ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಜಾಗ್ರತೆ... ವ್ಯಾಪಿಸುತ್ತಿದೆ ಮರುಭೂಮಿ

ಮರಳು ಭೂಮಿ ವಿಸ್ತಾರವಾಗುವುದನ್ನು ವೈಜ್ಞಾನಿಕವಾಗಿ ತಡೆಯಲೇಬೇಕಾದ ಅನಿವಾರ್ಯ ಸಂದರ್ಭ ಇದು
Last Updated 16 ಜೂನ್ 2022, 20:30 IST
ಅಕ್ಷರ ಗಾತ್ರ

ಕಳೆದ ತಿಂಗಳು ದೆಹಲಿಗೆ ಹೋಗುವುದಿತ್ತು. ಅಲ್ಲಿನ ಗೆಳೆಯನಿಗೆ ಫೋನ್ ಮಾಡಿ ‘ಹೇಗಿದೆಯಪ್ಪಾ ರಾಜಧಾನಿಯ ಬಿಸಿಲು’ ಎಂದಿದ್ದಕ್ಕೆ, ‘ಬಿಸಿಲಿನ ಜೊತೆ ದೂಳಿನ ಮಳೆಯೂ ಇದೆ, ಮೀಟಿಂಗ್ ಇದೆ ಅಂತ ಬಿಳಿ ಬಟ್ಟೆ ಧರಿಸಿ ಬರಬೇಡ, ಮುಖ ಮೈ ಕವರ್ ಮಾಡುವ ಬಟ್ಟೆ ಇರಲಿ’ ಎಂದು ಎಚ್ಚರಿಸಿದ.

ದೆಹಲಿಯ ಕೆಟ್ಟ ಗಾಳಿಯ ಬಗ್ಗೆ ಗೊತ್ತಿತ್ತು. ಈಗ ಪಕ್ಕದ ರಾಜ್ಯಗಳ ಮರುಭೂಮಿಗಳಿಂದ ಮರಳು, ದೂಳಿನ ಕಣಗಳು ದೆಹಲಿಯ ತುಂಬಾ ವ್ಯಾಪಿಸುತ್ತಿವೆ. ಅರಾವಳಿ ಬೆಟ್ಟ ಸಾಲಿನಲ್ಲಿ ನಿರಂತರ ಗಣಿಗಾರಿಕೆ, ಪಕ್ಕದ ಹರಿಯಾಣ ರಾಜ್ಯದಲ್ಲಿ ಏರುತ್ತಿರುವ ಮರಭೂಮಿಯ ವ್ಯಾಪ್ತಿ ದೆಹಲಿಗೂ ಚಾಚುತ್ತಿದೆ. ಕಳೆದ ಶತಮಾನದಿಂದ ಇಲ್ಲಿಯವರೆಗೆ ಬರ 270 ಕೋಟಿ ಜನರನ್ನು ತೊಂದರೆಗೀಡುಮಾಡಿದೆ. 1.70 ಕೋಟಿ ಜನ ಪ್ರಾಣ ಕಳೆದುಕೊಂಡಿದ್ದಾರೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗ ಬರ ಮತ್ತು ಮರುಭೂಮೀಕರಣದ ಅಡ್ಡಪರಿಣಾಮ ಎದುರಿಸುತ್ತದೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಬರ ಮತ್ತು ಮರುಭೂಮೀಕರಣ ತಡೆಯುವ ದಿನ (ಜೂನ್ 17) ಮತ್ತೆ ಬಂದಿದೆ.

ನಿರಂತರ ಮತ್ತು ಶಾಶ್ವತ ಬರಪೀಡಿತ ಪ್ರದೇಶಗಳು ಮರುಭೂಮಿಗಳಾಗುತ್ತಿರುವ ವಿದ್ಯಮಾನ ಭೂಮಿಯ ಚರಿತ್ರೆಯುದ್ದಕ್ಕೂ ಇದೆ. ಆದರೆ ಪ್ರಕೃತಿಯಲ್ಲಿ ಮಾನವ ಹಸ್ತಕ್ಷೇಪದಿಂದ ನಿರ್ಮಾಣಗೊಳ್ಳುತ್ತಿರುವ ಮರುಭೂಮಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಸತತ ಬರ, ಭೂಮಿಗೆ ಟಾಟಾ ಹೇಳಿರುವ ನೀರಿನ ಪಸೆ, ಒಣಹವೆ, ಅತಿಯಾದ ಉಷ್ಣಾಂಶ, ಬರಡು ನೆಲದಿಂದಾಗಿ ದಿನದಿಂದ ದಿನಕ್ಕೆ ಮರುಭೂಮೀಕರಣ ಜಾಸ್ತಿಯಾಗುತ್ತಿದೆ ಎಂದಿರುವ ಪರಿಸರ ವಿಜ್ಞಾನಿಗಳು, ಸಹಾರ ನಂತರದ ಅತಿದೊಡ್ಡ ಮರುಭೂಮಿಯು ಕರ್ನಾಟಕದ ಕಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ಚಿತ್ರದುರ್ಗದ ಭಾಗಗಳಲ್ಲಿ ರೂಪುಗೊಳ್ಳುತ್ತಿದೆ, ಅದನ್ನು ತಡೆಯಲೇಬೇಕು ಎಂದು ಎಚ್ಚರಿಸಿದ್ದಾರೆ. ಅತಿಯಾದ ಶುಷ್ಕತೆ ಮನೆ ಮಾಡಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಣಪ್ರದೇಶಗಳ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಹಾಸನ, ಚಿಕ್ಕಮಗಳೂರು, ಬೆಂಗಳೂರಿನಂಥ ಮಳೆ ಬೀಳುವ ಜಿಲ್ಲೆಗಳಲ್ಲೂ ಸಣ್ಣದಾಗಿ ಮರುಭೂಮಿ ಪ್ರದೇಶಗಳು ರಚನೆಯಾಗುತ್ತಿವೆ.

ಅತ್ಯಂತ ಕಡಿಮೆ ಮಳೆ ಬೀಳುವ ಜಾಗಗಳೇ ಮರುಭೂಮಿಯ ಉಗಮ ಸ್ಥಾನಗಳು. ವಾತಾವರಣದ ತೇವಾಂಶ ಕಡಿಮೆಯಾಗಿ ಶುಷ್ಕತೆ ಹೆಚ್ಚಿದಂತೆ ಮರುಭೂಮಿಯೂ ಹೆಚ್ಚುತ್ತದೆ. ಇದು ನಿಧಾನವಾಗಿ ಸಂಭವಿಸುವುದರಿಂದ ನಮ್ಮ ಅರಿವಿಗೆ ಬರುವುದೇ ಇಲ್ಲ. ನೀರಿಗಾಗಿ ಅನಿಯಂತ್ರಿತವಾಗಿ ಕೊಳವೆಬಾವಿ ಕೊರೆಯುವುದು, ಇರುವ ಹಸಿರನ್ನು ಜಾನುವಾರುಗಳಿಂದ ಮೇಯಿಸುವುದರಿಂದ ಹುಲ್ಲು ಕಡಿಮೆಯಾಗಿ, ಬೀಳುವ ಅತ್ಯಲ್ಪ ಮಳೆಯೂ ನೆಲಕ್ಕೆ ಇಂಗದೆ ಭೂಮಿ ಒಣಗಿ ನಿಂತು ದೂಳಿನ ಕಣಜವಾಗುತ್ತದೆ. ಹೊಸ ಹುಲ್ಲು ಬೆಳೆಯದೆ ಮಣ್ಣಿನ ಸವಕಳಿಯಾಗಿ ಭೂಮಿ ಫಲವತ್ತತೆ ಕಳೆದುಕೊಂಡು ಬಂಜರಾಗುತ್ತದೆ. ಸಾರ ಕಳೆದುಕೊಂಡ ಭೂಮಿ ಮರುಭೂಮಿಯಾಗುತ್ತದೆ.

ನಿರಂತರವಾಗಿ ಕಡಿಮೆ ಮಳೆ ಪಡೆಯುವ ವಿಶ್ವದ ಅನೇಕ ಪ್ರದೇಶಗಳು ಮರುಭೂಮಿಗಳಾಗುತ್ತಿವೆ. ರಾಜಸ್ಥಾನದ ಮರುಭೂಮಿಯು ಪಕ್ಕದ ಮಧ್ಯಪ್ರದೇಶ, ಗುಜರಾತ್‍ಗೂ ಹಬ್ಬುತ್ತಿದೆ. ನೀರಾವರಿ ಪ್ರದೇಶಗಳು ಅತಿಯಾದ ಜವುಳು ಮಣ್ಣು ಶೇಖರಣೆಯಿಂದಾಗಿ ಬರಡು ಭೂಮಿಗಳಾಗಿ ಬದಲಾಗಿರುವುದೂ ಇದೆ. ದೇಶದ ಹಲವೆಡೆ ನೀರಾವರಿ ಜಮೀನುಗಳು ಈಗ ಫಲವತ್ತತೆ ಕಳೆದುಕೊಂಡು ಬರಡು ನೆಲಗಳಾಗಿವೆ.

ಮರಳು ಭೂಮಿ ವಿಸ್ತಾರವಾಗುವುದನ್ನು ವೈಜ್ಞಾ ನಿಕವಾಗಿ ತಡೆಯಬೇಕು. ಒಣ ಪ್ರದೇಶಗಳಲ್ಲಿ ತ್ವರಿತವಾಗಿ ಬೆಳೆಯುವ, ಕಡಿಮೆ ನೀರು ಬೇಡುವ ಗಿಡಗಳನ್ನು ಯುದ್ಧೋಪಾದಿಯಲ್ಲಿ ಬೆಳೆಸಬೇಕು. ಮರಳಿನ ದಿಬ್ಬಗಳನ್ನು ರಚಿಸಿ, ಅವುಗಳಿಗೆ ಅಂಟಿಕೊಂಡಂತೆ ಕಂದಕ ತೋಡಿ, ಹಾರಿ ಸಾಗುವ ಮರಳನ್ನು ಅಲ್ಲಿಯೇ ತಡೆ ಹಿಡಿಯಬೇಕು. ತೋಡುಗುಂಡಿ ರಚಿಸಿ, ಬಿದ್ದ ಮಳೆಯನ್ನು ಸಂಗ್ರಹಿಸಬೇಕು.

ಮರುಭೂಮೀಕರಣ ತಡೆಗೆ ವಿಶ್ವಸಂಸ್ಥೆ ನೇತೃತ್ವದ ಯುನೈಟೆಡ್ ನೇಷನ್ಸ್ ಕನ್ವೆನ್‍ಷನ್ ಟು ಕಂಬ್ಯಾಟ್ ಡೆಸರ್ಟಿಫಿಕೇಶನ್ ಈ ವರ್ಷದ ಮುಖ್ಯ ಕಾರ್ಯಕ್ರಮವನ್ನು ಸ್ಪೇನ್‍ನಲ್ಲಿ ಸಂಘಟಿಸುತ್ತಿದೆ. ಸಮಸ್ಯೆ ಎದುರಿಸುತ್ತಿರುವ ವಿಶ್ವದ 70 ದೇಶಗಳು ತಮ್ಮ ತಮ್ಮ ದೇಶದ ಅಗತ್ಯದಂತೆ ರಾಷ್ಟ್ರೀಯ ಯೋಜನೆ ರೂಪಿಸಿಕೊಂಡಿವೆ. ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವ ಆಫ್ರಿಕಾ, ತನ್ನ ಉತ್ತರ ಭಾಗದ 20 ದೇಶಗಳನ್ನು ನಿಯೋಜಿಸಿ, ಸಹಾರ ಮರುಭೂಮಿಯ ವಿಸ್ತರಣೆ ತಡೆಯಲು 15 ಕಿ.ಮೀ. ಅಗಲ, 8,000 ಕಿ.ಮೀ. ಉದ್ದದ ಹಸಿರಿನ ಮಹಾಗೋಡೆ ನಿರ್ಮಿಸಲು ₹ 59 ಸಾವಿರ ಕೋಟಿ ವ್ಯಯಿಸುತ್ತಿದೆ. ಕಳೆದ 15 ವರ್ಷಗಳಿಂದ ನಡೆಯುತ್ತಿರುವ ಹಸಿರೀಕರಣದಿಂದ ಅಂತರ್ಜಲ ಹೆಚ್ಚಿದೆ. ಸಹಾರ ಮರುಭೂಮಿ ಹಿಂದೆ ಸರಿಯುತ್ತಿದೆ. ಕೃಷಿಯು ಜನರ ಕೈ ಹಿಡಿದದ್ದರಿಂದ ಆಹಾರ ಭದ್ರತೆ ಸಿಕ್ಕಿದೆ. ನಾವೂ ಆಫ್ರಿಕಾದ ಪ್ರಯತ್ನವನ್ನು ಅನುಸರಿಸಿ, ಪೋರಬಂದರ್‌ನಿಂದ ಪಾಣಿಪತ್‍ವರೆಗೆ ಥಾರ್ ಮರುಭೂಮಿಯ ಅಂಚಿನಲ್ಲಿ 1,400 ಕಿ.ಮೀ. ಉದ್ದದ ಹಸಿರು ಗೋಡೆ ನಿರ್ಮಿಸಲು ಮುಂದಾಗಿದ್ದೇವೆ.

ಒಂದೆಡೆ, ಮಳೆಕಾಡು ಹೊಂದಿರುವ ಅನೇಕ ದೇಶಗಳು ಅಭಿವೃದ್ಧಿಗಾಗಿ ಕಾಡು ಸವರಿ ಹಾಕುತ್ತಿವೆ. ಇನ್ನೊಂದೆಡೆ, ಮರುಭೂಮಿಯ ಅಂಚುಗಳನ್ನು ಹಸಿರಾಗಿಸುವ ಕೆಲಸವೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT