ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನೆನಪು ಮಧುರ, ಆದರೆ...

ಹತ್ತಾರು ವರ್ಷ ಒಂದು ಉದ್ಯೋಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದಾಗ ಭಾವನೆಗಳ ಬಲೆಯಿಂದ ಬಿಡಿಸಿಕೊಳ್ಳುವುದು ಸುಲಭದ ಮಾತಲ್ಲ
Last Updated 19 ಜುಲೈ 2022, 19:31 IST
ಅಕ್ಷರ ಗಾತ್ರ

ಕೆಲವು ವರ್ಷಗಳ ಹಿಂದಿನ ಪ್ರಕರಣ. ಚುನಾವಣಾ ಕರ್ತವ್ಯ. ಮತಗಟ್ಟೆ ಅಧ್ಯಕ್ಷಾಧಿಕಾರಿಯಾಗಿ ಅವರಿಗೆ ಹೊಣೆ. ಮತದಾನಕ್ಕಾಗಿ ಒಬ್ಬರು ಮತಗಟ್ಟೆಯನ್ನು ಪ್ರವೇಶಿಸಿದರು. ಅವರ ಪ್ರಾಯ ಅರವತ್ತು ಮೀರಿತ್ತು. ಅದಾಗಲೇ ಮತಗಟ್ಟೆಯಲ್ಲಿ ಸರದಿ ಸಾಲಿತ್ತು. ಈ ವ್ಯಕ್ತಿ ನೇರವಾಗಿ ಒಳಗೆ ಪ್ರವೇಶಿಸಲು ಮುಂದಾದಾಗ, ಸರದಿಯಲ್ಲಿ ಬರುವಂತೆ ಅಲ್ಲಿದ್ದ ಅಧಿಕಾರಿಯೊಬ್ಬರು ವಿನಂತಿಸಿದರು. ಆ ಮನುಷ್ಯನ ತಾಳ್ಮೆ ಸ್ವಲ್ಪಮಟ್ಟಿಗೆ ತಪ್ಪಿದಂತೆ ಕಾಣಿಸಿತು. ‘ನಾನೂ ಒಬ್ಬ ಅಧಿಕಾರಿಯಾಗಿದ್ದವನು. ಅಧಿಕಾರದಲ್ಲಿದ್ದಾಗ ಹತ್ತಾರು ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿದವನು’ ಎಂದು ಸ್ವಲ್ಪ ಧ್ವನಿ ಏರಿಸಿ ಮಾತನಾಡಿದರು. ಅಷ್ಟರಲ್ಲಿ ಅಧ್ಯಕ್ಷಾಧಿಕಾರಿ ಬಂದು ಅವರ ಮನವೊಲಿಸಿ ಸರದಿಯಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾದರು.

ನಿವೃತ್ತ ಅಧಿಕಾರಿಯೊಬ್ಬರ ಬಗ್ಗೆ ಇತ್ತೀಚೆಗಷ್ಟೆ ಒಬ್ಬರು ಹೇಳಿದ ಘಟನೆ. ಅವರು ನಿವೃತ್ತರಾಗಿ ಒಂದು ವರ್ಷವಾಗಿರಬಹುದು. ಅವರ ಮಾತಿನಲ್ಲಿ ನೋವು ತುಂಬಿದಂತೆ ಕಾಣಿಸುತ್ತಿತ್ತಂತೆ. ಮಾತಿನ ಕೊನೆಗೆ ಹೇಳಿದರಂತೆ. ‘ಇಪ್ಪತ್ತಕ್ಕೂ ಹೆಚ್ಚು ವರ್ಷ ದುಡಿದೆ. ನಾನು ಸೇವೆ ಸಲ್ಲಿಸಿದ ಕಚೇರಿಗೆ ಈಗ ಹೋದರೆ ನನ್ನನ್ನು ಮಾತನಾಡಿಸುವವರಿಲ್ಲ’.
ಇನ್ನೊಬ್ಬ ನಿವೃತ್ತರ ಅನಿಸಿಕೆ ಇನ್ನೂ ವಿಚಿತ್ರ. ‘ನಾನೀಗೀಗ ಕಚೇರಿಗೆ ಹೋಗುವುದನ್ನೇ ಬಿಟ್ಟಿದ್ದೇನೆ. ನನ್ನ ಸಹೋದ್ಯೋಗಿಗಳಾಗಿದ್ದವರು ನನ್ನನ್ನು ಅಪರಿಚಿತನಂತೆ ಕಾಣುತ್ತಾರೆ’.

ಕೆಲವು ನಿವೃತ್ತರದ್ದು ಇನ್ನೊಂದು ವಿಧದ ನೋವು. ‘ನನ್ನೊಂದಿಗೆ ಕೆಲಸ ಮಾಡಿದ ಅನೇಕರು ಒಂದು ಕಾಲ್ ಮಾಡಿ ಅಪರೂಪಕ್ಕಾದರೂ ಯೋಗಕ್ಷೇಮ ವಿಚಾರಿಸುವುದಿಲ್ಲ. ಕೆಲವೊಮ್ಮೆ ನಾನೇ ಕಾಲ್ ಮಾಡುತ್ತೇನೆ. ಸ್ವೀಕರಿಸುವ ಸೌಜನ್ಯವೂ ಅವರಲ್ಲಿಲ್ಲ’.

ಅನೇಕ ನಿವೃತ್ತರಿಗೆ ಈ ವಿಧದ ಹಲವು ಅನುಭವಗಳು ಆಗಿರುತ್ತವೆ. ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ನಿವೃತ್ತಿಯ ನಂತರವೂ ಕಚೇರಿಯ ಮತ್ತು ಸಹೋದ್ಯೋಗಿಗಳಾಗಿದ್ದವರ ಗುಂಗಿನಲ್ಲಿಯೇ ಅವರು ಕಾಲಕಳೆಯಬೇಕೇ? ಯಾರು ಏನಾದರೂ ಮಾಡಿಕೊಳ್ಳಲಿ, ಅದಕ್ಕೇಕೆ ತಲೆಕೆಡಿಸಿಕೊಳ್ಳಬೇಕು? ಮೇಲ್ನೋಟಕ್ಕೆ ಈ ವಾದ ಸರಿಯೆನಿಸಬಹುದು. ಆದರೆ ಭಾವನಾತ್ಮಕವಾದ ಸಂಬಂಧದ ಪ್ರಶ್ನೆ ಬಂದಾಗ ಈ ವಿಧದ ವಾದಗಳು ಸೋಲಬಹುದು.

ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾದಾಗ ಭಾವನೆಗಳ ಬಲೆಯಿಂದ ಬಿಡಿಸಿಕೊಳ್ಳುವುದು ಸುಲಭದ ಮಾತಲ್ಲ. ನಿವೃತ್ತರಾದಾಗ ಏನನ್ನೋ ಕಳೆದುಕೊಂಡಂತೆ ಶೂನ್ಯ ಭಾವ ಆವರಿಸಬಹುದು. ಸಹೋದ್ಯೋಗಿಗಳೊಂದಿಗೆ ಕಾಫಿ, ಚಹಾ ಹೀರುತ್ತಾ ನೋವು ನಲಿವುಗಳನ್ನು ಹಂಚಿಕೊಂಡ ಆ ದಿನಗಳು ಕಾಡಬಹುದು. ಆ ನೆನಪುಗಳನ್ನು ಮರೆಯಲಾಗದೆ ನಿವೃತ್ತಿಯ ನಂತರವೂ ಮನೆಯಲ್ಲಿಯೇ ಕುಳಿತು ಸಹೋದ್ಯೋಗಿಗಳಾಗಿ
ದ್ದವರ ದೂರವಾಣಿ ಕರೆಗಳ ನಿರೀಕ್ಷೆ ಮಾಡಬಹುದು. ಆ ನಿರೀಕ್ಷೆ ಹುಸಿಯಾದಾಗ, ತನ್ನನ್ನು ಕಡೆಗಣಿಸುತ್ತಿರುವರೋ ಎಂಬ ಸಂದೇಹ ಸಹಜವಾಗಿಯೇ ಅವರಲ್ಲಿ ಮೂಡಬಹುದು.

ಇಂಥದ್ದೊಂದು ಭಾವಪ್ರಪಂಚ ರೂಪುಗೊಳ್ಳಲು ಕಾರಣರಾದವರೇ ಪರಿಹಾರವನ್ನೂ ಕಂಡುಕೊಳ್ಳಬೇಕು.ಅರವತ್ತು ಆಯಿತು ಎಂದಾಕ್ಷಣ ನಿವೃತ್ತಿಗೆ ಮಾನಸಿಕವಾಗಿ ಸಜ್ಜಾಗಬೇಕು. ಸೇವೆಯಲ್ಲಿದ್ದಾಗಿನ ದಿನಗಳ ನೆನಪುಗಳು ಮನಸ್ಸಿಗೆ ಭಾರವಾಗದಂತೆ ನೋಡಿಕೊಳ್ಳಬೇಕು. ನೆನಪುಗಳನ್ನು ಒಮ್ಮೆಗೇ ಅಳಿಸಿಹಾಕಲು ಆಗದಿದ್ದರೂ ನಮ್ಮ ಮನಸ್ಸಿನ ನೆಮ್ಮದಿಯನ್ನು ಕದಡುವಷ್ಟರ ಮಟ್ಟಿಗೆ ಅವುಗಳನ್ನು ಬೆಳೆಯಲು ಬಿಡಬಾರದು. ಹಾಗೆಂದು ಈ ಸಮಸ್ಯೆಗೆ ನಿವೃತ್ತರನ್ನೇ ಪೂರ್ತಿಯಾಗಿ ದೂಷಿಸುವಂತಿಲ್ಲ. ಇದರಲ್ಲಿ ಇತರರದ್ದೂ ಪಾತ್ರವಿದೆ. ತಮ್ಮೊಂದಿಗೆ ಅನೇಕ ವರ್ಷ ದುಡಿದ ಸಹೋದ್ಯೋಗಿಯೊಬ್ಬರು
ನಿವೃತ್ತರಾದರು ಎಂದಮಾತ್ರಕ್ಕೆ ಅವರೊಂದಿಗೆ ಏಕಾಏಕಿ ನಂಟು ಕಡಿದುಕೊಳ್ಳುವುದು ಎಷ್ಟು ಸರಿ? ನಿವೃತ್ತರಾದ ಬಳಿಕ ಕೆಲವು ದಿನಗಳ ಮಟ್ಟಿಗಾದರೂ ಅವರ ಯೋಗಕ್ಷೇಮವನ್ನು ವಿಚಾರಿಸಿದರೆ ನಮ್ಮ ಗಂಟೇನು ಹೋಗುತ್ತದೆ? ನಿವೃತ್ತರ ಕರೆಯನ್ನು ಕಿರಿಕಿರಿ ಎಂದು ಭಾವಿಸದೆ ಚುಟುಕಾಗಿಯಾದರೂ ಉತ್ತರಿಸಿದರೆ ಅವರಿಗೆ ಇನ್ನಿಲ್ಲದ ಸಮಾಧಾನ ಸಿಗಬಹುದು. ಅವರು ಎದುರು ಸಿಕ್ಕಿದಾಗ ಅವರಿಂದ ತಪ್ಪಿಸಿಕೊಳ್ಳಲೂ ಹಲವರು ಪ್ರಯತ್ನಿಸುತ್ತಾರೆ. ಮನುಷ್ಯ ಸಂಬಂಧ ಬರೀ ಯಂತ್ರದಂತಲ್ಲ ಅಲ್ಲವೇ?

ನಿವೃತ್ತರು ಅಥವಾ ಹಿರಿಯ ನಾಗರಿಕರ ಈ ಬಗೆಯ ನೋವುಗಳನ್ನು ಅರ್ಥಮಾಡಿಕೊಂಡೋ ಏನೋ ಸರ್ಕಾರವು ಅವರಿಗೆ ನೈತಿಕ ಧೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದೆ. ಅವರು ಯಾವುದೇ ಕಚೇರಿಗಳಿಗೆ ಹೋಗಲಿ ಅಲ್ಲಿ ಅವರನ್ನು ಗೌರವದಿಂದ ಕಾಣಬೇಕೆಂಬ ಆದೇಶವನ್ನು ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ನಿವೃತ್ತ ನೌಕರರನ್ನುದ್ದೇಶಿಸಿ ಭರವಸೆಯ ಮಾತುಗಳನ್ನು ಆಡಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅಧಿಕಾರಸ್ಥರಿಂದ ನಾವು ನಿರೀಕ್ಷಿಸುವುದು ಇಂತಹ ಸಕಾರಾತ್ಮಕವಾದ ನಡೆಯನ್ನೇ ಅಲ್ಲವೆ?

ನಿವೃತ್ತರೊಂದಿಗೆ ಗೌರವದಿಂದ, ಪ್ರೀತಿಯಿಂದ ನಡೆದುಕೊಳ್ಳಬೇಕು. ಅಂತಹ ಹೊಣೆ ಸಮಾಜದ ಮೇಲಿದೆ. ನಿಯಮದಂತೆ ವಯಸ್ಸಿಗೆ ಅನುಗುಣವಾಗಿ ಎಲ್ಲರೂ ಒಂದಲ್ಲ ಒಂದು ದಿನ ಸೇವೆಯಿಂದ ನಿವೃತ್ತ ರಾಗುತ್ತಾರೆ. ಆ ನಂತರವೂ ಬದುಕಿನ ಪಯಣ ದೊಡ್ಡದಿದೆ. ಅದಕ್ಕೆ ಹೊಂದಿಕೊಳ್ಳಲು ಅವರಿಗೆ ನೆರವಾಗುವುದು ಎಲ್ಲರ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT