ಮಂಗಳವಾರ, ನವೆಂಬರ್ 19, 2019
22 °C
ಕಾರ್ಡ್‌ ಪಡೆಯಲು ಇರುವ ಮಾನದಂಡವು ಕಂದಾಯ ಇಲಾಖೆಯ ಪ್ರಮಾಣಪತ್ರವನ್ನು ಅವಲಂಬಿಸಿದೆ. ಹಾಗಾದರೆ ತಪ್ಪು ಯಾರದು...?

ಬಿಪಿಎಲ್‌ ಕಾರ್ಡ್: ದುರ್ಬಳಕೆ ಹೇಗೆ?

Published:
Updated:
Prajavani

ಅಕ್ರಮವಾಗಿ ಪಡೆದಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಹಿಂದಿರುಗಿಸದಿದ್ದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ಆಹಾರ ಇಲಾಖೆ ಎಚ್ಚರಿಸಿದ್ದರ ಪರಿಣಾಮವಾಗಿ, ರಾಜ್ಯದಲ್ಲಿ ಸಾವಿರಾರು ಮಂದಿ ಬಿಪಿಎಲ್‌ ಕಾರ್ಡ್‌ಗಳನ್ನು ಇತ್ತೀಚೆಗೆ ಹಿಂದಿರುಗಿಸಿದ್ದಾರೆ. ಆದರೆ ಅನರ್ಹರು ಹೀಗೆ ಬಿಪಿಎಲ್‌ ಕಾರ್ಡ್‌ ಪಡೆದಿದ್ದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ. ಮಾನದಂಡಗಳನ್ನು ಗಾಳಿಗೆ ತೂರಿ ಬಿಪಿಎಲ್‌ ಕಾರ್ಡ್‌ ವಿತರಿಸುವ ಅಧಿಕಾರಿಗಳ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಾರ್ಡ್‌ ಪಡೆಯಲು ಮೊದಲು ಖಾಸಗಿ ಸೇವಾ ಕೇಂದ್ರದಲ್ಲಿ ಆಧಾರ್‌ ಬಯೊಮೆಟ್ರಿಕ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ. ನಂತರ ಈ ಅರ್ಜಿ ಸಂಖ್ಯೆಯು ಆಹಾರ ನಿರೀಕ್ಷಕರಿಗೆ ಹೋಗುತ್ತದೆ. ಬಳಿಕ ಆಹಾರ ನಿರೀಕ್ಷಕರು ನಿವಾಸಿ ಇರುವ ಸ್ಥಳಕ್ಕೆ ತೆರಳಿ, ಅವರು ಕಾರ್ಡ್‌ ಪಡೆಯಲು ಅರ್ಹರೋ ಅಲ್ಲವೋ ಎಂಬುದನ್ನು ಪರಿಶೀಲಿಸುತ್ತಾರೆ. ಹಿಂದೆ ಗ್ರಾಮ ಲೆಕ್ಕಾಧಿಕಾರಿ ನೀಡಿದ ವರದಿ ಆಧರಿಸಿ ಆಹಾರ ನಿರೀಕ್ಷಕರು ಅನುಮೋದಿಸಿ, ಸ್ಥಳದಲ್ಲಿಯೇ ತಾತ್ಕಾಲಿಕವಾಗಿ ಕಾರ್ಡ್‌ ಮುದ್ರಿಸಿಕೊಡುತ್ತಿದ್ದರು.

ಬಿಪಿಎಲ್‌ ಕಾರ್ಡ್‌ ಪಡೆಯಲು ಇರುವ ಮಾನದಂಡವು ಕಂದಾಯ ಇಲಾಖೆ ನೀಡುವ ಪ್ರಮಾಣಪತ್ರದ ಮೇಲೆ ನಿಂತಿದ್ದು, ಇಲ್ಲಿ ತಪ್ಪು ಯಾರದು ಎಂಬುದು ಯಕ್ಷಪ್ರಶ್ನೆಯಾಗಿದೆ. ₹1.2 ಲಕ್ಷ ಆದಾಯದ ಒಳಗೆ ಇರುವ ಪ್ರಮಾಣಪತ್ರವನ್ನು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಯ ಸ್ಥಳ ಪರಿಶೀಲನಾ ವರದಿ ಆಧರಿಸಿ ತಹಶೀಲ್ದಾರ್‌ ನೀಡಬೇಕು. ವಾಸ್ತವದಲ್ಲಿ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ಅಧಿಕಾರಿ ಸ್ಥಳ ಪರಿಶೀಲನೆ ನಡೆಸದೇ ಸಲ್ಲಿಸಿದ ದಾಖಲಾತಿ ನೋಡಿ, ಒಮ್ಮೊಮ್ಮೆ ಅದನ್ನೂ ನೋಡದೆ ಲಂಚ ಪಡೆದು ವರದಿ ನೀಡಲಾಗುತ್ತದೆ. ಪ್ರಮಾಣಪತ್ರದ ಸಂಖ್ಯೆಯನ್ನು ಲಗತ್ತಿಸಿದಾಕ್ಷಣ ಆಹಾರ ಇಲಾಖೆಗೆ ಮಾಹಿತಿ ಹೋಗುತ್ತದೆ. ಈ ಮಾಹಿತಿಯನ್ನು ಆಧರಿಸಿ, ಎಷ್ಟೋ ಬಾರಿ ಕಚೇರಿಯಲ್ಲೇ ಕುಳಿತು ಆಹಾರ ನಿರೀಕ್ಷಕರು ಅನುಮೋದನೆ ನೀಡಿಬಿಡುತ್ತಾರೆ.

ಕಾರು ಮಾಲೀಕರ ಮಾಹಿತಿಯು ಆರ್‌ಟಿಒದಲ್ಲಿ ಲಭ್ಯವಿರುತ್ತದೆ. ಮಹಡಿ ಮನೆ ಹೊಂದಲು ಅಗತ್ಯವಾದ ಮಂಜೂರಾತಿಯನ್ನು ಇ–ಸ್ವತ್ತಿನ ರೂಪದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳು ನೀಡಿರುತ್ತವೆ. ಎಕರೆಗಟ್ಟಲೆ ಜಮೀನು ಹೊಂದಿರುವವರ ಆರ್‌ಟಿಸಿ ಮಾಹಿತಿಯೂ ಗಣಕೀಕೃತವಾಗಿರುತ್ತದೆ.

ಹೀಗಾಗಿ, ಬಿಪಿಎಲ್‌ಗಾಗಿ ಅರ್ಜಿ ಸಲ್ಲಿಸಿರುವವರು ಇಂತಹ ಸವಲತ್ತುಗಳನ್ನೆಲ್ಲ ಹೊಂದಿ ಆರ್ಥಿಕವಾಗಿ ಸಬಲರಾಗಿದ್ದಾರೋ ಇಲ್ಲವೋ ಎಂಬುದನ್ನು ಸ್ಥಳ ಪರಿಶೀಲನೆ ನಡೆಸಿ ತಿಳಿದುಕೊಳ್ಳಬಹುದು. ಹೀಗೆ ಕಂದಾಯ ಇಲಾಖೆ ತನ್ನ ವ್ಯಾಪ್ತಿಯಲ್ಲಿನ ಅಧಿಕಾರವನ್ನು ಪರಿಣಾಮಕಾರಿಯಾಗಿ ಬಳಸಿದರೆ, ಸರ್ಕಾರಿ ಸೌಲಭ್ಯಗಳು ಅನರ್ಹರಿಗೆ ದಕ್ಕದಂತೆ ನೋಡಿಕೊಳ್ಳಬಹುದು.

ಕೋಟೆ ಲೂಟಿ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ, ಆಗೊಮ್ಮೆ ಈಗೊಮ್ಮೆ ಸರ್ಕಾರ ಎಚ್ಚೆತ್ತು, ಅಕ್ರಮ ಬಿಪಿಎಲ್‌ ಕಾರ್ಡ್‌ದಾರರ ವಿರುದ್ಧ ಕ್ರಮದ ಬೆದರಿಕೆ ಒಡ್ಡುತ್ತದೆ. ಆಗ ‘ಯಾಕೆ ತಲೆನೋವು’ ಎಂದು ಕೆಲವರು ಹಿಂದಿರುಗಿಸಿದರೆ, ಮತ್ತೆ ಕೆಲವರು ‘ಅದೇನು ಮಾಡಿಕೊಳ್ಳುತ್ತಾರೋ ನೋಡೋಣ’ ಎಂದುಕೊಂಡು ಸುಮ್ಮನಾಗಿಬಿಡುತ್ತಾರೆ. ಬಿಪಿಎಲ್‌ ಕಾರ್ಡ್‌ಗಾಗಿ ಮಧ್ಯವರ್ತಿಗಳ ಲಾಬಿ ಹಾಗೂ ದುಡ್ಡಿನ ಆಮಿಷವೊಡ್ಡಿ ಸಲ್ಲಿಕೆಯಾದ ಅರ್ಜಿಗಳು ಸಲೀಸಾಗಿ ಸ್ವೀಕೃತವಾಗಿರುತ್ತವೆ. ನೇರವಾಗಿ ಸಲ್ಲಿಸಿದ ಅರ್ಜಿಗಳು ಆಹಾರ ಇಲಾಖೆಯ ಮೇಜಿನಲ್ಲೇ ದೂಳು ಹಿಡಿಯುತ್ತಿರುತ್ತವೆ. ಇದು ಅರ್ಹ ಫಲಾನುಭವಿಗಳನ್ನು ಹೈರಾಣಾಗಿಸುತ್ತಿದೆ.

ಅನ್ನಭಾಗ್ಯ ಯೋಜನೆಯ ಅನ್ವಯ ಕಾರ್ಡ್‌ನಲ್ಲಿನ ಸದಸ್ಯರಿಗೆ ತಲಾ 7 ಕೆ.ಜಿ. ಅಕ್ಕಿ, ಅಂತ್ಯೋದಯ ಕಾರ್ಡ್‌ಗೆ 35 ಕೆ.ಜಿ. ಅಕ್ಕಿ ನೀಡಲಾಗುತ್ತದೆ. ಇದಿಷ್ಟನ್ನೇ ಲೆಕ್ಕ ಹಾಕಿದರೂ ಅನರ್ಹ ಬಿಪಿಎಲ್‌ ಕಾರ್ಡ್‌ಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿರುವುದು ತಿಳಿಯುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಲೂ ಬಿಪಿಎಲ್‌ ಕಾರ್ಡ್‌ ಅನ್ನು ಉಪಯೋಗಿಸಲಾಗುತ್ತಿದ್ದು, ಇದರಿಂದಲೂ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ.

ಅಂಚೆ ಇಲಾಖೆಯಲ್ಲಿ ಪಿಂಚಣಿ ಹಣಕ್ಕೆ ಆನ್‌ಲೈನ್‌ ಆಧಾರಿತವಾಗಿ ಮೊಬೈಲ್‌ನಲ್ಲಿ ವಿತರಣಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಫಲಾನುಭವಿ ಇರುವೆಡೆ ಹೋಗಿ ಹಣ ಪಾವತಿಸಬೇಕಾಗುತ್ತದೆ. ಈ ಬಗ್ಗೆ ಜಿಪಿಎಸ್‌ನಲ್ಲಿ ಮಾಹಿತಿ ದಾಖಲಾಗಿರುತ್ತದೆ. ಎಲ್ಲಿ ಎಷ್ಟು ಹೊತ್ತಿಗೆ ಪಾವತಿಸಲಾಗಿದೆ, ಯಾವ ಸ್ಥಳದಲ್ಲಿ ಎಂಬುದೂ ಅದರಲ್ಲಿ ನಮೂದಾಗಿರುತ್ತದೆ. ಗ್ರಾಹಕರಿಂದ ದೂರುಗಳು ಬಂದ ಸಂದರ್ಭದಲ್ಲಿ ಇದು ನೆರವಾಗಲಿದ್ದು, ಕೆಲಸದಲ್ಲಿನ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲೂ ಸಹಕಾರಿಯಾಗಿದೆ. ಅಂತೆಯೇ ಆದಾಯ ಪ್ರಮಾಣಪತ್ರ, ಬಿಪಿಎಲ್‌ ಪಡಿತರ ಚೀಟಿ ಪಡೆಯಬಯಸುವವರ ನಿವಾಸಗಳಿಗೆ ಅಧಿಕಾರಿಗಳು ತೆರಳಿ, ನೆರೆಹೊರೆಯವರಿಂದ ಮಾಹಿತಿ ಕಲೆ ಹಾಕಿದರೆ ಅರ್ಜಿದಾರರ ವಾಸ್ತವ ಸ್ಥಿತಿಗತಿ ತಿಳಿಯುತ್ತದೆ. ಆಗ, ಅನರ್ಹರ ಅರ್ಜಿ ಸ್ಥಳದಲ್ಲೇ ತಿರಸ್ಕೃತವಾಗುತ್ತದೆ. ಇಷ್ಟಾಗಿಯೂ ಅನರ್ಹ ಕಾರ್ಡ್‌ದಾರರು ಪತ್ತೆಯಾದಲ್ಲಿ, ಅದಕ್ಕೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡುವ ನಿಯಮ ರೂಪಿಸಿ, ಜಾರಿಗೆ ತರಬೇಕು. ಆಗ ಸರ್ಕಾರದ ಯೋಜನೆಗಳು ಅರ್ಹರಿಗಷ್ಟೇ ಸಿಗಬಹುದು.

ಪ್ರತಿಕ್ರಿಯಿಸಿ (+)