ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಇದು ಬರೀ ಜಾತ್ರೆಯಲ್ಲೋ ಅಣ್ಣಾ...!

ಸಹಬಾಳ್ವೆಗೆ ಸಾಕಾರರೂಪ ಕೊಡುವ ಒಂದು ಕೊಂಡಿಯಾಗಿದ್ದ ಜಾತ್ರೆಗಳು ಇಂದು ಯಾವ ಸ್ವರೂಪ ಪಡೆದುಕೊಳ್ಳುತ್ತಿವೆ?
Last Updated 19 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಜಾತ್ರೆ ಎಂದರೆ ಊರಿಗೆ ಊರೇ ಸಂಭ್ರಮಪಡುವ ದಿನ. ಜಾತಿ- ಮತ- ಪಂಥ ಭೇದವಿಲ್ಲದೆ ಎಲ್ಲ ಕುಲ ವೃತ್ತಿಬಾಂಧವರು ಇದರಲ್ಲಿ ಭಾಗಿಯಾಗಿ ಸಹಕಾರ ಹಾಗೂ ಸಹಯೋಗದಿಂದ ಪರಸ್ಪರ ಒಂದಾಗಿ ನಡೆದುಕೊಳ್ಳುವುದಕ್ಕೆ ಇದು ಮಾರ್ಗಸೂಚಿ. ಮೂಲತಃ ಬುಡಕಟ್ಟು ಸಮಾಜಗಳ ನಡುವಿನ ವ್ಯಾಪಾರ ವಿನಿಮಯಕ್ಕಾಗಿ ರೂಪುಗೊಂಡ ಇದು, ಊಳಿಗಮಾನ್ಯ ಕಾಲಕ್ಕೆ ವಿಸ್ತೃತರೂಪ ತಾಳಿ ಮಾರುಕಟ್ಟೆಯ ಸ್ವರೂಪವನ್ನು ಪಡೆದುಕೊಂಡಿತು.

ನಮ್ಮ ಜನಪದರು ಎಲ್ಲರಿಗೂ ಉದ್ಯೋಗ ಕಲ್ಪಿಸಿಕೊಡಬೇಕು ಎಂಬ ಹಿನ್ನೆಲೆಯಲ್ಲಿಯೇ ಸೃಷ್ಟಿಸಿದ ಈ ಜಾತ್ರೆಗಳಲ್ಲಿ, ವಿವಿಧ ವೃತ್ತಿಯವರು ತಯಾರಿಸಿದ ವಸ್ತುಗಳನ್ನು ಜಾತ್ರೆಯ ಆಚರಣೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅದನ್ನು ಸಾಕಾರಗೊಳಿಸಿರುವುದನ್ನು ಕಾಣುತ್ತೇವೆ. ಉದಾಹರಣೆಗೆ, ದೇವರಿಗೆ ನೈವೇದ್ಯ ಸಲ್ಲಿಸುವ ಪದಾರ್ಥ ಹೊಸ ಗಡಿಗೆಯಲ್ಲಿಯೇ ಬೆಂದು ತಯಾರಾಗಿರಬೇಕು. ಈ ಅಡುಗೆಗೆ ಮನೆಯ
ಲ್ಲಿದ್ದ ಪದಾರ್ಥವನ್ನು ಬಳಸುವಂತಿಲ್ಲ. ಏಕೆಂದರೆ ಅದನ್ನು ಈಗಾಗಲೇ ಬಳಸಿರುತ್ತಾರೆ. ಹಾಗಾಗಿ ದೇವರಿಗಾಗಿಯೇ ಹೊಸದಾಗಿ ಖರೀದಿಸಿ ತರಬೇಕು.

ಜಾತ್ರೆಯ ಸಂದರ್ಭದಲ್ಲಿ ದೇವರ ದರ್ಶನಕ್ಕಾಗಿ ಹೊಸ ಬಟ್ಟೆಗಳನ್ನು ತೊಡಬೇಕು. ಹೆಣ್ಣು ಮಕ್ಕಳಂತೂ ಹೊಸ ಬಳೆಗಳನ್ನು ತೊಡಲೇಬೇಕು. ಅಲ್ಲದೆ ಜಾತ್ರೆಗೆ ಬರಮಾಡಿಕೊಂಡ ಸಂಬಂಧಿಕರನ್ನು ಹೊಸ ಬಟ್ಟೆತೊಡಿಸಲೇಬೇಕು. ಹೀಗೆ ಪ್ರತಿಯೊಂದು ವಿಷಯ
ದಲ್ಲಿಯೂ ಹೊಸತನ ಬೇಕೇಬೇಕು ಎನ್ನುವಂತಹ ಸಂಪ್ರದಾಯವನ್ನು ಹುಟ್ಟುಹಾಕಿ, ಎಲ್ಲ ವೃತ್ತಿಯವರಿಗೂ ಆರ್ಥಿಕ ಸಂಪತ್ತು ದೊರಕುವ ಹಾಗೆ ನಮ್ಮ ಹಿರೀಕರು ಜಾತ್ರೆಗಳನ್ನು ಸೃಷ್ಟಿಸಿದ್ದರು.

ಜನಪದರು ಈ ಜಾತ್ರೆಗಾಗಿ ಮೊದಲೇ ಏನೆಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಅದರ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಸಂಬಂಧಿಕರಿಗೆ ಆಹ್ವಾನಿಸಿ ಸುಖ–ದುಃಖ ಹಂಚಿಕೊಂಡು, ಪರಸ್ಪರ ಖುಷಿಯಿಂದ ಬೆರೆತು ಮನಸ್ಸನ್ನು ಚೇತೋಹಾರಿ ಆಗಿಸಿಕೊಳ್ಳು
ವಂತಹದ್ದು, ಸ್ವಂತಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಳ್ಳುವುದು, ಮನೆಗೆ, ಕೃಷಿಗೆ ಮತ್ತು ಕಾರ್ಮಿಕ ಕೆಲಸಕ್ಕೆ ಬೇಕಾಗುವ ಉಪಕರಣಗ
ಳನ್ನು ಖರೀದಿಸುವುದು ಎಲ್ಲವೂ ನಡೆಯುತ್ತವೆ.

ಒಂದು ಕಾಲಕ್ಕಂತೂ ಜನ ತಮ್ಮ ಮಾರುಕಟ್ಟೆಯ ಬಹುಪಾಲು ಬೇಡಿಕೆಗಳನ್ನು ಜಾತ್ರೆಯ ಸಂದರ್ಭದಲ್ಲಿಯೇ ಈಡೇರಿಸಿಕೊಳ್ಳುತ್ತಿದ್ದರು. ಹಾಗಾಗಿ ಜಾತ್ರೆ ಎಂದರೆ ಸಾಕು ಅದು ಬಹುಮೂಲ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ಸುದಿನ ಎಂಬ ಭಾವನೆ ಇದೆ. ಅನೇಕ ವೃತ್ತಿವಂತರು ವರ್ಷದ ಸಂಪಾದನೆಯನ್ನು ಈ ಜಾತ್ರೆಗಳಲ್ಲಿಯೇ ದುಡಿದು ಜೀವನಕ್ಕೆ ಆಧಾರಮಾಡಿಕೊಳ್ಳುತ್ತಿದ್ದರು.

ಈ ಹಿನ್ನೆಲೆಯಲ್ಲಿ ಜಾತ್ರೆ ಎನ್ನುವುದು ಸಹಬಾಳ್ವೆಗೆ ಸಾಕಾರರೂಪ ಕೊಡುವ ಒಂದು ಕೊಂಡಿ. ಈ ಸಹಬಾಳ್ವೆಗೆ ಸಹಕಾರ ಎಂಬಂತೆ ದೇವರುಗಳ ನಡುವೆ ಸಂಬಂಧ ಬೆಸೆಯುವುದನ್ನೂ ಜಾತ್ರೆಗಳು ಸಾಕ್ಷೀಕರಿಸುತ್ತವೆ. ಕೆಲವು ಜಾತ್ರೆಗಳಲ್ಲಿ ಆರಾಧನೆಗೊಳ್ಳುವ ಪ್ರಮುಖ ದೈವ ಅದೇ ಊರಿನ ಇತರ ಕುಲಕಸುಬು ಸಮುದಾಯಗಳ ದೈವಗಳನ್ನು ಭೇಟಿ ಮಾಡುವ ಪರಿಪಾಟವಿದೆ. ಇದು ಹಿಂದೂ ದೈವಗಳ ನಡುವಿನ ಬಂಧುತ್ವವನ್ನು ಸಾಕ್ಷೀಕರಿಸಿದರೆ, ಇನ್ನು ವಿವಿಧ ಧರ್ಮಗಳ ದೇವರ ನಡುವೆಯೂ ಸಂಬಂಧ ಕಲ್ಪಿಸುವ ಆಚರಣೆಗಳು ನಮ್ಮ ಜನಪದರಲ್ಲಿ ಇವೆ. ಇದು ಮೊಹರಂ ಆಚರಣೆಯಲ್ಲಿ ಸಾಕಾರಗೊಳ್ಳುತ್ತದೆ. ಕೆಲವು ಆಚರಣೆಗಳು ನಡೆದಾಗ ಅಕ್ಕತಂಗಿ, ಅಣ್ಣತಮ್ಮ ವರ್ಷಕ್ಕೊಮ್ಮೆ ಭೇಟಿಯಾಗಿ ತಮ್ಮ ಸುಖದುಃಖ ಹಂಚಿಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ.

ಇಂತಹ ಬಹುಮೂಲ ಆಶಯಗಳನ್ನು ಹೊತ್ತು ಜನಪದರ ನೆಮ್ಮದಿಗೆ ಮತ್ತು ಅವರ ಆರ್ಥಿಕ ವ್ಯವಹಾರಗಳಿಗೆ ವೇದಿಕೆಯಾಗುವ ಜಾತ್ರೆಗಳಿಗೆ ಈಗೀಗ ಕೋಮು ಎಂಬ ಗರ ಅಪ್ಪಳಿಸುತ್ತಿದೆ. ಇದು ಯುವಕರ ಮೈಮೇಲೆ ಆವರಿಸಿ ಅವರನ್ನು ಮತಿಹೀನರನ್ನಾಗಿ ಮಾಡುತ್ತಿದೆ. ಎಷ್ಟು ಯುವಕರು ಇದರ ಭ್ರಾಂತಿಗೆ ಒಳಗಾಗಿ ಕುಣಿಯುತ್ತಾರೆಯೋ ಹೇಳತೀರದು. ಒಂದು ಕಾಲಕ್ಕೆ ಸಮಾಜದ ಸ್ವಸ್ಥ ಬದುಕಿಗೆ ನಾಂದಿಯಾಗುತ್ತಿದ್ದ ಜಾತ್ರೆಗಳು ಇಂದು ಕೆಲವರ ಕದನದ ಗೂಡುಗಳಾಗಿ ಪರಿವರ್ತನೆಯಾಗುತ್ತಿವೆ.

ಇಂತಹ ಕಾರ್ಯಗಳು ಜನರ ಆರೋಗ್ಯವಂತ ಜೀವನಕ್ಕೆ ಯಾವ ರೀತಿ ಹೊಡೆತ ಕೊಡುತ್ತಿವೆ ಎಂಬುದನ್ನು ನೋಡಿದರೆ, ಆ ದೇವರು
ಗಳೇ ಕಕ್ಕಾಬಿಕ್ಕಿಯಾಗಿ ಓಡುವಂತೆ ಇರುತ್ತದೆ. ಜಾತ್ರೆಯ ಹೆಸರಿನಲ್ಲಿ ಮನಸ್ಸುಗಳು ವಿಚಲಿತವಾಗುವುದು, ಗುಂಪು ಕಟ್ಟಿಕೊಂಡು ರೋಷಾವೇಶದಸ್ಲೋಗನ್‌ಗಳನ್ನು ಇಟ್ಟುಕೊಳ್ಳುವುದು, ವೈಯಕ್ತಿಕವೈಷಮ್ಯಗಳನ್ನು ಸಾರ್ವತ್ರಿಕಗೊಳಿಸುವಂತಹ ಅಂಶಗಳ ಆಗರವಾಗಿ ಇಂದಿನ ಜಾತ್ರೆಗಳು ಮೈದಾಳುತ್ತಿವೆ. ವ್ಯಾಪಾರ ವಹಿವಾಟುಗಳು ಮತಧರ್ಮದ ಹಣೆಪಟ್ಟಿಗಳನ್ನು ಕಟ್ಟಿಕೊಂಡು ಆರ್ಥಿಕ ವ್ಯವಹಾರವನ್ನೇ ಕೋಮುಕೇಂದ್ರಿತ ವಹಿವಾಟಾಗಿ ಮಾಡಲು ಸನ್ನದ್ಧವಾಗುತ್ತಿವೆ. ಇದನ್ನು ನೋಡಿದರೆ, ನಮ್ಮ ಜನಪದರ ಬಹುಮುಖಿ ಆಶಯಗಳುಳ್ಳ ಜಾತ್ರೆಗಳ ಮಹದಾಶಯವನ್ನು ಪುನರ್‌ ಸಾಕ್ಷಾತ್ಕರಿಸಬೇಕಾದ ತುರ್ತು ಅಗತ್ಯ ಇರುವುದು ನಮ್ಮ ಅರಿವಿಗೆ ಬರುತ್ತದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಶಿಗ್ಗಾವಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT