ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವೃತ್ತಿ ಮಾರ್ಗದರ್ಶನ: ಇರಲಿ ಎಚ್ಚರ

ಬದುಕಿಗೆ ದೊಡ್ಡ ಗುರಿಗಳಿರಬೇಕು ಎಂದು ಹೇಳುವ ಭರದಲ್ಲಿ, ಹೆಚ್ಚು ಸಂಬಳದ ಹುದ್ದೆ ಮಾತ್ರ ಶ್ರೇಷ್ಠ ಎಂದು ವ್ಯಾಖ್ಯಾನಿಸುವುದು ಎಷ್ಟು ಸರಿ?
Last Updated 21 ಫೆಬ್ರುವರಿ 2023, 21:46 IST
ಅಕ್ಷರ ಗಾತ್ರ

ಎಸ್ಎಸ್ಎಲ್‍ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳು ಇನ್ನೂ ಮುಗಿದಿಲ್ಲ. ಅದಾಗಲೇ ಅಲ್ಲಲ್ಲಿ ಮಕ್ಕಳನ್ನು ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎಂಬ ರೇಸಿಗೆ ಹಚ್ಚಲಾಗಿದೆ. ಅದರ ಜೊತೆಯಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ‘ಕರಿಯರ್ ಕಟ್ಟಿಕೊಳ್ಳುವ’ ಬಗ್ಗೆ ಅಲ್ಲಲ್ಲಿ ತರಗತಿಗಳನ್ನು ಆರಂಭಿಸಿವೆ.

ಇದು ಒಳ್ಳೆಯದೆ. ಬದುಕಿನ ಬಗ್ಗೆ ಹೇಳುವ ಒಳ್ಳೆಯ ಮಾತುಗಳು ಯಾರಿಗೆ ತಾನೇ ಬೇಡ? ಅವರ ಮಾತುಗಳಲ್ಲಿ ಮಕ್ಕಳನ್ನು ನಿರ್ದಿಷ್ಟ ಕೋರ್ಸ್‍ಗಳ ಕಡೆ, ನಿರ್ದಿಷ್ಟ ಕಾಲೇಜುಗಳ ಕಡೆ ಸೆಳೆಯುವ ಹುನ್ನಾರ ಇರಬಹುದು. ಆದರೆ ಮಕ್ಕಳಿಗೆ ಈ ಹಂತದಲ್ಲಿ ಬದುಕು ಎಂದರೆ ದೊಡ್ಡ ಹುದ್ದೆ, ತುಂಬಾ ಹಣ ಎಂಬುದನ್ನು ಬಿತ್ತುವುದಿದೆಯಲ್ಲ ಅದು ಸರಿ ಅಲ್ಲ. ಅವರು ನಿರ್ದಿಷ್ಟ ಕೋರ್ಸ್‌ ಪೂರೈಸಿದ ಬಳಿಕ ಅವರಲ್ಲಿ ಯಾರಿಗಾದರೂ ದೊಡ್ಡ ಹುದ್ದೆ ಸಿಗದೇ ಹೋದರೆ ತನ್ನದು ಬದುಕೇ ಅಲ್ಲ ಎಂದು ಅವರು ಕಂಗಾಲಾಗಿಬಿಟ್ಟರೆ ಗತಿಯೇನು?

ಮೊನ್ನೆ ಹೀಗೇ ಆಯಿತು. ಅಂತಹ ಒಂದು ತರಗತಿಯಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿತು. ಅವರ ಮಾತಿನ ತುಂಬಾ ಒಳ್ಳೆಯ ನೌಕರಿ, ಸಂಬಳ, ಕಾರು, ಬಂಗಲೆಯಂತಹ ಸಂಗತಿಗಳೇ ತುಂಬಿದ್ದವು. ತರಗತಿ ಮುಗಿದ ಮೇಲೆ ಮಕ್ಕಳಿಂದ ಚೀಟಿಯಲ್ಲಿ ಪ್ರಶ್ನೆಗಳನ್ನು ಆಹ್ವಾನಿಸಿದರು. ಅದರಲ್ಲಿ ಬಂದ ಒಂದು ಚೀಟಿಯಲ್ಲಿ ಪ್ರಶ್ನೆ ಹೀಗಿತ್ತು. ‘ಸರ್, ನಮ್ಮಪ್ಪ ಬಸ್‌ಸ್ಟ್ಯಾಂಡ್‌ನಲ್ಲಿ ಸೌತೆಕಾಯಿ ಮಾರ್ತಾರೆ, ನಮ್ಮವ್ವ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಬರುವ ದುಡ್ಡು ಬಹಳ ಕಮ್ಮಿ. ನಮ್ಮದು ಎಷ್ಟು ಕೆಟ್ಟ ಬದುಕಲ್ಲವೇ?’ ಎಂದು ಬರೆದಿತ್ತು. ಇನ್ನುಮೇಲೆ ಆ ಮಗು ನೆಮ್ಮದಿಯಿಂದ ನಿದ್ದೆ ಮಾಡುವುದಾದರೂ ಹೇಗೆ?

ಬದುಕಿಗೆ ದೊಡ್ಡ ಗುರಿಗಳಿರಬೇಕು ಅನ್ನುವುದು ನಿಜ.‌ ಅದನ್ನು ಹೇಳುವ ಭರದಲ್ಲಿ, ಹೆಚ್ಚು ಸಂಬಳ ಬರುವ ಹುದ್ದೆ ಮಾತ್ರ ಶ್ರೇಷ್ಠದ್ದು ಎಂದು ವ್ಯಾಖ್ಯಾನಿಸುವುದು ಮತ್ತು ಅದು ಮಾತ್ರವೇ ಒಳ್ಳೆಯ ಬದುಕು ಅನ್ನುವುದು ಎಷ್ಟು ಸರಿ?

ಮೊನ್ನೆ ಹತ್ತನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರೊಬ್ಬರು ‘ನೀವೊಂದು ಒಳ್ಳೆಯ ಸಂಬಳದ ನೌಕರಿಗೆ ಹೋದಾಗ ನನಗೆ ಹೆಚ್ಚು ಖುಷಿಯಾಗುತ್ತದೆ’ ಎಂದು ಹೇಳುತ್ತಿದ್ದರು. ಮನೆಗೆ ಪತ್ರಿಕೆ ಹಾಕುವ, ಹಾಲು ತಂದು ಕೊಡುವ, ಹೊಲದಲ್ಲಿ ದುಡಿದು ಅನ್ನ ಕೊಡುವ, ದಿನಪೂರ್ತಿ ಬಸ್ಸು ಓಡಿಸಿ ಊರು ಸೇರಿಸುವ, ದಿನ ಬೆಳಿಗ್ಗೆ ಎದ್ದು ರಸ್ತೆ ಗುಡಿಸುವ ಜನರಿಗೆ ಹೆಚ್ಚು ಸಂಬಳವಿಲ್ಲ. ಹಾಗೆಂದು ಅವರ ವೃತ್ತಿ ನಿಕೃಷ್ಟವೇ? ಯಾಕೆ ನಾವು ಶಾಲೆ ಹಂತದಿಂದಲೇ ಮಕ್ಕಳಿಗೆ ಕೆಲವು ವೃತ್ತಿಗಳು ಶ್ರೇಷ್ಠ ಮತ್ತು ಕೆಲವು ವೃತ್ತಿಗಳು ಕನಿಷ್ಠ ಎಂಬುದನ್ನು ಹೇಳಿಕೊಡುತ್ತಿದ್ದೇವೆ?

ಮಗು ನಾಳೆ ಯಾವ ವೃತ್ತಿಗೆ ಹೋದರೂ ಆ ವೃತ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸುವ ಮನಃಸ್ಥಿತಿಗೆ ನಾವು ಈಗಲೇ ಅದನ್ನು ಅಣಿಗೊಳಿಸಬೇಕು.

ಗಾಂಧೀಜಿ ತಮ್ಮ ‘ಸರ್ವೋದಯ’ ಎಂಬ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: ‘ಕೆಲಸದಲ್ಲಿ ಮೇಲುಕೀಳು ಎಂಬುದಿಲ್ಲ. ವಕೀಲನ ಕೆಲಸಕ್ಕೆ ಇರುವಷ್ಟೇ ಮಹತ್ವ ಕ್ಷೌರಿಕನ ಕೆಲಸಕ್ಕೂ ಇದೆ. ಇಬ್ಬರನ್ನೂ ಸಮಾನವಾಗಿ ಕಾಣಬೇಕು’. ಎಲ್ಲ ಕಾಲಕ್ಕೂ ಸಲ್ಲುವಂತಹ ಮಾತುಗಳಿವು.

ಪ್ರತಿಯೊಂದು ವೃತ್ತಿಗೂ ಅದರದೇ ಆದ ಮಹತ್ವವಿದೆ. ಎಲ್ಲಾ ವೃತ್ತಿಗಳು ಮತ್ತು ಎಲ್ಲರೂ ಇದ್ದರಷ್ಟೇ ಬದುಕು. ಈ ಬದುಕಿಗೆ ಎಲ್ಲವೂ ಬೇಕು. ಯಾವ ವೃತ್ತಿ ಎನ್ನುವುದಕ್ಕಿಂತ ಆ ವೃತ್ತಿಯನ್ನು ಹೇಗೆ ಮಾಡುತ್ತಿದ್ದೇವೆ ಎನ್ನುವುದು ಮುಖ್ಯ. ‘ಕಸ ಗುಡಿಸುವುದೇ ನನ್ನ ವೃತ್ತಿಯಾದರೆ ನಾನು ಗುಡಿಸುವ ಬೀದಿ ಜಗತ್ತಿನಲ್ಲೇ ಸ್ವಚ್ಛ ಜಾಗವಾಗಿರುತ್ತದೆ’ ಎನ್ನುತ್ತಾರೆ ಗಾಂಧೀಜಿ.

ನಾವು ಮಕ್ಕಳಿಗೆ ನೀನು ಇದೇ ಆಗಿ ತೀರಬೇಕು ಎಂದು ಒತ್ತಡ ಹಾಕಬಾರದು. ಮಗು ಅದರ ಆಸಕ್ತಿಗೆ ತಕ್ಕ ಹಾಗೆ ತನ್ನ ವೃತ್ತಿಯನ್ನು ಆಯ್ದುಕೊಳ್ಳಲು ಅದನ್ನು ಪ್ರೋತ್ಸಾಹಿಸಬೇಕು. ಅದಕ್ಕೆ ಮಾರ್ಗದರ್ಶನ ನೀಡಬೇಕು. ಎಲ್ಲಾ ಮಕ್ಕಳು ನಾಳೆ ಜಿಲ್ಲಾಧಿಕಾರಿಯಾಗಲು ಸಾಧ್ಯವೇ? ಅದರಲ್ಲೊಬ್ಬ ಅದ್ಭುತವಾಗಿ ಹೋಟೆಲ್ ನಡೆಸಬಹುದು.

ಅಧಿಕಾರಿ ‌ಆದವನದು ಮಾತ್ರ ಗೆಲುವಲ್ಲ, ಹೋಟೆಲ್ ಕಟ್ಟಿದವನದೂ ಗೆಲುವೆ. ಇಂತಹ ಮನೋಭಾವ ಹೊಂದಿದ ಶಿಕ್ಷಕರನ್ನು ಅಂಕಗಳಿಗೆ ಒತ್ತುಕೊಡುವುದಿಲ್ಲ ಎಂದು ದೂರುವುದಿದೆ. ಅಂತಹವರು ‘ನಾನು ಬದುಕಿಗೆ ಹೆಚ್ಚು ಒತ್ತುಕೊಡುತ್ತೇನೆ’ ಎನ್ನುತ್ತಾರೆ. ನೌಕರಿ ಪಡೆದ ಮಕ್ಕಳಿಗಿಂತ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಖುಷಿಯಾಗಿರುವ ಶಿಷ್ಯಂದಿರು ಅಂತಹ ಶಿಕ್ಷಕರನ್ನು ಹೆಚ್ಚು ಇಷ್ಟಪಡುವುದಿದೆ. ಸುಖದ ಗ್ರಾಫ್‌ ಏರುವುದು ಕೈಯಲ್ಲಿರುವ ಹಣದಿಂದಲ್ಲ, ನಮ್ಮ ಮನಃಸ್ಥಿತಿಯಿಂದ.

ಮೊನ್ನೆ ಪಿಯು ಓದುವ ಹುಡುಗ ಸಿಕ್ಕಿದ್ದ. ‘ಹೇಗೆ ಓದ್ತಾ ಇದೀಯ? ಏನಾಗಬೇಕು ಅಂದ್ಕೊಂಡಿದೀಯ?’ ಎಂದು ಕೇಳಿದೆ. ‘ಚೆನ್ನಾಗಿ ಓದ್ತಾ ಇದೀನಿ. ಒಳ್ಳೆಯ ಮಾರ್ಕ್ಸ್ ಕೂಡ ಬರಬಹುದು ಸರ್. ಆದರೆ ನಾನೊಬ್ಬ ಒಳ್ಳೆಯ ಡ್ರೈವರ್ ಆಗ್ಬೇಕು ಅಂತ ಆಸೆ ಸರ್’ ಅಂದ. ಅವನಿಗೆ ಮನಸಾರೆ ಹರಸಿ ಬಂದೆ. ಎಷ್ಟೊಂದು ಜೀವಗಳನ್ನು ಊರಿಂದ ಊರಿಗೆ ತಲುಪಿಸುವ ಆ ಕೆಲಸ ಸುಲಭದ್ದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT