣನೀಯ ಪ್ರಮಾಣದ ಜನಸಂಖ್ಯೆ ಕೊಳೆಗೇರಿಗಳಲ್ಲಿಯೇ ಇದೆ.

2021ರ ಆಗಸ್ಟ್ 3ರಂದು ಲೋಕಸಭೆಯಲ್ಲಿ ಮಂಡಿಸಲಾದ ಕಾರ್ಮಿಕರ ಬಗೆಗಿನ ಸ್ಥಾಯಿ ಸಮಿತಿಯ ವರದಿಯು ನರೇಗಾ ರೀತಿಯಲ್ಲಿ ನಗರದ ಬಡಜನರಿಗೆ ಉದ್ಯೋಗ ಕಲ್ಪಿಸುವ ಯೋಜನೆಯನ್ನು ಜಾರಿಗೆ ತರಲೇಬೇಕಾದ ಅನಿವಾರ್ಯ ಇದೆ ಎಂದಿತ್ತು. ಪ್ರಧಾನಮಂತ್ರಿ ಅವರ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ವಿವೇಕ್‌ ದೇವರಾಯ್‌ ‘ದಿ ಸ್ಟೇಟ್ ಆಫ್ ಇನ್‍ಈಕ್ವಾಲಿಟಿ ಇನ್ ಇಂಡಿಯಾ’ ವರದಿ ಬಿಡುಗಡೆ ಮಾಡಿ, ಸ್ಥಾಯಿ ಸಮಿತಿಯ ಅಭಿಪ್ರಾಯವನ್ನು ಬೆಂಬಲಿಸಿದ್ದರು.

ನಗರದ ಬಡವರಿಗಾಗಿ ಇಂಥದೊಂದು ಯೋಜನೆ ಇರಲೇ ಇಲ್ಲವೆಂದಲ್ಲ. ಐದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ನಗರಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ದಿನಗೂಲಿ ನೀಡುವ 1997ರ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯು 2013ರವರೆಗೆ ಜಾರಿಯಲ್ಲಿತ್ತು. ಚೆನ್ನಾಗಿ ನಡೆಯುತ್ತಿದ್ದ ಯೋಜನೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಕಾರಣಗಳು ಇಂದಿಗೂ ಸ್ಪಷ್ಟವಾಗಿಲ್ಲ. ಈಗ ಮತ್ತೊಂದು ಬಡತನ ನಿರ್ಮೂಲನಾ ದಿನ (ಅ. 17 ) ಬಂದಿದೆ.

ರಾಜಸ್ಥಾನ ಸರ್ಕಾರ ಈಗ ನಗರದ ಬಡಜನರಿಗೆ ಉದ್ಯೋಗ ಕಲ್ಪಿಸಲು ನರೇಗಾ ಮಾದರಿಯ ಇಂದಿರಾ ಗಾಂಧಿ ಅರ್ಬನ್ ಎಂಪ್ಲಾಯ್‌ಮೆಂಟ್ ಸ್ಕೀಮ್ (ಐಜಿಯುಇಎಸ್‌) ಪ್ರಾರಂಭಿಸಿದೆ. ನಗರದ ಬಡವರೆಲ್ಲರಿಗೂ ರಾಜ್ಯ ಸರ್ಕಾರ ಪ್ರತ್ಯೇಕವಾದ ಜನ್ ಆಧಾರ್ ಕಾರ್ಡ್ ಜೊತೆಗೆ ಮನೆಗೊಂದರಂತೆ ಜಾಬ್ ಕಾರ್ಡ್ ನೀಡುತ್ತದೆ. ಕುಟುಂಬದ ಯಾವುದೇ ಸದಸ್ಯ 100 ದಿನಗಳ ಕೆಲಸವನ್ನು ಕೇಳಿ ಪಡೆಯಬಹುದು. ಐಜಿಯುಇಎಸ್ ಅಡಿಯಲ್ಲಿ ಕೆಲಸದ ಬೇಡಿಕೆ ಬಂದ 15 ದಿನಗಳಲ್ಲಿ ಅವರಿಗೆ ಕೆಲಸ ಒದಗಿಸಬೇಕೆಂಬ ನಿಯಮವಿದೆ. ಈಗಾಗಲೇ 4 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದು, 2.5 ಲಕ್ಷ ಜನರಿಗೆ ಜಾಬ್ ಕಾರ್ಡ್ ನೀಡಲಾಗಿದೆ.

ನರೇಗಾದಂತೆ ಈ ಯೋಜನೆ 100 ದಿನಗಳ ಕೆಲಸದ ಗ್ಯಾರಂಟಿ ಕೊಡುವುದಿಲ್ಲ. ಕೆಲಸ ಇಲ್ಲದಿರುವಾಗ ಭತ್ಯೆ ನೀಡಲಾಗುವುದೇ ಎಂಬ ಬಗ್ಗೆ ಮಾಹಿತಿ ಇಲ್ಲ. ಯೋಜನೆಯ ಅನುಷ್ಠಾನದಲ್ಲಿ ಸಾರ್ವಜನಿಕರಿಗಾಗಲೀ ಸರ್ಕಾರೇತರ ಸಂಸ್ಥೆಗಳಿಗಾಗಲೀ ಯೋಜನೆಯ ಗುರುತಿಸುವಿಕೆ, ಆಯ್ಕೆ ಮತ್ತು ಅನುಮೋದನೆಯಲ್ಲಿ ಯಾವುದೇ ಪಾತ್ರವಿಲ್ಲ. ಸ್ವರ್ಣಜಯಂತಿ ಯೋಜನೆಯಲ್ಲಿ ಸಮುದಾಯ ಅಭಿವೃದ್ಧಿ ಸಂಘಟನೆಗಳಿಗೆ ಯೋಜನೆಯ ಅನುಷ್ಠಾನ ಮತ್ತು ದೇಖರೇಖಿಗೆ, ಮೇಲ್ವಿಚಾರಣೆಗೆ ವಿಪುಲ ಅವಕಾಶಗಳಿದ್ದವು. ಸಾರ್ವಜನಿಕ ಅಭಿಪ್ರಾಯಗಳಿಗೆ ಜಾಗವನ್ನೇ ನೀಡದ ರಾಜಸ್ಥಾನದ ಯೋಜನೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗಲಿದೆ ಎಂಬುದರ ಬಗ್ಗೆ ಈಗಲೇ ಏನನ್ನೂ ಹೇಳಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT